Asianet Suvarna News Asianet Suvarna News

ಬಿಜೆಪಿ ವಿರುದ್ಧ ಕಾಂಗ್ರೆಸ್ ಆನ್'ಲೈನ್ ಸಮರ!

ಭಯಾನಕ ಗುಂಡಿಗಳು, ಅದರ ಪಕ್ಕ ಕೆಲ ಮಹಿಳೆಯರು ಹಾದು ಹೋಗುತ್ತಿರುವ ಚಿತ್ರ. ಅದಕ್ಕೊಂದು ’ಚಂದ್ರನ ಅಂಗಳದಲ್ಲಿ ಜನರು ಓಡಾಡುತ್ತಿರುವುದನ್ನು ನಾಸಾ(ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ಪತ್ತೆ ಮಾಡಿತ್ತು. ಆದರೆ, ಅದು ಬೆಂಗಳೂರು ರಸ್ತೆಯ ರಸ್ತೆ ಗುಂಡಿಗಳು ಎಂಬುದನ್ನು ಬಿಬಿಎಂಪಿ ಖಚಿತಪಡಿಸಿತು’ ಎಂಬ ತಲೆಬರಹ.

Congress Started Online War Against BJP

ಬೆಂಗಳೂರು(ಆ.12): ಭಯಾನಕ ಗುಂಡಿಗಳು, ಅದರ ಪಕ್ಕ ಕೆಲ ಮಹಿಳೆಯರು ಹಾದು ಹೋಗುತ್ತಿರುವ ಚಿತ್ರ. ಅದಕ್ಕೊಂದು ’ಚಂದ್ರನ ಅಂಗಳದಲ್ಲಿ ಜನರು ಓಡಾಡುತ್ತಿರುವುದನ್ನು ನಾಸಾ(ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ಪತ್ತೆ ಮಾಡಿತ್ತು. ಆದರೆ, ಅದು ಬೆಂಗಳೂರು ರಸ್ತೆಯ ರಸ್ತೆ ಗುಂಡಿಗಳು ಎಂಬುದನ್ನು ಬಿಬಿಎಂಪಿ ಖಚಿತಪಡಿಸಿತು’ ಎಂಬ ತಲೆಬರಹ.

ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಈ ಚಿತ್ರ ಕ್ಷಣ ಮಾತ್ರದಲ್ಲಿ ವೈರಲ್ ಆಗಿತ್ತು. ಇದಾಗುತ್ತಿದ್ದಂತೆಯೇ ಈ ಚಿತ್ರದ ಸಾಚಾತನವನ್ನು ಪ್ರಶ್ನಿಸುವ ಹಾಗೂ ಅಸಲಿಯತ್ತನ್ನು ಪ್ರದರ್ಶಿಸುವ ಮತ್ತೊಂದು ಚಿತ್ರ ಸರಣಿ ಇದೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು. ಅದು- ಅಸಲಿಗೆ ಈ ಗುಂಡಿ ಚಿತ್ರ ಬಿಜೆಪಿ ಆಳ್ವಿಕೆಯಿರುವ ಮುಂಬೈನ ಐರೋಳಿ ಪ್ರದೇಶದ ರಸ್ತೆಗಳದ್ದು. ಇದನ್ನು ಬೆಂಗಳೂರಿನ ರಸ್ತೆಯೆಂದು ಬಿಜೆಪಿಯವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂಬುದನ್ನು ಚಿತ್ರ ಸಾಕ್ಷಿ ಸಮೇತ ನಿರೂಪಿಸಲಾಗಿತ್ತು. ಇದನ್ನು ಮಾಡಿದವರು ಕೆಪಿಸಿಸಿಯ ಸೋಷಿಯಲ್ ಮೀಡಿಯಾ ಪಡೆಯ ಸದಸ್ಯರು!

ಸೋಷಿಯಲ್ ಮೀಡಿಯಾ ದಾಳಿಯಲ್ಲಿ ಮುಂದಿರುತ್ತಿದ್ದ ಬಿಜೆಪಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಸಜ್ಜಾಗಿದೆ ಎಂಬುದಕ್ಕೆ ಇದು ನಿದರ್ಶನ ಮಾತ್ರ. ಬಿಜೆಪಿಯು ಸೋಷಿಯಲ್ ಮೀಡಿಯಾದಲ್ಲಿ ಯಾವ ಪ್ರಮಾಣದಲ್ಲಿ ‘ಪ್ರಾಪಗ್ಯಾಂಡಾ’ ಮಾಡುತ್ತದೆಯೋ ಅದನ್ನು ಮೀರಿಸುವ ಪ್ರತಿತಂತ್ರ ಕಾಂಗ್ರೆಸ್‌ನಿಂದಲೂ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬುರಾವ್ ಅವರ ನೇತೃತ್ವದಲ್ಲಿ ತಯಾರಾಗಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಯೋಧರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಆರಂಭಿಸಿದ್ದಾರೆ. ದಿನೇಶ್ ಗುಂಡುರಾವ್ ಒತ್ತಾಸೆ ಮೇರೆಗೆ ಆರಂಭಗೊಂಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್‌'ನಲ್ಲಿ ಈಗಾಗಲೇ 170 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರವೇ ಈ ಸಂಖ್ಯೆ 500 ಮುಟ್ಟಲಿದೆ.

ತಂತ್ರಜ್ಞರು, ಸೃಜನಶೀಲ ಬರಹಗಾರರು ಹಾಗೂ ಸೈಬರ್ ತಜ್ಞರು, ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ಪಡೆ ಬಿಜೆಪಿಯು ಕಾಂಗ್ರೆಸ್ ವಿರುದ್ಧ ನಡೆಸುವ ಪ್ರತಿ ಸೈಬರ್ ದಾಳಿಗೂ ಪ್ರತ್ಯುತ್ತರ ನೀಡತೊಡಗಿದೆ. ಜತೆಗೆ, ಆಕ್ರಮಣಕಾರಿಯಾಗಿ ಬಿಜೆಪಿ ಹಾಗೂ ಅದರ ನಾಯಕರ ಮೇಲೂ ‘ದಾಳಿ’ ನಡೆಸತೊಡಗಿದೆ.

ಬಿಜೆಪಿಯ ಸೈಬರ್ ಪಡೆ ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಬಗ್ಗೆ ನಡೆಸುವ ಪ್ರತಿಯೊಂದು ದಾಳಿಗೆ ತಕ್ಕ ಮಾರುತ್ತರ ನೀಡುವುದು. ಹಬ್ಬಿಸುವ ಸುಳ್ಳು ಸುದ್ದಿಗಳನ್ನು ಹೆಕ್ಕಿ ಅದರ ಹಕೀಕತ್ತನ್ನು ಪ್ರಚುರ ಪಡಿಸುವುದು. ಬಿಜೆಪಿ, ಆ ಪಕ್ಷದ ನಾಯಕರು ಮತ್ತು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣದ ಮಾತುಗಳ ಹಿಂದಿನ ಸತ್ಯವನ್ನು ಸೋಷಿಯಲ್ ಮೀಡಿಯಾ ಮುಂದೆ ತೆರದಿಡುವುದು ಈ ಪಡೆಗೆ ವಹಿಸಿರುವ ಕಾರ್ಯಗಳು.

ವಿಶೇಷ ಘಟಕ- ಕಚೇರಿ ಶೀಘ್ರ ಆರಂಭ:

2018ರ ಚುನಾವಣೆವರೆಗೂ ಸೈಬರ್ ಲೋಕದಲ್ಲಿ ದಾಂಗುಡಿಯಿಡುವ ಉದ್ದೇಶದಿಂದ ಈ ಸೋಷಿಯಲ್ ಮೀಡಿಯಾ ಪಡೆಯನ್ನು ಹುಟ್ಟುಹಾಕಲಾಗಿದೆ. ಇದಕ್ಕಾಗಿಯೇ ನಗರದ ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಸುಸಜ್ಜಿತ ಕಚೇರಿ ಆರಂಭಗೊಂಡಿದೆ. ಈ ತಂಡ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿದ್ದು ಬಿಜೆಪಿ ನಡೆಸುವ ಪ್ರತಿಯೊಂದು ಪ್ರಾಪಗ್ಯಾಂಡವನ್ನು ಹೆಕ್ಕಿ, ಅದಕ್ಕೆ ತಕ್ಕ ಮಾರುತ್ತರ ನೀಡುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅಷ್ಟೇ ಅಲ್ಲದೇ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳು, ಸಚಿವ ಸಂಪುಟದ ನಿರ್ಧಾರ, ಜನಪ್ರಿಯ ಯೋಜನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸುವ ಕಾರ್ಯವನ್ನು ನಡೆಸಿದೆ. ಯತೀಂದ್ರ ಸಿದ್ದರಾಮಯ್ಯ ಹಾಗೂ ಟಬು ರಾವ್ ಅವರು ವಾರದಲ್ಲಿ ಮೂರು ದಿನ ಸೋಷಿಯಲ್ ಮೀಡಿಯಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಶೀಘ್ರ 300 ಮಂದಿ:

ಇದಿಷ್ಟೇ ಅಲ್ಲದೆ, ಶೀಘ್ರವೇ ಇನ್ನೂ 300 ಮಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸುವುದು, ಜಿಲ್ಲಾ ಮಟ್ಟದಲ್ಲೂ ಇಂತಹ ಸೈಬರ್ ಪಡೆ ಹಾಗೂ ಕಚೇರಿ ಆರಂಭಿಸುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರ ಪರ ವಾಟ್ಸ್‌ಅಪ್ ಗ್ರೂಪ್‌ಗಳನ್ನು ಹುಟ್ಟುಹಾಕುವುದು. ಈ ಗ್ರೂಪ್‌'ನಲ್ಲಿ ಕನಿಷ್ಠ 5 ಸಾವಿರದಿಂದ 15 ಸಾವಿರದವರೆಗೂ ಸದಸ್ಯರನ್ನು ಆ್ಯಡ್ ಮಾಡಿ ಕಾಂಗ್ರೆಸ್ ನಿಲುವು ಹಾಗೂ ಕಾರ್ಯಕ್ರಮಗಳನ್ನು ಬಿಂಬಿಸುವ ಕಾರ್ಯವನ್ನು ಮಾಡಲು ಉದ್ದೇಶಿಸಿದೆ.

ಮುಖ್ಯಮಂತ್ರಿ ನೇತೃತ್ವದಲ್ಲಿ ಕಾರ್ಯಾಗಾರ:

ಅಂದಹಾಗೇ ಇಂತಹದೊಂದು ಸೋಷಿಯಲ್ ಮೀಡಿಯಾ ಪಡೆ ಸೃಷ್ಟಿಸುವ ಆಲೋಚನೆ ಮೂಡಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ. ಇದನ್ನು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಂಚಿಕೊಂಡಿದ್ದರು. ಆ ವೇಳೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ಸೋಷಿಯಲ್ ಮೀಡಿಯಾದಲ್ಲಿ ತಾವಾಗೇ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಿರುವ ಹಾಗೂ ಗ್ರೂಪ್'ಗಳನ್ನುಹುಟ್ಟುಹಾಕಿರುವ ರಾಜ್ಯದ ನೂರಾರು ಮಂದಿ ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ಒಟ್ಟುಗೂಡಿಸುವ ಕಾರ್ಯ ಮಾಡಿದ್ದರು. ಈ ಅಭಿಮಾನಿಗಳಲ್ಲಿ ವಿದ್ಯಾರ್ಥಿಗಳು, ವೈದ್ಯರು, ತಂತ್ರಜ್ಞರು, ಬರಹಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರು ಇದ್ದರು. ಅವರನ್ನು ಒಗ್ಗೂಡಿಸಿ ಅವರಿಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಪರ ಸೋಷಿಯಲ್ ಮೀಡಿಯಾ ಆಂದೋಲನ ನಡೆಯುವ ಯೋಜನೆಗೆ ಸೃಷ್ಟಿ ನೀಡಲಾಯಿತು.

Follow Us:
Download App:
  • android
  • ios