Asianet Suvarna News Asianet Suvarna News

'ದಾಖಲೆ ಕೊಡಿ ಇಲ್ಲವೇ ರಾಜೀನಾಮೆ ನೀಡಿ': ನಿರ್ಮಲಾ ವಿರುದ್ಧ ರಾಹುಲ್ ಗುಡುಗು!

ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರು. ಗುತ್ತಿಗೆ ನೀಡಲಾಗಿದೆ ಎಂಬ ನಿರ್ಮಲಾ ಹೇಳಿಕೆ ಸುಳ್ಳು: ರಾಹುಲ್‌|  ನಿರ್ಮಲಾ ರಾಜೀನಾಮೆಗೆ ರಾಹುಲ್‌ ಪಟ್ಟು| ರಾಹುಲ್‌ರೇ ದೇಶದ ಕ್ಷಮೆ ಕೋರಿ ರಾಜೀನಾಮೆ ಕೊಡಲಿ: ರಕ್ಷಾ ಮಂತ್ರಿ ತಿರುಗೇಟು| 1 ಲಕ್ಷ ಕೋಟಿ ಗುತ್ತಿಗೆ ಪ್ರಗತಿಯಲ್ಲಿದೆ ಎಂದು ಹೇಳಿದ್ದೆ, ಸರಿಯಾಗಿ ನೋಡಿ: ನಿರ್ಮಲಾ

Give proof of HAL orders or quit Rahul Gandhi dares Defence Minister
Author
New Delhi, First Published Jan 7, 2019, 9:25 AM IST

ನವದೆಹಲಿ[ಜ.07]: ‘ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಕಂಪನಿಗೆ 1 ಲಕ್ಷ ಕೋಟಿ ರು. ಮೌಲ್ಯದ ಗುತ್ತಿಗೆಗಳನ್ನು ನೀಡಲಾದ ಬಗ್ಗೆ ರಕ್ಷಣಾ ಸಚಿವರು ಲೋಕಸಭೆಯಲ್ಲಿ ಹೇಳಿದ್ದರೂ ಇನ್ನೂ ನಯಾಪೈಸೆ ಗುತ್ತಿಗೆ ಕೂಡ ಎಚ್‌ಎಎಲ್‌ಗೆ ಬಂದಿಲ್ಲ’ ಎಂಬ ಮಾಧ್ಯಮ ವರದಿಯೊಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.

‘ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರು. ಮೌಲ್ಯದ ಗುತ್ತಿಗೆಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿಕೆ ನೀಡಿದ್ದು ಶುದ್ಧ ಸುಳ್ಳು. ಹಾಗೆ ನೀಡಿದ್ದೇ ಆದಲ್ಲಿ ಅವರು ಗುತ್ತಿಗೆಗಳನ್ನು ನೀಡಿದ ಬಗ್ಗೆ ದಾಖಲೆಗಳನ್ನು ಸಂಸತ್ತಿನ ಮುಂದೆ ಹಾಜರುಪಡಿಸಬೇಕು. ಇಲ್ಲದೇ ಹೋದರೆ ರಾಜೀನಾಮೆ ನೀಡಬೇಕು’ ಎಂದು ರಾಹುಲ್‌ ಗಾಂಧಿ ಅವರು ಭಾನುವಾರ ಆಗ್ರಹಿಸಿದ್ದಾರೆ.

ಸಂಬಳ ಕೊಡಲು 1000 ಕೋಟಿ ರೂಪಾಯಿ ಸಾಲ ಮಾಡಿದ ಎಚ್‌ಎಎಲ್‌!

ಆದರೆ ಇದಕ್ಕೆ ಟ್ವೀಟರ್‌ನಲ್ಲಿ ಕೂಡಲೇ ತಿರುಗೇಟು ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ‘ರಾಹುಲ್‌ ಗಾಂಧಿ ಅವರು ಸುಳ್ಳುಗಳನ್ನು ಪ್ರಸ್ತುತಪಡಿಸಿದ್ದು, ಅವರಿಗೆ ನಾಚಿಕೆಯಾಗಬೇಕು. ಎಚ್‌ಎಎಲ್‌ಗೆ 26,570.8 ಕೋಟಿ ರುಪಾಯಿಗಳ ಗುತ್ತಿಗೆ (2014-2018) ನೀಡಲು ಸಹಿ ಹಾಕಲಾಗಿದೆ. ಇನ್ನು 73 ಸಾವಿರ ಕೋಟಿ ರು.ಗಳ ಗುತ್ತಿಗೆಗೆ ಸಹಿ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಕೆಲವು ದಾಖಲೆಗಳನ್ನು ತಮ್ಮ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

‘ಹೀಗಾಗಿ ಸುಳ್ಳು ಹೇಳುತ್ತಿರುವ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ದೇಶದ ಕ್ಷಮೆ ಕೇಳಿ ರಾಜೀನಾಮೆ ನೀಡುತ್ತಾರಾ?’ ಎಂದೂ ನಿರ್ಮಲಾ ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾಧ್ಯಮ ವರದಿಯಲ್ಲಿನ ಒಂದು ಸಾಲನ್ನೂ ಪ್ರಸ್ತಾಪಿಸಿರುವ ನಿರ್ಮಲಾ, ‘ಗುತ್ತಿಗೆಗಳಿಗೆ ಸಹಿ ಹಾಕಲಾಗಿದೆ ಎಂದು ನಿರ್ಮಲಾ ಎಲ್ಲೂ ಹೇಳಿಲ್ಲ ಎಂಬುದು ಲೋಕಸಭೆಯ ದಾಖಲೆಗಳನ್ನು ನೋಡಿದಾಗ ತಿಳಿದುಬರುತ್ತದೆ. ಈ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ’ ಎಂಬುದನ್ನು ಉಲ್ಲೇಖಿಸಿ ರಾಹುಲ್‌ಗೆ ತಿರುಗೇಟು ನೀಡಿದ್ದಾರೆ.

ನಿರ್ಮಲಾ ‘ರಫೇಲ್‌ ದಾಳಿ’: ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ತರಾಟೆ

‘ನಿರ್ಮಲಾ ಸೀತಾರಾಮನ್‌ ಅವರು ಹೇಳಿರುವಂತೆ ಈವರೆಗೂ 1 ಲಕ್ಷ ಕೋಟಿ ರು.ನಲ್ಲಿ ನಯಾ ಪೈಸೆ ಕೂಡ ಎಚ್‌ಎಎಲ್‌ಗೆ ಬಂದಿಲ್ಲ. ಒಂದೇ ಒಂದು ಒಪ್ಪಂದಕ್ಕೂ ಸಹಿ ಹಾಕಿಲ್ಲ. ನಮ್ಮದು ಷೇರುಪೇಟೆಯಲ್ಲಿ ಲಿಸ್ಟೆಡ್‌ ಕಂಪನಿ. ಹೀಗಾಗಿ ಷೇರುದಾರಿಗೆ ಉತ್ತರದಾಯಿ. ಬೇಕಿದ್ದರೆ ದಾಖಲೆಗಳನ್ನು ತೆರೆದು ನೋಡಿ’ ಎಂದು ಎಚ್‌ಎಎಲ್‌ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಭಾನುವಾರ ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿತ್ತು.

Follow Us:
Download App:
  • android
  • ios