news
By Suvarna Web Desk | 02:28 PM May 19, 2017
ಅರವಿಂದ್ ಕೇಜ್ರಿವಾಲ್'ಗೆ ಹವಾಲ ಹಣ: ಕಪಿಲ್ ಮಿಶ್ರಾ ಆರೋಪ

Highlights

ಹವಾಲ ಜಾಲದ ಮೂಲಕ ಅರವಿಂದ್ ಕೇಜ್ರಿವಾಲ್'ಗೆ ಹಣ ಬಂದುಬೀಳುತ್ತಿತ್ತು ಎಂದು ಆರೋಪಿಸಿರುವ ಕಪಿಲ್ ಮಿಶ್ರಾ, ಶೆಲ್(ನಕಲಿ) ಕಂಪನಿಗಳಿಂದ ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ಹೇಗೆ ಹರಿದುಬರುತ್ತಿತ್ತು ಎಂಬುದನ್ನು ಪವರ್'ಪಾಯಿಂಟ್ ಪ್ರಸೆಂಟೇಶನ್ ಮೂಲಕ ಮಾಧ್ಯಮಗಳೆದುರು ಬಿಚ್ಚಿಟ್ಟರು.

ನವದೆಹಲಿ(ಮೇ 19): ಕಳೆದ ವರ್ಷ ನರೇಂದ್ರ ಮೋದಿಯವರು ಕೈಗೊಂಡ ಡೀಮಾನಿಟೈಸೇಶನ್ ಕ್ರಮವನ್ನು ಪ್ರಬಲವಾಗಿ ವಿರೋಧಿಸಿದವರಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಮುಖರು. ನೋಟ್'ಬ್ಯಾನ್'ನಿಂದ ಜನಸಾಮಾನ್ಯರಿಗೆ ಅತೀವ ಕಷ್ಟವಾಗುತ್ತಿದೆ ಎಂದು ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅರವಿಂದ್ ಕೇಜ್ರಿವಾಲ್ ವಿರೋಧದ ಹಿಂದೆ ಜನಪರ ಕಾಳಜಿ ಇರಲಿಲ್ಲ ಎಂದು ಮಾಜಿ ಆಪ್ ನಾಯಕ ಕಪಿಲ್ ಮಿಶ್ರಾ ಹೊಸ ಬಾಂಬ್ ಸಿಡಿಸಿದ್ದಾರೆ. ನೋಟ್'ಬ್ಯಾನ್'ನಿಂದ ತಮ್ಮ ಹವಾಲಾ ನೆಟ್ವರ್ಕ್'ಗೆ ಧಕ್ಕೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದ್ದರು ಎಂದು ಉಚ್ಚಾಟಿತ ಆಪ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ದಿಲ್ಲಿ ಸಚಿವರು, "ಡೀಮಾನಿಟೈಸೇಶನ್ ಕ್ರಮವನ್ನು ಕೇಜ್ರಿವಾಲ್ ಯಾಕೆ ಪ್ರಬಲವಾಗಿ ವಿರೋಧಿಸಿದ್ದು? ದೇಶಾದ್ಯಂತ ಸಂಚರಿಸಿ ಯಾಕೆ ಉಗ್ರ ಪ್ರತಿಭಟನೆ ನಡೆಸಿದ್ದು? ಯಾಕೆಂದರೆ, ಕಪ್ಪು ಹಣ ಹೊಂದಿರುವ ಅವರ ಜನರ ಮೇಲೆ ಐಟಿ ದಾಳಿ ನಡೆಯುತ್ತಿತ್ತು," ಎಂದು ಅಭಿಪ್ರಾಯಪಟ್ಟಿದ್ದಾರೆ.

ಹವಾಲ ಜಾಲದ ಮೂಲಕ ಅರವಿಂದ್ ಕೇಜ್ರಿವಾಲ್'ಗೆ ಹಣ ಬಂದುಬೀಳುತ್ತಿತ್ತು ಎಂದು ಆರೋಪಿಸಿರುವ ಕಪಿಲ್ ಮಿಶ್ರಾ, ಶೆಲ್(ನಕಲಿ) ಕಂಪನಿಗಳಿಂದ ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ಹೇಗೆ ಹರಿದುಬರುತ್ತಿತ್ತು ಎಂಬುದನ್ನು ಪವರ್'ಪಾಯಿಂಟ್ ಪ್ರಸೆಂಟೇಶನ್ ಮೂಲಕ ಮಾಧ್ಯಮಗಳೆದುರು ಬಿಚ್ಚಿಟ್ಟರು.

ಮುಖೇಶ್ ಕುಮಾರ್ 2 ಕೋಟಿ:
2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದಿಲ್ಲಿಯ ಉದ್ಯಮಿ ಮುಕೇಶ್ ಕುಮಾರ್ 2 ಕೋಟಿ ರೂ ದೇಣಿಗೆ ನೀಡಿದ ಘಟನೆಯನ್ನು ಕಪಿಲ್ ಮಿಶ್ರಾ ತಮ್ಮ ವಾದಕ್ಕೆ ಸಾಕ್ಷಿಯಾಗಿ ಪರಿಗಣಿಸಿದ್ದಾರೆ.

"ಆಮ್ ಆದ್ಮಿ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬರುವ 10 ದಿನ ಮೊದಲಷ್ಟೇ ದಿಲ್ಲಿ ಸರಕಾರದಿಂದ ಮುಖೇಶ್ ಕುಮಾರ್ ಕಂಪನಿಗೆ ತೆರಿಗೆ ವಂಚನೆಯ ನೋಟೀಸ್ ಕೊಡಲಾಗಿತ್ತು. ಆನಂತರ, ಈ ವ್ಯಕ್ತಿ ಎಎಪಿಗೆ 2 ಕೋಟಿ ರೂ ದೇಣಿಗೆ ಕೊಟ್ಟ. ತೆರಿಗೆ ವಂಚನೆಯ ಆರೋಪ ಎದುರಿಸುತ್ತಿದ್ದ ಮುಖೇಶ್ ಮೇಲೆ ಆಮ್ ಆದ್ಮಿ ಸರಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ?" ಎಂದು ಕಪಿಲ್ ಮಿಶ್ರಾ ಪ್ರಶ್ನಿಸುತ್ತಾರೆ.

"ನಾನು ಇಷ್ಟೆಲ್ಲಾ ಆರೋಪ ಮತ್ತು ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿದ್ದರೂ ಅರವಿಂದ್ ಕೇಜ್ರಿವಾಲ್ ಮೌನವಾಗಿಯೇ ಇದ್ದಾರೆ. ಹವಾಲ ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧ ಸಾಕ್ಷ್ಯಾಧಾರವನ್ನು ನಾನು ನೀಡಿ ಒಂದು ವಾರವಾಯ್ತು. ಈವರೆಗೂ ಎಎಪಿ ಪಕ್ಷದಿಂದ ಯಾರೂ ಕೂಡ ಸ್ಪಷ್ಟನೆ ನೀಡಲು ಮುಂದೆ ಬಂದಿಲ್ಲ," ಎಂದು ಕಪಿಲ್ ಮಿಶ್ರಾ ಹೇಳುತ್ತಾರೆ.

"ಆಮ್ ಆದ್ಮಿ ಪಕ್ಷದ ಮುಖಂಡರು ವಿದೇಶೀ ಪ್ರವಾಸಕ್ಕೆ ಯಾಕೆ ಹೋಗುತ್ತಾರೆ ಎಂಬ ಸತ್ಯ ಹೊರಬಿದ್ದ ದಿನ ಕೇಜ್ರಿವಾಲ್ ಅವರು ದೇಶವನ್ನು ತೊರೆಯಬೇಕಾಗುತ್ತದೆ," ಎಂದೂ ಕಪಿಲ್ ಮಿಶ್ರಾ ಅಭಿಪ್ರಾಯಪಡುತ್ತಾರೆ.

Show Full Article


Recommended


bottom right ad