Asianet Suvarna News Asianet Suvarna News

ಅಲೋಕ್ ವರ್ಮಾ ಬಂಡಾಯ: ಮೋದಿಗೆ ರಾಜನಾಥ್ ಕಜ್ಜಾಯ?

ಅಲೋಕ್‌ ವರ್ಮಾ ಮತ್ತು ರಾಕೇಶ ಆಸ್ಥಾನಾ ನಡುವಿನ ಜಗಳ ಬರೀ ಸಿಬಿಐಗಷ್ಟೇ ಸೀಮಿತಗೊಂಡಿಲ್ಲ, ಇದು ವಿದೇಶದಲ್ಲಿ ಗೂಢಚಾರಿಕೆ ನಡೆಸುವ ರಾ ಮತ್ತು ಜಾರಿ ನಿರ್ದೇಶನಾಲಯಕ್ಕೂ ಹಬ್ಬಿಕೊಂಡಿದೆ. ದುಬೈನಲ್ಲಿ ಬೇರೆ ಹೆಸರಿನಿಂದ ಇರುವ ರಾ ಅಧಿಕಾರಿ ಒಬ್ಬ ರಾಕೇಶ ಆಸ್ಥಾನಾ ಪರವಾಗಿ ದುಡ್ಡು ವಸೂಲಿ ಮಾಡುತ್ತಾನೆ ಎಂದು ಅಲೋಕ್‌ ವರ್ಮಾ ಹೇಳುತ್ತಿದ್ದರೆ, ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್‌ ಸಿಂಗ್‌ ಅಲೋಕ್‌ ವರ್ಮಾ ಪರವಾಗಿದ್ದಾರೆ ಎಂದು ರಾಕೇಶ್‌ ಆಸ್ಥಾನಾ ಸಿವಿಸಿ ಎದುರು ಹೇಳಿದ್ದಾರೆ. 

Does Rajnath Singh have role in Alok Verma issue?
Author
Bengaluru, First Published Nov 6, 2018, 3:44 PM IST

ನವದೆಹಲಿ (ನ. 06): ಅಲೋಕ್‌ ವರ್ಮಾ ಮತ್ತು ರಾಕೇಶ ಆಸ್ಥಾನಾ ನಡುವಿನ ಜಗಳ ಬರೀ ಸಿಬಿಐಗಷ್ಟೇ ಸೀಮಿತಗೊಂಡಿಲ್ಲ, ಇದು ವಿದೇಶದಲ್ಲಿ ಗೂಢಚಾರಿಕೆ ನಡೆಸುವ ರಾ ಮತ್ತು ಜಾರಿ ನಿರ್ದೇಶನಾಲಯಕ್ಕೂ ಹಬ್ಬಿಕೊಂಡಿದೆ.

ದುಬೈನಲ್ಲಿ ಬೇರೆ ಹೆಸರಿನಿಂದ ಇರುವ ರಾ ಅಧಿಕಾರಿ ಒಬ್ಬ ರಾಕೇಶ ಆಸ್ಥಾನಾ ಪರವಾಗಿ ದುಡ್ಡು ವಸೂಲಿ ಮಾಡುತ್ತಾನೆ ಎಂದು ಅಲೋಕ್‌ ವರ್ಮಾ ಹೇಳುತ್ತಿದ್ದರೆ, ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್‌ ಸಿಂಗ್‌ ಅಲೋಕ್‌ ವರ್ಮಾ ಪರವಾಗಿದ್ದಾರೆ ಎಂದು ರಾಕೇಶ್‌ ಆಸ್ಥಾನಾ ಸಿವಿಸಿ ಎದುರು ಹೇಳಿದ್ದಾರೆ.

ಇನ್ನೊಂದು ಕೇಳಿಬರುತ್ತಿರುವ ವಿಷಯ ಏನು ಅಂದರೆ ರಾಕೇಶ್‌ ಆಸ್ಥಾನಾ ಪರವಾಗಿ ಅಮಿತ್‌ ಶಾ ಹಾಗೂ ಅರುಣ್‌ ಜೇಟ್ಲಿ ಇರುವ ಹಾಗೆ ಅಲೋಕ್‌ ವರ್ಮಾಗೆ ಒಳಗಿಂದ ಒಳಗೆ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಬೆಂಬಲ ಇದೆಯಂತೆ. ಯಾರದೋ ಒಳಗಿನ ಬೆಂಬಲ ಇರದೇ ಇದ್ದರೆ ಅಲೋಕ್‌ ವರ್ಮಾ ಸ್ವಯಂ ಪ್ರಧಾನಿ ಆಪ್ತನ ವಿರುದ್ಧ ಇಷ್ಟೊಂದು ಮುಂದೆ ಹೋಗುತ್ತಿರಲಿಲ್ಲ ಬಿಡಿ.

ವಂದಿ ಮಾಗಧರ ಬಂಡಾಯ

ನಾಲ್ಕೂವರೆ ವರ್ಷದ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗ ವಂದಿ ಮಾಗಧರಂತೆ ಹಿಂದೆ ಮುಂದೆ ಓಡಾಡಿದ ಕೆಲ ಹಿರಿಯ ಅಧಿಕಾರಿಗಳು ಈಗ ಚುನಾವಣೆಗೆ ನಾಲ್ಕೇ ತಿಂಗಳು ಉಳಿದಿರುವಾಗ ಸಂಸದರನ್ನು ಬಿಡಿ, ಅನೇಕ ಮಂತ್ರಿಗಳನ್ನೇ ಕ್ಯಾರೇ ಅನ್ನುತ್ತಿಲ್ಲವಂತೆ. ಯಾವುದೇ ಸರ್ಕಾರ ಬಂದಾಗ ಮತ್ತು ಅವಧಿ ಮುಗಿಯುವಾಗ ಇದು ಅಧಿಕಾರಿಗಳ ಕಾಯಂ ವರಸೆ. ಆದರೆ ಮೋದಿ ಸಾಹೇಬರಿಗೆ ಟೆನ್ಷನ್‌ ಆಗಿರುವುದು ತಾನೇ ಇಷ್ಟಪಟ್ಟು ನೇಮಿಸಿದ ಅಲೋಕ್‌ ವರ್ಮಾ ಬಂಡಾಯ ಹೂಡಿದ್ದ ಘಟನೆ.

ಇನ್ನೊಂದು ಕಡೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಕೂಡ ಸರ್ಕಾರ ಹೇಳಿದ ಹಾಗೆ ಕೇಳಲು ತಯಾರಿರಲಿಲ್ಲ. ಅಷ್ಟೇ ಅಲ್ಲ ಅನೇಕ ಇಲಾಖೆಗಳ ಸೆಕ್ರೆಟರಿಗಳು ಪ್ರಧಾನಿ ಎದುರು ಹೂ ಎನ್ನುತ್ತಾರೆ, ಆದರೆ ಹೇಳಿದ ಕೆಲಸ ಪೂರ್ತಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎನ್ನಲಾಗಿದೆ. ಒಳಗಿನವರು ಹೇಳುವ ಪ್ರಕಾರ ಬಂಡಾಯದ ಸ್ಥಿತಿ ಅಲ್ಲವಾದರೂ ಅಸಹಕಾರ ಅಂತೂ ಜಾಸ್ತಿ ಇದೆಯಂತೆ. ಆದರೆ ಇದಕ್ಕೆ ಮುಖ್ಯ ಕಾರಣ ಎಲ್ಲ ಕಡೆ ಗುಜರಾತಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ಉತ್ತರ ಭಾರತೀಯ ಲಾಬಿಗೆ ಇರುವ ಬೇಸರ. ಸಿಬಿಐ ಜಗಳಕ್ಕೂ ಕಾರಣ ಅದೇ ತಾನೇ.

ಚಕಿತಗೊಂಡ ಸಿಜೆಐ ಗೊಗೋಯ್‌

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರೇ ಮೋದಿ ಸರ್ಕಾರದ ಬಗ್ಗೆ ಚಕಿತಗೊಂಡು ಇದರ ಹಿಂದೆ ಏನು ಕಾರಣ ಎಂದು ಹುಡುಕಿ ಹೇಳಿ ಎಂದು ಪತ್ರಕರ್ತರಿಗೆ ಕೆಲಸ ಕೊಟ್ಟಿದ್ದಾರೆ. ಕಳೆದ ವಾರ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಸಭೆ ನಡೆಸಿದ ನ್ಯಾ ಗೊಗೋಯ್‌, ನಾಲ್ಕು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‌ಗೆ ಬಡ್ತಿ ನೀಡುವುದಕ್ಕೆ ಶಿಫಾರಸು ಮಾಡಿ ಕಾನೂನು ಸಚಿವ ರವಿಶಂಕರ ಪ್ರಸಾದ್‌ಗೆ ಪತ್ರ ಕಳಿಸಿದ್ದರಂತೆ.

ಗೊಗೋಯ್‌ ಸಾಹೇಬರಿಗೆ ಆಶ್ಚರ್ಯ ಆಗುವಂತೆ ಸಂಜೆ 5 ಗಂಟೆ ಒಳಗೆ ಸರ್ಕಾರ ಶಿಫಾರಸು ಒಪ್ಪಿಕೊಂಡು ನ್ಯಾಯಮೂರ್ತಿಗಳ ಮೆಡಿಕಲ್ ಟೆಸ್ಟ್‌ ಮಾಡಿಸಿ ರಾಷ್ಟ್ರಪತಿಗಳಿಗೆ ಒಪ್ಪಿಗೆಗಾಗಿ ಫೈಲ್ ಕಳುಹಿಸಿತಂತೆ.

ಮರುದಿನ ಬೆಳಿಗ್ಗೆ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿ ನ್ಯಾಯಾಧೀಶರ ಜೊತೆ ಚಹಾ ಹೀರುತ್ತಾ ಪತ್ರಕರ್ತರನ್ನು ಕರೆಸಿಕೊಂಡ ನ್ಯಾ ಗೊಗೋಯ್‌, ಸರ್ಕಾರ ಇಷ್ಟೊಂದು ತ್ವರಿತವಾಗಿ ಕೆಲಸ ಮಾಡುತ್ತದೆಯೇ? ಯಾಕೆ ಹೀಗೆ ಎಂದು ನೀವೇ ಪತ್ತೆಹಚ್ಚಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

Follow Us:
Download App:
  • android
  • ios