Asianet Suvarna News Asianet Suvarna News

ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರದ ಹೊಸ ಪ್ಲಾನ್!

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ | ವಾಯು ಗುಣಮಟ್ಟ ಭಾನುವಾರ ಮತ್ತಷ್ಟು ‘ಅತಿ ಕಳಪೆ’ಗೆ ಕುಸಿದಿದೆ. ಹಗಲಿನಲ್ಲೇ ಮಬ್ಬುಗತ್ತಲು ಆವರಿಸುತ್ತಿದೆ | ವಾಯು ಮಾಲಿನ್ಯ ನಿಯಂತ್ರಣ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 

Delhi Government advice people to use public transport for pollution control
Author
Bengaluru, First Published Oct 29, 2018, 11:05 AM IST

ನವದೆಹಲಿ (ಅ. 29): ಹರ್ಯಾಣ ಹಾಗೂ ಪಂಜಾಬ್‌ನಲ್ಲಿನ ಬೆಳೆ ತ್ಯಾಜ್ಯ ಸುಡುವಿಕೆ ಪರಿಣಾಮ ಈ ಚಳಿಗಾಲದ ಆರಂಭದಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿ, ಅತಿಯಾದ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ವಾಯು ಗುಣಮಟ್ಟ ಭಾನುವಾರ ಮತ್ತಷ್ಟು ‘ಅತಿ ಕಳಪೆ’ಗೆ ಕುಸಿದಿದೆ. ಹಗಲಿನಲ್ಲೇ ಮಬ್ಬುಗತ್ತಲು ಆವರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಸಲಹೆಗಳನ್ನು ನೀಡಿದೆ. ‘ಜನರು ತಮ್ಮ ಕಾರು ಬಳಸದೇ ಸಾರ್ವಜನಿಕ ಸಾರಿಗೆ ಉಪಯೋಗಿಸಬೇಕು. ವಿಷಕಾರಿ ವಾಯುವಿನಿಂದ ಪಾರಾಗಲು ಜನರು ಹೆಚ್ಚು ಹೊರಗೆ ನಡೆದಾಡಬಾರದು. ವಾಕಿಂಗ್ ಮಾಡಿದರೂ ಅದು ಕಡಿಮೆ ದೂರದ ವಾಕ್ ಆಗಿರಬೇಕು. ವೇಗವಾಗಿ ನಡೆದರೆ ದಮ್ಮು ಹತ್ತಿ ಅತಿಯಾದ ಮಲಿನಕಾರಿ ಹೊಗೆ ಉಸಿರಾಡುವ ಅಪಾಯ ಇರುವ ಕಾರಣ ಜೋರಾಗಿ ನಡೆದಾಡಬಾರದು. ಮಾಸ್ಕ್ ಧರಿಸಿ ನಡೆದಾಡಬೇಕು. ವಾಹನಗಳ ರಸ್ತೆಗೆ ಮುಖ ಮಾಡಿದ ಕಿಟಕಿ ಮುಚ್ಚಬೇಕು. ಧೂಮಪಾನ ಹಾಗೂ ಊದುಕಡ್ಡಿ ಹಚ್ಚುವಿಕೆ ತಗ್ಗಿಸಬೇಕು. ಮನೆಯಲ್ಲಿ ಪರದೆ ಹಾಕಿಕೊಂಡೇ ಇರಬೇಕು’ ಎಂಬುವೇ ಆ ಸಲಹೆಗಳು.

ಅತ್ಯಂತ ಕಳಪೆ:

ಈ ನಡುವೆ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಭಾನುವಾರ ೩೮೧ಕ್ಕೆ ಕುಸಿದಿತ್ತು. ಇದು ‘ಅತ್ಯಂತ ಕಳಪೆ’ ದರ್ಜೆ ಎನ್ನಿಸಿಕೊಳ್ಳುತ್ತದೆ. ಇಷ್ಟೊಂದು ಕಳಪೆ ಪ್ರಮಾಣಕ್ಕೆ ವಾಯುಗುಣಮಟ್ಟ ಕುಸಿದಿದ್ದು ಈ ಹಂಗಾಮಿನಲ್ಲಿ ಇದೇ ಮೊದಲು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ವಾಯು ಗುಣಮಟ್ಟ ಸೂಚ್ಯಂಕ 51 -100 ತೃಪ್ತಿಕರ, 101- 200 ಸಮಾಧಾನಕರ, 201-300 ಕಳಪೆ, 301- 400 ಅತಿ ಕಳಪೆ ಹಾಗೂ 401- 500 ಗಂಭೀರ ಎನ್ನಿಸಿಕೊಳ್ಳುತ್ತದೆ. ಪಂಜಾಬ್ ಮತ್ತು ಹರ್ಯಾಣದಲ್ಲಿನ ಬೆಳೆ ಸುಡುವಿಕೆ ಈ ಅವಧಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಇದರ ಜತೆಗೆ ಚಳಿಗಾಲದ ವಾತಾವರಣ, ಉದ್ದಿಮೆ-ವಾಹನಗಳ ಹೊಗೆಯೂ ವಾಯು ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ. 

Follow Us:
Download App:
  • android
  • ios