Asianet Suvarna News Asianet Suvarna News

6 ಶಾಸಕರ ಜೊತೆ ಜಾರಕಿಹೊಳಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ

ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

I Will Join BJP With 6 Congress MLA Ramesh Jarkiholi Gives Message To BS Yeddyurappa
Author
Bengaluru, First Published May 15, 2019, 8:24 AM IST

ಬೆಂಗಳೂರು :  ಐದರಿಂದ ಆರು ಶಾಸಕರನ್ನು ಕರೆದುಕೊಂಡು ಕರೆತರುವ ಜವಾಬ್ದಾರಿ ನನ್ನದು. ಇನ್ನುಳಿದ ಅಗತ್ಯ ಸಂಖ್ಯೆಯ ಶಾಸಕರನ್ನು ಹೊಂದಿಸಿ ಕರೆತರುವುದು ನಿಮ್ಮ ಹೊಣೆ ಎಂದು ಕಾಂಗ್ರೆಸ್‌ ಪಕ್ಷದ ಬಂಡಾಯ ಶಾಸಕ ಹಾಗೂ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ತಾವೂ ಸೇರಿದಂತೆ ಇತರ ಶಾಸಕರು ರಾಜೀನಾಮೆ ನೀಡಲು ಸಿದ್ಧ. ಆದರೆ, ಪರ್ಯಾಯ ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯೆಯ ಶಾಸಕರನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳುವುದು ನಿಮ್ಮ ಕೆಲಸ ಎಂದು ರಮೇಶ್‌ ಜಾರಕಿಹೊಳಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇತ್ತೀಚೆಗೆ ತಿಳಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಲು ಪಕ್ಷದ ಹಲವು ಹಿರಿಯ ಮುಖಂಡರಿಗೆ ಜವಾಬ್ದಾರಿ ನೀಡಿದ್ದಾರೆ. ಆ ಮುಖಂಡರು ಈಗಾಗಲೇ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಬಾರಿ ಮುಂಚೂಣಿಯಲ್ಲಿದ್ದ ನಾಯಕರ ಪೈಕಿಯೇ ಕೆಲವರು ಈಗ ಮತ್ತೆ ಕ್ರಿಯಾಶೀಲರಾಗಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಇದುವರೆಗೆ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸಕರ ಬಗ್ಗೆ ಮಾತ್ರ ಪ್ರಸ್ತಾಪವಾಗುತ್ತಿತ್ತು. ಆದರೆ, ಈ ಬಾರಿ ಜೆಡಿಎಸ್‌ನಿಂದಲೂ ಕೆಲವು ಅಸಮಾಧಾನಿತ ಶಾಸಕರು ಅವರ ಪಕ್ಷ ತೊರೆದು ಹೊರಬರಲು ಸಿದ್ಧರಾಗುತ್ತಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿರುವ ರಮೇಶ್‌ ಜಾರಕಿಹೊಳಿ ಅವರನ್ನು ಸಮಾಧಾನಪಡಿಸುವ ಅಥವಾ ಮನವೊಲಿಸುವ ಪ್ರಯತ್ನ ಅವರ ಪಕ್ಷದಿಂದ ನಡೆಯುವ ಸಾಧ್ಯತೆ ಕ್ಷೀಣಿಸಿದೆ. ಆದರೆ, ಅವರೊಂದಿಗೆ ಹಿಂದೆ ಗುರುತಿಸಿಕೊಂಡಿದ್ದ ಕೆಲವು ಶಾಸಕರೊಂದಿಗೆ ಕಾಂಗ್ರೆಸ್‌ ನಾಯಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಆ ಶಾಸಕರು ತಾವು ಪಕ್ಷ ತೊರೆದು ಹೋಗುವುದಿಲ್ಲ ಎಂಬ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ. ಆದರೆ, ಮೇ 23ರ ನಂತರ ಆ ಶಾಸಕರು ಮತ್ತೆ ತಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂಬ ವಿಶ್ವಾಸವನ್ನು ರಮೇಶ್‌ ಜಾರಕಿಹೊಳಿ ಅವರು ಬಿಜೆಪಿ ನಾಯಕರ ಬಳಿ ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲೇ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಕಾಂಗ್ರೆಸ್‌ ಶಾಸಕರು ಮುಂಬೈಗೆ ತೆರಳಿದ್ದರು. ಇನ್ನೇನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದೇ ವದಂತಿ ಹಬ್ಬಿತ್ತು. ಆದರೆ, ನಂತರ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರಮೇಶ್‌ ಜಾರಕಿಹೊಳಿ ಮತ್ತಿತರ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ವಾಪಸಾಗಿದ್ದರು. ಲೋಕಸಭಾ ಚುನಾವಣೆ ಸಮೀಪಿಸಿದ್ದರಿಂದ ಪರ್ಯಾಯ ಸರ್ಕಾರ ರಚನೆಗೆ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಲಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ಸಂಗತಿ.

ಆದರೆ, ಇದೀಗ ಲೋಕಸಭಾ ಚುನಾವಣೆ ಮುಗಿದಿದೆ. ಫಲಿತಾಂಶಕ್ಕಾಗಿ ದಿನಗಣನೆ ನಡೆದಿದೆ. ಫಲಿತಾಂಶ ಹೊರಬಿದ್ದ ಬಳಿಕ ಕೇಂದ್ರ ಸರ್ಕಾರ ರಚನೆ ಪ್ರಕ್ರಿಯೆ ಕೆಲದಿನಗಳವರೆಗೆ ನಡೆಯಬಹುದು. ಮೇಲಾಗಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ನಡೆದಿರುವುದರಿಂದ ಉಭಯ ಪಕ್ಷಗಳ ಅತೃಪ್ತ ಶಾಸಕರು ಸ್ಥಿರ ಸರ್ಕಾರದ ಕಾರಣ ಮುಂದೊಡ್ಡಿ ಹೊರಬಂದು ತಮ್ಮ ಜೊತೆ ಕೈಜೋಡಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.

ವರದಿ :  ವಿಜಯ್‌ ಮಲಗಿಹಾಳ

Follow Us:
Download App:
  • android
  • ios