Asianet Suvarna News Asianet Suvarna News

ವಾದ್ರಾಗೆ ನೆರವಾದ ಕಂಪನಿಗೆ 500 ಕೋಟಿ ರು.ನೆರವು?

ವಾದ್ರಾಗೆ ನೆರವಾದ ಕಂಪನಿಗೆ 500 ಕೋಟಿ ರು.ನೆರವು? | ಭೂಮಿ ಖರೀದಿಸಿದ ಕಂಪನಿಗೆ ಸಾಲ ಕೊಟ್ಟಿದ್ದಕ್ಕೆ ತೆರಿಗೆ ಕೇಸಿನಿಂದ ಪಾರು? | ಅನುಮಾನಾಸ್ಪದ ನಡೆ: ವಿವರ ಕೇಳಿದ ಜಾರಿ ನಿರ್ದೇಶನಾಲಯ

ED Issues summons against Robert Vadra
Author
Bengaluru, First Published Dec 1, 2018, 7:40 AM IST

ನವದೆಹಲಿ (ಡಿ. 01):  ರಾಜಸ್ಥಾನದ ಬಿಕಾನೇರ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾವ, ಉದ್ಯಮಿ ರಾಬರ್ಟ್‌ ವಾದ್ರಾ ಅವರ ಕಂಪನಿ ಹೊಂದಿದ್ದ ಜಮೀನನ್ನು ಏಳುಪಟ್ಟು ಅಧಿಕ ಬೆಲೆಗೆ ಖರೀದಿ ಮಾಡಿದ್ದ ಕಂಪನಿಗೆ ಸಾಲ ನೀಡಿದ್ದ ಭೂಷಣ್‌ ಪವರ್‌ ಮತ್ತು ಉಕ್ಕು ಕಂಪನಿಗೆ ಸಂಕಷ್ಟಎದುರಾಗುವ ಸಂಭವವಿದೆ. ವಾದ್ರಾ ವಿರುದ್ಧ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ, ಭೂಷಣ್‌ ಕಂಪನಿಗೆ ಸಂಬಂಧಿಸಿದಂತೆ ತೆರಿಗೆ ವ್ಯಾಜ್ಯ ಇತ್ಯರ್ಥ ಆಯೋಗ ನಡೆಸಿದ್ದ ವಿಚಾರಣೆ ಹಾಗೂ ಅನುಮಾನಾಸ್ಪದ ಬೆಳವಣಿಗೆಗಳ ಕುರಿತು ಮಾಹಿತಿ ಕೇಳಿ ಪತ್ರ ಬರೆದಿದೆ.

ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಾಲ್‌ ಸಿಂಗ್‌ ಅವರು ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಪತ್ರ ರವಾನಿಸಲಾಗಿತ್ತು. ಆದರೆ ಆ ಕುರಿತ ದಾಖಲೆಗಳು ಅಗ್ನಿಗಾಹುತಿಯಾಗಿವೆ ಎಂಬ ಉತ್ತರ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯ ಮತ್ತೊಂದು ಪತ್ರ ಬರೆದಿದೆ ಎಂದು ದೆಹಲಿ ಮೂಲದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿತು.

ಏನಿದು ಪ್ರಕರಣ?:

ವಾದ್ರಾ ಕಂಪನಿಗೆ ಸೇರಿದ ಜಮೀನನ್ನು ಏಳು ಪಟ್ಟು ಅಧಿಕ ಬೆಲೆಗೆ ದೆಹಲಿ ಮೂಲದ ಅಲ್ಲೆಜೆನಿ ಫಿನ್‌ಲೀಸ್‌ ಪ್ರೈವೇಟ್‌ ಕಂಪನಿ ಖರೀದಿ ಮಾಡಿತ್ತು. ಆ ಕಂಪನಿಗೆ ಭೂಷಣ್‌ ಸ್ಟೀಲ್‌ 5.64 ಕೋಟಿ ರು. ಸಾಲ ನೀಡಿತ್ತು. ಇದು 2011-12ನೇ ಸಾಲಿನಲ್ಲಿ ನಡೆದಿತ್ತು. ಹೆಚ್ಚೂ ಕಡಿಮೆ ಅದೇ ವೇಳೆಗೆ ಅಂದರೆ, 2011ರ ಡಿಸೆಂಬರ್‌ನಲ್ಲಿ ತೆರಿಗೆ ವ್ಯಾಜ್ಯ ಇತ್ಯರ್ಥ ಆಯೋಗ ಭೂಷಣ್‌ ಸ್ಟೀಲ್‌ಗೆ ಅನುಕೂಲಕರವಾದ ಆದೇಶವೊಂದನ್ನು ಹೊರಡಿಸಿದ್ದು ಅನುಮಾನಕ್ಕೆ ಕಾರಣವಾಗಿದೆ.

2004-05ರಿಂದ 2011-12ನೇ ಸಾಲಿನವರೆಗೆ 800 ಕೋಟಿ ರು.ವರೆಗೂ ಹೆಚ್ಚುವರಿ ಆದಾಯ ತೋರಿಸಬೇಕು ಎಂದು ತೆರಿಗೆ ಇಲಾಖೆ ಭೂಷಣ್‌ ಸ್ಟೀಲ್‌ಗೆ ಸೂಚಿಸಿತ್ತು. ಈ ಸಂಬಂಧ ಕಂಪನಿ ತೆರಿಗೆ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲದೆ ವಿಚಾರಣೆ ಹಾಗೂ ದಂಡ ಹೇರಿಕೆಯಿಂದ ವಿನಾಯಿತಿ ಕೋರಿತ್ತು. ಆಯೋಗ ಅದನ್ನು ನಿರಾಕರಿಸಿತ್ತು. ಇದಾದ 15 ದಿನಗಳಲ್ಲಿ ಆಯೋಗವೇ ಪುನಾರಚನೆಯಾಯಿತು. ಭೂಷಣ್‌ ಸ್ಟೀಲ್‌ಗೆ ವಿಚಾರಣೆಯಿಂದ ವಿನಾಯ್ತಿ ನೀಡಿತ್ತೂ ಅಲ್ಲದೆ, 500 ಕೋಟಿ ರು.ನಷ್ಟುಮೊತ್ತವನ್ನು ಹೆಚ್ಚುವರಿ ಆದಾಯವಾಗಿ ತೋರಿಸಬೇಕಾಗಿಲ್ಲ ಎಂದು 2011ರಲ್ಲಿ ತೀರ್ಪು ನೀಡಿತ್ತು. ಇದು ಅನುಮಾನಕ್ಕೆ ಕಾರಣವಾಗಿದೆ.

Follow Us:
Download App:
  • android
  • ios