Asianet Suvarna News Asianet Suvarna News

ಸೈಕಲ್'ನಲ್ಲಿ 6 ತಿಂಗಳು 10 ಸಾವಿರ ಕಿಮೀ ಸುತ್ತಿದ ಬೆಂಗಳೂರಿನ ಸಾಹಸಿ

ಹವಾ ನಿಯಂತ್ರಿತ ಕೊಠಡಿ, ತಿಂಗಳಾಂತ್ಯಕ್ಕೆ ಲಕ್ಷಾಂತರ ರುಪಾಯಿ ಆದಾಯ. ಸಾಫ್ಟ್‌ವೇರ್ ಕಂಪನಿಯೊಟ್ಟಿಗಿನ ಸಾಫ್ಟ್ ಜೀವನಕ್ಕೆ ಗುಡ್ ಬೈ ಹೇಳಿ ಆತ ಆಯ್ದುಕೊಂಡಿದ್ದು ಸೈಕ್ಲಿಂಗ್ ಮೂಲಕ ದುರ್ಗಮ ಹಾದಿಯ ದೇಶ ಪರ್ಯಟನೆ..!

Bengaluru Guy Adventure

ಬೆಂಗಳೂರು (ಜ.24): ಹವಾ ನಿಯಂತ್ರಿತ ಕೊಠಡಿ, ತಿಂಗಳಾಂತ್ಯಕ್ಕೆ ಲಕ್ಷಾಂತರ ರುಪಾಯಿ ಆದಾಯ. ಸಾಫ್ಟ್‌ವೇರ್ ಕಂಪನಿಯೊಟ್ಟಿಗಿನ ಸಾಫ್ಟ್ ಜೀವನಕ್ಕೆ ಗುಡ್ ಬೈ ಹೇಳಿ ಆತ ಆಯ್ದುಕೊಂಡಿದ್ದು ಸೈಕ್ಲಿಂಗ್ ಮೂಲಕ ದುರ್ಗಮ ಹಾದಿಯ ದೇಶ ಪರ್ಯಟನೆ..!

ಸಮಾಜದಿಂದ ಎಲ್ಲವನ್ನೂ ಸ್ವೀಕರಿಸಿದ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ಧೇಶದಿಂದ ಬೆಂಗಳೂರು ಮೂಲದ 32 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಅನಿಲ್ ಪ್ರಭಾಕರ್ ಸೈಕಲ್ ಏರಿ ದೇಶ ಪರ್ಯಟನೆಯೊಂದಿಗೆ ಸೈಕ್ಲಿಂಗ್  ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ  ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಚಿಕ್ಕಂದಿನಿಂದಾಗಲೂ ಸೈಕಲ್ ಏರಿ ದೇಶ ಸುತ್ತುವ ಕನಸು ಹೊಂದಿದ ಅನಿಲ್ ಪ್ರಭಾಕರ್ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಳೆದ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಪುಟ್ಟ ಅವಧಿಯ ಬದುಕಲ್ಲಿ ಮರೆಯದ ಸಾಧನೆ ಮಾಡಬೇಕೆಂದು ಚಿಕ್ಕಂದಿನ ಆಸೆಗೆ ಒತ್ತು ನೀಡಿ ದೇಶ ಸುತ್ತಿದ ಸುಂದರ ಅನುಭವಗಳನ್ನು ಅನಿಲ್ ಮೆಲುಕು ಹಾಕುವುದು ಹೀಗೆ.

ಜೀವದಲ್ಲಿ ಚೈತನ್ಯ, ರಟ್ಟೆಯಲ್ಲಿ ಕಸುವಿದ್ದಾಗಲೆ ಮನದಾಸೆ ತೀರಿಸಿಕೊಳ್ಳಬೇಕು. ಆದಾಯದ ಬೆನ್ನತ್ತಿ ಉದ್ಯೋಗದಲ್ಲಿ ತೊಡಗಿದ್ದರೆ ಸಮಾಜಕ್ಕೆ ನನ್ನದೇ  ಕೊಡುಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಜೂನ್ ತಿಂಗಳಂದು ಬೆಂಗಳೂರಿನಿಂದ ಆರಂಭವಾದ ಸೈಕ್ಲಿಂಗ್ ಪ್ರವಾಸಕ್ಕೆ ನಿರ್ದಿಷ್ಟ ತಯಾರಿಯಿರಲಿಲ್ಲ. ಸೈಕಲ್ ರಿಪೇರಿಗೆ ಬೇಕಾದ ಕೆಲ ಸಲಕರಣೆ, ಕೈಯಲ್ಲೊಂದಷ್ಟು ಹಣ ಹಿಡಿದು ಉತ್ತರ ಭಾರತದತ್ತ ಸೈಕಲ್ ಪೆಟಲ್‌ಗಳನ್ನು ತುಳಿದೆ. ಸೈಕಲ್ ತುಂಬೆಲ್ಲಾ ಅಲೆಮಾರಿಯಂತೆ ಚಿಕ್ಕ ಚಿಕ್ಕ ಗಂಟು ಮೂಟೆಗಳನ್ನು ನೇತು ಹಾಕಿಕೊಂಡು ಪ್ರವಾಸ ಹೊರಟ ನನಗೆ ದಾರಿಯುದ್ದಕ್ಕೂ ಜನರೆ ನನಗೆ ಊಟೋಪಚಾರ ವ್ಯವಸ್ಥೆ ಮಾಡಿದರು’ ಎಂದು ಸಾಹಸ ಯಾತ್ರೆಯ ಬಗ್ಗೆ ಹೇಳುತ್ತಾರೆ.

6 ತಿಂಗಳು; 10 ಸಾವಿರ ಕಿ.ಮೀ:

2017 ರ ಜೂನ್ ತಿಂಗಳಿನಿಂದ ಆರಂಭಗೊಂಡ ದೇಶ ಪರ್ಯಟನೆಯ ಸೈಕ್ಲಿಂಗ್ ಪಯಣವು ಹೊಸ ವರ್ಷದ ಜನವರಿ ತಿಂಗಳಲ್ಲಿ ಬೆಂಗಳೂರಲ್ಲೆ ಮುಕ್ತಾಯಗೊಂಡಿದೆ. ಕಳೆದ ಆರು ತಿಂಗಳುಗಳಿಂದ ಸೈಕಲ್ ಪೆಡಲ್ ತುಳಿಯುತ್ತಿರುವ ಅನಿಲ್ ಬರೋಬ್ಬರಿ 10 ಸಾವಿರ ಕಿ.ಮೀ ಪ್ರಯಾಣಿಸಿ ಬಹುತೇಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಹೈದ್ರಾಬಾದ್, ಜಮ್ಮು  ಮತ್ತು ಕಾಶ್ಮೀರ, ನಾಗಪುರ್, ಬೋಪಾಲ್, ದಿಲ್ಲಿ, ಚಂಢೀಗಡ್, ಮನಾಲಿ, ಲಡಾಕ್, ಕಾರ್ಗಿಲ್, ಅಮ್ರತ್ ಸರ್, ಜೈಪುರ್, ಅಹ್ಮದಾಬಾದ್, ಬರೋಡ, ಮುಂಬೈ, ಗೋವಾ, ಕಾರವಾರ, ಕೇರಳ, ಕನ್ಯಾ ಕುನಾರಿ, ಮಧುರೈ  ನಂತರದಲ್ಲಿ ಬೆಂಗಳೂರಿಗೆ ಆಗಮಿಸಿ ಸೈಕ್ಲಿಂಗ್ ಪ್ರವಾಸ ಅಂತ್ಯಗೊಂಡಿದೆ.

ಸೈಕ್ಲಿಂಗ್ ಜಾಗೃತಿ : ಅನಿಲ್ ಪ್ರಭಾಕರ್ ಕೇವಲ ಪ್ರವಾಸಿ ತಾಣಗಳತ್ತ ಮುಖ ಮಾಡದೆ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕ್ಲಿಂಗ್‌ನಿಂದ ಆಗುವ ಪ್ರಯೋಜನಗಳ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ  ಮಾಡಿದ್ದಾರೆ. ‘ವಾಹನಗಳ ಹೆಚ್ಚಳದಿಂದ ಪರಿಸರದಲ್ಲುಂಟಾಗುವ ವಾತಾವರಣ ಬದಲಾವಣೆ ಜನರ ಆರೋಗ್ಯಕ್ಕೆ ಕುಂದು ತರುತ್ತಿದೆ. ಸಾಧ್ಯವಾದಷ್ಟು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ನೌಕರರು ಸೈಕ್ಲಿಂಗ್ ಬಳಕೆ ಮಾಡಬೇಕು. ಇದರಿಂದ ಪರಿಸರಕ್ಕೂ ಹಾಗೂ ವಾತಾವರಣಕ್ಕೂ  ಒಳಿತುಂಟಾಗುತ್ತದೆ’ ಎಂಬ ಸಂದೇಶವನ್ನು ಜನರಿಗೆ ನೀಡುತ್ತಾ ತನ್ನ  ಪಯಣಕ್ಕೆ ಸಾರ್ಥಕತೆಯ ಟಚ್ ನೀಡಿದ್ದಾರೆ.

--ಪ್ರಸಾದ್ ಹೆಗಡೆ ಕಡಬಾಳ

Follow Us:
Download App:
  • android
  • ios