Asianet Suvarna News Asianet Suvarna News

ದುಡ್ಡು ನನ್ನಪ್ಪಂದು ಅಲ್ಲ, ಢೋಂಗಿ ಬಿ.ಎಸ್ ಯಡಿಯೂರಪ್ಪನದು ಅಲ್ಲ

ಬಿಜೆಪಿ ದುಷ್ಟರಕೂಟ, ಅಲ್ಲಿಎಲ್ಲರೂ ಕಳ್ಳರು, ಸುಳ್ಳುಗಾರರಿದ್ದಾರೆ. ಅವರನ್ನು ನಂಬಿ ಓಟ ಹಾಕಬೇಡಿ, ಅವರಿಗೆ ಮತ ನೀಡಿದರೆ ನಿಮ್ಮ ಆತ್ಮಸಾಕ್ಷಿಗೆ ಅಗೌರವ ಮಾಡಿದಂತಗುತ್ತದೆ - ಸಿದ್ದರಾಮಯ್ಯ

Ex  CM Siddaramaiah Slams B.S. Yeddyurappa at Jamakhandi By poll campaign
Author
Bengaluru, First Published Oct 28, 2018, 5:27 PM IST

ಜಮಖಂಡಿ[ಅ.28]: ಜನರ ದುಡ್ಡನ್ನು ಜನರಿಗೆ ನೀಡುವುದೇ ನಮ್ಮ ಉದ್ದೇಶ. ಸರ್ಕಾರದ ದುಡ್ಡು ನನ್ನಪ್ಪಂದಲ್ಲ. ಆ ಢೋಂಗಿ ಯಡಿಯೂರಪ್ಪನ್ನದೂ ಅಲ್ಲ. ಜನರ ದುಡ್ಡನ್ನು ರೈತರಿಗೆ ಸಾಲಮನ್ನಾ, ಕಷ್ಟದಲ್ಲಿರುವ ಬಡಜನರಿಗೆ ಹಂಚುವುದೇ ಪ್ರಾಮಾಣಿಕ ರಾಜಕಾರಣಿಯ ಕೆಲಸ ಎಂದು ಮಾಜಿ ಸಿಎಂ ಹಾಗೂ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೇಳಿದರು.

ಜಮಖಂಡಿಯಲ್ಲಿ ನ.3 ರಂದು ನಡೆಯಲಿರುವ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಪರ ಶನಿವಾರ ಮತಯಾಚಿಸಿ, ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆದ್ದು ಬರಲಿದ್ದು, ಆಗ ಬಿಜೆಪಿಯ ಕಮಲ ಎಲ್ಲೂ ಕಾಣಿಸಬಾರದು. ಬಿಜೆಪಿ ದುಷ್ಟರಕೂಟ, ಅಲ್ಲಿಎಲ್ಲರೂ ಕಳ್ಳರು, ಸುಳ್ಳುಗಾರರಿದ್ದಾರೆ. ಅವರನ್ನು ನಂಬಿ ಓಟ ಹಾಕಬೇಡಿ, ಅವರಿಗೆ ಮತ ನೀಡಿದರೆ ನಿಮ್ಮ ಆತ್ಮಸಾಕ್ಷಿಗೆ ಅಗೌರವ ಮಾಡಿದಂತಗುತ್ತದೆ ಎಂದು ಹೇಳಿದರು.

ಬಿಜೆಪಿಯವರಷ್ಟೇ ಹಿಂದುಗಳೆ?: ಈ ವೇದಿಕೆಯಲ್ಲಿನ ಉಮೇಶ ಕತ್ತಿ, ಶಿವಾನಂದ ಪಾಟೀಲ, ಶ್ರೀಶೈಲ್ ದಳವಾಯಿ, ನಾನು ಸಿದ್ದರಾಮಯ್ಯ, ಆನಂದ ಇವರ‌್ಯಾರೂ ಹಿಂದುಗಳಲ್ಲವೇ? ಬಿಜೆಪಿಯ ಕುಲಕರ್ಣಿ ಅಷ್ಟೇ, ಬಿಜೆಪಿಯವರಷ್ಟೇ ಹಿಂದುಗಳೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಹಿಂದು-ಮುಸ್ಲಿಂ ಅಂತ ಒಡೆದು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವ ತನಕ ಈ ಗ್ರಾಮದ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.

ಮೈತ್ರಿಕೂಟ ಗೆಲವು: ಈ ದೇಶದ ಅಲ್ಪಸಂಖ್ಯಾತರ, ಮಹಿಳೆಯರ, ದೀನ ದಲಿತರ ಸಾಮಾನ್ಯ ಜನರಿಗೆ ತೊಂದರೆ ನೀಡುವ ಪ್ರಧಾನಿ ನರೇಂದ್ರ ಮೋದಿಯನ್ನು ಶೀಘ್ರದಲ್ಲಿ ಪ್ರಧಾನಿ ಹುದ್ದೆಯಿಂದ ತೊಲಗಿಸಬೇಕು. ಈ ಹಿಂದೆ 300 ಗಳಷ್ಟಿದ್ದ ಸಿಲಿಂಡರ್ ಬೆಲೆ ಇಂದು 900ಕ್ಕೆರಿದೆ. ಜನಸಾಮಾನ್ಯರು ಹೇಗೆ ಬದುಕಬೇಕು. ರಾಜ್ಯದಲ್ಲಿ ನಡೆಯುವ 5 ಉಪಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನೀರಾವರಿ ಯೋಜನೆಗೆ 62 ಸಾವಿರ ಕೋಟಿ ಅನುದಾನ ನೀಡಿದೆ. ಯಡಿಯೂರಪ್ಪ ಅಧಿಕಾರದ ವೇಳೆ ಕೇವಲ 10 ಸಾವಿರ ಕೋಟಿ ನೀಡಿದ್ದರು. ಚಿಕ್ಕಪಡಸಲಗಿ ಬ್ಯಾರೇಜ್ ಎತ್ತರಿಸುವ ವೇಳೆ ಸಿದ್ದು ನ್ಯಾಮಗೌಡ ಅವರ ಬೇಡಿಕೆಯಂತೆ 10 ಕೋಟಿ ನೀಡಲಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯ ನೇರ ಹಣಾಹಣಿ ಸ್ಪರ್ಧೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಂದೂ ಜಾತಿ, ಭಾಷೆಗಳ ಬಗ್ಗೆ ವ್ಯತ್ಯಾಸ ಕಾಣುವುದಿಲ್ಲ. ಸಾಮಾಜಿಕ ತಳಹದಿ ಮೇಲೆ ಪಕ್ಷ ಕಟ್ಟಿದ ನಮ್ಮ ಹಿರಿಯರು ಸರ್ವರಿಗೆ ಸಮಪಾಲು-ಸಮಬಾಳು ಎಂಬ ವೇದ ವಾಕ್ಯವನ್ನು ಪಾಲಿಸುತ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರದ ವೇಳೆಯಲ್ಲಿ ಅನೇಕ ಭಾಗ್ಯಗಳನ್ನು ಜನತೆಗೆ ನೀಡಿ, ಹಸಿವು ಮುಕ್ತ ಕರ್ನಾಟಕ ಮಾಡಲಾಗಿದೆ ಎಂದರು.

ನರೇಂದ್ರ ಮೋದಿ ಸುಳ್ಳು ಆಶ್ವಾಸನೆ ನೀಡಿ ಭ್ರಮೆಲೋಕದಲ್ಲಿದ್ದು, ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದನ್ನು ನಾವೂ ಮರೆತಿಲ್ಲ. ಪ್ರಧಾನ ಮಂತ್ರಿ ಫಸಲ ಯೋಜನೆ ರೈತರ ಸಾಲಮನ್ನಾ ಮಾಡುವುದಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಯಡಿಯೂರಪ್ಪ ಇನ್ನು ಎಂದು ಮುಖ್ಯಮಂತ್ರಿ ಅಗುವುದಿಲ್ಲ.

ಸುಮಾರು 40 ಸಾವಿರ ಕೋಟಿ ರಫೇಲ್ ಹಗರಣದಲ್ಲಿ ಕೇಂದ್ರ ಸರ್ಕಾರ ಸಿಕ್ಕಿದ್ದು, ಯಾರೂ ಮರೆತಿಲ್ಲ. ಪ್ರತಿ ಟನ್ ಕಬ್ಬಿನ 450 ಬೆಲೆ ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಅಭ್ಯರ್ಥಿ ಆನಂದ ನ್ಯಾಮಗೌಡ ಮಾತನಾಡಿದರು. ವೇದಿಕೆಯಲ್ಲಿ ಸೋಮಶೇಖರ, ಪ್ರಕಾಶ ಹುಕ್ಕೇರಿ, ವಿನಯ ಕುಲಕರ್ಣಿ,ಅಜೇಯಸಿಂಗ, ವೀಣಾ ಕಾಶಪ್ಪನ್ನವರ, ಎಚ್‌.ವೈ. ಮೇಟಿ, ಅಜಯಕುಮಾರ ಸರನಾಯಿಕ, ಶ್ರೀಶೈಲ್ ದಳವಾಯಿ, ಆರ್
.ಬಿ.ತಿಮ್ಮಾಪೂರ, ವರ್ಧಮಾನ ನ್ಯಾಮಗೌಡ ಇದ್ದರು.
 

Follow Us:
Download App:
  • android
  • ios