Asianet Suvarna News Asianet Suvarna News

ಚುನಾವಣಾ ಆಯೋಗದಿಂದ ಕೇಂದ್ರದ ಮುಂದೆ ಮತ್ತೊಂದು ಬೇಡಿಕೆ

ಕೇಂದ್ರ ಚುನಾವಣಾ ಆಯೋಗ ಮತ್ತೊಂದು ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಅನಾಮಧೇಯ ವ್ಯಕ್ತಿಗಳು ನೀಡುವ ದೇಣಿಗೆ ಮೊತ್ತಕ್ಕೆ 20 ಸಾವಿರ ರು. ಬದಲಾಗಿ 2 ಸಾವಿರ ರು. ಮಿತಿ ನಿಗದಿಪಡಿಸುವಂತೆ ಕೇಳಿದೆ. 

Cut Cap On Anonymous donations To Parties Ec Urges To union Govt
Author
Bengaluru, First Published Oct 18, 2018, 12:37 PM IST

ನವದೆಹಲಿ :  ರಾಜಕೀಯ ಪಕ್ಷಗಳಿಗೆ 2 ಸಾವಿರ ರು. ಮೇಲ್ಪಟ್ಟು ನಗದು ದೇಣಿಗೆಯನ್ನು ಯಾರೂ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಮತ್ತೊಂದು ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಅನಾಮಧೇಯ ವ್ಯಕ್ತಿಗಳು ನೀಡುವ ದೇಣಿಗೆ ಮೊತ್ತಕ್ಕೆ 20 ಸಾವಿರ ರು. ಬದಲಾಗಿ 2 ಸಾವಿರ ರು. ಮಿತಿ ನಿಗದಿಪಡಿಸುವಂತೆ ಕೇಂದ್ರ ಕಾನೂನು ಸಚಿವಾಲಯದ ಶಾಸನ ಇಲಾಖೆಗೆ ಕಳೆದ ವಾರ ಪತ್ರವೊಂದನ್ನು ರವಾನಿಸಿದೆ.

ಈ ಹಿಂದೆ ರಾಜಕೀಯ ಪಕ್ಷಗಳಿಗೆ 20 ಸಾವಿರ ರು.ವರೆಗೂ ನಗದು ದೇಣಿಗೆ ನೀಡಬಹುದಾಗಿತ್ತು. ಅದಕ್ಕೆ ಪಕ್ಷಗಳು ಯಾವುದೇ ಲೆಕ್ಕ ಕೊಡಬೇಕಾಗಿರಲಿಲ್ಲ. ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಆಯೋಗದ ಬೇಡಿಕೆಯಂತೆ ಈ ಮಿತಿಯನ್ನು 2 ಸಾವಿರ ರು.ಗೆ ಇಳಿಸಿ 2017ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಘೋಷಣೆ ಮಾಡಿದ್ದರು. ಆ ಅಂಶ ಹಣಕಾಸು ಕಾಯ್ದೆಯಲ್ಲೂ ಸೇರ್ಪಡೆಯಾಗಿತ್ತು. ಆದರೆ ಅನಾಮಧೇಯ ವ್ಯಕ್ತಿಗಳು ನೀಡುವ ದೇಣಿಗೆಗೆ 2 ಸಾವಿರ ರು. ಮಿತಿ ನಿಗದಿಪಡಿಸುವ ತನ್ನ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಸರ್ಕಾರಕ್ಕೆ ಆಯೋಗ ನೆನಪಿಸಿದೆ.

ಈ ಸಂಬಂಧ 2017ರ ಮಧ್ಯಭಾಗದಲ್ಲೇ ಆಯೋಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 29ಸಿಗೆ ತಿದ್ದುಪಡಿ ತರುವಂತೆ ಪತ್ರ ಬರೆದಿತ್ತು. ಈಗ ಮತ್ತೊಮ್ಮೆ ಪತ್ರ ಬರೆದಿದೆ.

ಈಗ ಇರುವ ನಿಯಮದ ಪ್ರಕಾರ ರಾಜಕೀಯ ಪಕ್ಷಗಳಿಗೆ ಅನಾಮಧೇಯ ವ್ಯಕ್ತಿಗಳು 20 ಸಾವಿರ ರು.ವರೆಗೂ ದೇಣಿಗೆ ನೀಡಬಹುದು. ಅದನ್ನು ರಾಜಕೀಯ ಪಕ್ಷಗಳು ಘೋಷಣೆ ಮಾಡಬೇಕೆಂದೇನೂ ಇಲ್ಲ. ಆದಕಾರಣ ಅನಾಮಧೇಯ ವ್ಯಕ್ತಿಗಳು ನಗದು ರೂಪದಲ್ಲೇ ದೇಣಿಗೆ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾದಲ್ಲಿ 2 ಸಾವಿರ ರು. ನಗದು ದೇಣಿಗೆ ಮಿತಿಗೆ ತದ್ವಿರುದ್ಧವಾಗುತ್ತದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವರ್ಷ ರಾಜಕೀಯ ಪಕ್ಷಗಳು ಅನಾಮಧೇಯ ವ್ಯಕ್ತಿಗಳು ನೀಡಿದ 20 ಸಾವಿರ ರು. ಮೇಲ್ಪಟ್ಟಠೇವಣಿಯ ಲೆಕ್ಕವನ್ನು ಮಾತ್ರವೇ ಸಿದ್ಧಪಡಿಸುತ್ತವೆ. ಆಯೋಗದ ಪ್ರಸ್ತಾವ ಜಾರಿಗೆ ಬಂದರೆ 2 ಸಾವಿರ ರು. ಹಾಗೂ ಅದಕ್ಕಿಂತ ಮೇಲ್ಪಟ್ಟದೇಣಿಗೆಯನ್ನು ಅನಾಮಧೇಯ ವ್ಯಕ್ತಿಗಳು ನೀಡಿದರೂ ರಾಜಕೀಯ ಪಕ್ಷಗಳು ಲೆಕ್ಕಪತ್ರ ನಿರ್ವಹಿಸಬೇಕಾಗುತ್ತದೆ.

Follow Us:
Download App:
  • android
  • ios