Asianet Suvarna News Asianet Suvarna News

ಕಾಂಗ್ರೆಸ್'ನ 40 ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ?: ಕಾರಣವೇನು ಗೊತ್ತಾ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ 122 ಮಂದಿ ಶಾಸಕರ ಪೈಕಿ 30ರಿಂದ 40 ಮಂದಿ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಸಮೀಕ್ಷಾ ವರದಿಗಳನ್ನು ನಂಬಿರುವ ರಾಜ್ಯ ನಾಯಕತ್ವ, ಈ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಪರ್ಯಾಯ ಅಭ್ಯರ್ಥಿಗಳ ಹುಡುಕಾಟಕ್ಕೆ ನಾಂದಿ ಹಾಡಿದೆ. ಅಲ್ಲದೆ, ಸೋತೇ ಸೋಲುತ್ತಾರೆ ಎಂದು ತಮಗೆ ಮನವರಿಕೆಯಾಗಿರುವ ಶಾಸಕರ ಬದಲಾಗಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಲು ಹೈಕಮಾಂಡ್‌ನಿಂದಲೂ ಒಪ್ಪಿಗೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Extant 40 congress ministers will not get ticket for next election

ಬೆಂಗಳೂರು(ಸೆ.20): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ 122 ಮಂದಿ ಶಾಸಕರ ಪೈಕಿ 30ರಿಂದ 40 ಮಂದಿ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಸಮೀಕ್ಷಾ ವರದಿಗಳನ್ನು ನಂಬಿರುವ ರಾಜ್ಯ ನಾಯಕತ್ವ, ಈ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಪರ್ಯಾಯ ಅಭ್ಯರ್ಥಿಗಳ ಹುಡುಕಾಟಕ್ಕೆ ನಾಂದಿ ಹಾಡಿದೆ. ಅಲ್ಲದೆ, ಸೋತೇ ಸೋಲುತ್ತಾರೆ ಎಂದು ತಮಗೆ ಮನವರಿಕೆಯಾಗಿರುವ ಶಾಸಕರ ಬದಲಾಗಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಲು ಹೈಕಮಾಂಡ್‌ನಿಂದಲೂ ಒಪ್ಪಿಗೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರತ್ಯೇಕವಾಗಿ ಹಲವು ಬಾರಿ ಆಂತರಿಕ ಸಮೀಕ್ಷೆ ನಡೆಸಿದ್ದು, ಒಂದು ಸಲ ಸಿ-ಆರ್ ಖಾಸಗಿ ಸಂಸ್ಥೆ ಕೂಡ ಕ್ಷೇತ್ರ ವಾರು ಸಮೀಕ್ಷೆಗಳನ್ನು ನಡೆಸಿತ್ತು. ಈ ಸಮೀಕ್ಷೆ ಗಳಿಂದ ಮನವರಿಕೆಯಾಗಿರುವ ಅಂಶವೆಂದರೆ, ಹಾಲಿ ಕಾಂಗ್ರೆಸ್ ಶಾಸಕರಿರುವ 30ರಿಂದ 40 ಕ್ಷೇತ್ರಗಳಲ್ಲಿ ವಾತಾವರಣ ಆಡಳಿತ ಪಕ್ಷಕ್ಕೆ ಪೂರಕವಾಗಿಲ್ಲ. ಹೀಗಾಗಿ ಸರಳ ಬಹುಮತ ಪಡೆಯುವ ಕಾಂಗ್ರೆಸ್ ಪಕ್ಷದ ಕನಸಿಗೆ ಕೆಲಮಟ್ಟಿನ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂಬುದು ಅರಿವಾಗಿದೆ. ಇಂತಹ ಕ್ಷೇತ್ರಗಳ ಶಾಸಕರಿಗೆ ಈ ಹಿಂದೆಯೇ ಕ್ಷೇತ್ರದಲ್ಲಿ ವರ್ಚಸ್ಸು ಉತ್ತಮ ಪಡಿಸಿಕೊಳ್ಳಲು ಹಾಗೂ ಕ್ಷೇತ್ರದತ್ತ ಹೆಚ್ಚು ಗಮನ ನೀಡಲು ರಾಜ್ಯ ನಾಯಕತ್ವ ಸೂಚನೆ ನೀಡಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇತ್ತೀಚಿನ ಸಮೀಕ್ಷಾ ವರದಿಯಿಂದ ಗೊತ್ತಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಒಗ್ಗೂಡಿ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯ ನಾಯಕತ್ವದ ಈ ಆತಂಕಕ್ಕೆ ಸ್ಪಂದಿಸಿರುವ ಹೈಕಮಾಂಡ್ ಸಹ ಸೋಲು ಖಚಿತ ಎನಿಸಿದ ಶಾಸಕರಿಗೆ ಟಿಕೆಟ್ ಕೊಡಲೇಬೇಕು ಎಂದೇನಿಲ್ಲ ಎನ್ನುವ ಮೂಲಕ ಪರ್ಯಾಯ ಅಭ್ಯರ್ಥಿಗಳ ಹುಡುಕಾಟಕ್ಕೆ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿಯು ಇಂತಹ ಕ್ಷೇತ್ರಗಳಲ್ಲಿ ಯಾರು ಅ‘ಭ್ಯರ್ಥಿಯಾದರೆ ಗೆಲ್ಲಬಹುದು ಎಂಬ ಬಗ್ಗೆ ಒಂದು ಪ್ಯಾನೆಲ್ (ಮೂರ್ನಾಲ್ಕು ಹೆಸರುಗಳಿರುವ ಪಟ್ಟಿ) ನೀಡುವಂತೆ ಜಿಲ್ಲಾ ಘಟಕಗಳಿಗೆ ಸೂಚಿಸಿದೆ. ಜತೆಗೆ, ಕ್ಷೇತ್ರ ಸಮೀಕ್ಷೆ ನಡೆಸುವ ಸಂಸ್ಥೆಗಳಿಗೆ ಯಾರು ಅಭ್ಯರ್ಥಿಯಾದರೆ ಸದರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಬಹುದು ಎಂಬ ಬಗ್ಗೆ ವರದಿ ನೀಡುವಂತೆಯೂ ಸೂಚನೆ ನೀಡಿದೆ ಎನ್ನಲಾಗಿದೆ. ಜತೆಗೆ, ಯುವಕರಿಗೆ ಹಾಗೂ ಹೊಸ ಹೆಸರು ಗಳಿಗೆ ಆದ್ಯತೆ ನೀಡುವಂತೆ ಕೋರಿದೆ ಎಂದು ಮೂಲಗಳು ಹೇಳಿವೆ.

ಇದರ ತಾತ್ಪರ್ಯವಿಷ್ಟೇ- ಈ ಬಾರಿ ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ಮತ್ತೆ ಟಿಕೆಟ್ ಖಾತರಿಯಿಲ್ಲ. ಬಹುತೇಕ 30ರಿಂದ 40 ಮಂದಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ.

ಟಿಕೆಟ್ ಏಕಿಲ್ಲ?

-ಕಳೆದ 1 ವರ್ಷದಲ್ಲಿ ಹಲವಾರು ಬಾರಿ ಆಂತರಿಕ ಸಮೀಕ್ಷೆ ನಡೆಸಿರುವ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು

-ಖಾಸಗಿ ಸಂಸ್ಥೆಯಿಂದಲೂ ಸಮೀಕ್ಷೆ: ಇವುಗಳ ಪ್ರಕಾರ 30ರಿಂದ 40 ಹಾಲಿ ಶಾಸಕರು ಸೋಲುವ ಸಾಧ್ಯತೆ

-ಈ ಹಿನ್ನೆಲೆಯಲ್ಲಿ ವರ್ಚಸ್ಸು ವೃದ್ಧಿ ಹಾಗೂ ಕ್ಷೇತ್ರದತ್ತ ಗಮನ ಹರಿಸಲು ಶಾಸಕರಿಗೆ ಸೂಚಿಸಿದ್ದ ನಾಯಕತ್ವ

-ಆದರೂ, ಯಾವುದೇ ಪ್ರಯೋಜನ ಇಲ್ಲ: ಇತ್ತೀಚಿನ ಆಂತರಿಕ ಸಮೀಕ್ಷೆಯಿಂದ ಕಾಂಗ್ರೆಸ್‌ಗೆ ಅರಿವು

-ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಲು ಹೈಕಮಾಂಡ್ ಒಪ್ಪಿಗೆ ಪಡೆದ ರಾಜ್ಯ ಕಾಂಗ್ರೆಸ್ ನಾಯಕರು -ಗೆಲ್ಲಬಹುದಾದ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಎಲ್ಲಾ ಜಿಲ್ಲಾ ಘಟಕಗಳಿಗೆ ಕೆಪಿಸಿಸಿಯಿಂದ ಸೂಚನೆ

Follow Us:
Download App:
  • android
  • ios