Asianet Suvarna News Asianet Suvarna News

ಐಎಎಸ್‌ ಅಧಿಕಾರಿ ತಿವಾರಿಯದ್ದು ಕೊಲೆಯಲ್ಲ

ಅನುರಾಗ್‌ ಅವರದ್ದು ಕೊಲೆಯೂ ಅಲ್ಲ, ಆತ್ಮಹತ್ಯೆಯೂ ಅಲ್ಲ. ಆಕಸ್ಮಿಕವಾಗಿ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಸಿಬಿಐ ಹೇಳಿದೆ. 20 ತಿಂಗಳ ತನಿಖೆ ಬಳಿಕ ಪ್ರಕರಣದ ತನಿಖೆ ಮುಕ್ತಾಯದ ವರದಿಯನ್ನು ಸಲ್ಲಿಕೆ ಮಾಡಿದೆ.

In IAS Anurag Tiwari Death Case CBI Rejects foul Play In Closure Report
Author
Lucknow, First Published Feb 22, 2019, 8:12 AM IST

ಲಖನೌ[ಫೆ.22]: ಉತ್ತರಪ್ರದೇಶ ರಾಜಧಾನಿ ಲಖನೌದಲ್ಲಿ ಎರಡು ವರ್ಷದ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ಕರ್ನಾಟಕದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅನುಮಾನಗಳಿಗೂ ಸಿಬಿಐ ತೆರೆ ಎಳೆದಿದೆ. 
ಅನುರಾಗ್‌ ಅವರದ್ದು ಕೊಲೆಯೂ ಅಲ್ಲ, ಆತ್ಮಹತ್ಯೆಯೂ ಅಲ್ಲ. ಆಕಸ್ಮಿಕವಾಗಿ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಸಿಬಿಐ ಹೇಳಿದೆ. 20 ತಿಂಗಳ ತನಿಖೆ ಬಳಿಕ ಪ್ರಕರಣದ ತನಿಖೆ ಮುಕ್ತಾಯದ ವರದಿಯನ್ನು ಸಲ್ಲಿಕೆ ಮಾಡಿದೆ.

ಐಎಎಸ್ ಅಧಿಕಾರಿ ತಿವಾರಿಯದ್ದು ಹತ್ಯೆ? ರಾಜ್ಯದ ಅಧಿಕಾರಿ ನಿಗೂಢ ಸಾವು ಕೇಸಿಗೆ ತಿರುವು

ಉತ್ತರ ಪ್ರದೇಶದವರೇ ಆದ ತಿವಾರಿ 2007ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿ. ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತರಾಗಿದ್ದರು. 2017ರ ಮೇ 16ರಂದು ಲಖನೌಗೆ ಆಗಮಿಸಿದ್ದ ವೇಳೆ ಅವರ ಸಾವು ಸಂಭವಿಸಿತ್ತು. ಮೇ 17ರಂದು ಲಖನೌದ ಮೀರಾಬಾಯ್‌ ಮಾರ್ಗ್‌ನಲ್ಲಿರುವ ಅತಿಥಿಗೃಹವೊಂದರ ಬಳಿ ತಿವಾರಿ ಮೃತ ದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಬಳಿಕ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣವನ್ನು ಸಿಬಿಐ ದಾಖಲಿಸಿತ್ತು. ಇದೀಗ ಸಿಬಿಐ 20 ತಿಂಗಳ ಬಳಿಕ ಬುಧವಾರ ಮುಕ್ತಾಯ ವರದಿ ಸಲ್ಲಿಸಿದೆ.

ತಿವಾರಿ ಕೇಸ್: ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಸಾಕ್ಷ್ಯ ನಾಶ..?

ವರದಿಯಲ್ಲಿ ಏನಿದೆ?: ಅನುರಾಗ್‌ ತಿವಾರಿ ಆಕಸ್ಮಿಕವಾಗಿ ಬಿದ್ದಿದ್ದರಿಂದ ಉಸಿರುಗಟ್ಟಿ(ದೇಹಕ್ಕೆ ಆಮ್ಲಜನಕ ಕೊರತೆ) ಸಾವು ಸಂಭವಿಸಿದೆ. ಇದೊಂದು ಆತ್ಮಹತ್ಯೆ ಅಥವಾ ಕೊಲೆ ಅಲ್ಲ ಎಂದು ಮುಕ್ತಾಯ ವರದಿಯಲ್ಲಿ ತಿಳಿಸಲಾಗಿದೆ. ಏಮ್ಸ್‌ನ ಮೂವರು ವೈದ್ಯರ ತಂಡ ತಿವಾರಿ ದೇಹದ ಮರಣೋತ್ತರ ಪರೀಕ್ಷೆ ಹಾಗೂ ಅತಿಯಾದ ಡ್ರಗ್ಸ್‌ ಸೇವನೆಯ ಬಗ್ಗೆ ವಿಶ್ಲೇಷಣೆ ನಡೆಸಿದ ಬಳಿಕ ಇದೊಂದು ಆಕಸ್ಮಿಕ ಸಾವು ಎಂಬ ತೀರ್ಮಾನಕ್ಕೆ ಬಂದಿದ್ದು, ಇದರ ಆಧಾರದ ಮೇಲೆ ಸಿಬಿಐ ಮುಕ್ತಾಯ ವರದಿಯನ್ನು ಸಲ್ಲಿಸಿದೆ.

ಅಲ್ಲದೇ ಅನುನಾಗ್‌ ತಿವಾರಿ ಅವರಿಗೆ ಜೀವ ಬೆದರಿಕೆ ಇದ್ದ ಬಗ್ಗೆ ಅಥವಾ ಹಿರಿಯ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ರಾಜ್ಯ ಸರ್ಕಾರದ ಅತಿಥಿಗೃಹದ ಬಳಿ 2017ರ ಮೇ 16ರ ರಾತ್ರಿ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ಸಾವಿಗೀಡಾದ ವ್ಯಕ್ತಿಯ ಅನೈಸರ್ಗಿಕ ವರ್ತನೆ ಕಂಡು ಬಂದಿಲ್ಲ. ಕುಟುಂಬ ಸದಸ್ಯರು ಎತ್ತಿದ್ದ ಎಲ್ಲಾ ಅನುಮಾನಗಳನ್ನು ತನಿಖೆಯ ವೇಳೆ ಪರಿಗಣಿಸಲಾಗಿತ್ತು. ಆದರೆ, ಯಾವುದಕ್ಕೂ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ತಿವಾರಿ ಸಹೋದರ ಮಾಯಾಂಕ್‌, ಸಿಬಿಐ ತಮಗೆ ಮಾಹಿತಿ ನೀಡದೇ ಮುಕ್ತಾಯ ವರದಿ ಸಲ್ಲಿಸಿದೆ. ವರದಿಯ ವಿರುದ್ಧ ಕುಟುಂಬ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios