Asianet Suvarna News Asianet Suvarna News

ನಕಲಿ ಕಂಪನಿ ನಿರ್ದೇಶಕರಲ್ಲಿ ರಾಜ್ಯದ 31 ಸಾವಿರ ಹೆಸರು!

ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚಿಸಲು ಸ್ಥಾಪಿಸಲಾಗುವ ನಕಲಿ ಕಂಪನಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಇದೀಗ, ಇಂಥ ಕಂಪನಿಗಳ 1 ಲಕ್ಷಕ್ಕೂ ಹೆಚ್ಚು ನಿರ್ದೇಶಕರ ಹೆಸರನ್ನು ಬಹಿರಂಗಪಡಿಸಿದೆ.

31K Names from Karnataka figure in Name and Shame

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚಿಸಲು ಸ್ಥಾಪಿಸಲಾಗುವ ನಕಲಿ ಕಂಪನಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಇದೀಗ, ಇಂಥ ಕಂಪನಿಗಳ 1 ಲಕ್ಷಕ್ಕೂ ಹೆಚ್ಚು ನಿರ್ದೇಶಕರ ಹೆಸರನ್ನು ಬಹಿರಂಗಪಡಿಸಿದೆ.

ಇಂಥ ಅನರ್ಹ ನಿರ್ದೇಶಕರ ಪಟ್ಟಿಯನ್ನು ಕೇಂದ್ರ ಕಂಪನಿ ವ್ಯವಹಾರಗಳ ಸಚಿವಾಲಯವು ತನ್ನ ‘ನೇಮ್ ಆ್ಯಂಡ್ ಶೇಮ್’ (ಹೆಸರಿಸಿ.. ಅವಮಾನಿಸಿ) ನೀತಿಯಡಿ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಅನೇಕ ಘಟಾನುಘಟಿ ರಾಜಕಾರಣಿಗಳು ಹಾಗೂ ಉದ್ಯಮಿಗಳ ಹೆಸರುಗಳಿವೆ. ಕರ್ನಾಟಕದ 31737 ಅನರ್ಹ ನಿರ್ದೇಶಕರ ಹೆಸರುಗಳೂ ಇದರಲ್ಲಿವೆ.

ಇವರಲ್ಲಿ ಎಂ ಆ್ಯಂಡ್ ಡಬ್ಲ್ಯು ಅಸೋಸಿಯೇಟ್ಸ್’ನ ನಂದಿನಿ ಆಳ್ವ ಮತ್ತು ಪ್ರಿಯಾಂಕಾ ಒಬೆರಾಯ್ ಹೆಸರಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಶಿಕಲಾ ಜೊಲ್ಲೆ ಅವರ ಹೆಸರುಗಳೂ ಉಲ್ಲೇಖವಾಗಿವೆ.

ಕರ್ನಾಟಕದಲ್ಲಿ 2014-19ನೇ ಸಾಲಿನ 13,199 ಹಾಗೂ 2015-20 ನೇ ಸಾಲಿನ 18,521 ಕಂಪನಿ ನಿರ್ದೇಶಕರ ಹೆಸರುಗಳೂ ಇವೆ.

2014ರಿಂದ 2019 ಹಾಗೂ 2015ರಿಂದ 2020- ಹೀಗೆ ಎರಡು ವಿಭಾಗಗಳಲ್ಲಿ ಅನರ್ಹ ನಿರ್ದೇಶಕರ ಪಟ್ಟಿಯನ್ನು ಸಚಿವಾಲಯದ ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ. ಸತತ 3 ವರ್ಷ ತಮ್ಮ ವಾರ್ಷಿಕ ಹಣಕಾಸು ರಿಟರ್ನ್ಸ್‌ಗಳನ್ನು ಸರ್ಕಾರಕ್ಕೆ ಸಲ್ಲಿಸದ ಕಂಪನಿಗಳನ್ನು ‘ನಕಲಿ ಕಂಪನಿ’ಗಳು ಎಂದು ಕಂಪನಿ ಕಾಯ್ದೆಯ 164(2)(ಎ) ಅಡಿ ಪರಿಗಣಿಸಲಾಗಿದ್ದು, ಅವುಗಳ ನಿರ್ದೇಶಕರನ್ನು ಅನರ್ಹ ನಿರ್ದೇಶಕರು ಎಂದು ಘೋಷಿಸಲಾಗಿದೆ.

ಪಟ್ಟಿಯಲ್ಲಿ ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿ, ಜಯಲಿತಾರ ಆಪ್ತೆ, ಅಣ್ಣಾ ಡಿಎಂಕೆ ‘ಪದಚ್ಯುತ’ ನಾಯಕಿ ವಿ.ಕೆ. ಶಶಿಕಲಾ, ಕೇರಳ ವಿಧಾನಸಭೆ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರು ಹಾಗೂ ಅವರು ನಿರ್ದೇಶಕರಾಗಿದ್ದ ‘ನಕಲಿ’ ಕಂಪನಿಗಳ ಹೆಸರೂ ಇವೆ.

ಕೇಂದ್ರ ಸರ್ಕಾರ ಕಳೆದ ಕೆಲ ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಶೆಲ್ ಕಂಪನಿಗಳನ್ನು ಗುರುತಿಸಿ ಅವುಗಳ ನೋಂದಣಿ ರದ್ದುಪಡಿಸಿದೆ. ಅಲ್ಲದೆ ಈ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದ 1.06 ಲಕ್ಷ ನಿರ್ದೇಶಕರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಿದೆ.

Follow Us:
Download App:
  • android
  • ios