Asianet Suvarna News Asianet Suvarna News

ರಾಹುಲ್ ಗಾಂಧಿ ಟೆಂಪಲ್ ರನ್ ಕಾಂಗ್ರೆಸ್ಸಿಗೆ ವರದಾನವಾಯ್ತಾ?

ಪಂಚರಾಜ್ಯಗಳಲ್ಲಿ ಫಲಿತಾಂಶ ಹೊರಬಿದ್ದು ಸರ್ಕಾರಗಳೂ ರಚನೆಯಾಗಿವೆ ಸತತ 15 ವರ್ಷಗಳ ಬಳಿಕ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿದೆ. ಈ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾಂಗ್ರೆಸ್ ಗೆಲುವಿನ ಹಿಂದಿನ ಸೀಕ್ರೆಟ್ ಏನು?, ರಾಹುಲ್ ಗಾಂಧಿ ನಾಯಕತ್ವ ಹೇಗಿದೆ? ಇತ್ಯಾದಿ ವಿಷಯಗಳ ಬಗ್ಗೆ ‘ದಿ ಹಿಂದು’ ಜತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

Chhattisgarh CM Bhupesh Baghel talks about Rahul Gandhi leadership
Author
Bengaluru, First Published Dec 28, 2018, 3:47 PM IST

ಪಂಚರಾಜ್ಯಗಳಲ್ಲಿ ಫಲಿತಾಂಶ ಹೊರಬಿದ್ದು ಸರ್ಕಾರಗಳೂ ರಚನೆಯಾಗಿವೆ ಸತತ 15  ವರ್ಷಗಳ ಬಳಿಕ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿದೆ. ಈ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾಂಗ್ರೆಸ್ ಗೆಲುವಿನ ಹಿಂದಿನ ಸೀಕ್ರೆಟ್ ಏನು?, ರಾಹುಲ್ ಗಾಂಧಿ ನಾಯಕತ್ವ ಹೇಗಿದೆ? ಇತ್ಯಾದಿ ವಿಷಯಗಳ ಬಗ್ಗೆ ‘ದಿ ಹಿಂದು’ ಜತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರ ಸೀಕ್ರೆಟ್ ಏನು?

ಐತಿಹಾಸಿಕವಾಗಿ ಕಾಂಗ್ರೆಸ್ ಇಲ್ಲಿ ಪ್ರಬಲವಿತ್ತು. ಏನೇನೋ ಕಾರಣದಿಂದಾಗಿ 2000 ದಲ್ಲಿ ಅಜಿತ್ ಜೋಗಿ ನೂತನವಾಗಿ ಮುಖ್ಯಮಂತ್ರಿಯಾದಾಗ ಜನ ಅವರನ್ನು ಮೆಚ್ಚಲಿಲ್ಲ. ಇದೇ ಮೊದಲ ಬಾರಿಗೆ ಜೋಗಿ ಅವರನ್ನು ಬಿಟ್ಟು ಹೋರಾಡಿದ್ದೇವೆ 2014 ರಲ್ಲಿ ನಾನು ಪಕ್ಷದ ಅಧ್ಯಕ್ಷನಾದಾಗಲೇ ಛತ್ತೀಸ್‌ಗಢದಲ್ಲಿ ಬಿಜೆಪಿ ಕತೆ ಮುಗಿಯಲಿದೆ ಎಂದು ಅನ್ನಿಸಿತ್ತು.

3 ಬಾರಿ ವಿಧಾನಸಭಾ  ಮತ್ತು 3 ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು ಪರಾಭವಗೊಂಡಿದ್ದೆವು. ಸತತ ಸೋಲಿನಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣವಾಗಿ ನಿರಾಸೆಗೊಂಡಿದ್ದರು.

ನಮ್ಮಲ್ಲಿ ನಾಯಕತ್ವ ಇರಲಿಲ್ಲ. ಆ ಸಮಯದಲ್ಲಿ 35 ರಿಂದ 50 ವಯೋಮಾನದೊಳಗಿನ ನಾಯಕರನ್ನು ಕರೆತಂದೆ. ವಿವಿಧ ಸಂಘಟನೆಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಬೂತ್ ಲೆವೆಲ್ ಮಟ್ಟದಲ್ಲೂ ನಾವು ಪ್ರಬಲರಾಗದಿದ್ದರೆ ಬಿಜೆಪಿಯನ್ನು ಪರಾಭವಗೊಳಿಸಲು ಸಾಧ್ಯವಿಲ್ಲ ಎಂಬುದು ಅರಿವಾಯಿತು.

ಅದಕ್ಕಾಗಿ ಪ್ರತಿ ಬೂತ್‌ಗಳಲ್ಲೂ 10-15  ಜನರನ್ನು ನಿಯೋಜಿಸಲು ತೀರ್ಮಾನಿಸಿದೆವು. ಎಲ್ಲಾ 90 ವಿಧಾನ ಸಭಾ ಕ್ಷೇತ್ರಗಳಲ್ಲಿ ಎರಡೆರಡು ಬಾರಿ ತರಬೇತಿ ಕಾರ್ಯಕ್ರಮವನ್ನೂ ಮಾಡಿದ್ದೆವು. ಬಹುಶಃ ಇದೇ ನಮ್ಮ ಗೆಲುವಿಗೆ ಕಾರಣವಿರಬಹುದು.

ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಛತ್ತೀಸ್‌ಗಢದಿಂದ ಕಾಂಗ್ರೆಸ್ ಕಲಿತ ಪಾಠ ಏನು?

2014 ಜೂನ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ತಕ್ಷಣವೇ ನಮ್ಮ ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆಯನ್ನು ಕಡಿಮೆ ಮಾಡಲಾಯಿತು. ವಂಚಿತರನ್ನು ನಾವು ಎಚ್ಚರಗೊಳಿಸಿದೆವು. ಸ್ಥಳೀಯವಾಗಿ 3000 ಜನರು ಈ ಬಗ್ಗೆ ದೂರು ನೀಡಿದರು. ಈ ಅಭಿಯಾನದ ಯಶಸ್ಸು ಸಂಘಟನೆಗೆ ಹೊಸ ಶಕ್ತಿ ನೀಡಿತು. 

 ನಮ್ಮ ಕಾರ್ಯಕರ್ತರಿಗೆ ಉತ್ಸಾಹ ನೀಡಿದಂತಾಯಿತು. ಪರಿಣಾಮ ಜನರು ಕಾಂಗ್ರೆಸ್‌ನಲ್ಲಿ ನಂಬಿಕೆಯನ್ನು ಕಂಡುಕೊಂಡರು. ಅನಂತರ ನಾವು ರೈತರ ವಿಷಯ ತೆಗೆದುಕೊಂಡೆವು, ಸರ್ಕಾರ ರೈತರ ಧ್ವನಿ ಕೇಳದ ಹೊರತು ಯಾವುದೇ ದಾನ್ಯಗಳನ್ನು ಮಾರದಂತೆ ಕೇಳಿಕೊಂಡೆವು.

ಆ ಘಟನೆಯೂ ಕಾಂಗ್ರೆಸ್ ಬಗೆಗಿನ ನಂಬಿಕೆಯನ್ನು ಹೆಚ್ಚಿಸಿತು. ಇದೇ ರೀತಿ ಜನಪರವಾದ ವಿಷಯಗಳನ್ನು  ಕೈಗೆತ್ತಿಕೊಂಡೆವು. ಕೆಲವೊಂದರಲ್ಲಿ ಯಶಸ್ವಿಯಾದೆವು, ಕೆಲವೊಂದರಲ್ಲಿ ವಿಫಲವಾಗಿದೆವು. ನಮ್ಮ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಸರ್ಕಾರವೂ ಯತ್ನಿಸುತ್ತಿತ್ತು.

ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಲು ಆರಂಭಿಸಿದರು. ಪರಿಶಿಷ್ಟ ಜಾತಿ, ಪಂಗಡ, ಬಡವರು, ವ್ಯಾಪಾರಿಗಳು ಹೀಗೆ ಸಮಾಜದ ಎಲ್ಲ ವರ್ಗಗಳ ಬಗ್ಗೆ ಧ್ವನಿ ಎತ್ತಿದೆವು. ಈ ರೀತಿಯ ಸಂಘಟನೆ ಎಲ್ಲ ರಾಜ್ಯಗಳಲ್ಲೂ ಕ್ಯಗೊಳ್ಳಬೇಕು.

11 ಲೋಕಸಭಾ ಕ್ಷೇತ್ರಗಳಲ್ಲಿ ನೀವು ಒಂದನ್ನು ಮಾತ್ರ ಪಡೆದಿದ್ದೀರಿ. 2019 ಕ್ಕೆ ಇದು ರಿವರ್ಸ್ ಆಗುತ್ತಾ?

ಹೌದು ನಾವು 100 % ಪಡೆಯಲು ಯೋಜನೆ ರೂಪಿಸಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಗೆದ್ದಿದ್ದೇವೆ. 2019 ರಲ್ಲಿ ನಾವು ಎಲ್ಲಾ ರಾಜ್ಯಗಳನ್ನು ಗೆದ್ದೇ ಗೆಲ್ಲುತ್ತೇವೆ.

2019 ರ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಾನದಂಡ ಏನು?

ಕಾರ್ಯಕರ್ತರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೇಳಬೇಕು ಎಂದು ರಾಹುಲ್ ಜಿ ಯಾವಾಗಲೂ ಹೇಳುತ್ತಾರೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಯ ಸ್ಕ್ರೀನಿಂಗ್ ಕಮಿಟಿ ದೆಹಲಿಯಿಂ ಹೊರಬಂದಿದೆ. ಸ್ಕ್ರೀನಿಂಗ್ ಕಮಿಟಿಯ ಸದಸ್ಯರು ಪ್ರತಿ ಜಿಲ್ಲೆ ಜಿಲ್ಲೆಗೂ ತೆರಳಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುತ್ತಾರೆ. ಅಂತಿಮವಾಗಿ ಕಾರ್ಯಕರ್ತರ ಅಭಿಪ್ರಾಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಏನು ಹೇಳುತ್ತೀರಿ?

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ನಾವು 3 ರಾಜ್ಯಗಳಲ್ಲಿ ಗೆದ್ದಿದ್ದೇವೆ. ಈ ವಿಜಯವು ಅವರನ್ನು ಒಬ್ಬ ರಾಷ್ಟ್ರೀಯ ನಾಯಕನನ್ನಾಗಿ ಹೊರಹೊಮ್ಮಿಸಿದೆ. ಮುಂದೆಯೂ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪ್ರಜ್ವಲಿಸಲಿದೆ.

ರಾಹುಲ್‌ಗಾಂಧಿ ಟೆಂಪಲ್ ರನ್ ನಿಮಗೆ ಹೇಗೆ ಉಪಯೋಗವಾಗುತ್ತಿದೆ?

ಕಾಂಗ್ರೆಸ್ ವಿರುದ್ಧ ಬಿಜೆಪಿ ನಿರಂತರವಾಗಿ ಸುಳ್ಳು ಪ್ರಚಾರ ಮಾಡುತ್ತಿದೆ. ಕೇವಲ ಅಲ್ಪಸಂಖ್ಯಾತ ಸಮುದಾಯದ ಪಕ್ಷ ಎಂದು ಹೇಳುತ್ತಿದೆ. ಆದರೆ ವಾಸ್ತವವೇ ಬೇರೆ. ಪ್ರತಿ ಧಾರ್ಮಿಕ ಸಮುದಾಯಕ್ಕೂ ಸಮಾನ ಸ್ಥಾನಮಾನ ನೀಡುವುದು ಕಾಂಗ್ರೆಸ್ ಆದ್ಯತೆ. ಎಲ್ಲರ ನಂಬಿಕೆಗಳನ್ನೂ ಗೌರವಿಸಬೇಕು ಇದು ಕಾಂಗ್ರೆಸ್ ಫಿಲಾಸಫಿ.

ಆದರೆ ಬಿಜೆಪಿ ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷ ಎಂದು ಬಿಂಬಿಸುತ್ತಿದೆ. ಹಾಗಾಗಿ ರಾಹುಲ್ ಜಿ ಮಂದಿರ, ಮಸೀದಿ, ಗರುದ್ವಾರ ಹೀಗೆ ಎಲ್ಲ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಅದು ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತ ಸಮುದಾಯದ ಪಕ್ಷ ಅಲ್ಲ, ಅಥವಾ ಹಿಂದು ವಿರೋಧಿ ಅಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ.

ರಾಜ್ಯದಲ್ಲಿ ನೀವು ಹೊಸ ಘೋಷಣೆ ಆರಂಬಿಸಿದ್ದೀರಿ: ‘ನರವಾ, ಗುರುವಾ, ಘುರುವಾ, ಬಾರಿ’ ಎಂದು. ಏನಿದು?

ನೋಡಿ.. ರೈತರ ಸಾಲಮನ್ನಾ ಅತ್ಯವಶ್ಯಕವಾಗಿತ್ತು. ಅದಕ್ಕಾಗಿಯೇ ನಾವು ಸಾಲಮನ್ನಾ ಮಾಡಿದ್ದೇವೆ. ಆದರೆ ಅದೊಂದು ತಾತ್ಕಾಲಿಕ ಪರಿಹಾರ. ರೈತರ ಗುಣಮಟ್ಟದ ಜೀವನಕ್ಕಾಗಿ ನಾವು ಗ್ರಾಮೀಣ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕಿದೆ. ಅದಕ್ಕಾಗಿಯೇ ಈ ಹೊಸ ಘೋಷಣೆ. ನರವಾ ಎಂದರೆ ಸಣ್ಣ ತೊರೆ ಅಥವಾ ನದಿ, ರಾಜ್ಯದಲ್ಲಿ ಅವುಗಳಿಗೇನೂ ಕೊರತೆ ಇಲ್ಲ. ಆದರೆ ಅವು ಕೃಷಿಗೆ ಬಳಕೆಯಾ ಗುವಂತೆ ಮಾಡಬೇಕು. ಎರಡನೆಯದು ಗುರುವಾ ಅಂದರೆ ಜಾನುವಾರು.

ಅವುಗಳನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸಬೇಕಿದೆ. ಅವುಗಳ ಸಗಣಿಯನ್ನು ಜೈವಿಕ ಗೊಬ್ಬರವಾಗಿ, ಅನಿಲವಾಗಿ ಬಳಸಿಕೊ ಳ್ಳಬೇಕು. ಇದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಮೂರನೆಯದು ಘುರುವಾ ಅಂದರೆ ಪುನರ್ ಬಳಕೆ. ಕೊನೆಯದು ಬಾರಿ ಅಂದರೆ ಉಳುಮೆ. ಅದು ಲಾಭಯುತವಾಗಿರಬೇಕು. ಇದಕ್ಕೆ ಆದ್ಯತೆ ನೀಡಲು ಈ ಘೋಷಣೆ.

ಮಾವೋಯಿಸಂ ರಾಜ್ಯದ ಮತ್ತೊಂದು ಸವಾಲು. ಅದೊಂದಿಗೆ ಡೀಲ್ ಮಾಡಿಕೊಳ್ಳುವ ಯೋಚನೆ ಇದೆಯಾ?

ಗನ್ ಎಲ್ಲಾ ಸಮಸ್ಯೆಗೂ ಪರಿಹಾರ ಅಲ್ಲ. ನಕ್ಸಲರೊಂದಿಗೆ ನಾವು ಮಾತುಕತೆ ನಡೆಸಬೇಕು ಎಂದು ನಾನೆಂದೂ ಯೋಚಿಸಿಲ್ಲ. ಅದರ ಬದಲಾಗಿ ನಕ್ಸಲ್ ಸಂತ್ರಸ್ತರ ಬಳಿ ನಾವು ಮಾತನಾಡಬೇಕೆಂದೆನಿಸುತ್ತದೆ. ಅವರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಸಹಕಾರ ನೀಡಬೇಕಿದೆ. 15 ವರ್ಷ ರಮಣ್ ಸಿಂಗ್ ಅದೇ ದಾರಿಯಲ್ಲಿ ಸಾಗಿದ್ದರು.

ಮುಖ್ಯಮಂತ್ರಿ ಹುದ್ದೆಗಾಗಿ ಆಂತರಿಕ ಸಂಘರ್ಷ?

ನಾಲ್ಕು ಜನ ಅಭ್ಯರ್ಥಿಗಳಿದ್ದೆವು, ಇದರರ್ಥ ನಾವು ಕಳೆದ ಐದು ವರ್ಷಗಳಿಂದ ಸಾಮೂಹಿಕ ನಾಯಕತ್ವದ ಮಾದರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ಮುಖ್ಯಮಂತ್ರಿಯಗಲು ಒಬ್ಬರಿಗೆ ಮಾತ್ರ ಅವಕಾಶವಿದೆ. ಆದರೆ ಸರ್ಕಾರವು ಸಾಮೂಹಿಕ ನಾಯಕತ್ವ ದಲ್ಲಿಯೇ ಕಾರ್ಯ ನಿರ್ವಹಿಸಲಿದೆ.

ನಾವು ಎಂದಿಗೂ ಬೇರೆಯಾಗುವುದಿಲ್ಲ. ಸಮಾಜದ ಪ್ರತಿಯೊಂದು ಸಮುದಾಯಗಳಿಗೂ ಸರ್ಕಾರ ನಮ್ಮದೇ ಎಂಬ ಭಾವನೆ ಬರುವಂತೆ ಸರ್ಕಾರ ನಡೆಸಬೇಕು ಎಂದು ರಾಹುಲ್ ಜಿ ಯಾವಾಗಲೂ ಹೇಳುತ್ತಿರುತ್ತಾರೆ.

ಅರ್ಧ ಅವಧಿಗೆ ನೀವು ನಿಮ್ಮ ಸ್ಥಾನದಿಂದ ನಿರ್ಗಮಿಸುತ್ತೀರಾ?

ನೋಡಿ, ನಮ್ಮ ಪಕ್ಷ ಎಷ್ಟು ದಿನ ಬಯಸುತ್ತದೋ ಅಲ್ಲಿಯವರೆಗೆ ನಾನು ಮುಖ್ಯಮಂತ್ರಿಯಾಗಿ ಇರುತ್ತೇನೆ. ಅದು ಒಂದು ದಿನವಾಗಿರಬಹುದು, 2 ವರ್ಷವಾಗಿರಬಹುದು ಅಥವಾ 5 ವರ್ಷವಾಗಿರಬಹುದು. ಯಾವುದೇ ಸಮಯದಲ್ಲಿ ಪಕ್ಷವು ನನ್ನನ್ನು ತೆರವುಗೊಳಿಸಲು ಇಚ್ಛಿಸಿದರೆ ಸಂತೋಷದಿಂದಲೇ ಕೆಳಗಿಳಿಯುತ್ತೇನೆ.

- ಭೂಪೇಶ್ ಬಘೇಲ್ , ಛತ್ತಿಸ್‌ಗಡ್ ಮುಖ್ಯಮಂತ್ರಿ 

Follow Us:
Download App:
  • android
  • ios