Asianet Suvarna News Asianet Suvarna News

ಇನ್ನು ಇರೋದಿಲ್ಲ ಈ ಎರಡು ಬ್ಯಾಂಕ್ ಗಳು : ಗ್ರಾಹಕರೇ ಗಮನಿಸಿ

ಈ ಎರಡು ಬ್ಯಾಂಕ್ ಗಳು ಇನ್ನು ಮುಂದೆ ಇರೋದಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರವು ಈಗಾಗಲೇ  ವಿಜಯಾ ಬ್ಯಾಂಕ್ ಮತ್ತು ಮಹಾರಾಷ್ಟ್ರದ ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವುದಕ್ಕೆ ಅನುಮೋದನೆ ನೀಡಿದೆ.

Cabinet Approves The Merger Of Vijaya Bank Dena Bank With Bank Of Baroda
Author
Bengaluru, First Published Jan 3, 2019, 8:10 AM IST

ನವದೆಹಲಿ :  ಕರ್ನಾಟಕದ ವಿಜಯಾ ಬ್ಯಾಂಕ್ ಮತ್ತು ಮಹಾರಾಷ್ಟ್ರದ ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಳಿಕ ಕರ್ನಾಟಕದ ಇನ್ನೊಂದು ಬ್ಯಾಂಕ್ ಬ್ಯಾಂಕಿಂಗ್ ವಹಿವಾಟಿನಿಂದ ಕಣ್ಮರೆಯಾಗಲಿದೆ. 

ಏ.1 ರಿಂದ ವಿಲೀನ ಜಾರಿಯಾಗಲಿದ್ದು ಇದಾದ ಬಳಿಕ ಬ್ಯಾಂಕ್ ಆಫ್ ಬರೋಡಾವು ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಬಳಿಕ ಮೂರನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಳ್ಳಲಿದೆ. ಅಲ್ಲದೇ ಈ ವಿಲೀನ ಪ್ರಕ್ರಿಯೆ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಅನ್ನು ಸೃಷ್ಟಿಸಲಿದೆ. 

ಸಾರ್ವಜನಿಕ ವಲಯದ ಮೂರು ಬೇರೆ ಬೇರೆ ಬ್ಯಾಂಕುಗಳನ್ನು ವಿಲೀನಗೊಳಿಸುವಪ್ರಸ್ತಾವನೆಗೆ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ  ನೀಡಲಾಗಿದೆ. ಸಂಪುಟ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ವಿಲೀನದಿಂದಾಗಿ ಉದ್ಯೋಗಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಉದ್ಯೋಗಿಗಳ ಸೇವೆಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಮತ್ತು ಸೇವೆಯನ್ನು ರದ್ದುಗೊಳಿಸುವುದಿಲ್ಲ. ವಿಲೀನದಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಬಲ್ಲ ಬಲಿಷ್ಠ ಬ್ಯಾಂಕ್‌ವೊಂದರ ಉಗಮವಾಗಲಿದೆ ಎಂದು ಹೇಳಿದ್ದಾರೆ.

ಷೇರು ಹಂಚಿಕೆ ಸೂತ್ರಕ್ಕೆ ಸಮ್ಮತಿ: ಮೂರು ಬ್ಯಾಂಕುಗಳ ವ್ಯವಸ್ಥಾಪಕ ಮಂಡಳಿಗಳು ಪ್ರಸ್ತಾವಿತ ವಿಲೀನಕ್ಕೆ ಪೂರ್ವಭಾವಿಯಾಗಿ ಷೇರು ಪ್ರಮಾಣ ಹಂಚಿಕೆ ಸೂತ್ರಕ್ಕೆ ಸಮ್ಮತಿ ಸೂಚಿಸಿವೆ. ವಿಜಯಾ ಬ್ಯಾಂಕಿನ ಪಾಲುದಾರರು ಬ್ಯಾಂಕಿನಲ್ಲಿ ಹೊಂದಿರುವ ಪ್ರತಿ 1000 ಷೇರುಗಳಿಗೆ ಪ್ರತಿಯಾಗಿ ಬ್ಯಾಂಕ್ ಆಫ್ ಬರೋಡಾದ 402 ಇಕ್ವಿಟಿ ಷೇರುಗಳನ್ನು ಪಡೆಯಲಿದ್ದಾರೆ. ಅದೇ ರೀತಿ ದೇನಾ ಬ್ಯಾಂಕಿನ ಪಾಲುದಾರರು ಬ್ಯಾಂಕಿನಲ್ಲಿ ಹೊಂದಿರುವ ಪ್ರತಿ 1000 ಷೇರುಗಳಿಗೆ ಪ್ರತಿಯಾಗಿ ಬ್ಯಾಂಕ್ ಆಫ್ ಬರೋಡಾದ 110 ಷೇರುಗಳನ್ನು ಪಡೆಯಲಿದ್ದಾರೆ. ಈ ಯೋಜನೆ2019 ರ ಏ. 1ರಿಂದ ಜಾರಿಗೆ ಬರಲಿದೆ. 

14.82 ಲಕ್ಷ ಕೋಟಿ ರು. ವಹಿವಾಟು: ಸಾರ್ವಜನಿಕ ವಲಯದ ಮೂರು ಬೇರೆ ಬೇರೆ ಬ್ಯಾಂಕುಗಳನ್ನು ಇದೇ ಮೊದಲ ಬಾರಿಗೆ ವಿಲೀನಗೊಳಿಸಲಾಗುತ್ತಿದ್ದು, 14.82 ಲಕ್ಷ ಕೋಟಿ ರು. ವಹಿವಾಟಿನೊಂದಿಗೆ ಬ್ಯಾಂಕ್ ಆಫ್ ಬರೋಡಾ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕುಗಳ ಬಳಿಕ ಮೂರನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಳ್ಳಲಿದೆ. 

ಕರ್ನಾಟಕದ ಎರಡನೇ ಬ್ಯಾಂಕ್ ವಿಲೀನ: ಐದು ಸಹವರ್ತಿ ಬ್ಯಾಂಕುಗಳ ವಿಲೀನ ವೇಳೆ ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಎಸ್‌ಬಿಐನಲ್ಲಿ ವಿಲೀನಗೊಂಡಿತ್ತು. ದಕ್ಷಿಣ ಕನ್ನಡದ ಮಂಗಳೂರಿನಲ್ಲಿ 1931 ಅ. 23ರಂದು ಎ.ಬಿ. ಶೆಟ್ಟಿ ನೇತೃತ್ವದ ರೈತರ ಗುಂಪೊಂದರಿಂದ ವಿಜಯಾ ಬ್ಯಾಂಕ್ ಆರಂಭಗೊಂಡಿತ್ತು.

Follow Us:
Download App:
  • android
  • ios