Asianet Suvarna News Asianet Suvarna News

ವಿಧಾನಸೌಧ ವಜ್ರಮಹೋತ್ಸವ: 26 ಕೋಟಿವಾಡಕ್ಕೆ ಸಿಎಂ ಕಡಿವಾಣ

ವಜ್ರಮಹೋತ್ಸವ ವೆಚ್ಚ ₹10 ಕೋಟಿಗೆ ಇಳಿಕೆ | ವಿಧಾನಸಭಾಧ್ಯಕ್ಷ, ಸಭಾಪತಿಗೆ ಮುಖಭಂಗ

CM Siddaramaiah Puts Break to Extravagant Celebration

ಬೆಂಗಳೂರು: ಸಾರ್ವಜನಿಕರ ವಿರೋಧದ ನಡುವೆಯೂ ವಿಧಾನಸೌಧದ ವಜ್ರ ಮಹೋತ್ಸವದ ಅದ್ಧೂರಿ ಆಚರಣೆ ಮಾಡಬೇಕೆಂಬ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಗೂ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಬಿಗಿಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೊಪ್ಪು ಹಾಕಿಲ್ಲ. ಮಹೋತ್ಸವ ಆಚರಣೆಯನ್ನು ಒಂದು ದಿನಕ್ಕೆ ಮೊಟಕುಗೊಳಿಸಿ, ವೆಚ್ಚವನ್ನು 10 ಕೋಟಿ ರು.ಗೆ ಮಿತಿಗೊಳಿಸಿದ ನಂತರವೇ ಅವರು ಈ ಸಂಬಂಧಿ ಕಡತಕ್ಕೆ ಒಪ್ಪಿಗೆ ನೀಡಿದ್ದಾರೆ. ಜತೆಗೆ, ಶಾಸಕರಿಗೆ ದುಬಾರಿ ಸ್ಮರಣಿಕೆ ನೀಡದಂತೆ ಸ್ಪೀಕರ್ ಹಾಗೂ ಸಭಾಪತಿಗೆ ತಾಕೀತು ಮಾಡಿದ್ದಾರೆ.

ತನ್ಮೂಲಕ ವಜ್ರಮಹೋತ್ಸವವನ್ನು 26 ಕೋಟಿ ರು. ವೆಚ್ಚದಲ್ಲಿ ಆಚರಿಸುವ ತಮ್ಮ ಯೋಜನೆ ಬಗ್ಗೆ ಯಾರಿಗೂ ಲೆಕ್ಕ ಕೊಡಬೇಕಿಲ್ಲ ಎಂಬ ಧಾರ್ಷ್ಟ್ಯ ಪ್ರದರ್ಶಿಸಿದ್ದ ಸ್ಪೀಕರ್ ಕೋಳಿವಾಡ ಹಾಗೂ ಸಭಾಪತಿ ಶಂಕರಮೂರ್ತಿ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ.

ಸ್ಪೀಕರ್ ಹಾಗೂ ಸಭಾಪತಿ ಅವರ ಒತ್ತಾಸೆಯ ಮೇರೆಗೆ ವಜ್ರಮಹೋತ್ಸವದ ಖರ್ಚು ವೆಚ್ಚವನ್ನು 26 ಕೋಟಿ ರು. ಎಂದು ತೋರಿಸಿದ್ದ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ, 10 ಕೋಟಿ ರು.ಗೆ ವೆಚ್ಚ ಕಡಿತಗೊಳಿಸುವಂತೆ ಸೂಚಿಸಿತ್ತು. ಈ ಕಡತ ಅಂತಿಮವಾಗಿ ಮುಖ್ಯಮಂತ್ರಿ ಅವಗಾಹನೆ ಬಂದಿತ್ತು.

ಆದರೂ, ಪಟ್ಟುಬಿಡದ ಸ್ಪೀಕರ್ ಹಾಗೂ ಸಭಾಪತಿ ಅವರು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾಗೆ ತೆರಳಿ ಉದ್ದೇಶಿತ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಪಟ್ಟುಹಿಡಿದರು. ಇದಕ್ಕೆ ಸೊಪ್ಪು ಹಾಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿವೃಷ್ಟಿ ಇದೆ, ಅನೇಕ ಕಡೆ ಬರಗಾಲ ಇದೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ಹಣವನ್ನು ಎರಡು ದಿನಗಳ ಕಾರ್ಯಕ್ರಮಕ್ಕೆ ವೆಚ್ಚ ಮಾಡುವುದು ಸರಿಯಲ್ಲ.

ಅದರಲ್ಲೂ ಶಾಸಕರಿಗೆ ಚಿನ್ನದ ನಾಣ್ಯ, ಸಿಬ್ಬಂದಿಗೆ ಬೆಳ್ಳಿ ತಟ್ಟೆ ಇತ್ಯಾದಿ ದುಬಾರಿ ಕಾಣಿಕೆ ನೀಡಲು ಮುಂದಾದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ. ಪ್ರತಿಪಕ್ಷಗಳಿಗೂ ಸಹ ಇದನ್ನೇ ಬಂಡವಾಳ ಮಾಡಿಕೊಂಡು ಸರ್ಕಾರವನ್ನು ಟೀಕಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರೆಂದು ಗೊತ್ತಾಗಿದೆ.

ವೆಚ್ಚ ಕಡಿತ ಮಾಡಲು ಸೂಚಿಸಿರುವುದನ್ನು ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರ ಸಂದರ್ಭ ಖಚಿತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದುಂದು ವೆಚ್ಚ ಮಾಡದಂತೆ ಸ್ಪೀಕರ್ ಅವರಿಗೆ ಹೇಳಿದ್ದೇನೆ. ಆದರೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವ ಉದ್ದೇಶವಿರಲಿಲ್ಲ. ಯಾರೋ ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಶಾಸಕರಿಗೆ ಸ್ಮರಣಿಕೆ ನೀಡದಂತೆ ಹಾಗೂ ಕಾರ್ಯಕ್ರಮವನ್ನು ಒಂದು ದಿನ ಮಾತ್ರ ಆಚರಿಸುವಂತೆ ಸೂಚಿಸಿದ್ದೇನೆ. ಈ ಸಂಬಂಧಿ ಕಡತವನ್ನು ಈಗಾಗಲೇ ಕ್ಲಿಯರ್ ಮಾಡಿದ್ದೇನೆ ಎಂದು ತಿಳಿಸಿದರು.

ಖರ್ಚು ದೊಡ್ಡ ಪ್ರಮಾಣದಲ್ಲಿ ಕಡಿತ: ಕಾರ್ಯಕ್ರಮವನ್ನು ಎರಡು ದಿನಗಳ ಬದಲು ಒಂದು ದಿನ ಮಾತ್ರ ಆಯೋಜಿಸುವುದರಿಂದ ಹೆಚ್ಚು ಕಡಿಮೆ ಅರ್ಧದಷ್ಟು ಹಣ ಸಹಜವಾಗಿ ಕಡಿಮೆ ಆಗುತ್ತದೆ. ಎರಡು ದಿನಗಳ ಊಟ, ಕಾಫಿ, ತಿಂಡಿ, ಸಾಂಸ್ಕೃತಿಕ ಕಾರ್ಯಕ್ರಮ, ಪೋಟೋಗ್ರಫಿ, ವಿಡಿಯೋ ಇತ್ಯಾದಿಗಳನ್ನು ಒಂದು ದಿನ ಮಾಡುವುದರಿಂದ ಖರ್ಚು ಕಡಿಮೆ ಆಗಲಿದೆ. ವಜ್ರ ಮಹೋತ್ಸವದ ಅಂಗವಾಗಿ ದುಬಾರಿ ನೆನಪಿನ ಕಾಣಿಕೆ ಬದಲು ಕಡಿಮೆ ಬೆಲೆಯ ಸ್ಮರಣಿಕೆ ನೀಡಬೇಕಾಗುವುದರಿಂದ ಇಲ್ಲಿಯೂ ಸಹ ಹಣ ಉಳಿಯಲಿದೆ. ವಜ್ರ ಮಹೋತ್ಸವ ಪ್ರಚಾರದ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಮೂರು ದಿನಗಳ ಹೂವಿನ ಅಲಂಕಾರದ ಬದಲು ಎರಡು ದಿನ ಮಾಡಬಹುದಾಗಿದೆ. ಇದರ ಜೊತೆಗೆ 26 ಕೋಟಿ ರು.ಗಳ ಪ್ರಸ್ತಾವನೆಗೆ ಐದು ಕೋಟಿ ರು. ಜಿಎಸ್‌ಟಿ ಪಾವತಿ ಮಾಡಬೇಕಿತ್ತು. ಆದರೆ ಈಗ ಜಿಎಸ್‌ಟಿಯಲ್ಲಿಯೂ ಸಹ ಉಳಿಯಲಿದೆ.

10 ಕೋಟಿ ರು.ಗಿಂತ ಹೆಚ್ಚು ವೆಚ್ಚದ ಸಾಧ್ಯತೆ!

ಕಾರ್ಯಕ್ರಮವನ್ನು ಒಂದು ದಿನಕ್ಕೆ ಮೊಟಕುಗೊಳಿಸಿ ವೆಚ್ಚವನ್ನು ಕಡಿಮೆ ಮಾಡುವಂತೆ ಸೂಚಿಸಿ ಕೇವಲ 10 ಕೋಟಿ ರು. ವೆಚ್ಚಕ್ಕೆ ಸೂಚಿಸಿ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದರೂ ವೆಚ್ಚ 10 ಕೋಟಿ ರು. ಮೀರುವ ಸಾಧ್ಯತೆ ಈಗಲೂ ಇದೆ. ಏಕೆಂದರೆ, ಗಿರೀಶ್ ಕಾಸರವಳ್ಳಿ, ಟಿ.ಎನ್. ಸೀತಾರಾಂ ಅವರಂತಹ ಖ್ಯಾತ ನಿರ್ದೇಶಕರು ಹಾಗೂ ಕಿಶನ್ ಎಂಬುವರು ನಿರ್ಮಿಸುತ್ತಿರುವ ಸಾಕ್ಷ್ಯಚಿತ್ರಗಳಿಗೆ 3.6 ಕೋಟಿ ರು. ವೆಚ್ಚ ನಿಗದಿಯಾಗಿದೆ. ಇದಲ್ಲದೆ, ಇನ್ನೂ ಹಲವು ಬಾಬ್ತುಗಳಲ್ಲಿ ಈಗಾಗಲೇ ಪೂರ್ವ ಒಪ್ಪಿಗೆ ನೀಡಲಾಗಿರುತ್ತದೆ. ಇದರ ಜತೆಗೆ ಕಾರ್ಯಕ್ರಮದ ವೆಚ್ಚವನ್ನು ನೋಡಿದರೆ ಖಚಿತವಾಗಿಯೂ ಅದು ೧೦ ಕೋಟಿ ರು. ಮೀರುತ್ತದೆ. ಹೀಗಾದಾಗ, ಘಟನೋತ್ತರ ಅನುಮೋದನೆ ಪಡೆಯುವ ಅವಕಾಶವೂ ಸಚಿವಾಲಯಕ್ಕೆ ಇದೆ. ಇದನ್ನು ಬಳಸಿಕೊಂಡು ಕಾರ್ಯಕ್ರಮದ ನಂತರ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆಯನ್ನು ಸಚಿವಾಲಯ ಪಡೆಯುವ ಸಾಧ್ಯತೆ ಈಗಲೂ ಇದೆ ಎಂದು ಮೂಲಗಳು ಹೇಳುತ್ತವೆ.

ಹೆಚ್ಚು ಮಾತಾಡದ ಕೋಳಿವಾಡ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ನಿಗದಿಯಂತೆ ವಜ್ರಮಹೋತ್ಸವ ನಡೆಯಲಿದೆ. ಹೇಗೆ ಮಾಡುತ್ತೇವೆ ಎಂಬುದುನ್ನು ಕಾದು ನೋಡಿ. 26 ಕೋಟಿ ರು. ವೆಚ್ಚದ ಬಗ್ಗೆ ತಾವೇನೂ ಹೇಳುವುದಿಲ್ಲ ಎಂದಷ್ಟೇ ಉತ್ತರಿಸಿದರು.

 

 

Follow Us:
Download App:
  • android
  • ios