Asianet Suvarna News Asianet Suvarna News

ಸಚಿವ ಡಿ.ಕೆ. ಶಿವಕುಮಾರ್ ಗೆ ಸಮನ್ಸ್‌

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. 

Enforcement Directorate summons issued to Minister DK Shivakumar
Author
Bengaluru, First Published Mar 15, 2019, 8:31 AM IST

ಬೆಂಗಳೂರು :  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್‌ ಜಾರಿ ಮಾಡಿರುವ ಪ್ರಕರಣ ಕುರಿತ ‘ಜಾರಿ ಪ್ರಕರಣ ಮಾಹಿತಿ ವರದಿ’(ಇಸಿಐಆರ್‌)ಯನ್ನು ಗುರುವಾರ ಇ.ಡಿ. ಹೈಕೋರ್ಟ್‌ಗೆ ಸಲ್ಲಿಸಿತು.

ದೆಹಲಿಯಲ್ಲಿ ತಮಗೆ ಸೇರಿದ ಫ್ಲ್ಯಾಟ್‌, ಮನೆ ಹಾಗೂ ಬೆಂಗಳೂರಿನ ಹಲವೆಡೆ ನಡೆದ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ. ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವ ಡಿ.ಕೆ.ಶಿವಕುಮಾರ್‌, ಅವರ ಆಪ್ತ ಸಚಿನ್‌ ನಾರಾಯಣ್‌ ಸೇರಿದಂತೆ ಐವರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಪ್ರಕರಣದ ಆರೋಪಿಗಳ ವಿರುದ್ಧದ ಇಸಿಐಆರ್‌ ಅನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.

ನಂತರ ನಾವದಗಿ ಅವರು ವಾದ ಮುಂದುವರಿಸಿ, ಅರ್ಜಿದಾರರ ವಿರುದ್ಧದ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಇನ್ನೂ ಬಾಕಿಯಿದೆ. ಸದ್ಯ ಆರೋಪಿಗಳಿಂದ ಯಾವುದೇ ದಾಖಲೆ ಕೇಳಿಲ್ಲ ಹಾಗೂ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲ. ಹಾಗೆಯೇ ಅವರ ವಿರುದ್ಧ ಯಾವುದೇ ಕ್ರಮ ಸಹ ಕೈಗೊಂಡಿಲ್ಲ ಎಂದು ತಿಳಿಸಿದರು.

ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಲಾಗಿತ್ತಷ್ಟೇ. ಅವರ ವಿರುದ್ಧ ಮೇಲ್ನೋಟಕ್ಕೆ ಅನೇಕ ಸಾಕ್ಷ್ಯಗಳಿವೆ. ತನಿಖೆ ಮುಂದುವರಿಸಿದರೆ ಹೊಸ ಹೆಸರುಗಳು ಹೊರಬೀಳಬಹುದು ಹಾಗು ಹೊಸ ಸಾಕ್ಷ್ಯ ಲಭ್ಯವಾಗಬಹುದು. ಈ ಹಂತದಲ್ಲಿ ಆರೋಪಿಗಳು ಸಮನ್ಸ್‌ ರದ್ದು ಕೋರಿರುವುದು ಅಕಾಲಿಕವಾಗಿದ್ದು, ನ್ಯಾಯಾಲಯವು ಅವರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು.

ನ್ಯಾಯಪೀಠ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.

ಈ ಮಧ್ಯೆ ನ್ಯಾಯಮೂರ್ತಿಗಳು ಇಡಿ ಸಲ್ಲಿಸಿದ ಲಕೋಟೆ ತೆರದು ಇಸಿಐಆರ್‌ ಅನ್ನು ಪರಿಶೀಲಿಸಿದರು. ನಂತರ ಅದನ್ನು ಹಿಂದಿರುಗಿಸಿ, ಮುಂದೆ ಅಗತ್ಯವಾದರೆ ಆ ವರದಿಯನ್ನು ಕೇಳುತ್ತೇನೆ ಎಂದು ತಿಳಿಸಿದರು.

ಅರ್ಜಿದಾರರ ಪರ ಈ ಹಿಂದೆ ವಾದ ಮಂಡಿಸಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌, ಆರೋಪಿಗಳ ವಿರುದ್ಧ ಯಾವ ಆರೋಪ ಹೊರಿಸಲಾಗಿದೆ ಎಂಬುದೇ ತಿಳಿದಿಲ್ಲ. ಇಡಿಯು ಇಸಿಐಆರ್‌ ವರದಿ ಹಾಗೂ ಎಫ್‌ಐಆರ್‌ ನೀಡಿಲ್ಲ ಎಂದು ಆಕ್ಷೇಪಿಸಿದ್ದರು.

Follow Us:
Download App:
  • android
  • ios