Asianet Suvarna News Asianet Suvarna News

ಅಕ್ಕನ ಕೊಲೆ ಮಾಡಿ ಆತ್ಮ ಹತ್ಯೆ ಕಥೆ ಕಟ್ಟಿದ ಬಾಲಕಿ!: ಕೊಲೆಗೆ ಕಾರಣವೇನು ಗೊತ್ತಾ?

ಅಕ್ಕನ ಕೊಲೆ ಮಾಡಿ, ಅಸಹಜ ಸಾವು ಎಂದು ನಾಟಕವಾಡಿದ್ದ ಅಪ್ರಾಪ್ತ ಬಾಲಕಿಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 2ನೇ ಹಂತದ ನಿವಾಸಿ ರಾಜೇಶ್ವರಿ (20) ಮೃತ ಸಹೋದರಿ. ಈ ಸಂಬಂಧ ಮೃತಳ 17 ವರ್ಷದ ಸಹೋದರಿಯನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಮೈಕೋ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

Girl Killed By Her Sister

ಬೆಂಗಳೂರು(ಸೆ.19): ಅಕ್ಕನ ಕೊಲೆ ಮಾಡಿ, ಅಸಹಜ ಸಾವು ಎಂದು ನಾಟಕವಾಡಿದ್ದ ಅಪ್ರಾಪ್ತ ಬಾಲಕಿಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 2ನೇ ಹಂತದ ನಿವಾಸಿ ರಾಜೇಶ್ವರಿ (20) ಮೃತ ಸಹೋದರಿ. ಈ ಸಂಬಂಧ ಮೃತಳ 17 ವರ್ಷದ ಸಹೋದರಿಯನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಮೈಕೋ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೃತ ರಾಜೇಶ್ವರಿಗೆ ಬಾಲಕಿ ಚಿಕ್ಕಪ್ಪನ ಮಗಳು. ಇಬ್ಬರು ಮೂಲತಃ ಆಂಧ್ರ ಪ್ರದೇಶದ ಹಿಂದೂಪುರ ಜಿಲ್ಲೆಯವರಾಗಿದ್ದು, ಆರು ತಿಂಗಳ ಹಿಂದೆ ಇಬ್ಬರು ನಗರಕ್ಕೆ ಬಂದು ಬಿಟಿಎಂ ಲೇಔಟ್ ನಲ್ಲಿ ನೆಲೆಸಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾಜೇಶ್ವರಿಗೆ ಗಾರೆ ಕೆಲಸ ಮಾಡುವ ಯುವಕನೊಬ್ಬನ ಪರಿಚವಾಗಿ ನಿತ್ಯ ಮೊಬೈಲ್‌ನಲ್ಲಿ ಆತನೊಂದಿಗೆ ಸಂಭಾಷಣೆಯಲ್ಲಿ ತೊಡಗುತ್ತಿದ್ದಳು. ತನ್ನ ಅಕ್ಕ ಬೇರೊಬ್ಬನ ಜತೆ ಮೊಬೈಲ್‌'ನಲ್ಲಿ ಮಾತನಾಡುವುದಕ್ಕೆ ಬಾಲಕಿ ಆಕ್ಷೇಪ ವ್ಯಕ್ತಪಡಿಸಿದ್ದಳು. ಈ ವಿಚಾರವಾಗಿ ಸಹೋದರಿಯರ ನಡುವೆ ಆಗ್ಗಾಗ್ಗೆ ಜಗಳ ನಡೆಯುತ್ತಿತ್ತು.

ಯುವಕನೊಂದಿಗೆ ಮೊಬೈಲ್‌'ನಲ್ಲಿ ಸಂಭಾಷಣೆ ನಡೆಸುವುದನ್ನು ನಿಲ್ಲಿಸುವಂತೆ ತಂಗಿ ಮೃತ ರಾಜೇಶ್ವರಿಗೆ ತಾಕೀತು ಮಾಡಿದ್ದಳು. ಸೆ.11ರಂದು ರಾಜೇಶ್ವರಿ ಮೊಬೈಲ್ ನಲ್ಲಿ ಯುವಕನೊಂದಿಗೆ ಮಾತನಾಡುತ್ತಿರುವ ವಿಚಾರಕ್ಕೆ ತಂಗಿ ಪುನಃ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ತಳ್ಳಾಟ ನೂಕಾಟ ನಡೆದು ಸಿಟ್ಟಿನಲ್ಲಿ ತಂಗಿ ಅಕ್ಕನ ಕತ್ತನ್ನು ಬಲವಾಗಿ ಹಿಸುಕಿ, ಗೋಡೆಗೆ ಗುದ್ದಿಸಿದ್ದಾಳೆ. ಉಸಿರುಗಟ್ಟಿದ ಪರಿಣಾಮ ರಾಜೇಶ್ವರಿ ಕುಸಿದು ಬಿದ್ದಿದ್ದಾಳೆ. ಬಲವಾದ ಪೆಟ್ಟು ಬಿದ್ದ ಪರಿಣಾಮ ರಾಜೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಳು.

ಆದರೆ, ರಾಜೇಶ್ವರಿ ಅಸ್ವಸ್ಥಗೊಂಡಿದ್ದಾಳೆ ಎಂದು ತಂಗಿ ಕೂಡ ಮಲಗಿದ್ದಳು. ಬೆಳಗ್ಗೆ ರಾಜೇಶ್ವರಿ ನಿದ್ರೆಯಿಂದ ಎಚ್ಚರಗೊಳ್ಳದಿದ್ದಾಗ ಮೃತಪಟ್ಟಿರುವುದು ಬಾಲಕಿಯ ಗಮನಕ್ಕೆ ಬಂದಿದೆ.

ಆತ್ಮಹತ್ಯೆಯ ನಾಟಕ

ಅಕ್ಕ ಮೃತಪಟ್ಟಿರುವ ವಿಷಯ ತಿಳಿದ ಕೂಡಲೇ ತಂಗಿ ಮನೆಯಿಂದ ಹೊರ ಹೋಗಿ ಕೆಲ ನಿಮಿಷದ ಬಳಿಕ ವಾಪಸ್ ಆಗಿದ್ದಳು. ಮನೆಗೆ ಬಂದ ಬಳಿಕ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನೆರೆಹೊರೆಯವರನ್ನು ಕೂಗಿಕೊಂಡಿದ್ದಳು. ನೆರೆ ಮನೆ ನಿವಾಸಿಗಳು ಕೂಡಲೇ ಆಸ್ಪತ್ರೆಗೆ ಕರೆದೊಯ್ಯದು ದಾಖಲಿಸಿದ್ದರು.

ವೈದ್ಯರು ರಾಜೇಶ್ವರಿ ಮೃತಪಟ್ಟಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಈ ವಿಷಯವನ್ನು ವೈದ್ಯರು ಪೊಲೀಸರಿಗೆ ತಿಳಿಸಿ, ಮೃತಳ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಎಂಬುದು ದೃಢಪಟ್ಟಿತ್ತು. ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು

Follow Us:
Download App:
  • android
  • ios