Asianet Suvarna News Asianet Suvarna News

ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ

ಯೋಗೋತ್ಸವವು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಲಿದೆ. ಸಿಂಗಾಪೂರ್, ಮಲೇಷಿಯಾ, ಥೈಲ್ಯಾಂಡ್, ವಿಯೇಟ್ನಾಂ, ಚೀನಾ, ಇರಾನ್, ದುಬಾಯಿ ಮೊದಲಾದ ದೇಶಗಳಿಂದ 100 ಯೋಗಪಟುಗಳು, ಭಾರತದಿಂದ 400 ಯೋಗ ಪಟುಗಳು ಭಾಗಹಿಸಲಿದ್ದಾರೆ.

4 Days Yoga Programe Celebraton at Dharmasthala

ಧರ್ಮಸ್ಥಳ(ನ.21):ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಿಂದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಬೆಳ್ಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ ಹಾಗೂ 2ನೇ ಒಕ್ಕೂಟ ಯೋಗ ಫೆಡರೇಶನ್ ಕ್ರೀಡಾ ಕಪ್-2017 ಧರ್ಮಸ್ಥಳದಲ್ಲಿ ನ.21ರಿಂದ 24ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಭಾರತೀಯ ಯೋಗ ಫೆಡರೇಶನ್ ಮತ್ತು ಕರ್ನಾಟಕ ಯೋಗ ಅಮೆಚ್ಯೂರ್ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಹಿನ್ನೆಲೆ ಹಾಗೂ ಉದ್ದೇಶಗಳು: ಆರೋಗ್ಯವಂತ ಹಾಗೂ ಬುದ್ಧಿವಂತ ಯುವ ಜನಾಂಗದ ನಿರ್ಮಾಣ ಕಾರ್ಯಕ್ರಮದ ಮುಖ್ಯ ಉದ್ದೇಶ. ಭಾರತೀಯ ಪರಂಪರೆಯಾದ ಯೋಗವನ್ನುಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಕಳೆದ 25 ವರ್ಷಗಳಿಂದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯು ಯೋಗ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ ಯೋಗ ಶಿಕ್ಷಣವನ್ನು 3 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ನೀಡಿ, ಭಾರತದಲ್ಲೇ ಪ್ರಪ್ರಥಮ ಬಾರಿಗೆ ಯೋಗ ಕ್ಷೇತ್ರದಲ್ಲಿ ಗಿನ್ನಿಸ್ ವಿಶ್ವದಾಖಲೆಯನ್ನು ನಿರ್ಮಿಸುವುದರೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಯು ವಿಶ್ವಮಾನ್ಯವಾಗಿದೆ.

ದೇಶದ ಜನರು ನಮ್ಮ ಭಾರತೀಯ ಪರಂಪರೆಯಾದ ಯೋಗಕ್ಕೆ ನೀಡುವ ಪ್ರಾಮುಖ್ಯತೆಯನ್ನು ಪ್ರತ್ಯಕ್ಷವಾಗಿ ನಮ್ಮಯುವ ಜನಾಂಗಕ್ಕೆ ತೋರಿಸಿಕೊಟ್ಟು ಯೋಗಾಭ್ಯಾಸವನ್ನು ತಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಸದೃಢ ಹಾಗೂ ಸ್ವಾಸ್ಥ್ಯ ಭಾರತವನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದು.ದೇಶದ ಸಂಸ್ಕತಿಯಾದ ಯೋಗ ವಿದ್ಯೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದಕ್ಕೆ ಈ ಯೋಗೋತ್ಸವದಲ್ಲಿ ನಡೆಯುವ ಪ್ರಾತ್ಯಕ್ಷಿಕೆ ಹಾಗೂ ಸ್ಪರ್ಧೆಗಳು ವಿಶೇಷ ವೇದಿಕೆ ಒದಗಿಸಿಕೊಡಲಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ವಿಜ್ಞಾನದ ಮಹತ್ವ, ಸಂಶೋಧನೆ, ವಿಚಾರ ವಿನಿಮಯ ಹಾಗೂ ಒಡಂಬಡಿಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಈ ಯೋಗೋತ್ಸವವು ಉತ್ತಮ ವೇದಿಕೆಯಾಗಲಿದೆ.

ವಿದೇಶಗಳಿಂದ 100ಕ್ಕೂ ಅಧಿಕ ಮಂದಿ ಭಾಗಿ: ಯೋಗೋತ್ಸವವು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯಲಿದೆ. ಸಿಂಗಾಪೂರ್, ಮಲೇಷಿಯಾ, ಥೈಲ್ಯಾಂಡ್, ವಿಯೇಟ್ನಾಂ, ಚೀನಾ, ಇರಾನ್, ದುಬಾಯಿ ಮೊದಲಾದ ದೇಶಗಳಿಂದ 100 ಯೋಗಪಟುಗಳು, ಭಾರತದಿಂದ 400 ಯೋಗ ಪಟುಗಳು ಭಾಗಹಿಸಲಿದ್ದಾರೆ.

ಆರು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ವಯೋಮಾನದವರಿಗೆ: ಯೋಗ ಪ್ರಾತ್ಯಕ್ಷಿಕೆಗಳು, ಯೋಗ ನೃತ್ಯ ಪ್ರಾತ್ಯಕ್ಷಿಕೆಗಳ ಸ್ಪರ್ಧೆ,ಅಂತಾರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆ, ಪರಿಣತರಿಂದ ವಿಚಾರಗೋಷ್ಠಿಗಳು ಹಾಗೂ ಸತ್ಸಂಗ ನಡೆಯಲಿದೆ.

ಅಂತಾರಾಷ್ಟ್ರೀಯ ಯೋಗೋತ್ಸವಕ್ಕೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದ್ದು, ಶಾಂತಿವನ ಟ್ರಸ್ಟ್‌ನ ಟ್ರಸ್ಟಿ ಡಿ. ಹರ್ಷೇಂದ್ರಕುಮಾರ್ ಕಾರ್ಯಾಧ್ಯಕ್ಷರಾಗಿದ್ದು ಸಕಲ ಸಿದ್ಧತೆಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸಮಿತಿಯು ಈಗಾಗಲೇ ಪೂರ್ವಭಾವೀ ಸಭೆಗಳನ್ನು ನಡೆಸಿ, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸ್ಪರ್ಧೆಗಳು ನಡೆಯುವ ಸಂದರ್ಭದಲ್ಲಿ ಮೂರೂ ದಿನ ಸಂಜೆ ಮನೋರಂಜನೆ ಕಾರ್ಯಕ್ರಮಗಳನ್ನು ವಿಶೇಷ ಕಲಾ ತಂಡಗಳಿಂದ ಏರ್ಪಡಿಸಲಾಗಿದೆ.

Follow Us:
Download App:
  • android
  • ios