Asianet Suvarna News Asianet Suvarna News

ಪೊದೆ ಹೊಕ್ಕ ಆನೆಗಳ ಪತ್ತೆಗೆ ಡ್ರೋಣ್ ಬಳಕೆ

ಕೇವಲ ನಾಲ್ಕೈದು ಎಕರೆಯಷ್ಟು ಮಾತ್ರ ಇರುವ ಜಾಲಿ ಪೊದೆಯೊಳಗೆ ಹೊಕ್ಕಿರುವ ಎರಡು ಮದಗಜಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದೇ ಇದ್ದುದರಿಂದ ಮತ್ತು ಅವುಗಳ ಚಲನವಲನಗಳ ಮೇಲೆ ನಿಗಾಯಿಡಲು ಡ್ರೋಣ್ ಕ್ಯಾಮೆರಾ ಬಳಕೆ ಮಾಡಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Drone use to captur Eliphant in Hiriyuru

ಹಿರಿಯೂರು(ನ.21) : ದೂರದ ಮಲೆನಾಡಿನಿಂದ ಬಯಲು ಸೀಮೆಗೆ ನೂರಾರು ಕಿ.ಮೀ ಕ್ರಮಿಸಿ ಬಂದಿರುವ ಎರಡು ಕಾಡಾನೆಗಳು ತಾಲೂಕಿನ ಐಮಂಗಲ ಹೋಬಳಿಯ ಕಲ್ಲಟ್ಟಿ ಗ್ರಾಮದ ಜಾಲಿ ಪೊದೆಯಲ್ಲಿ ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಭಯಬೀತರಾಗಿದ್ದಾರೆ. ಕಲ್ಲಟ್ಟಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ದಾಳಿಂಬೆ ತೋಟವೊಂದರ ಮಧ್ಯೆ ಆನೆ ನಡೆದು ಬರುತ್ತಿರುವುದನ್ನು ಮೊದಲಬಾರಿ ನೋಡಿದ ಗ್ರಾಮದ ತಿಪ್ಪೇಸ್ವಾಮಿ ಎಂಬುವರು ತಕ್ಷಣವೇ ಮೊಬೈಲ್ ಕರೆ ಮಾಡಿ ಜನರಿಗೆ ವಿಷಯ ತಿಳಿಸಿದ್ದಾರೆ.

ಆನೆಗಳು ಪ್ರತ್ಯಕ್ಷವಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಸುತ್ತಮುತ್ತಲಿನ ಗ್ರಾಮದ ಜನರು ತಂಡೋಪತಂಡವಾಗಿ ಬಂದ ಕಾರಣ ಆನೆಗಳು ಗ್ರಾಮದಿಂದ ಅರ್ಧ ಕಿ.ಮೀ ದೂರದ ನಾಲ್ಕೈದು ಎಕರೆ ವಿಸ್ತೀರ್ಣದ ಪೊದೆಯನ್ನು ಹೊಕ್ಕಿವೆ. ಸುತ್ತಲೂ ನೆರೆದಿದ್ದ ಜನರ ಗದ್ದಲಕ್ಕೆ ಹೆದರಿ ಆನೆಗಳು ಆಗಾಗ್ಗೆ ಪೊದೆಯಿಂದ ಹೊರಬರುವುದು ಮತ್ತೆ ಒಳ ಹೋಗುವುದು ಮಾಡುತ್ತಾ ಇಡೀ ದಿನ ಅರಣ್ಯ, ಪೊಲೀಸ್ ಇಲಾಖೆ ಸೇರಿಂದಂತೆ ಸ್ಥಳದಲ್ಲಿ ಬೀಡುಬಿಟ್ಟಿದ್ದ ಮಾಧ್ಯಮಗಳ ಕಣ್ಣೆದುರೇಕಣ್ಣಾಮುಚ್ಚಾಲೆ ಆಟವಾಡುತ್ತಿದ್ದುದು ಕಂಡು ಬಂದಿತು.

ಇಬ್ಬರಿಗೆ ಗಾಯ: ಆನೆಗಳನ್ನು ಕಂಡು ಕೆಲವರು ಹೌಹಾರಿ ತೆಪ್ಪಗೆ ಕುಳಿತು ಆನೆಗಳನ್ನು ಓಡಿಸುವುದು ಹೇಗೆ ಎಂದು ಲೆಕ್ಕಾಚಾರ ನಡೆಸುತ್ತಿದ್ದರೆ, ಬಹುತೇಕ ಯುವಕರು ಹಿಡಿದು ತರುತ್ತೇವೆಂಬ ಹುಮ್ಮಸ್ಸಿನಲ್ಲಿ ಆನೆಗಳ ಕೈಗೆ ಸಿಲುಕಿ ಗಾಯಗೊಂಡಿದ್ದಾರೆ. ಈ ಪೈಕಿ ಷಫೀವುಲ್ಲಾ ಎಂಬ ಯುವಕನಿಗೆ ಆನೆಯೊಂದು ಸೊಂಡಿಲಿನಿಂದ ಹೊಡೆದು ಗಾಯಗೊಳಿಸಿದರೆ ಮತ್ತೊಬ್ಬ ಯುವಕ ಸುದೀಪ್ ಎಂಬಾತನನ್ನು ಅವನು ಹತ್ತಿದ್ದ ಮರವನ್ನೇ ಅಳ್ಳಾಡಿಸಿ ಕೆಳಗೆ ಬೀಳಿಸಿದೆ. ಈ ಪೈಕಿ ಸುದೀಪ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಹಿರಿಯೂರು ಆಸ್ಪತ್ರಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ಇಬ್ಬರೂ ಆನೆಗಳ ಕೈಗೆ ಸಿಕ್ಕರೂ ಗಾಯಗೊಂಡು ಪಾರಾಗಿದ್ದ ನೆರೆದಿದ್ದ ಜನ ನಿಟ್ಟುಸಿರು ಬಿಟ್ಟರು.

ಒಂಟಿಮನೆಗಳಲ್ಲಿ ಆತಂಕ: ಐಮಂಗಲ ಹೋಬಳಿಯ ಬಹುತೇಕ ಗ್ರಾಮಸ್ಥರು ಎರೆ ಜಮೀನು ಹೊಂದಿರುವುದರಿಂದ ದೊಡ್ಡಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ಕಾರಣಕ್ಕೆ ತಂತಮ್ಮ ಹೊಲಗಳಲ್ಲಿ ಒಂಟಿ ಮನೆ, ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ಈ ಹಿನ್ನೆಲೆಯಲ್ಲಿ ಕತ್ತಲಾಗುತ್ತಲೇ ಪೊದೆಯಿಂದ ಹೊರಬರುವ ಆನೆಗಳು ಉಂಟು ಮಾಡಬಹುದಾದ ಅನಾಹುತಗಳನ್ನು ನೆನೆದು ಭಯಭೀತರಾಗಿದ್ದಾರೆ.

ಡ್ರೋಣ್ ಕ್ಯಾಮೆರಾ ಬಳಕೆ: ಕೇವಲ ನಾಲ್ಕೈದು ಎಕರೆಯಷ್ಟು ಮಾತ್ರ ಇರುವ ಜಾಲಿ ಪೊದೆಯೊಳಗೆ ಹೊಕ್ಕಿರುವ ಎರಡು ಮದಗಜಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದೇ ಇದ್ದುದರಿಂದ ಮತ್ತು ಅವುಗಳ ಚಲನವಲನಗಳ ಮೇಲೆ ನಿಗಾಯಿಡಲು ಡ್ರೋಣ್ ಕ್ಯಾಮೆರಾ ಬಳಕೆ ಮಾಡಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Follow Us:
Download App:
  • android
  • ios