Asianet Suvarna News Asianet Suvarna News

'ಯಡಿಯೂರಪ್ಪ ಮುಗಿಸಲು ಕೇಂದ್ರದಿಂದ ಷಡ್ಯಂತ್ರ'

ರಾಜಕೀಯವಾಗಿ ಬಿಎಸ್‌ವೈ ಮುಗಿಸಲು ಷಡ್ಯಂತ್ರ| ಕೇಂದ್ರದ ನಾಯಕರಿಂದ ಬಿ.ಎಲ್‌.ಸಂತೋಷ್‌, ಕಟೀಲ್‌ ಬಳಕೆ: ಆರೋಪ|  ಮುಂದಿನ ಚುನಾವಣೆಯಲ್ಲಿ ಬಿಎಸ್‌ವೈಗೆ ಟಿಕೆಟ್‌ ಸಿಗುವುದೂ ಅನುಮಾನ

Central Govt Using BL santosh And Nalin Kateel To Collapse BSYs Political Career Says Congress Leader RB Timmapur
Author
Bangalore, First Published Sep 29, 2019, 8:00 AM IST

ಬಾಗಲಕೋಟೆ[ಸೆ.29]: ಲಿಂಗಾಯತ ನಾಯಕ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಷಡ್ಯಂತ್ರ ಬಿಜೆಪಿಯ ಕೇಂದ್ರ ನಾಯಕರಿಂದಲೇ ನಡೆಯುತ್ತಿದೆ. ಅದಕ್ಕೆ ಬಿ.ಎಲ್‌.ಸಂತೋಷ್‌ ಹಾಗೂ ನಳೀನ್‌ ಕುಮಾರ್‌ ಕಟೀಲ್‌ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಈ ವರ್ತನೆ ಬಹುಸಂಖ್ಯಾತ ಲಿಂಗಾಯತರಲ್ಲಿ ಅಸಮಾಧಾನ ಮೂಡಿಸಲಿದೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಯಡಿಯೂರಪ್ಪ ಅವರ ಅಸಹಾಯಕತೆಗೆ ಬಿ.ಎಲ್‌.ಸಂತೋಷ್‌ ಹಾಗೂ ಕಟೀಲ್‌ ಕಾರಣವಾಗಿದ್ದಾರೆ. ಸದ್ಯದ ಸ್ಥಿತಿ ಮುಂದುವರಿದಿದ್ದೆ ಆದರೆ ಬರುವ ಚುನಾವಣೆಯಲ್ಲಿ ಬಿಎಸ್‌ವೈ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗುವುದು ಅನುಮಾನ ಎಂದು ವ್ಯಂಗ್ಯವಾಡಿದರು.

ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯುವ ಹುನ್ನಾರ ಕೇಂದ್ರ ನಾಯಕರ ತಲೆಯಲ್ಲಿದೆ. ಪ್ರಬಲ ಲಿಂಗಾಯತ ನಾಯಕನಾಗಿರುವ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ಸಂಚು ನಡೆಯುತ್ತಿದೆ. ಪ್ರಧಾನಮಂತ್ರಿ ಕೂಡ ಭೇಟಿಗೂ ಅವಕಾಶ ನೀಡುತ್ತಿಲ್ಲ. ಬಿಎಸ್‌ವೈ ವಿರೋಧಿ​ಗಳಾದ ಭಾನುಪ್ರಕಾಶ ಹಾಗೂ ಸುರಾನಾ ಅಂತವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಮಹೇಶ ತೆಂಗಿನಕಾಯಿ ಅಂತವರನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿರುವುದನ್ನು ಗಮನಿಸಿದರೆ ಬಿಎಸ್‌ವೈ ವಿರುದ್ಧ ಷಡ್ಯಂತ್ರ ನಡೆದಿರಬಹುದು ಎಂದು ಹೇಳಿದರು.

ಸದ್ಯದ ಸ್ಥಿತಿ ಗಮನಿಸಿದರೆ ಬಿಎಸ್‌ವೈ ಕೇಂದ್ರದ ಬಿಜೆಪಿ ನಾಯಕರಿಗೆ ಬೇಡವಾದ ಕೂಸು ಆಗಿದ್ದಾರೆ. ಇದನ್ನು ರಾಜ್ಯದ ಲಿಂಗಾಯತರು ಗಮನಿಸುತ್ತಿದ್ದಾರೆ. ಇದೆ ಸ್ಥಿತಿ ಮುಂದುವರೆದರೆ ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದ ಹಾಗೆ, ಸದ್ಯ ಅಲ್ಲಿರುವ ಲಿಂಗಾಯತರು ಕಾಂಗ್ರೆಸ್‌ ಕಡೆ ನೋಡುವ ಹಾಗಾಗಿದೆ ಎಂದರು.

ತಮ್ಮ ಪಕ್ಷದಲ್ಲಿಯೇ ಸಾಕಷ್ಟುಗೊಂದಲಗಳು ಇರುವಾಗ ಬಿಜೆಪಿ ಬಗ್ಗೆ ಮಾತನಾಡುವ ಅಗತ್ಯ ಮಾಜಿ ಸಚಿವ ಆರ್‌.ಬಿ.ತಿಮ್ಮಾಪೂರ ಅವರಿಗೆ ಇಲ್ಲ. ತಮ್ಮ ಪಕ್ಷದ ಕಾರ್ಯಾಲಯದಲ್ಲಿ ಕಳೆದೆರೆಡು ದಿನಗಳಿಂದ ನಡೆದ ಘಟನೆಗಳನ್ನು ಮೊದಲು ನಿಭಾಯಿಸಲಿ. ತಿಮ್ಮಾಪುರ ಅವರಂತಹ ಹೇಳಿಕೆಗಳನ್ನು ನೋಡಿದರೆ ಅವರು ಮೊದಲು ಧಾರವಾಡದ ಆಸ್ಪತ್ರೆಯಲ್ಲಿ (ಮೆಂಟಲ್‌ ಆಸ್ಪತ್ರೆ) ಟೆಸ್ಟ್‌ ಮಾಡಿಸಿಕೊಳ್ಳುವುದು ಒಳ್ಳೆಯದು.

-ವೀರಣ್ಣ ಚರಂತಿಮಠ, ಬಾಗಲಕೋಟೆ ಶಾಸಕ

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

Follow Us:
Download App:
  • android
  • ios