Asianet Suvarna News Asianet Suvarna News

‘ಮೈಸೂರಲ್ಲಿ ಮತ್ತೊಂದು ಹೊಸ ತಾಲೂಕು’

ಮೈಸೂರಿನಲ್ಲಿ ಶೀಘ್ರ ಮತ್ತೊಂದು ತಾಲೂಕು ರಚನೆಯಾಗುತ್ತಿದೆ. ಈ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ. 

Soon Saligrama Will Be Taluk Center Divided From KR Nagara Mysuru
Author
Bengaluru, First Published Oct 14, 2019, 10:03 AM IST

ಕೆ.ಆರ್‌. ನಗರ [ಅ.14]:  ಕೆ.ಆರ್‌. ನಗರ ತಾಲೂಕನ್ನು ವಿಭಾಗ ಮಾಡಿ ಹೊಸದಾಗಿ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ ಹೊಸ ತಾಲೂಕು ರಚನೆಯಾಗಿ ಕೆಲಸ ನಿರ್ವಹಿಸಲಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕು ಕಚೇರಿಯಲ್ಲಿ ಹೊಸ ತಾಲೂಕು ರಚನೆ ಸಂಬಂಧ ನಡೆದ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಇನ್ನೆರಡು ದಿನದಲ್ಲಿ ಸರ್ಕಾರಕ್ಕೆ ವರದಿ ನೀಡಬೇಕು ಎಂದರು.

ತಾಲೂಕು ರಚನೆ ಸಂಬಂಧ ಯಾವುದೇ ಆಕ್ಷೇಪಣೆ ಮತ್ತು ಸಲಹೆ ಸೂಚನೆಗಳಿದ್ದಲ್ಲಿ ಸಾರ್ವಜನಿಕರು ಲಿಖಿತವಾಗಿ ತಹಸೀಲ್ದಾರ್‌ ಅಥವಾ ನನಗೆ ನೀಡಬೇಕು. ಇಂದಿನ ಸಭೆಯಲ್ಲಿ ನಡೆದ ಎಲ್ಲ ವಿಚಾರಗಳು ಮತ್ತು ಈವರೆಗೆ ಆಗಿರುವ ಆಡಳಿತಾತ್ಮಕ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಅವರ ಸಲಹೆ ಪಡೆಯಬೇಕು ಎಂದು ತಾಕೀತು ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಡಳಿತದ ಹಿತದೃಷ್ಟಿಯಿಂದ ಈಗ ಸಾಲಿಗ್ರಾಮ ಹೋಬಳಿಗೆ ಸೇರ್ಪಡೆ ಮಾಡಲು ನಿರ್ಧರಿಸಿರುವ ಚುಂಚನಕಟ್ಟೆಹೋಬಳಿಯ ಕೆಸ್ತೂರು ಕೊಪ್ಪಲು ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಕೆ.ಆರ್‌. ನಗರ ತಾಲೂಕಿಗೆ ಮತ್ತು ಕೆ.ಆರ್‌. ನಗರದ ವ್ಯಾಪ್ತಿಗೆ ಬರಲಿರುವ ಹೊಸ ಅಗ್ರಹಾರ ಹೋಬಳಿಯ ಭೇರ್ಯ ಮತ್ತು ಮುಂಜನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸಾಲಿಗ್ರಾಮ ತಾಲೂಕಿಗೆ ಸೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಲಿಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಿ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಸಮಸ್ತ ಜನತೆಯ ಪರವಾಗಿ ನಾನು ಹಿಂದಿನ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಸಭೆಗೆ ಮಾಹಿತಿ ನೀಡಿದ ಕಾರ್ಯ ನಿರ್ವಾಹಕ ಶಿರಸ್ತೇದಾರ್‌ ಷಣ್ಮುಖ, 6 ಹೋಬಳಿಗಳ ಪೈಕಿ ಮೂರು ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಗೆ 3 ಹೋಬಳಿಗಳು ಸೇರ್ಪಡೆಯಾಲಿದೆ. ಅಂತೆಯೇ, 6 ಜಿಪಂ ಕ್ಷೇತ್ರಗಳಲ್ಲಿ ಪ್ರತಿ ತಾಲೂಕಿಗೆ 3 ಜಿಪಂ ಕ್ಷೇತ್ರಗಳು ಸೇರಲಿದ್ದು, ಕೆ.ಆರ್‌. ನಗರ ತಾಲೂಕಿಗೆ 87 ಗ್ರಾಮಗಳು, ಸಾಲಿಗ್ರಾಮ ತಾಲೂಕಿಗೆ 92 ಗ್ರಾಮಗಳು ಒಳಪಡಲಿವೆ. ಕೆ.ಆರ್‌. ನಗರ ತಾಲೂಕಿಗೆ 1,02,258 ಮಂದಿ ಜನಸಂಖ್ಯೆ ಮತ್ತು 1,09,539 ಮಂದಿ ಮತದಾರರು ಇರಲಿದ್ದು, ಸಾಲಿಗ್ರಾಮ ತಾಲೂಕಿಗೆ 1,29,693 ಮಂದಿ ಜನರು ಹಾಗೂ 96,675 ಮಂದಿ ಮತದಾರರು ಸೇರಲಿದ್ದಾರೆ ಎಂದು ವಿವರಿಸಿದರು.

ತಾಪಂ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್‌ ಮಾತನಾಡಿ, ತಾಲೂಕಿನ ಜನತೆಯ ಹಿತದೃಷ್ಟಿಯಿಂದ 2 ತಾಲೂಕನ್ನಾಗಿ ಮಾಡಿರುವ ಸರ್ಕಾರದ ತೀರ್ಮಾನಕ್ಕೆ ನಮ್ಮ ಸಹಮತವಿದ್ದು, ಅಧಿಕಾರಿಗಳು ಜನರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದರು.

ತಹಸೀಲ್ದಾರ್‌ ಎಂ.ಮಂಜುಳಾ, ಎಪಿಎಂಸಿ ಅಧ್ಯಕ್ಷ ಕುಪ್ಪಹಳ್ಳಿ ಸೋಮು, ಮೈಮುಲ್‌ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್‌, ತಾಪಂ ಸದಸ್ಯ ಶ್ರೀನಿವಾಸ ಪ್ರಸಾದ್‌, ತಾಪಂ ಇಒ ಎಚ್‌.ಡಿ. ಗಿರೀಶ್‌, ಸಿಪಿಐ ಪಿ.ಕೆ. ರಾಜು, ಸೆಸ್ಕ್‌ ಎಇಇ ಅರ್ಕೇಶ್‌ಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌. ಯದುಗಿರೀಶ್‌ ಇತರರು ಇದ್ದರು.

Follow Us:
Download App:
  • android
  • ios