Asianet Suvarna News Asianet Suvarna News

ಸರ್ಕಾರಿ ನೌಕರರ ಭತ್ಯೆ ಹೆಚ್ಚಳ!

ಸರ್ಕಾರಿ ನೌಕರರಿಗೆ ಭತ್ಯೆ ಹೆಚ್ಚಳದ ಬಂಪರ್‌| 6ನೇ ವೇತನ ಆಯೋಗದ ಶಿಫಾರಸಿನಂತೆ ಭತ್ಯೆ ದರ ಪರಿಷ್ಕರಣೆ|

central govt employees allowance increased
Author
New Delhi, First Published Jan 12, 2019, 8:51 AM IST

 ಬೆಂಗಳೂರು[ಜ.12]: ರಾಜ್ಯ ಸರ್ಕಾರಿ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳ ದರ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೇ ವೇಳೆ ಮಡಿಕೇರಿ ಸೇರಿದಂತೆ ಗಿರಿತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೀಡಲಾಗುತ್ತಿದ್ದ ಗಿರಿತಾಣ ಭತ್ಯೆಯನ್ನು ರದ್ದುಪಡಿಸಲಾಗಿದೆ.

6ನೇ ವೇತನ ಆಯೋಗದ ಶಿಫಾರಸಿನಂತೆ ವಿವಿಧ ಭತ್ಯೆ ದರ ಪರಿಷ್ಕರಣೆ ಮಾಡಲಾಗಿದೆ. ಸರ್ಕಾರಿ ನೌಕರರ ವೈದ್ಯಕೀಯ ಭತ್ಯೆ, ವಾಹನ ಭತ್ಯೆ, ಪ್ರಯಾಣ ಭತ್ಯೆ, ಪೊಲೀಸರ ಸಮವಸ್ತ್ರ ಭತ್ಯೆ, ಗಿರಿತಾಣ ಭತ್ಯೆ, ಹೊರ ರಾಜ್ಯ ಭತ್ಯೆ, ಅಂಗವಿಕಲ ಸರ್ಕಾರಿ ನೌಕರರಿಗೆ ವಾಹನ ಖರೀದಿಸಲು ನೀಡಲಾಗುವ ಸಹಾಯಧನ ಮೊತ್ತ, ರಾಜ್ಯ ಸರ್ಕಾರಿ ನೌಕರರನ್ನು ಅವಲಂಬಿಸಿರುವ ಅಂಗವಿಕಲ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಗಳ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಎಲ್ಲಾ ಭತ್ಯೆಗಳ ದರ ಪರಿಷ್ಕರಣೆ 2019ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಮವಸ್ತ್ರ ಭತ್ಯೆ:

ಪ್ರಮುಖವಾಗಿ ಪೊಲೀಸ್‌ ಅಧೀಕ್ಷಕ (ಐಪಿಎಸ್ಸೇತರ), ಉಪ ಪೊಲೀಸ್‌ ಅಧೀಕ್ಷಕರಿಗೆ ಹಾಗೂ ತತ್ಸಮಾನ ವೃಂದದ ಇತರೆ ಅಧಿಕಾರಿಗಳಿಗೆ ಸಮವಸ್ತ್ರಕ್ಕೆ ನೀಡುವ ಪ್ರಾರಂಭಿಕ ಅನುದಾನ 6000 ರು.ಗೆ, ವಾರ್ಷಿಕ ನವೀಕರಣಕ್ಕಾಗಿ 1500 ರು. ಮತ್ತು ನಿರ್ವಹಣಾ ವೆಚ್ಚ ಮಾಸಿಕ 500 ರು.ಗೆ ಪರಿಷ್ಕರಿಸಲಾಗಿದೆ. ಪೊಲೀಸ್‌ ಅಧೀಕ್ಷರು ಹಾಗೂ ತತ್ಸಮಾನ ವೃಂದದವರಿಗೆ ಪ್ರಾರಂಭಿಕ ಅನುದಾನ 5000 ರು.ಗೆ, ಪೊಲೀಸ್‌ ಉಪ ನಿರೀಕ್ಷಕರು ಮತ್ತು ಪೇದೆಗಳ ಮಾಸಿಕ ನಿರ್ವಹಣಾ ಅನುದಾನ 500 ರು.ಗೆ ಪರಿಷ್ಕರಿಸಲಾಗಿದೆ. ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಕಾರ್ಯದರ್ಶಿ, ಶಾಖಾಧಿಕಾರಿಗಳಿಗೆ ಎರಡು ವರ್ಷದ ಸಮವಸ್ತ್ರ ಭತ್ಯೆಯನ್ನು 8000 ರು.ಗೆ ಹೆಚ್ಚಿಸಲಾಗಿದೆ.

ವಾಹನ ಭತ್ಯೆ:

ಎ, ಬಿ, ಸಿ ಮತ್ತು ಡಿ ಗ್ರೂಪ್‌ ನೌಕರರಿಗೆ ಕ್ರಮವಾಗಿ ಮಾಸಿಕ 900, 900, 600 ಮತ್ತು 300 ರು.ಗಳಿಗೆ ಮಾಸಿಕ ಭತ್ಯೆ ಹೆಚ್ಚಿಸಲಾಗಿದೆ. ಪ್ರಯಾಣ ಭತ್ಯೆಯನ್ನು ತಹಶೀಲ್ದಾರ್‌ ಹಾಗೂ ತತ್ಸಮಾನ ಹುದ್ದೆಗಳಿಗೆ ಮಾಸಿಕ 1000 ರು., ಇತರೆ ರಾಜಸ್ವ ನಿರೀಕ್ಷಿಕ, ಗ್ರಾಮ ಲೆಕ್ಕಿಗ ಹಾಗೂ ಇತರೆ ಇಲಾಖೆಗಳಲ್ಲಿನ ತತ್ಸಮಾನ ವೃಂದದವರಿಗೆ ಪ್ರತ್ಯೇಕವಾಗಿ ಕ್ರಮವಾಗಿ ಗರಿಷ್ಠ 750 ರು.ನಿಂದ ಕನಿಷ್ಠ 400 ರು.ವರೆಗೆ ದರ ಪರಿಷ್ಕರಿಸಲಾಗಿದೆ. ಇನ್ನು, ಅಂಧ ಮತ್ತು ಅಂಗವಿಕಲ ನೌಕರರ ವಾಹನ ಭತ್ಯೆಯನ್ನು ಮೂಲ ವೇತನದ ಶೇ.6ರ ದರದಲ್ಲಿ ಮಾಸಿಕ ಯಾವುದೇ ಗರಿಷ್ಠ ಮಿತಿ ಇಲ್ಲದಂತೆ ಪರಿಷ್ಕರಿಸಲಾಗಿದೆ. ಅಲ್ಲದೆ, ವಿಶೇಷ ವಾಹನಗಳ ಖರೀದಿಗೆ ನೀಡಲಾಗುತ್ತಿದ್ದ ಸಹಾಯಧದ ಮೊತ್ತವನ್ನು ವಾಹನ ಬೆಲೆಯ ಶೇ.30ರಷ್ಟುಗರಿಷ್ಠ 40 ಸಾವಿರ ರು.ಮಿತಿಗೊಳಪಟ್ಟಿರುವಂತೆ ಪರಿಷ್ಕರಣೆ ಮಾಡಲಾಗಿದೆ.

ಹೊರರಾಜ್ಯ ಭತ್ಯೆ:

ನವದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಹೊರ ರಾಜ್ಯ ಭತ್ಯೆಯನ್ನು 2018ರ ಪರಿಷ್ಕೃತ ವೇತನ ಶ್ರೇಣಿಯ ಮೂಲ ವೇತನ ಶೇ.35ರಷ್ಟು, ವಾರಣಾಸಿ, ತಿರುಮಲ, ಶ್ರೀಶೈಲ, ಮಂತ್ರಾಲಯ ಸೇರಿದಂತೆ ಇತರೆ ಹೊರ ರಾಜ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮೂಲ ವೇತನದ ಶೇ.10ರಷ್ಟುದರದಲ್ಲಿ ಹೊರರಾಜ್ಯ ಭತ್ಯೆ ಪರಿಷ್ಕರಿಸಲಾಗಿದೆ.

ಮಕ್ಕಳ ಶೈಕ್ಷಣಿಕ ಭತ್ಯೆ:

ಸರ್ಕಾರಿ ನೌಕರರ ಅವಲಂಬಿತ ವಿಶೇಷ ಚೇತನ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪ್ರತಿ ಮಗುವಿಗೆ ಮಾಸಿಕ 1000 ರು.ಗಳಿಗೆ ಪರಿಷ್ಕರಿಸಲಾಗಿದೆ.

ವೈದ್ಯಕೀಯ ಭತ್ಯೆ:

ಸಿ ಮತ್ತು ಡಿ ವೃಂದದ ನೌಕರರಿಗೆ ಪ್ರಸ್ತುತ ಇರುವ ಮಾಸಿಕ 100 ರು. ವೈದ್ಯಕೀಯ ಭತ್ಯೆಯನ್ನು 200 ರು.ಗಳಿಗೆ ಹೆಚ್ಚಿಸಲಾಗಿದೆ.

ಗಿರಿತಾಣ ಭತ್ಯೆರದ್ದು:

6ನೇ ವೇತನ ಆಯೋಗದ ಶಿಫಾರಸಿನಂತೆ ನಂದಿಬೆಟ್ಟ, ಮಹದೇಶ್ವರ ಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟಹಾಗೂ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿನ ಗಿರಿತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಈ ವರೆಗೆ ನೀಡಲಾಗುತ್ತಿದ್ದ ಗಿರಿತಾಣ ಭತ್ಯೆಯನ್ನು ಜ.1ರಿಂದ ಅನ್ವಯವಾಗುವಂತೆ ರದ್ದುಪಡಿಸಲಾಗಿದೆ.

Follow Us:
Download App:
  • android
  • ios