news
By Chethan Kumar | 10:16 PM April 14, 2017
ಭೂಗತದೊರೆಯ ಸಿದ್ಧಾಂತ ಮತ್ತು ಸಾಮಾಜಿಕ ಚಿಂತನ : ಚಕ್ರವರ್ತಿ ಸಿನಿಮಾದ ವಿಮರ್ಶೆ

Highlights

ದರ್ಶನ್ಅದನ್ನು ಮಾಡಿಲ್ಲ. ಅವರು ತಮ್ಮ ಹಿಂದಿನ ಸಿನಿಮಾದ ವೈಭವೀಕರಣವನ್ನು ಪೂರ್ತಿ­ಯಾಗಿ ಮರೆತವರಂತೆ, ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಮುಗ್ಧ ಹುಡುಗನಂತೆ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಮಟ್ಟಿಗೆ ಅವರು ಬಹುದೊಡ್ಡ ರಿಸ್ಕನ್ನು ಮೈಮೇಲೆ ಎಳೆದು­ಕೊಂಡಿದ್ದಾರೆ. ಮತ್ತು ಅದರಲ್ಲಿ ಭಾಗಶಃ ಗೆದ್ದಿದ್ದಾರೆ.

ಚಿತ್ರ: ಚಕ್ರವರ್ತಿ 
ತಾರಾಗಣ: ದರ್ಶನ್‌, ದಿನಕರ್‌ ದೀಪಾ ಸನ್ನಿಧಿ, ದೇವರಾಜ್‌ 
ನಿರ್ದೇಶನ: ಚಿಂತನ್‌ 
ನಿರ್ಮಾಣ: ಸಿದ್ಧಾಂತ್‌ 
ಸಂಗೀತ: ಅರ್ಜುನ್‌ ಜನ್ಯಾ ಛಾಯಾಗ್ರಹಣ: ಚಂದ್ರಶೇಖರ್‌ ಕೆ ಎಸ್‌ 
ರೇಟಿಂಗ್‌: ***

 

ಒಬ್ಬ ಸ್ಟಾರ್‌ ನಟ ತನ್ನ ಐವತ್ತನೇ ಚಿತ್ರ ಸಮೀಪಿಸುತ್ತಿರುವ ಹೊತ್ತಿಗೆ ರಿಸ್ಕ್‌ ತೆಗೆದುಕೊಳ್ಳಲು ಹೋಗುವುದಿಲ್ಲ. ತನ್ನ ಹಾಲಿ ಅಭಿಮಾನಿಗಳನ್ನು ಉಳಿಸಿಕೊಳ್ಳುವುದೇ ಮುಖ್ಯ ಎಂಬಂತೆ ಮತ್ತೆ ಮತ್ತೆ ತಾನು ಈ ಹಿಂದೆ ಮಾಡಿದಂಥ ಪಾತ್ರಗಳನ್ನೇ ಆಯ್ದುಕೊಳ್ಳುತ್ತಾನೆ. ಅಂಥ ಹೊತ್ತಲ್ಲಿ ಹೊಸ ಪ್ರೇಕ್ಷಕರನ್ನು ಗಳಿಸುವುದಕ್ಕಿಂತ, ಈಗಾಗಲೇ ತನ್ನನ್ನು ಮೆಚ್ಚಿಕೊಂಡವರನ್ನು ಉಳಿಸಿಕೊಳ್ಳುವುದು ಆತನಿಗೆ ಮುಖ್ಯವಾಗಿರುತ್ತದೆ. ಅದೇ ಕಾರಣಕ್ಕೆ ಹೆಚ್ಚಿನ ಸ್ಟಾರ್‌ ನಟರು ತಮ್ಮ ಇಮೇಜಿನಿಂದ ಹೊರಗೆ ಬರುವ ಪ್ರಯತ್ನವನ್ನೇ ಮಾಡದೇ, ಅಬ್ಬರಿಸುವ ಸಂಭಾಷಣೆ, ಅತಿಯಾದ ವೈಭವೀಕರಣ, ಮೆರೆದಾಟಗಳನ್ನೇ ಮುಂದುವರಿಸಿಕೊಂಡು ಬರುತ್ತಾರೆ.


ದರ್ಶನ್ ‌ ಅದನ್ನು ಮಾಡಿಲ್ಲ. ಅವರು ತಮ್ಮ ಹಿಂದಿನ ಸಿನಿಮಾದ ವೈಭವೀಕರಣವನ್ನು ಪೂರ್ತಿ­ಯಾಗಿ ಮರೆತವರಂತೆ, ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಮುಗ್ಧ ಹುಡುಗನಂತೆ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಆ ಮಟ್ಟಿಗೆ ಅವರು ಬಹುದೊಡ್ಡ ರಿಸ್ಕನ್ನು ಮೈಮೇಲೆ ಎಳೆದು­ಕೊಂಡಿದ್ದಾರೆ. ಮತ್ತು ಅದರಲ್ಲಿ ಭಾಗಶಃ ಗೆದ್ದಿದ್ದಾರೆ.
ಎಂಬತ್ತರ ದಶಕದ ಬೆಂಗಳೂರು, ಆ ಕಾಲದ ಭೂಗತ ಜಗತ್ತು, ರಾಜಕಾರಣಿಗಳ ಜೊತೆಗಿನ ನಂಟು, ರೌಡಿಗಳನ್ನು ಸಾಕುತ್ತಿದ್ದ ರಾಜಕಾರಣ, ಗೂಂಡಾಗಳ ಭಾರಕ್ಕೆ ನಲುಗುತ್ತಿದ್ದ ಮಹಾನಗರ, ಅಸಹಾಯಕರಾಗಿದ್ದ ಪೊಲೀಸರು- ಇವೆಲ್ಲವನ್ನೂ ಚಿಂತನ್‌ ಯಾವ ಅವಸರವೂ ಇಲ್ಲದಂತೆ ಕಟ್ಟಿಕೊಟ್ಟಿದ್ದಾರೆ. ಇಂಥ­ದ್ದೊಂದು ಕತೆಗೆ ಯಾವ ಅನವಶ್ಯಕವೂ ಗದ್ದಲವೂ ಬೇಕಿಲ್ಲ ಎಂದು ತೀರ್ಮಾನಿಸಿದವರಂತೆ ಕತೆ ಹೇಳುತ್ತಾ ಹೋಗಿದ್ದಾರೆ. ಹಾಗೆ ಹೇಳುವಾಗಲೇ ಅವರಿಗೆ ಎಕೆ 47 ಚಿತ್ರದ ಪೂರ್ವಾರ್ಧ, ಆ ದಿನಗಳು ಚಿತ್ರದ ಪರಿಸರ, ಅಂಕುಶ್‌ ಚಿತ್ರದ ನಿಧಾನಗತಿ ಎಲ್ಲವೂ ನೆನಪಾಗಿದೆಯೇನೋ ಎಂದು ನಮಗೆ ಅನ್ನಿಸುವಂತೆ ಅವರು ದೃಶ್ಯಗಳ ವೇಗವನ್ನು ನಿರ್ಣಯಿಸಿದ್ದಾರೆ.
ಚಕ್ರವರ್ತಿ ಕತೆ ಹೊಸತೇನಲ್ಲ. ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಇಂಥ ಕತೆಗಳ ಸಿನಿಮಾ 80ರ ದಶಕದಲ್ಲಿ ಹಲವಾರು ಬಂದಿದ್ದವು. ವಿಷ್ಣುವರ್ಧನ್‌ ನಟಿಸಿದ್ದ ಕಾಳಿಂಗ ಚಿತ್ರದ ಕಥಾಹಂದರವನ್ನು ಇದು ನೆನಪಿಸುತ್ತದೆ. ಅಂಥದ್ದೊಂದು ಕತೆಯನ್ನು ನಿರ್ದೇಶಿಸುವ ಹೊತ್ತಿಗೆ ಚಿತ್ರಕತೆಗಾರ ಚಿಂತನ್‌ ಪಕ್ಕಕ್ಕೆ ಸರಿದು ನಿಂತಿದ್ದಾರೆ. ಸಂಭಾಷಣಾಕಾರ ಚಿಂತನ್‌ ಮೌನವಹಿಸಿದ್ದಾರೆ. ಇದು ಈ ಚಿತ್ರದ ಶಕ್ತಿಯೂ ಹೌದು, ಮಿತಿಯೂ ಹೌದು. ದರ್ಶನ್‌ ಚಿತ್ರ ಎಂದು ಮೊದಲ ದಿನವೇ ಚಿತ್ರಮಂದಿರಕ್ಕೆ ನುಗ್ಗುವ ಉಗ್ರ ಮಟನ್‌ಬಿರಿಯಾಗಿ ಪ್ರಿಯ ಅಭಿಮಾನಿಗಳಿಗೆ ಇದು ಅಪ್ಪಟ ವೆಜ್‌ ಬಿರಿಯಾನಿ.
ಹಾಗೆ ನೋಡಿದರೆ ಚಿತ್ರದ ತುಂಬ ಹೊಸ ಮುಖಗಳಿವೆ. ಅಚ್ಚರಿ ಹುಟ್ಟಿಸುವುದಕ್ಕೆ ಆದಿತ್ಯ ಇದ್ದಾರೆ. ಭಾವನೆ ಬೇಕಿಲ್ಲದ ಗಡಸು ಮುಖದ ಹಂಟರ್‌ ಪಾತ್ರವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹರೀಶ್‌ ರಾಯ್‌ ಎಂಬ ಆದಿಕಲಾವಿದ ಮತ್ತೆ ಹಾಜರಾಗಿದ್ದಾರೆ. ತೂಗುದೀಪ ಶ್ರೀನಿವಾಸರನ್ನೇ ಹೋಲುವ ದಿನಕರ್‌ ಮೆಚ್ಚುಗೆಯಾಗುತ್ತಾರೆ. ರಂಗಭೂಮಿಯ ಕಲಾವಿದರು, ಶರತ್‌ ಲೋಹಿತಾಶ್ವ, ಶಿವಧ್ವಜ್‌, ಅಶೋಕ್‌- ಹೀಗೆ ಎಲ್ಲ ಪಾತ್ರಗಳಿಗೂ ಅಚ್ಚುಕಟ್ಟಾದ ಚೌಕಟ್ಟಿದೆ. ಆದರೆ ಆ ಎಲ್ಲ ಪಾತ್ರಗಳನ್ನು ಇಟ್ಟುಕೊಂಡು ಸರಳವಾದ ಕತೆಯೊಂದನ್ನು ಹೇಳುವಾಗ ಅಲ್ಲಲ್ಲಿ ನಿರಾಸಕ್ತಿ ತೋರುತ್ತಾರೆ ಚಿಂತನ್‌. ಸಿನಿಮಾ ಅವರ ಕೈಮೀರಿ ಹೋಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತನ್ನ ಮಗುವೇ ತನ್ನ ಸರ್ವಸ್ವ ಎಂದು ಚಕ್ರವರ್ತಿ ಶಂಕರ್‌ ಹೇಳಿದ ಮರುದೃಶ್ಯದಿಂದ ಮಗುವೇ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತದೆ. ಕೊನೆಯ ದೃಶ್ಯದಲ್ಲೂ ಆ ಮಗುವಿನ ಕತೆಯೇನು ಅನ್ನುವು­ದನ್ನು ಚಿಂತನ್‌ ಹೇಳುವುದಿಲ್ಲ.
ಎಂಪಿ ಜಯರಾಜ್‌ ಜಮಾನಾ ಗೊತ್ತಿದ್ದವರಿಗೆ ಈ ಚಿತ್ರ ಪೇಲವವಾದ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ. ಎಲ್ಲವನ್ನೂ ಹೇಳಲು ಯತ್ನಿಸುತ್ತಾ, ಏನನ್ನೂ ನಿಖರವಾಗಿ ದಾಖಲಿಸಲಿಕ್ಕೆ ಹೋಗದ ಚಕ್ರವರ್ತಿ ಅತ್ತ ಎಂಬತ್ತರ ದಶಕವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವುದೂ ಇಲ್ಲ, ಇತ್ತ ಒಂದು ಸ್ವಂತ ಕತೆಯಷ್ಟುಗಾಢವಾಗುವುದೂ ಇಲ್ಲ. ತಾನೇನು ಹೇಳುತ್ತಿದ್ದೇನೆ ಎಂಬ ಸ್ಪಷ್ಟತೆ ಇಲ್ಲದ ಹೊಸ ಕತೆಗಾರನ ಗೊಂದಲ ಮೊದಲರ್ಧದ ತನಕ ಎದ್ದುಕಾಣುತ್ತದೆ.
ನಿರ್ದೇಶಕ ಪ್ರೇಕ್ಷಕರಿಗೆ ಮೋಸ ಮಾಡಲಿಕ್ಕೆ ಹೋಗಬಾರದು. ಒಂದು ದೃಶ್ಯದಲ್ಲಿ ಚಕ್ರವರ್ತಿ ಮತ್ತು ಎಸಿಪಿ ಆಡುವ ಮಾತಗಳನ್ನು ತೋರಿಸಿ, ಮತ್ತೊಮ್ಮೆ ಆ ಮಾತುಗಳನ್ನೇ ಬದಲಾಯಿಸುವುದು ಕತೆಗೆ ಮಾಡುವ ಮೋಸ. ಇಂಥ ಸನ್ನಿವೇಶದಲ್ಲಿ ಮೊದಲು ಆ ದೃಶ್ಯವನ್ನು ಮ್ಯೂಟ್‌ ಮಾಡಿದ್ದರೆ ಅದು ಪ್ರಾಮಾಣಿಕವಾಗುತ್ತಿತ್ತು.
ಹಾಡುಗಳು ನೆನಪಲ್ಲಿ ಉಳಿಯುವುದಿಲ್ಲ. ಹೊಡೆದಾಟಗಳಲ್ಲಿ ಖದರ್‌ ಇಲ್ಲ. ಮೌನದಲ್ಲಿ ಬಿಗುವಿಲ್ಲ, ಪ್ರಣಯ ಸನ್ನಿವೇಶಗಳಲ್ಲಿ ರೋಮಾಂಚ­ವಿಲ್ಲದ ಚಕ್ರವರ್ತಿಯ ಕೊನೆಕೊನೆಯ ವೇಗ ಆರಂಭಕ್ಕೂ ದಕ್ಕಿದ್ದರೆ ಇಡೀ ಚಿತ್ರಕ್ಕೊಂದು ಬೇರೆಯೇ ರೂಪ ಸಿಗುತ್ತಿತ್ತು. 
ಸಿದ್ಧಾಂತ ಮತ್ತು ಚಿಂತನೆಗಳು ಸ್ಟಾರ್‌ ಸಿನಿಮಾಕ್ಕೆ ಅಷ್ಟಾಗಿ ಒಗ್ಗುವುದಿಲ್ಲ.

-ಜೋಗಿ, ಕನ್ನಡಪ್ರಭ

Show Full Article


Recommended


bottom right ad