Asianet Suvarna News Asianet Suvarna News

ಸರ್ಕಾರಿ ಶಾಲೆ ಉಳಿವಿಗಾಗಿ ಶುರುವಾಗಿದೆ ’ನಮ್ಮ ಓಟು-ನಮ್ಮ ನಿರ್ಧಾರ’ ಅಭಿಯಾನ

ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಸಮನ್ವಯ ವೇದಿಕೆ ‘ನಮ್ಮ ಓಟು ಸಮಾನ ಶಾಲಾ ಶಿಕ್ಷಣಕ್ಕೆ’, ‘ನಮ್ಮ ಓಟು- ನಮ್ಮ ನಿರ್ಧಾರ’ ಎಂಬ ಚುನಾವಣಾ ಆಂದೋಲನ ಆರಂಭಿಸಲು ಉದ್ದೇಶಿಸಿದೆ.

Government School Save Campaign

ಬೆಂಗಳೂರು (ಮಾ.11): ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಸಮನ್ವಯ ವೇದಿಕೆ ‘ನಮ್ಮ ಓಟು ಸಮಾನ ಶಾಲಾ ಶಿಕ್ಷಣಕ್ಕೆ’, ‘ನಮ್ಮ ಓಟು- ನಮ್ಮ ನಿರ್ಧಾರ’ ಎಂಬ ಚುನಾವಣಾ ಆಂದೋಲನ ಆರಂಭಿಸಲು ಉದ್ದೇಶಿಸಿದೆ.

ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಜಾರಿಗೊಳಿಸಬೇಕಿದೆ. ಇದನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವ ಮತ್ತು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಅಭ್ಯ ರ್ಥಿಗಳಿಗೆ ಮತ ನೀಡುವಂತೆ ಜನರನ್ನು ಪ್ರೇರೇಪಿಸುವುದು ಆಂದೋಲನದ ಮುಖ್ಯ ಗುರಿಯಾಗಿದೆ.

ಹೋರಾಟ ಹೇಗೆ?:

ಎಸ್‌ಡಿಎಂಸಿಗಳ ಮೂಲಕ ಪ್ರತಿ ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆ, ಬ್ಯಾನರ್, ಕರಪತ್ರ, ಗೋಡೆ ಬರಹ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಸರ್ಕಾರಿ ಶಾಲೆಗಳನ್ನುಉಳಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ರಾಜ್ಯದ ಪ್ರತಿ ಎಸ್‌ಡಿಎಂಸಿಗಳು, ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರಣಾಳಿಕೆಯಲ್ಲಿ ಭರವಸೆ ನೀಡುವ ಅಭ್ಯರ್ಥಿಗಳಿಗೆ ತಮ್ಮ ಮತ ನೀಡಬೇಕು ಎಂಬುದನ್ನು ‘ನಮ್ಮ ಓಟು- ನಮ್ಮ ನಿರ್ಧಾರ’ ಆಂದೋಲನದ ಮೂಲಕ ಜಾಗೃತಿ ಮೂಡಿಸಲಿವೆ.

ಯಾಕೆ ಈ ಹೋರಾಟ?: 

ರಾಜ್ಯದಲ್ಲಿ 2010-11 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೊಂಡ ಬಳಿಕ ವಿದ್ಯಾರ್ಥಿಗಳ ಕೊರತೆ ನೆಪ ಹೇಳಿ 1668 ಕಿರಿಯ ಹಾಗೂ 114 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು ಸೇರಿ 1778 ಶಾಲೆಗಳನ್ನು ಮುಚ್ಚಲಾಗಿದೆ. ನೂರಾರು ಶಾಲೆಗಳ ವಿಲೀನ ಮಾಡಲಾಗಿದೆ. ಆದರೆ, ಇದೇ ಅವಧಿಯಲ್ಲಿ 3186 ಖಾಸಗಿ ಅನುದಾನಿತ ಶಾಲೆಗಳನ್ನು ಆರಂಭಿಸಲಾಗಿದೆ. ಸರ್ಕಾರದ ಈ ತಾರತಮ್ಯ ನೀತಿ ತೊಲಗಿಸಬೇಕಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ ಈ ಆಂದೋಲನಾ ಆರಂಭಿಸಲಾಗಿದೆ ಎಂದು ಮಗು ಮತ್ತು ಕಾನೂನು ಕೇಂದ್ರದ ಸದಸ್ಯ ವಿ.ಪಿ. ನಿರಂಜನಾರಾಧ್ಯ ತಿಳಿಸಿದ್ದಾರೆ. ರಾಜ್ಯದಲ್ಲಿ ಅಂದಾಜು 7.90 ಲಕ್ಷ ಎಸ್‌ಡಿಎಂಸಿ ಸದಸ್ಯರು ಹಾಗೂ 93 ಲಕ್ಷ ಪೋಷಕರು ಎಸ್‌ಡಿಎಂಸಿ ಭಾಗವಾಗಿದ್ದಾರೆ. ಯಾವ ಪಕ್ಷದ ಅಭ್ಯರ್ಥಿಗಳು ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಯತ್ನ ಮಾಡುತ್ತವೆಯೋ ಅಂತಹ ಪಕ್ಷಗಳಿಗೆ ಮತ ನೀಡಲು ರಾಜ್ಯದ ಎಲ್ಲ ಎಸ್‌ಡಿಎಂಸಿ ಸದಸ್ಯರು ನಿರ್ಣಯಿಸಿದ್ದಾರೆ. ರಾಜ್ಯಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಸದಸ್ಯ ನಾಗರಾಜು ತಿಳಿಸಿದ್ದಾರೆ.

Follow Us:
Download App:
  • android
  • ios