Asianet Suvarna News Asianet Suvarna News

‘ಎಷ್ಟೇ ಖರ್ಚಾದರೂ ಪರ್ವಾಗಿಲ್ಲ, ಪೊಲೀಸರ ಬಟ್ಟೆಬಿಚ್ಚಿಸುತ್ತೇನೆ!’

ಸಿಸಿಬಿ ಕಚೇರಿ ಬಂದ್‌ ಮಾಡಿಸುತ್ತೇನೆ. ನನ್ನ ಮನೆಗೆ ಬಂದಿದ್ದ ಎಲ್ಲಾ ಪೊಲೀಸರ ಬಟ್ಟೆಬಿಚ್ಚಿ ನಿಲ್ಲಿಸುತ್ತೇನೆ. ನಾನೇನು, ನನ್ನ ತಾಕತ್ತೇನು ಅಂತ ತೋರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಸಿಬಿಯಿಂದ ಬಂಧಿತನಾದ ವ್ಯಕ್ತಿಯೋರ್ವ ಪೊಲೀಸರ ವಿರುದ್ಧವೇ ಕೂಗಾಡಿದ್ದಾನೆ.

CCB Police Arrest Umrah Developers Owner In Bengaluru
Author
Bengaluru, First Published Apr 25, 2019, 7:45 AM IST

ಬೆಂಗಳೂರು :  ‘ನೀವೆಲ್ಲಾ ನನ್ನ ಮನೆ ಮೇಲೆ ದಾಳಿ ನಡೆಸುತ್ತೀರಾ? ಇನ್ನೂ ಎರಡ್ಮೂರು ದಿನಗಳಲ್ಲಿ ಸಿಸಿಬಿ ಕಚೇರಿ ಬಂದ್‌ ಮಾಡಿಸುತ್ತೇನೆ. ನನ್ನ ಮನೆಗೆ ಬಂದಿದ್ದ ಎಲ್ಲಾ ಪೊಲೀಸರ ಬಟ್ಟೆಬಿಚ್ಚಿ ನಿಲ್ಲಿಸುತ್ತೇನೆ. ನಾನೇನು, ನನ್ನ ತಾಕತ್ತೇನು ಅಂತ ತೋರಿಸುತ್ತೇನೆ. .150 ಕೋಟಿ ಖರ್ಚಾದರೂ ನಾನೂ ಯೋಚನೆ ಮಾಡಲ್ಲ..!’

ಭೂ ವಂಚನೆ ಪ್ರಕರಣದಲ್ಲಿ ಸೋಮವಾರ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದಾಗ ಉಮ್ರಾ ಡೆವಲಪ​ರ್ಸ್ ಮಾಲೀಕ ಯೂಸೂಫ್‌ ಷರೀಫ್‌ ಕೂಗಾಡಿದ್ದು ಹೀಗೆ.

ಈ ಗಲಾಟೆ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಸಿಸಿಬಿ ಹೆಡ್‌ ಕಾನ್‌ಸ್ಟೇಬಲ್‌ ಸುನೀಲ್‌ ಕುಮಾರ್‌ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (506) ಹಾಗೂ ಕರ್ತವ್ಯಕ್ಕೆ ಅಡ್ಡಪಡಿಸಿದ (353) ಆರೋಪಗಳಡಿ ಯೂಸೂಫ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಿಸಿಬಿ ಕಚೇರಿಗೆ ರಾತ್ರಿ 9ರ ಸುಮಾರಿಗೆ ಯೂಸೂಫ್‌ನನ್ನು ವಶಕ್ಕೆ ಪಡೆದು ಕರೆ ತರಲಾಯಿತು. ಬಳಿಕ ತನಿಖಾಧಿಕಾರಿಯಾದ ವಿಶೇಷ ವಿಚಾರಣಾ ವಿಭಾಗದ ಎಸಿಪಿ ಎನ್‌.ಎಚ್‌.ರಾಮಚಂದ್ರಯ್ಯ ಅವರು ತಮ್ಮ ಕೊಠಡಿಯಲ್ಲೇ ಆರೋಪಿ ಪರ ವಕೀಲ ಇರ್ಫಾನ್‌ ನಜೀರ್‌ ವಾಸೀಂ ಹಾಗೂ ವೈದ್ಯ ಸೈಯದ್‌ ಸಮ್ಮುಖದಲ್ಲೇ ಯೂಸೂಫ್‌ ವಿಚಾರಣೆ ನಡೆಸಿದರು. ಆಗ ಅಧಿಕೃತವಾಗಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರಕ್ಕೆ ಬಂದಾಗ ಆರೋಪಿ ಗದ್ದಲ ಮಾಡಿದ ಎಂದು ಸುನೀಲ್‌ ಕುಮಾರ್‌ ದೂರಿನಲ್ಲಿ ವಿವರಿಸಿದ್ದಾರೆ.

ಬಂಧನದಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದಲೇ ಏಕಾಏಕಿ ಗಲಾಟೆ ಪ್ರಾರಂಭಿಸಿದ ಯೂಸೂಫ್‌, ‘ನನ್ನ ಮನೆಯಿಂದ ದಾಖಲೆಗಳನ್ನು ತರುವ ಅಧಿಕಾರ ನಿಮಗಿಲ್ಲ. ಏನು ಮಾಡ್ತೀನಿ ನೋಡ್ತಾ ಇರಿ. ನಿಮ್ಮೆಲ್ಲರನ್ನೂ ಅಮಾನತು ಮಾಡಿಸಿ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ’ ಎಂದು ಅರಚಾಡಿದ. ಅಲ್ಲದೆ, ತನಿಖೆಯಿಂದ ತಪ್ಪಿಸಿಕೊಳ್ಳಲು ತಲೆಯನ್ನು ಗೋಡೆಗೆ ಗುದ್ದಿಕೊಂಡು, ಟೇಬಲ್‌ ಮೇಲಿದ್ದ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿಕೊಳ್ಳಲು ಯತ್ನಿಸಿದ ಎಂದು ಪೊಲೀಸರು ಹೇಳಿದ್ದಾರೆ.

ನಾನು ಕತ್ತರಿ ಕಿತ್ತುಕೊಳ್ಳಲು ಹೋದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾಡಿಸಿ ಒದ್ದರು. ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಈ ತಳ್ಳಾಟದಲ್ಲಿ ಆರೋಪಿಯ ಹೊಟ್ಟೆಗೆ ಸಣ್ಣ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ವಶಕ್ಕೆ ಪಡೆಯಲಾಗಿದೆ. ಕರ್ತನಿರತ ಪೊಲೀಸರು ಹಾಗೂ ಇಲಾಖೆ ವಿರುದ್ಧ ಕೆಟ್ಟದಾಗಿ ಮಾತನಾಡಿದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹೆಡ್‌ ಕಾನ್‌ಸ್ಟೇಬಲ್‌ ಮನವಿ ಮಾಡಿದ್ದಾರೆ.

Follow Us:
Download App:
  • android
  • ios