Asianet Suvarna News Asianet Suvarna News

ಪಟಾಕಿ ನಿರ್ಬಂಧದಿಂದ ಯಾರ ಮೇಲೆ ಏನು ಪರಿಣಾಮ?

ಇನ್ನು ಮುಂದೆ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಸಿಡಿಸಬೇಕು. ಆನ್‌ಲೈನ್‌ನಲ್ಲಿ ಪಟಾಕಿ ಮಾರುವಂತಿಲ್ಲ. ಸರಪಟಾಕಿ ಸಂಪೂರ್ಣ ನಿಷಿದ್ಧ. ಶಬ್ದ ಮಾಡುವ ಪಟಾಕಿಗಳು 125 ಡೆಸಿಬಲ್ಸ್‌ಗಿಂತ ಹೆಚ್ಚು ಸದ್ದು ಮಾಡುವಂತಿಲ್ಲ. ಬೆಳಕು ಸೂಸುವ ಪಟಾಕಿಗಳು 90 ಡೆಸಿಬಲ್ಸ್‌ಗಿಂತ ಹೆಚ್ಚು ಶಬ್ದ ಮಾಡುವಂತಿಲ್ಲ.

Crackers ban who and what will be affected
Author
New Delhi, First Published Oct 25, 2018, 11:16 AM IST

ಇಷ್ಟು ದಿನ ಮನಸೋ ಇಚ್ಛೆ ಯಾವಾಗ ಬೇಕಾದರಾವಾಗ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ದೇಶಕ್ಕೆ ಮೊನ್ನೆಯ ಸುಪ್ರೀಂಕೋರ್ಟ್‌ ಆದೇಶ ಶಾಕ್‌ ನೀಡಿದೆ. ಆದರೆ, ಪರಿಸರ ಪ್ರೇಮಿಗಳು ಹಾಗೂ ಪಟಾಕಿ ವಿರೋಧಿಗಳಿಗೆ ಸಂತಸವಾಗಿದೆ. ಸುಪ್ರೀಂಕೋರ್ಟ್‌ ಪಟಾಕಿಗೆ ಸಂಪೂರ್ಣ ನಿಷೇಧ ಹೇರದೆ ಒಂದಷ್ಟು ನಿರ್ಬಂಧಗಳನ್ನು ಮಾತ್ರ ವಿಧಿಸಿದೆ. ಈ ಆದೇಶದ ಪರಿಣಾಮವೇನು? ಇಲ್ಲಿದೆ ವಿವರ.

ಸುಪ್ರೀಂಕೋರ್ಟ್‌ ಆದೇಶ ಏನು?

ಇನ್ನು ಮುಂದೆ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಸಿಡಿಸಬೇಕು. ಆನ್‌ಲೈನ್‌ನಲ್ಲಿ ಪಟಾಕಿ ಮಾರುವಂತಿಲ್ಲ. ಸರಪಟಾಕಿ ಸಂಪೂರ್ಣ ನಿಷಿದ್ಧ. ಶಬ್ದ ಮಾಡುವ ಪಟಾಕಿಗಳು 125 ಡೆಸಿಬಲ್ಸ್‌ಗಿಂತ ಹೆಚ್ಚು ಸದ್ದು ಮಾಡುವಂತಿಲ್ಲ. ಬೆಳಕು ಸೂಸುವ ಪಟಾಕಿಗಳು 90 ಡೆಸಿಬಲ್ಸ್‌ಗಿಂತ ಹೆಚ್ಚು ಶಬ್ದ ಮಾಡುವಂತಿಲ್ಲ.

ಪಟಾಕಿ ಸಿಡಿಸುವ ಸಮಯ?

ದೀಪಾವಳಿ, ಇತರ ಹಬ್ಬಗಳು, ಮದುವೆ

ರಾತ್ರಿ 8ರಿಂದ 10 ಗಂಟೆವರೆಗೆ

ಹೊಸವರ್ಷ, ಕ್ರಿಸ್‌ಮಸ್‌

ರಾತ್ರಿ 11.55ರಿಂದ 12.30

----

ಚುನಾವಣೆಯಲ್ಲಿ ಗೆದ್ದಾಗ ಸಿಡಿಸಬಹುದೆ?

ಹಬ್ಬಗಳನ್ನು ಹೊರತುಪಡಿಸಿದರೆ ಅತಿಹೆಚ್ಚು ಪಟಾಕಿ ಸುಡುವ ಅವಸರವೆಂದರೆ ಚುನಾವಣೆ. ಇನ್ನೊಂದು ಸಮಯ: ಭಾರತ-ಪಾಕ್‌ ಕ್ರಿಕೆಟ್‌ ಪಂದ್ಯ! ಸುಪ್ರೀಂಕೋರ್ಟ್‌ ಆದೇಶ ಈ ಬಗ್ಗೆ ಏನೂ ಹೇಳಿಲ್ಲ. ಹೀಗಾಗಿ ಈ ಸಂದರ್ಭಗಳಲ್ಲಿ ಅಥವಾ ಹಬ್ಬ/ಮದುವೆ ಮತ್ತು ಹೊಸವರ್ಷ ಹೊರತುಪಡಿಸಿ ಇನ್ನಾವುದೇ ಸಮಯದಲ್ಲಿ ಪಟಾಕಿ ಸಿಡಿಸಲು ನಿರ್ಬಂಧವಿಲ್ಲ ಎಂದು ಭಾವಿಸಬಹುದು.

ಹಸಿರು ಪಟಾಕಿ ಎಂದರೇನು?

ಕಡಿಮೆ ಹೊಗೆ ಉಗುಳುವ ಪಟಾಕಿಗಳೇ ‘ಹಸಿರು ಪಟಾಕಿ.’ ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ಪ್ರಕಾರ ಶೇ.30ರಿಂದ 35ರಷ್ಟು ಕಡಿಮೆ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ10 ಮತ್ತು ಪಿಎಂ2.5) ವಿಸರ್ಜನೆ ಮಾಡುವ ಹಾಗೂ ಶೇ.35ರಿಂದ 40ರಷ್ಟುಕಡಿಮೆ ಸಲ್ಫರ್‌ ಡಯಾಕ್ಸೈಡ್‌ (ಎಸ್‌ಒ2) ಹಾಗೂ ನೈಟ್ರೋಜನ್‌ ಆಕ್ಸೈಡ್‌ ಉಗುಳುವ ಪಟಾಕಿಗಳು ಹಸಿರು ಪಟಾಕಿಗಳು. ಅವುಗಳಲ್ಲಿ ಅಲ್ಯುಮಿನಿಯಂ ಅಂಶ ಕಡಿಮೆಯಿರುತ್ತದೆ. ಪಟಾಕಿಯಲ್ಲಿ ಮದ್ದನ್ನು ಒಣಗಿಸಲು ಬಳಸುವ ಬೇರಿಯಂ ಸಾಲ್ಟ್‌ ಮತ್ತು ಆ್ಯಶ್‌ ಇದರಲ್ಲಿರುವುದಿಲ್ಲ. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯು ಪಟಾಕಿಗಳನ್ನು ಪರೀಕ್ಷಿಸಿ 2 ವಾರದಲ್ಲಿ ವರದಿ ನೀಡಲಿದೆ. ಆ ಪರೀಕ್ಷೆಯಲ್ಲಿ ಅಂಗೀಕೃತಗೊಂಡ ಪಟಾಕಿಗಳು ಮಾತ್ರ ಮಾರುಕಟ್ಟೆಗೆ ಬರಲಿವೆ.

ಪರಿಸರ, ಆರೋಗ್ಯಕ್ಕೆ ಏನು ಪ್ರಯೋಜನ?

ದೀಪಾವಳಿ ಹಾಗೂ ಇತರ ಪಟಾಕಿ ಸಿಡಿಸುವ ಹಬ್ಬಗಳಲ್ಲಿ ದೇಶಾದ್ಯಂತ ವಾಯುಮಾಲಿನ್ಯ ಹೆಚ್ಚುತ್ತದೆ. ಮುಖ್ಯವಾಗಿ ಗಾಳಿಯಲ್ಲಿ ಪಿಎಂ10 ಹಾಗೂ ಪಿಎಂ2.5 ಪ್ರಮಾಣ ಅಧಿಕವಾಗುತ್ತದೆ. ಅದರಿಂದ ಜನರಿಗೆ ಅಸ್ತಮಾ, ಕೆಮ್ಮು, ಬ್ರೊಂಚಿಟೀಸ್‌, ನರ ಸಮಸ್ಯೆ ಮುಂತಾದವು ಕಾಣಿಸಿಕೊಳ್ಳಬಹುದು. ಪಟಾಕಿಯಲ್ಲಿರುವ ಅಲ್ಯುಮಿನಿಯಂನಿಂದ ಚರ್ಮದ ತೊಂದರೆ ಹಾಗೂ ಬೇರಿಯಂ ಸಾಲ್ಟ್‌ನಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಇವೆಲ್ಲ ಇನ್ನು ಕಡಿಮೆಯಾಗುತ್ತವೆ. ಪಟಾಕಿಯಿಂದಾಗುವ ಶಬ್ದಮಾಲಿನ್ಯವೂ ಇಳಿಮುಖವಾಗುತ್ತದೆ.

ಪಟಾಕಿ ಉದ್ದಿಮೆ ಕತೆ ಏನು?

ಭಾರತದ ಪಟಾಕಿ ಉದ್ದಿಮೆ ಜಗತ್ತಿನಲ್ಲೇ 2ನೇ ಅತಿದೊಡ್ಡದು. ಮೊದಲನೆಯದು ಚೀನಾ. ಭಾರತದ ಪಟಾಕಿ ಉದ್ದಿಮೆ ಪ್ರತಿವರ್ಷ 6000 ಕೋಟಿ ರು. ವಹಿವಾಟು ನಡೆಸುತ್ತಾ, ಶೇ.10ರ ದರದಲ್ಲಿ ಬೆಳೆಯುತ್ತಿದೆ. ಸುಪ್ರೀಂಕೋರ್ಟ್‌ನ ಆದೇಶದಿಂದ ಈ ಉದ್ದಿಮೆಗೆ ನಷ್ಟವಾಗುವುದು ಹಾಗೂ ಇಲ್ಲಿ ಕೆಲಸ ಮಾಡುವ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ದೇಶದ ಅತಿದೊಡ್ಡ ಪಟಾಕಿ ಉತ್ಪಾದನಾ ಕೇಂದ್ರ ತಮಿಳುನಾಡಿನ ಶಿವಕಾಶಿ.

ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ?

ಸುಪ್ರೀಂಕೋರ್ಟ್‌ ತನ್ನ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಪೊಲೀಸರು ನೋಡಿಕೊಳ್ಳಬೇಕು ಎಂದಷ್ಟೇ ಹೇಳಿದೆ. ನಿಯಮ ಮೀರಿ ಪಟಾಕಿ ಸಿಡಿಸುವ ಜನರಿಗೆ ಏನು ಶಿಕ್ಷೆ ಎಂಬುದನ್ನು ಹೇಳಿಲ್ಲ. ಹೆಚ್ಚೆಂದರೆ ಪೊಲೀಸರು ಎಚ್ಚರಿಕೆ ನೀಡಿ ಬಿಡಬಹುದಷ್ಟೆ.

Follow Us:
Download App:
  • android
  • ios