Asianet Suvarna News Asianet Suvarna News

ಬಿಜೆಪಿಗೆ ಕರೆತರುವ ಯತ್ನ ನಡೆದಿತ್ತು : ಅಂಬಿಗೆ ಗಾಳ ಹಾಕಿದ್ದ ನಾಯಕರು

ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಬಿಜೆಪಿಗೆ ಕರೆತರುವ ಯತ್ನ ಅನೇಕ ಬಾರಿ ನಡೆದಿತ್ತು. ಆದರೆ ಅಂಬರೀಷ್ ಮಾತ್ರ ಬಿಜೆಪಿ ಸೇರುವ ಮನಸ್ಸು ಮಾಡಲಿಲ್ಲ. 

BJP Leaders Approached Ambareesh
Author
Bengaluru, First Published Nov 26, 2018, 8:37 AM IST

ಬೆಂಗಳೂರು :  ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ರಾಜಕಾರಣ ಮಾಡಿದ್ದ ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರನ್ನು ಎರಡು ಬಾರಿ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದರೂ ಯಶಸ್ಸು ಕಾಣಲಿಲ್ಲ.

ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಮತ್ತು ಕಳೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಚಿವ ಸ್ಥಾನ ಕಿತ್ತುಕೊಂಡಾಗಲೂ ಅಂಬರೀಷ್‌ ಅವರು ಬಿಜೆಪಿಗೆ ಸೇರುವ ಮನಸ್ಸು ಮಾಡಲಿಲ್ಲ. ಬಿಜೆಪಿಯ ಅನೇಕ ಮುಖಂಡರೊಂದಿಗೆ ಸ್ನೇಹ ಹೊಂದಿದ್ದ ಅಂಬರೀಷ್‌ ಅವರಿಗೆ ಆ ಪಕ್ಷ ತಮ್ಮ ಮಂಡ್ಯ ಜಿಲ್ಲೆಯಲ್ಲಿ ಪ್ರಭಾವ ಹೊಂದಿಲ್ಲ ಎಂಬ ಕಾರಣದಿಂದ ಸೇರ್ಪಡೆಯಾಗಿರಲಿಕ್ಕಿಲ್ಲ ಎಂಬ ಮಾತೂ ಇದೆ.

ಮಂಡ್ಯ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಜೆಡಿಎಸ್‌ ಸಂಸದರಾಗಿದ್ದ ವೇಳೆ ಅಟಲ್‌ ಬಿಹಾರಿ ವಾಜಪೇಯಿ ಅವರು 1998ರಲ್ಲಿ ತಮ್ಮ ಸರ್ಕಾರದ ಅಸ್ತಿತ್ವ ಉಳಿಸಿ ಕೊಳ್ಳಲು ಬಹುಮತ ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೇವಲ ಒಂದು ಮತ ಬೇಕಿರುವ ವೇಳೆ ಬಿಜೆಪಿ ಮುಖಂಡರು ಅಂಬರೀಷ್‌ ಅವರನ್ನು ಸಂಪರ್ಕಿಸಿ ಪಕ್ಷವನ್ನು ಕರೆ ತರುವ ಪ್ರಯತ್ನ ಮಾಡಿದ್ದರು. ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಆಮಿಷ ಕೂಡ ಒಡ್ಡಲಾಯಿತು. ಆದರೂ, ಅಂಬರೀಷ್‌ ಅದಕ್ಕೆ ಬಲಿಯಾಗಲಿಲ್ಲ.

ಇತ್ತೀಚೆಗೆ ಅಂದರೆ, ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ವಸತಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಅಂಬರೀಷ್‌ ಅವರು ತೀವ್ರ ಅಸಮಾಧಾನಗೊಂಡು ಆ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. 2018ರ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿಗೆ ಕರೆತರುವ ಬಗ್ಗೆ ಮತ್ತೆ ಪ್ರಯತ್ನ ಆರಂಭವಾಯಿತು.

ಸಿದ್ದರಾಮಯ್ಯ ಮತ್ತವರ ಪ್ರಾಬಲ್ಯ ಮುರಿಯುವ ಯತ್ನದಲ್ಲಿದ್ದ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್‌ ನಾಯಕರಾಗಿದ್ದ ಅಂಬರೀಷ್‌ ಅವರನ್ನು ಕರೆತರುವ ಯತ್ನ ನಡೆಸಿದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಹಾಗೂ ಶಾಸಕ ಸತೀಶ್‌ ರೆಡ್ಡಿ ತೀವ್ರ ಅಂಬರೀಷ್‌ ಅವರೊಂದಿಗೆ ಮಾತುಕತೆ ನಡೆಸಿ ಆಹ್ವಾನ ನೀಡಿದ್ದರು.

ಮಂಡ್ಯದಲ್ಲಿ ಬೇಡ ಎಂದರೆ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗುವುದು. ಇಲ್ಲದಿದ್ದರೆ ಪತ್ನಿ ಸುಮಲತಾ ಅವರಿಗೆ ಟಿಕೆಟ್‌ ನೀಡಲಾಗುವುದು. ಅದೂ ಬೇಡ ಎಂದರೆ ರಾಜ್ಯಸಭೆಗೆ ಕಳುಹಿಸಲಾಗುವುದು ಎಂಬ ಮಾತನ್ನೂ ಅಂಬರೀಷ್‌ ಅವರಿಗೆ ಹೇಳಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ಮುಂದೊಡ್ಡಿದ ಅವರು ಬಿಜೆಪಿಯತ್ತ ತಲೆ ಹಾಕಲಿಲ್ಲ.

Follow Us:
Download App:
  • android
  • ios