Asianet Suvarna News Asianet Suvarna News

ಗೃಹಿಣಿಯರಿಗಾಗಿ 5 ಹಣಕಾಸು ಸಲಹೆಗಳು

ಪದೇಪದೇ ಏರಿಳಿತ ಕಾಣುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ತನ್ನ ಕುಟುಂಬದ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಗೃಹಿಣಿಯ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಗೃಹಿಣಿಯಾಗಿ ಕುಟುಂಬದ ಹಣಕಾಸು ಸುರಕ್ಷತೆಯನ್ನು ಹೇಗೆ ಖಾತ್ರಿಪಡಿಸಬಹುದು ಎಂದು ತಿಳಿಯಿರಿ.

5 Financial Planning Tips for Housewives to Secure their Future

ಭಾರತದಂತಹ ದೇಶದಲ್ಲಿ, ಹಣಕಾಸು ವ್ಯವಹಾರಗಳನ್ನು ಕುಟುಂಬದ ಪುರುಷರೇ ನೋಡಿಕೊಳ್ಳುವುದು ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಆದರೆ ಬದಲಾಗುತ್ತಿರುವ ಕಾಲ ಹಾಗೂ ಹಣದುಬ್ಬರದಂತಹ ಸನ್ನಿವೇಶಗಳಿಗೆ ತಕ್ಕಂತೆ ಗೃಹಿಣಿ (ಹಾಗೂ ಉದ್ಯೋಗ ಮಾಡುವ ಮಹಿಳೆಯರು) ಕುಟುಂಬದ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದ್ದಾರಲ್ಲದೇ, ಅದರಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ.

ಪದೇಪದೇ ಏರಿಳಿತ ಕಾಣುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ತನ್ನ ಕುಟುಂಬದ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಗೃಹಿಣಿಯ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಮನೆಯ ಡಬ್ಬಿಗಳಲ್ಲಿ ಹಣ ಕೂಡಿಡುವ ಹಳೇ ಸಂಪ್ರದಾಯದ ಸ್ಥಳವನ್ನು ಇಂದು ಬ್ಯಾಂಕುಗಳು ಹಾಗೂ ಹೂಡಿಕೆಯ ತಾಣಗಳು ಪಡೆದುಕೊಂಡಿವೆ. ಇಲ್ಲಿ ಹಣ ಕೇವಲ ಜಮೆಯಾಗದೇ, ವೃದ್ಧಿಯಾಗುವುದು ಕೂಡಾ.

ತಾಂತ್ರಿಕವಾಗಿ ನೋಡುವುದಾದರೆ ಗೃಹಿಣಿಯು ಕುಟುಂಬದಲ್ಲಿ ಸಂಪಾದನೆ ಮಾಡುವ ಸದಸ್ಯೆಯಲ್ಲ, ಆದರೆ ಆಕೆಯ ಹೆಗಲ ಮೇಲೆ  ಕುಟುಂಬದ ಹಣಕಾಸು ವ್ಯವಹಾರವನ್ನು ನಿಭಾಯಿಸುವ ಮಹತ್ವದ ಜವಾಬ್ದಾರಿಯಿದೆ.

ಇಂದಿನ ಗೃಹಿಣಿಯರು ಸುಶಿಕ್ಷಿತರಾಗಿದ್ದು, ಸಮಾಜದ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಹಣಕಾಸು ಸವಾಲುಗಳನ್ನು  ನಿಭಾಯಿಸುಲು ಎಂದಿಗಿಂತ  ಹೆಚ್ಚು  ಸಮರ್ಥರಾಗಿದ್ದಾರೆ.

ಗೃಹಿಣಿಯರು ಯಾವ ರೀತಿ ಹಣಕಾಸು ಯೋಜನೆಗಳನ್ನು ಹಾಕಿಕೊಳ್ಳಬಹುದು ಎಂಬುವುದರ ಬಗ್ಗೆ ಇಲ್ಲಿದೆ ಕೆಲವು ವಿಚಾರಗಳು.

ಏನಾದರೂ ಕೆಟ್ಟದ್ದು ಸಂಭವಿಸಿದಾಗ:

ಈ ವಿಷಯವನ್ನು ಒಂದು ಉದಾಹರಣೆ ಮೂಲಕ ತಿಳಿದುಕೊಳ್ಳೋಣ. ಕುಟುಂಬದ ಸಂಪಾದಿಸುವ ಏಕೈಕ ಸದಸ್ಯ ನಿಧನ ಹೊಂದಿದಲ್ಲಿ, ಈವರೆಗೆ ಯಾವುದೇ ಹಣಕಾಸು ವ್ಯವಹಾರಗಳಲ್ಲಿ ತಲೆಹಾಕದ ಆತನ ಪತ್ನಿಯು ದಾರಿತೋಚದಂತಾಗುತ್ತಾಳೆ. ಆ ಸಂದರ್ಭದಲ್ಲಿ ಮೃತಪಟ್ಟವನ ಉಳಿತಾಯ ಅಥವಾ ಹೂಡಿಕೆಯ ಬಗ್ಗೆ ಆಕೆಯು ತಿಳಿಯದಿರುವ ಸಾಧ್ಯತೆಗಳು ಹೆಚ್ಚಿವೆ. ಮೃತ ಪತಿಯ ಹಣಕಾಸು ನಿರ್ಧಾರಗಳ ಬಗ್ಗೆ ತಿಳುವಳಿಕೆಯ ಕೊರತೆಯು ಆತನ ಪತ್ನಿಯನ್ನು ಅಸಹಾಯಕಳನ್ನಾಗಿ ಮಾಡುತ್ತದೆ.

ಒಂದು ವೇಳೆ ಪತಿಯು ತನ್ನ ಹಣಕಾಸು ವ್ಯವಹಾರ, ಹೂಡಿಕೆಗಳ ಬಗ್ಗೆ ಪತ್ನಿಯನ್ನು ಕೂಡಾ ಶಿಕ್ಷಿತಳನ್ನಾಗಿ ಮಾಡಿರುತ್ತಿದ್ದರೆ, ಕುಟುಂಬ ಹಾಗೂ ಮಕ್ಕಳ ಭವಿಷ್ಯವನ್ನು ಆಕೆಯು ಸಮರ್ಥವಾಗಿ ನಿಭಾಯಿಸಬಹುದು.

ಹಣಕಾಸು ನಿರ್ವಹಣೆ:

ಸಾಮಾನ್ಯವಾಗಿ, ಸಾಲ, ಮನೆ ಬಾಡಿಗೆ, ಬಿಲ್ ಪಾವತಿ ಮುಂತಾದವುಗಳನ್ನು ಮನೆಯ ಗಂಡಸರು ನೋಡಿಕೊಂಡರೆ, ಸಾಮಾನು ಹಾಗೂ ಮತ್ತಿತರ ಖರೀದಿಗಳನ್ನು ಮಹಿಳೆಯರು ನೋಡಿಕೊಳ್ಳುತ್ತಾರೆ. ಆದುದರಿಂದ ಮನೆಯ ಮಹಿಳೆಯರಿಗೆ ಬಜೆಟಿಂಗ್ ಮಾಡುವ ಅಗತ್ಯ ಹೆಚ್ಚಿದೆ. ಉಳಿತಾಯ ಮಾಡುವ ವಿಷಯದಲ್ಲಿ ಮಹಿಳೆಯರು ಹೆಚ್ಚು ಚಾಣಾಕ್ಷರು. ಆದುದರಿಂದ ಮನೆ ಹಾಗೂ ಮಕ್ಕಳ  ಭವಿಷ್ಯದ ಬಗ್ಗೆಗಿನ ಹಣಕಾಸು ಯೋಜನೆಗಳನ್ನು ಮಹಿಳೆಯರು ಉತ್ತಮವಾಗಿ ನಿರ್ಧರಿಸಬಲ್ಲರು. ಆದುದರಿಂದ ಹಣಕಾಸು ವ್ಯವಹಾರ/ ಯೋಜನೆಗಳಲ್ಲಿ ಮನೆಯ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಆತ್ಯಗತ್ಯವಾಗಿದೆ.

ಗೃಹಿಣಿಯರಿಗೆ 5 ಹಣಕಾಸು ಟಿಪ್ಸ್:

1 ಮೊತ್ತಮೊದಲಾಗಿ, ಕುಟುಂಬದ ಹಣಕಾಸು ವ್ಯವಹಾರ, ಹೂಡಿಕೆ, ವಿಮೆ ಮೊದಲಾದ ವಿಚಾರಗಳಲ್ಲಿ  ಗೃಹಿಣಿಯರು ಆಸಕ್ತಿವಹಿಸಬೇಕು. ಗೃಹಿಣಿಯಾಗಿರುವ ನೆಲೆಯಲ್ಲಿ, ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ತೆರೆದು, ನೀವು ಉಳಿತಾಯ ಮಾಡುವ ಹಣವನ್ನು ಅದರಲ್ಲಿ ಜಮೆ ಮಾಡಬಹುದಾಗಿದೆ.  ಫಿಕ್ಸೆಡ್ ಠೇವಣಿ ಖಾತೆ ತೆರೆದು, ಹಣವನ್ನು ಜಮೆ ಮಾಡುವ ಮೂಲಕ ಅದನ್ನು ವೃದ್ಧಿಸಬಹುದು.  ಉದಾಹರಣೆಗೆ ರೂ. 10000 ಯ ಎಫ್’ಡಿಯು ಶೇ.6.5ರ ದರದಲ್ಲಿ 5  ವರ್ಷಗಳ ಬಳಿಕ ರೂ. 13700 ಆಗುತ್ತದೆ.

2 ಪ್ರತಿ ಹೂಡಿಕೆ ಯೋಜನೆಯಲ್ಲಿ ತನ್ನನ್ನು ಸಹ-ಖಾತೆದಾರರನ್ನಾಗಿ (Joint Holder) ಮಾಡುವಂತೆ ಪತಿಗೆ ಹೇಳಬೇಕು. ಒಂದು ವೇಳೆ  ಅದು ಸಾಧ್ಯವಿಲ್ಲದಿದ್ದಲ್ಲಿ, ಅಥವಾ ಪಿಂಚಣಿ ಖಾತೆ ಮುಂತಾದವುಗಳಲ್ಲಿ, ಪತ್ನಿಯ ಹೆಸರನ್ನು ನಾಮಿನಿ (ನಾಮನಿರ್ದೇಶನ)ಯಾಗಿ ಸೇರ್ಪಡೆಗೊಳಿಸಬೇಕು. ಇದು ಭವಿಷ್ಯದಲ್ಲಿ ನೆರವಾಗುತ್ತದೆ.

3  ಪತಿಯ ಪ್ರತಿ ಹೂಡಿಕೆ, ಬ್ಯಾಂಕ್ ಖಾತೆ,  ದಾಖಲೆಗಳು, ಲಾಗಿನ್ ಐಡಿ ಮುಂತಾದವುಗಳ ವಿವರಗಳನ್ನು  ಗೃಹಿಣಿಯು ತನ್ನ ಬಳಿ ಇಟ್ಟುಕೊಳ್ಳಬೇಕು.  ವಿಮೆ, ಆರೋಗ್ಯ ವಿಮೆ, ಪಿಪಿಎಎಫ್,  ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್ ಖಾತೆ ಮುಂತಾದವುಗಳ ಬಗ್ಗೆ ತಿಳಿದುಕೊಂಡಿರಬೇಕು.

4  ಗೃಹಿಣಿಯಾಗಿ ಮಾಡಬಹುದಾದ ಉತ್ತಮ ಕ್ರಮವೆಂದರೆ ಹಣವನ್ನು ಉಳಿತಾಯ ಮಾಡುವುದು ಹಾಗೂ ಹೂಡಿಕೆ ಮಾಡುವುದು.  ರೂ. 1000 ಉಳಿತಾಯ ಮಾಡಿ ಅದನ್ನು ಮ್ಯೂಚುವಲ್ ಫಂಡ್’ಗಳಲ್ಲಿ ಹೂಡಿದರೆ ಶೇ. 15 ದರದಲ್ಲಿ ಅದರಿಂದ 30 ವರ್ಷಗಳಲ್ಲಿ ರೂ.70 ಲಕ್ಷಗಳನ್ನು ಪಡೆಯಬಹುದಾಗಿದೆ. ಅಂತಹ ಹಲವಾರು ಯೋಜನೆಗಳು  ಮಾರುಕಟ್ಟೆಯಲ್ಲಿ ಲಭ್ಯವಿದೆ.

5  ಇನ್ನೊಂದು ಬಹಳ ಮುಖ್ಯವಾದ ವಿಷಯವೆಂದರೆ, ಪತಿಯ ಅಂತಿಮ ವಿಲ್’ನ್ನು ಸಿದ್ಧಪಡಿಸುವಾಗ ಪತ್ನಿಯ ಉಪಸ್ಥಿತಿ ಹಾಗೂ ಅಭಿಪ್ರಾಯವಿರಬೇಕು. ಅದರಲ್ಲಿ ಏನು ಬರೆಯಲಾಗಿದೆ ಎಂಬುವುದರ ಬಗ್ಗೆ  ಅವಳಿಗೆ ತಿಳಿದಿರಬೇಕು.

ಇದರ ಜೊತೆ  ಸ್ವಲ್ಪ ಆಸಕ್ತಿ, ಅಧ್ಯಯನ ಹಾಗೂ ಪ್ರಯತ್ನಗಳನ್ನು ಮಾಡಿದ್ದಲ್ಲಿ, ಗೃಹಿಣಿಯು ಅನಿರೀಕ್ಷಿತ ಬೆಳವಣಿಗೆಗಳನ್ನು ಸಮರ್ಥವಾಗಿ ಎದುರಿಸುವಂತೆ ಆರ್ಥಿಕವಾಗಿ ಸದೃಢವಾಗಬಹುದಾಗಿದೆ.

5 Financial Planning Tips for Housewives to Secure their Future

-ಆಧಿಲ್ ಶೆಟ್ಟಿ. ಸಿಇಒ-ಬ್ಯಾಂಕ್ ಬಝಾರ್

(ಬ್ಯಾಂಕ್ ಬಝಾರ್ ಒಂದು ಆನ್ ಲೈನ್ ಮಾರುಕಟ್ಟೆಯಾಗಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ  ಮತ್ತು ವಿಮೆ ಮುಂತಾದವಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.)

Follow Us:
Download App:
  • android
  • ios