news
By Suvarna Web Desk | 03:56 PM September 13, 2017
‘ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗದೆ ಪಕ್ಷ ಸಂಘಟಿಸಿ’

Highlights

ಪಕ್ಷದ ಹುದ್ದೆ ಹೊಂದಿದವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗದೆ ಜನರ ಬಳಿ ತೆರಳಿ ಪಕ್ಷ ಸಂಘಟಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ನೂತನ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

‘ಗೌಡ-ಎಚ್‌ಡಿಕೆ ರೀತಿ ಬೇರೆ ಬೇರೆ ಅಲ್ಲ’ 

ಪಕ್ಷದಲ್ಲಿ ದೇವೇಗೌಡರದ್ದು ಒಂದು ರೀತಿ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರದ್ದು ಮತ್ತೊಂದು ರೀತಿ ಎಂಬುದು ಇಲ್ಲ. ಎಲ್ಲರ ಗುರಿ ಪಕ್ಷ ಸಂಘಟನೆ ಮಾತ್ರ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಪಕ್ಷದಲ್ಲಿ ಸಕ್ರಿಯ ಆಗದವರನ್ನು ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಈಗ ಹಳೆಯ ದಿನಗಳು ಇಲ್ಲ. ಪ್ರಸ್ತುತ ಇರುವ ನಾಯಕತ್ವ ಕಳಪೆಯಾಗಿಲ್ಲ. ಪಕ್ಷದಲ್ಲಿರುವವರು ಬದ್ಧತೆಯಿಂದಾಗಿ ಉಳಿದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲ ಮುಖಂಡರೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಬೆಂಗಳೂರು: ಪಕ್ಷದ ಹುದ್ದೆ ಹೊಂದಿದವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗದೆ ಜನರ ಬಳಿ ತೆರಳಿ ಪಕ್ಷ ಸಂಘಟಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ನೂತನ ಪದಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಪಕ್ಷದ ಶಾಸಕರು, ಸೋತ ಅಭ್ಯರ್ಥಿಗಳು ಹಾಗೂ ನೂತನ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಬಿಜೆಪಿಯ ಲೋಪದೋಷಗಳ ಬಗ್ಗೆ ಜನರ ಬಳಿಗೆ ಹೋಗಿ ಅರಿವು ಮೂಡಿಸಬೇಕು. ಜನಸಂಪರ್ಕದಲ್ಲಿದ್ದರೆ ನಾಯಕರಾಗಿ ಹೊರಹೊಮ್ಮುತ್ತೀರಿ. ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿ ಸಣ್ಣತನ ಮತ್ತು ಸ್ವಾರ್ಥವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ಪಕ್ಷವು ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹೊಣೆಗಾರಿಕೆಯನ್ನು ಸದ್ಬಳಕೆ ಮಾಡಿಕೊಂಡರೆ ನಾಯಕರಾಗಿ ಬೆಳೆಯುತ್ತೀರಿ. ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ನಾಯಕರ ಹಿಂದೆ ನಿಂತುಕೊಂಡರೆ ನಾಯಕರಾಗುವುದಿಲ್ಲ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವತ್ತ ಕಾರ್ಯನಿರ್ವಹಿಸ ಬೇಕು. ಆಗ ಮಾತ್ರ ಜನರು ನಿಮ್ಮನ್ನು ನಾಯಕರನ್ನಾಗಿ ಬೆಳೆಸುತ್ತಾರೆ. ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ವಹಿಸಿಕೊಂಡವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸಿಮೀತವಾಗಬಾರದು ಹಾಗೂ ಅವುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದರು.

ಹಳೆ ಕರ್ನಾಟಕ, ಉತ್ತರ ಕರ್ನಾಟಕ ಮಾತ್ರವಲ್ಲ ಎಲ್ಲಾ ಭಾಗಗಳಲ್ಲಿಯೂ ಪಕ್ಷವನ್ನು ಬೆಂಬಲಿಸುವ ಭಾವನೆ ಇದೆ. ಜನರ ಭಾವನೆಗಳಿಗೆ ಸ್ಪಂದಿಸಲು ಎಲ್ಲಿ ಎಡವುತ್ತಿದ್ದೇವೆ ಮತ್ತು ಸಂಘಟನೆಯಲ್ಲಿ ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾಡಿನ ಜನರು ಜೆಡಿಎಸ್ ಕಾರ್ಯಕರ್ತರು ಎಂದು ಹೋದರೆ ಪ್ರೀತಿಯಿಂದ ಕಾಣುವ ಸನ್ನಿವೇಶ ಇದೆ. ಇದನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು. ಜನರ ಬಳಿಗೆ ಹೋಗದಿದ್ದರೆ ಜನರು ನಿಮ್ಮನ್ನು ಎಲ್ಲಿ ಗುರುತಿಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಇಸ್ರೇಲ್‌ಗೆ ಭೇಟಿ ನೀಡಿದ ವೇಳೆ ಸಮಯವನ್ನು ವ್ಯರ್ಥ ಮಾಡದೆ, ಹೈನುಗಾರಿಕೆ, ಸಣ್ಣ ನೀರಾವರಿ, ಕೃಷಿ ಸೇರಿದಂತೆ ರೈತರು ಯಾವ ಬೆಳೆಗಳನ್ನು ಬೆಳೆದರೆ ಲಾಭ ಗಳಿಸಬಹುದು ಎಂಬುದರ ಕುರಿತು ಅಧ್ಯಯನ ನಡೆಸಿದ್ದೇನೆ. ರೈತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಂಬಂಧ ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜನರು ಜೆಡಿಎಸ್‌ಗೆ ಮತಚಲಾಯಿಸುವಂತೆ ಜನರ ಬಳಿಗೆ ಹೋಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದರು. ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ಹಲವು ಕನಸುಗಳನ್ನು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ಛಲವನ್ನು ನಾನು ಹೊಂದಿದ್ದೇನೆ. ನಗರ ಪ್ರದೇಶ ಮತ್ತು ಗ್ರಾಮೀಣ ಅಭಿವೃದ್ಧಿ ಬಗ್ಗೆ ನನ್ನದೇ ಆದ ಚಿಂತನೆಗಳಿವೆ. ನೀವು ದುಡಿಮೆ ಮಾಡದಿದ್ದರೆ ನಾನೊಬ್ಬನೇ ಏನೂ ಮಾಡಲಾಗದೆಂದರು.

 

Show Full Article


Recommended


bottom right ad