news
By Suvarna Web Desk | 08:32 AM March 20, 2017
ಆದಿತ್ಯನಾಥರೂ ಚುಂಚನಗಿರಿ ನಾಥ ಮಠದವರೇ! ಯುಪಿ ಸಿಎಂ ಆದಿತ್ಯನಾಥ್'ಗೆ ರಾಜ್ಯದ ನಂಟು

Highlights

ಗುರು ಪರಂಪರೆಗೆ ಶ್ರೇಷ್ಠತೆಯ ಮೆರುಗು ನೀಡಿದರು. ಅದೇ ರೀತಿಯಲ್ಲಿ ಆದಿತ್ಯನಾಥರು ಮತ್ತು ನಾನು ಸಮಕಾಲೀನರು. ಸಾಕಷ್ಟುಬಾರಿ ಸಾಮಾಜಿಕ ಚಿಂತನೆಗಳನ್ನು ನಡೆಸಿದ್ದೇವೆ, ಚರ್ಚಿಸಿದ್ದೇವೆ. ಕರ್ನಾಟಕಕ್ಕೆ ಬಂದಾಗ ನಮ್ಮ ಮಠಕ್ಕೆ ಅವರು ಬರುತ್ತಾರೆ. ನಾವು ಉತ್ತರ ಪ್ರದೇಶಕ್ಕೆ ಹೋದಾಗ ಗೋರಖ್ನಾಥ ಮಠಕ್ಕೆ ಭೇಟಿ ನೀಡುತ್ತೇವೆ ಎಂದು ನಿರ್ಮಲನಾ ನಂದನಾಥರು ಹೇಳಿದ್ದಾರೆ. 

-ಕೆ.ಎಸ್.ರವಿ, ಮಂಡ್ಯ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಬಾಲಗಂಗಾಧರನಾಥ ಸ್ವಾಮೀಜಿಯವರ ಆದಿಚುಂಚನಗಿರಿ ಮಠದವರೇ! ಹೀಗೆಂದು ಹೇಳಿದಾಗ ಹಲವರ ಮನದಲ್ಲಿ ‘ಎತ್ತಣ ಆದಿಚುಂಚನಗಿರಿ ಎತ್ತಣ ಗೋರಖಪುರ' ಎನ್ನುವ ಪ್ರಶ್ನೆ ಏಳಬಹುದು. ಆದರೆ ಗೋರಖಪುರದ ಗೋರಖ್‌ನಾಥ ಶ್ರೀಗಳು ಚುಂಚನಗಿರಿಯಲ್ಲಿ ತಪಸ್ಸು ಮಾಡಿ, ಮಠ ಸ್ಥಾಪನೆ ಮಾಡಿ ಸಿದ್ಧ ಶಕ್ತಿಯನ್ನು ಕಲ್ಪಿಸಿಕೊಟ್ಟಿದ್ದರಿಂದ ನಾಥ ಪರಂಪರೆಯಲ್ಲೇ ಚುಂಚನಗಿರಿ ಮಠವೂ ಮುಂದುವರೆದಿದೆ. ಇದಕ್ಕೆ ಪೂರಕವಾಗಿ ಆದಿತ್ಯನಾಥರು ಕೂಡ ರಾಜಕಾರಣದಲ್ಲಿದ್ದರೂ ಚುಂಚನಗಿರಿ ಮಠದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಯೋಗಿ ಆದಿತ್ಯನಾಥ್‌ರಿಗೂ ಮಂಗಳೂರಿಗೂ ಅವಿನಾಭಾವ ನಂಟಿದೆ. ಆದರಿದು ರಾಜಕೀಯದ ನಂಟಲ್ಲ, ಬದಲಾಗಿ ಆಧ್ಯಾತ್ಮಿಕ ಕಾರಣದಿಂದ ಬೆಳೆದುಬಂದ ಬಾಂಧವ್ಯ!

ಹೀಗಾಗಿ ‘‘ಆದಿತ್ಯನಾಥರ ಜೊತೆ ನಮ್ಮದು ಅವಿನಾಭಾವ ಸಂಬಂಧವಲ್ಲ. ಅವರು ಕೂಡ ನಮ್ಮ ಮಠದವರೇ. ನಾಥ ಪರಂಪರೆಯಲ್ಲಿರುವುದರಿಂದ ನಾವೂ ಅವರಿಗೆ ಸೇರಿದ್ದೇವೆ'' ಎನ್ನುತ್ತಾರೆ ಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥರು.
ಆದಿತ್ಯನಾಥರ ಗುರುಗಳಾದ ಅವೈದ್ಯನಾಥರು ಹಾಗೂ ನಮ್ಮ ಗುರುದೈವರಾದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಪರಮ ಆಪ್ತರಾಗಿದ್ದರು. ಇಬ್ಬರೂ ಒಂದೇ ದಾರಿಯಲ್ಲಿ ನಡೆದು ಗುರು ಪರಂಪರೆಗೆ ಶ್ರೇಷ್ಠತೆಯ ಮೆರುಗು ನೀಡಿದರು. ಅದೇ ರೀತಿಯಲ್ಲಿ ಆದಿತ್ಯನಾಥರು ಮತ್ತು ನಾನು ಸಮಕಾಲೀನರು. ಸಾಕಷ್ಟುಬಾರಿ ಸಾಮಾಜಿಕ ಚಿಂತನೆಗಳನ್ನು ನಡೆಸಿದ್ದೇವೆ, ಚರ್ಚಿಸಿದ್ದೇವೆ. ಕರ್ನಾಟಕಕ್ಕೆ ಬಂದಾಗ ನಮ್ಮ ಮಠಕ್ಕೆ ಅವರು ಬರುತ್ತಾರೆ. ನಾವು ಉತ್ತರ ಪ್ರದೇಶಕ್ಕೆ ಹೋದಾಗ ಗೋರಖ್‌ನಾಥ ಮಠಕ್ಕೆ ಭೇಟಿ ನೀಡುತ್ತೇವೆ ಎಂದು ನಿರ್ಮಲನಾ ನಂದನಾಥರು ಹೇಳಿದ್ದಾರೆ. 
ಚುಂಚನಗಿರಿಗೆ ಭೇಟಿ: ಈ ಹಿಂದೆ ಬಾಲಗಂಗಾಧರನಾಥ ಶ್ರೀಗಳು ಭೈರವೈಕ್ಯರಾದ ಸಂದರ್ಭದಲ್ಲಿ ಶಿವಗಣರಾಧನೆಯ ದಿನ ಚುಂಚನಗಿರಿಗೆ ಆದಿತ್ಯನಾಥರು ಆಗಮಿಸಿದ್ದರು. ಅಲ್ಲದೆ, ಅನೇಕ ಬಾರಿ ಚುಂಚುನಗಿರಿ ನಿರ್ಮಲಾನಂದನಾಥರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ನಾಥ ಪರಂಪರೆಯನ್ನು ಮುಂದುವ ರೆಸಿಕೊಂಡು ಹೋಗುತ್ತಿದ್ದಾರೆ.

-ಸಂದೀಪ್ ವಾಗ್ಲೆ, ಮಂಗಳೂರು

ನಾಥ ಸಂಪ್ರದಾಯದ ಪ್ರಮುಖರೂ :ಯೋಗಿ ಆದಿತ್ಯನಾಥ್‌ ಗೋರಖ್‌ಪುರದ ಮಠಾಧೀಶರು ಮಾತ್ರವಲ್ಲ, ನಾಥ ಸಂಪ್ರದಾಯದ ಪ್ರಮುಖರೂ ಹೌದು. ಮಂಗಳೂರಿನ ಕದ್ರಿಯಲ್ಲೂ ನಾಥ ಸಂಪ್ರದಾಯದ ಯೋಗೇಶ್ವರ ಮಠ ಇದೆ. ಇಡೀ ನಾಥ ಸಂಪ್ರದಾಯದ ಏಕೈಕ ‘ರಾಜ'ಯೋಗಿಯೂ ಇಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡುವುದು ಇದೇ ಯೋಗಿ ಆದಿತ್ಯನಾಥ್‌. ಕದ್ರಿ ಯೋಗೇಶ್ವರ ಮಠದ ರಾಜರ ಆಯ್ಕೆ ಮತ್ತು ಪಟ್ಟಾಭಿಷೇಕ 12 ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ.

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ನಾಥ ಸಂಪ್ರದಾಯದ ಪ್ರಮುಖರಾಗಿರುವ ಆದಿತ್ಯನಾಥ್‌ ಮಂಗಳೂರಿನ ಯೋಗೇಶ್ವರ ಮಠ ಹಾಗೂ ಮಂಡ್ಯದ ಆದಿಚುಂಚನಗಿರಿ ಮಠದ ಜತೆಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಎರಡೂ ಮಠಕ್ಕೆ ಹಿಂದೆ ಅವರು ಭೇಟಿ ಕೊಟ್ಟದ್ದೂ ಇದೆ. ಜತೆಗೆ, ಆದಿಚುಂಚನಗಿರಿ ಶ್ರೀಗಳೂ ಉತ್ತರಪ್ರದೇಶಕ್ಕೆ ಭೇಟಿ ಕೊಟ್ಟಾಗ ಗೋರಖ್‌ಪುರ ಮಠಕ್ಕೆ ತಪ್ಪದೆ ಭೇಟಿ ಕೊಡುತ್ತಾರೆ.

ಅದಕ್ಕೂ ಮೊದಲು ಮಹಾರಾಷ್ಟ್ರದ ತ್ರಯಂಬಕೇಶ್ವರದಲ್ಲಿ ಕುಂಭಮೇಳ ನಡೆಯುತ್ತದೆ. ಅಲ್ಲಿ ನಾಥ ಸಂಪ್ರದಾ ಯದ 12 ಪಂಥಗಳ ಯೋಗಿಗಳ ಉಪಸ್ಥಿತಿಯಲ್ಲಿ ಮುಂದಿನ ‘ರಾಜ' ಯೋಗಿಗಳನ್ನು ಗುರುತಿಸ ಲಾಗುತ್ತದೆ. ಕೊನೆಯದಾಗಿ ‘ರಾಜ' ಅಭ್ಯರ್ಥಿಗಳ ಪೂರ್ವಾಪರ ವಿಶ್ಲೇಷಿಸಿ, ಅಂತಿಮ ಗೊಳಿಸುವ ಅಧಿಕಾರ ಇರುವುದು ಅಖಿಲ ಭಾರತ ವರ್ಷೀಯ ಬೇಷ್‌ ಬಾರಾಪಂಥ್‌ ಅಧ್ಯಕ್ಷರಿಗೆ ಮಾತ್ರ. ಕಳೆದ ಒಂದೂವರೆ ದಶಕದಿಂದ ಬಾರಾಪಂಥ್‌ ಅಧ್ಯಕ್ಷರಾಗಿ ರುವವರು ಯೋಗಿ ಆದಿತ್ಯನಾಥ್‌. ಹಾಗಾಗಿ ಕಳೆದ ಇಬ್ಬರು ‘ರಾಜ'ಯೋಗಿ ಗಳನ್ನು ಅವರೇ ಆಯ್ಕೆ ಮಾಡಿ ಕದ್ರಿ ಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರಿಗೆ ಬಂದಿದ್ದರು: ತ್ರಯಂಬಕೇಶ್ವರದಲ್ಲಿ ಆಯ್ಕೆಯಾದ ‘ರಾಜ'ಯೋಗಿ ಸಂತರೊಡಗೂಡಿ ಅಲ್ಲಿಂದ ನಡೆದುಕೊಂಡೇ ಝುಂಡಿ ಯಾತ್ರೆಯ ಮೂಲಕ ಮಠಕ್ಕೆ ತಲುಪ ಬೇಕು. ಸುಮಾರು 6 ತಿಂಗಳ ಕಾಲಾವಧಿ ಇದಕ್ಕೆ ಹಿಡಿಯುತ್ತದೆ. ಕದ್ರಿ ಮಠ ತಲುಪಿದ ಬಳಿಕ ಪಟ್ಟಾಭಿಷೇಕ ನಡೆ ಯುತ್ತದೆ. ನಾಥ ಪಂಥದ ಅಧ್ಯಕ್ಷರು ಝುಂಡಿ ಯಾತ್ರೆಯಲ್ಲಿ ಭಾಗವಹಿಸ ಬೇಕೆನ್ನುವ ನಿಯಮವಿಲ್ಲ. ಹಾಗಾಗಿ ಝುಂಡಿ ಯಾತ್ರೆಯಲ್ಲಿ ಆದಿತ್ಯನಾಥ್‌ ಭಾಗವಹಿಸಿರಲಿಲ್ಲ. 
ಆದರೆ, ಕದ್ರಿಯ ಮಠದಲ್ಲಿ ನಡೆದ ರಾಜರ ಪಟ್ಟಾಭಿ ಷೇಕದಲ್ಲಿ ಹಾಜರಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಕದ್ರಿಯಲ್ಲಿ ಪಟ್ಟಾಭಿಷೇಕ ನಡೆದಿತ್ತು. ಮೊದಲ ದಿನವೇ ಆಗಮಿಸಿದ್ದ ಯೋಗಿ ಆದಿತ್ಯನಾಥ್‌ ಪಟ್ಟಾಭಿಷೇಕಕ್ಕೆ ಚಾಲನೆ ನೀಡಿದ್ದರು. ಅದಕ್ಕೂ 12 ವರ್ಷ ಮೊದಲು ನಡೆದ ಪಟ್ಟಾಭಿಷೇಕಕ್ಕೂ ಮಂಗಳೂರಿಗೆ ಬಂದಿದ್ದರು.
ಜಾತಿ ವಿನಾಶದ ಮಾತನಾಡಿದ್ದರು

ಪ್ರತಿಬಾರಿ ಮಠಕ್ಕೆ ಬಂದಾಗಲೂ ಆದಿತ್ಯನಾಥ್‌ಜಿ ಭಕ್ತರಿಗೆ ಪ್ರವಚನ ನೀಡುತ್ತಿದ್ದರು. ಕಳೆದ ವರ್ಷ, ಹಿಂದೂ ಧರ್ಮದಲ್ಲಿ ಜಾತಿಪದ್ಧತಿ ವಿನಾಶದ ಕುರಿತು ಮಾತನಾಡಿದ್ದರು. ಹಿಂದೂಗಳಲ್ಲಿ ಜಾತಿ ನೋಡಬಾರದು, ಎಲ್ಲರೂ ಒಂದೇ ಜಾತಿ. ಅದನ್ನು ಪಾಲಿಸುವಂತೆ ಕರೆ ನೀಡಿದ್ದರು ಎಂದು ಮಠದ ಭಕ್ತರಲ್ಲಿ ಒಬ್ಬರಾದ ಸಂಜಯ್‌ ನೆನಪಿಸಿಕೊಳ್ಳುತ್ತಾರೆ.

ಸದಾ ಮಾರ್ಗದರ್ಶಕ: ಆದಿತ್ಯನಾಥ್‌ ಮೊದಲ ಬಾರಿ 1998ರಲ್ಲಿ ಸಂಸದರಾದ ಬಳಿಕ ಸಂಸದೀಯ ಸಮಿತಿಯೊಂದಿಗೆ ಮಂಗಳೂರಿಗೆ ಆಗಮಿಸಿದ್ದರು. ಆ ವೇಳೆಯೂ ಮಠಕ್ಕೆ ಭೇಟಿ ನೀಡಿದ್ದರು. ಇನ್ನು ಮಠದ ಅಭಿವೃದ್ಧಿ ಕುರಿತು ಕಾಲಕಾಲಕ್ಕೆ ಸೂಕ್ತ ಸಲಹೆ ನೀಡುತ್ತಾ ಬಂದಿದ್ದಾರೆ. ಅವರ ಮೇಲುಸ್ತುವಾರಿ ಹೊಂದಿರುವ ನಾಥ ಸಂಪ್ರದಾಯದ ‘ವಿಸಿಟಿಂಗ್‌ ಟೀಮ್‌' ವರ್ಷಕ್ಕೊಮ್ಮೆ ಕದ್ರಿ ಮಠಕ್ಕೆ ಬಂದು ಇಲ್ಲಿನ ಕುಂದು-ಕೊರತೆಗಳನ್ನು ವೀಕ್ಷಿಸುತ್ತದೆ. ಮಠದ ರಾಜರಿಗೂ ಆದಿತ್ಯನಾಥ್‌ಜಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದು ನಾಥ ಪಂಥ ಪ್ರಚಾರ ಸಮಿತಿ ರಾಜ್ಯ ಕಾರ್ಯದರ್ಶಿ ಕೇಶವನಾಥ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. 

(ಕನ್ನಡಪ್ರಭ ವಾರ್ತೆ)

 

Show Full Article


Recommended


bottom right ad