Asianet Suvarna News Asianet Suvarna News

ಚಿತ್ರರಂಗ ಅಭಿವೃದ್ಧಿಗೆ ಸಿಎಂ ಅಭಯ

ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಲಾವಿದರು ಸೇರಿದಂತೆ ಎಲ್ಲಾ ವಿಭಾಗದ ತಜ್ಞರು ಒಗ್ಗೂಡಿ ಒಮ್ಮತದಿಂದ ನಿಖರವಾದ ನೀಲನಕ್ಷೆಯನ್ನು ಸಿದ್ದಪಡಿಸಿ ನೀಡಿದರೆ ಸರ್ಕಾರವು ಅದಕ್ಕೆ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.
 

CM Kumaraswamy assures to Improve cinema Industry
Author
Bengaluru, First Published Feb 22, 2019, 2:19 PM IST

ಬೆಂಗಳೂರು (ಫೆ. 22):  ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಲಾವಿದರು ಸೇರಿದಂತೆ ಎಲ್ಲಾ ವಿಭಾಗದ ತಜ್ಞರು ಒಗ್ಗೂಡಿ ಒಮ್ಮತದಿಂದ ನಿಖರವಾದ ನೀಲನಕ್ಷೆಯನ್ನು ಸಿದ್ದಪಡಿಸಿ ನೀಡಿದರೆ ಸರ್ಕಾರವು ಅದಕ್ಕೆ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರರಂಗವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಅವುಗಳನ್ನು ಬಗೆಹರಿಸಿಕೊಳ್ಳಲು ಒಗ್ಗಟ್ಟಿನ ಸಮಸ್ಯೆ ಕಾಣುತ್ತಿದೆ. ಕನ್ನಡ ಸಿನಿಮಾ ಕ್ಷೇತ್ರವು ಇತರೆ ಭಾಷೆಗಳಿಗೆ ಪೈಪೋಟಿ ನೀಡಿ ಸಮರ್ಪಕವಾಗಿ ಬೆಳವಣಿಗೆ ಆಗಬೇಕಾದರೆ ಒಗ್ಗೂಡಿ ಹೋಗಬೇಕು. ಚಿತ್ರರಂಗದಲ್ಲಿ ಹೊಂದಾಣಿಕೆಯಿಂದ ಹೋದರೆ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಇತ್ತೀಚೆಗಿನ ದಿನದಲ್ಲಿ ಸಿನಿಮಾ ಕ್ಷೇತ್ರದಲ್ಲಿ ತೋಳ್ಬಲವುಳ್ಳವರು ಉಳಿದುಕೊಳ್ಳುವ ಪರಿಸ್ಥಿತಿ ಇದೆ. ತೋಳ್ಬಲ ಇಲ್ಲದಿರುವವರು ಸೋಲನುಭವಿಸಬೇಕಾಗುತ್ತದೆ. ನಿಜವಾಗಿಯೂ ಕನ್ನಡ ಚಿತ್ರರಂಗದ ಬೆಳವಣಿಗೆ ಬಯಸುವವರು ಕಲಾವಿದರು ಸೇರಿದಂತೆ ಎಲ್ಲಾ ವಿಭಾಗದ ತಜ್ಞರು ಒಗ್ಗೂಡಿ ತೀರ್ಮಾನ ಕೈಗೊಂಡು, ನಿಖರವಾದ ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳಬೇಕು.

ನಂತರ ಅದನ್ನು ಸರ್ಕಾರಕ್ಕೆ ನೀಡಿದರೆ ಸಂಪೂರ್ಣವಾದ ಸಹಕಾರ ನೀಡಲಾಗುವುದು. ಚಿತ್ರ ಮಂದಿರಗಳಿಗೆ ಒಂದು ವಾರದ ಬಾಡಿಗೆಯನ್ನು ಚಿತ್ರತಂಡವು ಪಾವತಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ವರದಿಯಾಗುವಂತೆ ವಾರದಲ್ಲಿ ಕೋಟಿಗಟ್ಟಲೆ ಗಳಿಕೆ ಎಂಬುದು ಎಷ್ಟರ ಮಟ್ಟಿಗೆ ಸತ್ಯಾಂಶ ಇರುತ್ತದೆ ಎಂಬುದು ಗೊತ್ತಿದೆ. ಮಾಧ್ಯಮಗಳ ವರದಿಯನ್ನು ಗಮನಿಸಿ ಕೆಲವರು ಸಿನಿಮಾದಲ್ಲಿ ಹಣ ತೊಡಗಿಸುತ್ತಾರೆ. ವಾಸ್ತವಾಂಶ ತಿಳಿದ ಬಳಿಕ ಎಲ್ಲವನ್ನು ಕಳೆದುಕೊಂಡು ಹಿಂತಿರುಗಬೇಕಾಗುತ್ತದೆ.

ಇತ್ತೀಚೆಗಿನ ಪರಿಸ್ಥಿತಿಯಲ್ಲಿ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಳ್ಳುವ ಉಸಿರುಗಟ್ಟುವ ವಾತಾವರಣ ಇದೆ. ಮಲ್ಟಿಪ್ಲೆಕ್ಸ್‌ ಅಲೆಗೆ ಚಿತ್ರಮಂದಿರಗಳು ಮರೆಯಾಗುತ್ತಿವೆ. ಕೆಂಪೇಗೌಡ ನಗರದಲ್ಲಿ ಚಿತ್ರಮಂದಿರಗಳು ನಾಶವಾಗುತ್ತಿದೆ. ದುಬಾರಿ ಬೆಲೆ ನೀಡಿಯಾದರೂ ಮಲ್ಟಿಪ್ಲೆಕ್ಸ್‌ಗೆ ಹೋಗುವ ಹವ್ಯಾಸ ಪ್ರಾರಂಭವಾಗಿದೆ.

ಚಿತ್ರರಂಗದಲ್ಲಿ ಏಕರೂಪದ ಬೆಲೆ ಅಗತ್ಯ ಇದೆ ಎಂಬುದು ಚಿತ್ರರಂಗದವರೇ ಹೇಳುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ಅವರಲ್ಲಿಯೇ ವಿರೋಧ ಇದೆ. ಹೀಗಾಗಿ ಒಮ್ಮತ ನಿರ್ಧಾರದೊಂದಿಗೆ ನಿಖರವಾದ ನೀಲನಕ್ಷೆ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ಕಥೆಗಳ್ಳುಳ್ಳ ಗುಣಾತ್ಮಕ ಚಿತ್ರಗಳನ್ನು ನಿರ್ದೇಶಿಸಿದರೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತವೆ. ದುಬಾರಿ ಬೆಲೆ ತೆತ್ತು ನಿರ್ಮಿಸಿದರೆ ಮಾತ್ರ ಸಿನಿಮಾ ಗಳಿಕೆ ಮಾಡಲು ಸಾಧ್ಯ ಎಂಬುದು ತಪ್ಪು ಊಹೆ. ಉತ್ತಮ ಕಥೆಯನ್ನು ಆಯ್ಕೆ ಮಾಡಿ ಗುಣಾತ್ಮಕವಾಗಿ ಸಿನಿಮಾಗಳನ್ನು ಮಾಡಬೇಕು. ಕಡಿಮೆ ವೆಚ್ಚದಲ್ಲಾದರೂ ಉತ್ತಮ ಕಥೆ ಇದ್ದರೆ ಅಂತಹ ಸಿನಿಮಾಗಳ ಗಳಿಕೆಯೂ ಉತ್ತಮವಾಗಿರಲಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಕಥೆಯೊಂದಿಗೆ ಗುಣಾತ್ಮಕ ಸಿನಿಮಾಗಳನ್ನು ಮಾಡುವಂತೆ ನಿರ್ದೇಶಕರಲ್ಲಿ ಮನವಿ ಮಾಡಿದರು.

ಚಿತ್ರ ಮಂದಿರ ಬಾಡಿಗೆ ಕಡಿಮೆ ಮಾಡಿ:

ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್‌, ಸಿನಿಮಾ ಮಂದಿರಗಳ ಬಾಡಿಗೆಯು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಅಗತ್ಯ ಇದೆ. ಜನತಾ ಚಿತ್ರಮಂದಿರ ಪ್ರದರ್ಶನವು ಕುಂಠಿತವಾಗಿದ್ದು, ಹಲವು ಕಟ್ಟುಪಾಡುಗಳಿಂದಾಗಿ ಹಿನ್ನೆಡೆಯಾಗಿದೆ.

ಜನತಾ ಚಿತ್ರಮಂದಿರಗಳಿಗಿರುವ ಕಟ್ಟುಪಾಡುಗಳನ್ನು ಸರಳೀಕರಣಗೊಳಿಸಬೇಕು ಮತ್ತು ಬಾಡಿಗೆ ರಹಿತಗೊಳಿಸಿ ಶೇಕಡವಾರು ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ಬಸ್‌ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗುತ್ತಿರುವ ಕಾರಣ ಅಲ್ಲಿ ಮಿನಿ ಚಿತ್ರಮಂದಿರ ನಿರ್ಮಾಣ ಮಾಡಬೇಕು. ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಬಾಡಿಗೆ ದುಬಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದರು.

Follow Us:
Download App:
  • android
  • ios