Asianet Suvarna News Asianet Suvarna News

ಸಿದ್ದು ಜಾಗದಲ್ಲಿ ನಾನು ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ : ಡಿಕೆಶಿ

ಮಾಜಿ ಸಿಎಂ ಸಿದ್ದರಾಮಯ್ಯ ಜಾಗದಲ್ಲಿ ತಾವು ಇದ್ದಿದ್ದರೆ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಜಲಸಂಪನ್ಮೂಲಕ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆ ಸಂಬಂಧ ಈ ಹೇಳಿಕೆ ನೀಡಿದ್ದಾರೆ. 

DK Shivakumar Speaks About Bangalore Steel Bridge Project
Author
Bengaluru, First Published Jan 2, 2019, 9:05 AM IST

ಬೆಂಗಳೂರು :  ‘ಬೆಂಗಳೂರು ಕೇಂದ್ರ ಭಾಗದಿಂದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸ್ಟೀಲ್‌ ಬ್ರಿಡ್‌ ಯೋಜನೆ ಅನಿವಾರ್ಯ. ಕಳೆದ ಸರ್ಕಾರದ ಅವಧಿಯಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಗೌರವ ನೀಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಹಿಂಪಡೆದಿದ್ದಾರೆ. ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಹಿಂದಕ್ಕೆ ಸರಿಯುತ್ತಿರಲಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಉತ್ತರ ಭಾಗದ ಜನರು ಅನುಭವಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಯೋಜನೆ ಮಾಡಿಯೇ ತೀರುತ್ತೇವೆ. ಅಗತ್ಯವಾದರೆ ಸಲಹೆ ನೀಡಲಿ, ಯೋಜನೆಯೇ ಬೇಡ ಎಂದು ಬೆದರಿಕೆ ಹಾಕಿದರೆ ಸರ್ಕಾರ ಕೇಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾಗದ ಜನರಿಗೆ ನಗರಕ್ಕೆ ಸಂಪರ್ಕ ಕಲ್ಪಿಸಬೇಕಾದ ಅನಿವಾರ್ಯತೆ ಇದೆ. ಹೆಬ್ಬಾಳದಿಂದ ನಗರ ಕೇಂದ್ರ ಭಾಗಕ್ಕೆ ಬರಲು ಸಂಚಾರ ದಟ್ಟಣೆಯಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತಿದೆ. ಸಾರ್ವಜನಿಕರಿಗೆ ಸಮಯ ತುಂಬಾ ಅಮೂಲವ್ಯವಾದದ್ದು. ಹೀಗಾಗಿ ಸಾರ್ವಜನಿಕರ ಸಮಯ ಉಳಿತಾಯ ಮಾಡಲು ಯೋಜನೆ ಅಗತ್ಯ ಎಂದರು.

ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಸರ್ಕಾರ ಮುಂದಾದರೆ ವಿರೋಧ ಪಕ್ಷದವರು ರಾಜಕೀಯವಾಗಿ ಮಾತನಾಡುತ್ತಾರೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಹೆದರಿಕೊಂಡು ಕೆಲಸ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ತಪ್ಪಿದ್ದರೆ ಗಲ್ಲಿಗೇರಿಸಲಿ. ವಿರೋಧ ಮಾಡುತ್ತಿರುವವರು ಯಾರೂ ಹರಿಶ್ಚಂದ್ರನ ಮೊಮ್ಮಕ್ಕಳು ಅಲ್ಲ ಎಂಬುದು ಗೊತ್ತಿದೆ ಎಂದು ಕಿಡಿ ಕಾರಿದರು.

‘ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ’

ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಸುಳ್ಳು ಆರೋಪ ಮಾಡಿದರು. ಮಾಚ್‌ರ್‍ನಲ್ಲಿ ಗೋವಿಂದರಾಜು ಮೇಲೆ ಐಟಿ ದಾಳಿ ನಡೆದರೆ ಅಕ್ಟೋಬರ್‌ನಲ್ಲಿ ಕಿಕ್‌ಬ್ಯಾಕ್‌ ಆರೋಪ ಮಾಡಿದರು. ನನ್ನ ವಿರುದ್ದವೂ ಐಟಿ ದಾಳಿ ಆಗಿತ್ತು. ಅಗತ್ಯವಾದರೆ ಅಭಿವೃದ್ಧಿ ಯೋಜನೆಗಳಿಗೆ ಸಲಹೆಗಳನ್ನು ನೀಡಲಿ, ಹೆದರಿಸುವುದು ಹಾಗೂ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾದರೆ ಸರ್ಕಾರ ಹೆದರುವುದಿಲ್ಲ ಎಂದು ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್‌ ಗುಡುಗಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಾವು ಅಡ್ಡಿ ಉಂಟು ಮಾಡಿಲ್ಲ. ನಾವು ಯೋಜನೆಯಲ್ಲಿ ತಪ್ಪು ಮಾಡಿದರೆ ಸಲಹೆ ನೀಡಲಿ. ಆದರೆ, ಅನಗತ್ಯವಾಗಿ ರಾಜಕೀಯ ಕಾರಣಗಳಿಗೆ ವಿರೋಧ ವ್ಯಕ್ತಪಡಿಸುವುದು ಬೇಡ. ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಶತ್ರುಗಳು ಇರುತ್ತಾರೆ. ಹೆದರಿಕೊಂಡು ಕುಳಿತುಕೊಳ್ಳಲು ಆಗುತ್ತಾ? ಹೀಗಾಗಿ ಯೋಜನೆ ಮಾಡುತ್ತೇವೆ ಎಂದು ಪ್ರತಿಪಾದಿಸಿದರು.

Follow Us:
Download App:
  • android
  • ios