news
By Suvarna Web Desk | 08:21 AM April 21, 2017
ಕ್ಷಮೆಯಾಚನೆಯಲ್ಲೂ ಕೊಂಕುಬಿಡದ ಸತ್ಯರಾಜ್? ಅವರದ್ದು ಸ್ವಾಭಿಮಾನವೋ, ಉದ್ಧಟತನವೋ? ಇಲ್ಲಿದೆ ಪೂರ್ಣಪಠ್ಯ

Highlights

9 ವರ್ಷದ ಹಿಂದೆ ಅವರು ವಾಟಾಳ್ ನಾಗರಾಜ್ ಒಳಗೊಂಡಂತೆ ಕನ್ನಡ ಹೋರಾಟಗಾರರನ್ನು ಲೇವಡಿ ಮಾಡಿ ಮಾತನಾಡಿದ್ದರು. ಆ ಬಗ್ಗೆ ಅವರು ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಕಾವೇರಿ ಹೋರಾಟದ ವಿಚಾರದಲ್ಲಿ ತಮ್ಮ ನಿಲುವು ಅಚಲ ಎಂದು ಹೇಳುವ ಮೂಲಕ ಕನ್ನಡಿಗರನ್ನು ಪರೋಕ್ಷವಾಗಿ ಕೆಣಕಿದ್ದಾರೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ಬೆಂಗಳೂರು(ಏ. 21): ಬಾಹುಬಲಿ 'ಕಟ್ಟಪ್ಪ' ಪಾತ್ರಧಾರಿ ಹಾಗು ತಮಿಳು ನಟ ಸತ್ಯರಾಜ್ ಕನ್ನಡಿಗರ ಹಾಗೂ ಬಾಹುಬಲಿ ನಿರ್ಮಾಪಕರ ಒತ್ತಡಕ್ಕೆ ಬಾಗಿದ್ದಾರೆ. 9 ವರ್ಷಗಳ ಹಿಂದೆ ತಾನು ಕನ್ನಡಿಗರ ವಿರುದ್ಧ ಮಾತನಾಡಿದ್ದಕ್ಕೆ ವಿಷಾದವಿದೆ ಎಂದು ಸತ್ಯರಾಜ್ ಹೇಳಿದ್ದಾರೆ. ಆದರೆ, ಅವರು ಎಲ್ಲಿಯೂ ಕ್ಷಮೆ ಯಾಚಿಸಿಲ್ಲ. 'ವರುತಮ್'(ವಿಷಾದ) ಎಂಬ ಪದ ಬಳಸಿದ್ದಾರೆಯೇ ಹೊರತು ಕ್ಷಮೆ ಪದ ಪ್ರಯೋಗ ಮಾಡಿಯೇ ಇಲ್ಲ.

9 ವರ್ಷದ ಹಿಂದೆ ಅವರು ವಾಟಾಳ್ ನಾಗರಾಜ್ ಒಳಗೊಂಡಂತೆ ಕನ್ನಡ ಹೋರಾಟಗಾರರನ್ನು ಲೇವಡಿ ಮಾಡಿ ಮಾತನಾಡಿದ್ದರು. ಆ ಬಗ್ಗೆ ಅವರು ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಕಾವೇರಿ ಹೋರಾಟದ ವಿಚಾರದಲ್ಲಿ ತಮ್ಮ ನಿಲುವು ಅಚಲ ಎಂದು ಹೇಳುವ ಮೂಲಕ ಕನ್ನಡಿಗರನ್ನು ಪರೋಕ್ಷವಾಗಿ ಕೆಣಕಿದ್ದಾರೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ಸತ್ಯರಾಜ್ ಹೇಳಿದ್ದೇನು? ಪೂರ್ಣಪಠ್ಯ

"ನಮಸ್ಕಾರ ಒಂಭತ್ತು ವರ್ಷಗಳ ಹಿಂದೆ ಕಾವೇರಿ ಹೋರಾಟದಲ್ಲಿ ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ ನಡೆದಿತ್ತು. ತಮಿಳು ಚಿತ್ರ ಪ್ರದರ್ಶನಕ್ಕೆ ತಡೆ ನಿಡಲಾಗಿತ್ತು. ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ತಮಿಳು ಚಿತ್ರರಂಗ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಈ ಹೋರಾಟದಲ್ಲಿ ಹಲವು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಈ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಈ ವೇಳೆ ಹಲವರು ಆವೇಷಭರಿತರಾಗಿ ಮಾತನಾಡಿದ್ದರು. ಅದರಲ್ಲಿ ನಾನೂ ಕೂಡ ಒಬ್ಬ.  ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿಯೂ ಪ್ರತಿಭಟನೆ ನಡೆದಿತ್ತು. ಅಲ್ಲಿಯೂ ಕನ್ನಡದ ಕಲಾವಿದರು ಆವೇಷಭರಿತರಾಗಿ ಮಾತನಾಡಿದ್ದರು. ಇದನ್ನು ಖಂಡಿಸಿ ನಾನು ಮಾತನಾಡಿದ್ದು ಕನ್ನಡಿಗರಿಗೆ ಘಾಸಿಯುಂಟು ಮಾಡಿದೆ. ನಾನು ಕನ್ನಡಿಗರ ವಿರೋಧಿಯಲ್ಲ. ಇದಕ್ಕೆ ಉದಾಹರಣೆ ಎಂದ್ರೆ, ಕಳೆದ 35 ವರ್ಷಗಳಿಂದ ನನ್ನ ಬಳಿ ಕೆಲಸ ಮಾಡುತ್ತಿರುವ ಶ್ರೀಯುತ ಶೇಖರ್​ ಅವರ ಮಾತೃಭಾಷೆ ಕನ್ನಡ.

"ಈ ಒಂಭತ್ತು ವರ್ಷಗಳ ಅವಧಿಯಲ್ಲಿ ಬಾಹುಬಲಿ ಸೇರಿದಂತೆ ನನ್ನ ಅಭಿನಯದ 30 ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿವೆ. ಆಗ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಅಷ್ಟೇ ಅಲ್ಲ, ಕನ್ನಡ ಸಿನಿಮಾಗಳಲ್ಲೂ ನಟಿಸುವಂತೆ ನನಗೆ ಆಫರ್​ಗಳು ಬಂದಿದ್ದವು. ಆದರೆ ಸಮಯ ಇಲ್ಲದ ಕಾರಣ ಕನ್ನಡ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ.

"ಒಂಭತ್ತು ವರ್ಷದ ಹಿಂದೆ ನಡೆದ ಪ್ರತಿಭಟನೆಯಲ್ಲಿ ನಾನು ಮಾತನಾಡಿದ ವಿಡಿಯೋ ಯೂಟ್ಯೂಬ್'​ನಲ್ಲಿದ್ದು,  ಅದನ್ನು ನೋಡಿದ ಕನ್ನಡಿಗರ ಮನಸ್ಸಿಗೆ ನೋವುಂಟಾಗಿದೆ ಎಂಬುದು ನನಗೆ ಗೊತ್ತಾಯಿತು. ನಾನು ಅಂದು ಮಾತನಾಡಿದ ಕೆಲ ಮಾತುಗಳಿಗೆ ವಿಷಾದಿಸುತ್ತೇನೆ . ನನ್ನ ಶ್ರೇಯಸ್ಸು ಬಯಸುವವರಿಗೆ, ತಮಿಳ ಜನರಿಗೆ ನಾನು ಸದಾ ಆಭಾರಿಯಾಗಿರುತ್ತೇನೆ. ನನಗೆ ಸದಾ ಬೆಂಬಲವಾಗಿ ನಿಲ್ಲುವ ತಮಿಳು ಭಾಷಿಕರಿಗೆ ಮತ್ತು ಸಹವರ್ತಿಗಳು ನನ್ನ ನಡೆಯಿಂದ ಬೇಸರಿಸಿಕೊಳ್ಳಬೇಡಿ.

"ಬಾಹುಬಲಿಯಂತಹ ದೊಡ್ಡ ಚಿತ್ರದಲ್ಲಿ ನಾನೊಬ್ಬ ಚಿಕ್ಕ ನಟ. ಈ ಚಿತ್ರದಲ್ಲಿ ತುಂಬಾ ಜನ ನಟ -ನಟಿಯರು ಕೆಲಸ ಮಾಡಿದ್ದಾರೆ. ತುಂಬಾ ಜನ ಹಣ ಹೂಡಿದ್ದಾರೆ. ಅವರೆಲ್ಲರ ಶ್ರಮವನ್ನು ವ್ಯರ್ಥ ಮಾಡುವುದಕ್ಕೆ ನಾನು ಇಷ್ಟಪಡುವುದಿಲ್ಲ. ಕರ್ನಾಟಕದಲ್ಲಿರುವ ವಿತರಕರು, ಪ್ರದರ್ಶಕರು, ಥಿಯೇಟರ್​ ಮಾಲಿಕರು ನಷ್ಟ ಅನುಭವಿಸುವುದು ನನಗೆ ಇಷ್ಟವಿಲ್ಲ. ಹಾಗೇನಾದರೂ ಆದರೆ , ಅದು ನಾನು ಹೊಣೆಗಾರಿಕೆಯಿಂದ ನುಣುಚಿಕೊಂಡಂತೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

"ಟ್ವಿಟರ್'​ನಲ್ಲಿ ನಿರ್ದೇಶಕ ರಾಜಮೌಳಿ ಆಡಿರುವ ಮಾತುಗಳು ತುಂಬಾ ಸ್ಪಷ್ಟವಾಗಿವೆ. ನನ್ನ ಒಂದು ನಿಲುವು ತುಂಬಾ ಸ್ಪಷ್ಟವಾಗಿದೆ. ಇನ್ನು ಮುಂದೆಯೂ ತಮಿಳರ ಸಮಸ್ಯೆಯಾಗಲಿ, ಕಾವೇರಿ ನೀರಿನ ವಿಚಾರವಾಗಲಿ, ರೈತರ ಸಮಸ್ಯೆಯ ವಿಷಯಗಳಾದರೂ ಸರಿ, ತಮಿಳರಿಗೆ ಸಿಗಬೇಕಾದ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಸುತ್ತೇನೆ.

"ಈ ಸತ್ಯರಾಜ್'​ನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಮುಂದೆ ಇಂತಹ ತೊಂದರೆಗಳಿಗೆ ಸಿಲುಕಬಹುದು ಎಂಬ ಭಾವನೆ ಹೊಂದಿರುವ ನಿರ್ಮಾಪಕರಿಗೆ ಒಂದು ಕಿವಿ ಮಾತು. ನನ್ನಂತಹ ಒಬ್ಬ ಸಾಧಾರಣ ನಟನ ಜೊತೆ ನಿಮ್ಮ ಚಿತ್ರಗಳಿಗೆ ಒಪ್ಪಂದ ಮಾಡಿಕೊಳ್ಳಬೇಡಿ, ನಷ್ಟ ಮಾಡಿಕೊಳ್ಳಬೇಡಿ. ಇದು ನನ್ನ ವಿನಮ್ರ ಮನವಿ.

"ಯಾಕೆಂದರೆ ಒಬ್ಬ ಒಬ್ಬ ನಟನಾಗಿ ಸಾಯುವುದಕ್ಕಿಂತ, ಒಬ್ಬ ತಮಿಳನಾಗಿ ಸಾಯುವುದೇ ನನಗೆ ಹೆಮ್ಮೆ. ನನ್ನ ಈ ಕ್ಷಮೆ ಒಪ್ಪಿಕೊಂಡು ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡಬೇಕೆಂದು ಕನ್ನಡಿಗರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನನ್ನು ಒಪ್ಪಿಕೊಂಡು ನನ್ನ ಜೊತೆ ಇದ್ದವರಿಗೆ, ತಮಿಳು ಚಿತ್ರರಂಗದವರಿಗೆ ಮತ್ತು ದಕ್ಷಿಣ ಭಾರತ ಸಿನಿಮಾ ಒಕ್ಕೂಟಕ್ಕೆ ಧನ್ಯವಾದಗಳು. ನನ್ನಿಂದಾದ ಸಮಸ್ಯೆ ಸಹಿಸಿಕೊಂಡ ಚಿತ್ರದ ನಿರ್ದೇಶಕ ರಾಜಮೌಳಿ, ನಿರ್ಮಾಪಕ ಶೋಭು ಪ್ರಸಾದ್​ ಮತ್ತು ಬಾಹುಬಲಿ ಚಿತ್ರತಂಡಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು..."

Show Full Article


Recommended


bottom right ad