Asianet Suvarna News Asianet Suvarna News

Oneplus 7T ರಿವ್ಯೂ: ಮೂರು ಕ್ಯಾಮರಾ ಕಣ್ಣು, ಕೊಂಚ ಗೂನು ಬೆನ್ನು!

ಈ ಬಾರಿ ಒನ್‌ ಪ್ಲಸ್‌ 7 ಬಂದು, ನಾಲ್ಕೇ ತಿಂಗಳಿಗೆ ಮಾರುಕಟ್ಟೆಗೆ ಬಂದ 7T ಒಂದಷ್ಟು ಚೆನ್ನಾಗಿರುವ ಹೊಸ ಫೀಚರ್‌ಗಳನ್ನೂ ಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾದ ಬದಲಾವಣೆಯೆಂದರೆ ಮೂರನೇ ರೇರ್‌ ಕ್ಯಾಮರಾದ ಅಳವಡಿಕೆ. 

Oneplus 7T Smartphone With Triple Camera Features Review
Author
Bengaluru, First Published Oct 17, 2019, 6:54 PM IST

ಒಂದು ಪ್ರಾಡಕ್ಟನ್ನು ಮಾರುಕಟ್ಟೆಗೆ ಬಿಟ್ಟ ನಂತರ ಅದು ಯಶಸ್ವಿಯಾಯಿತು ಎಂದು ಬೀಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದು ಮೊಬೈಲ್‌ ಕಂಪೆನಿಗಳು. ಪ್ರತಿ ಮೂರೋ ಆರೋ ತಿಂಗಳಿಗೊಮ್ಮೆ ಏನಾದರೂ ಮಾಡುತಿರು ತಮ್ಮ, ನೀನು ಕೂಡಬೇಡ ಸುಮ್ಮ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಅವುಗಳು ಒಂದು ಮೊಬೈಲ್‌ ಲಾಂಚ್‌ ಮಾಡಿದ ಬೆನ್ನಿಗೇ ಮತ್ತೊಂದನ್ನು ಮಾರುಕಟ್ಟೆಗೆ ಬಿಟ್ಟು ಮೊಬೈಲ್‌ ಪ್ರಿಯರನ್ನು ದಂಗುಬಡಿಸುತ್ತಿರುತ್ತವೆ. 

ಈ ತಂತ್ರವನ್ನು ಮೊದಲು ಶುರುಮಾಡಿದ್ದು ಐಫೋನ್‌. ಐಫೋನ್‌ 3G ಬೆನ್ನಿಗೇ 3GS ಬಂತು. ಆಮೇಲೆ ಐಫೋನ್‌ 6 ಬಂತು. ಅದರ ಬೆನ್ನಿಗೇ 6S, 6S ಪ್ಲಸ್‌ ಬಂತು. ಅದು ಸಾಲದು ಎಂಬಂತೆ ಐಫೋನ್‌ X ಹಿಂದೆಯೇ XR, XS, XS ಮ್ಯಾಕ್ಸ್‌ ಬಂತು.

ಐಫೋನ್‌ ಹಾದಿಯನ್ನೇ ನಿಯತ್ತಿನಿಂದ ತುಳಿಯುತ್ತಿರುವ ಒನ್‌ ಪ್ಲಸ್‌ ಕೂಡ ಅದನ್ನೇ ಮಾಡುತ್ತಾ ಬಂದಿದೆ. ಇಲ್ಲಿ ಪ್ಲಸ್‌ ಬದಲಿಗೆ ಪ್ರೋ, S ಬದಲಿಗೆ T ವರ್ಷನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಇದೀಗ ಒನ್‌ ಪ್ಲಸ್‌ 7 ಬಂದು ಕೆಲವೇ ದಿನಕ್ಕೆ ಒನ್‌ ಪ್ಲಸ್‌ 7T ಕೈ ಸೇರಿದೆ. ಈ ಸಲವಂತೂ ಥೇಟ್‌ ಐಫೋನ್‌ ಶೈಲಿಯಲ್ಲೇ ಒನ್‌ಪ್ಲಸ್‌ T ತುಂಬ ಬಗ್ಸ್‌ ತುಂಬಿಕೊಂಡಿದ್ದವು. ಒಂದೇ ವಾರಕ್ಕೆ ಅದನ್ನೆಲ್ಲ ತೊಳೆದುಹಾಕಿ, ಹೊಸ ಸಾಫ್ಟ್‌ವೇರ್‌ ರಿಲೀಸ್‌ ಮಾಡಿ, ತಾನೂ ಐಫೋನ್‌ಗೆ ಸಮಾನ ಎಂದು ಒನ್‌ಪ್ಲಸ್‌ ತೋರಿಸಿಕೊಟ್ಟಿತು.

ಇದರಿಂದ ಕಂಪೆನಿಗೆ ಒಳ್ಳೆಯದಾಗಿದೆಯೋ ಕೆಟ್ಟದಾಗಿದೆಯೋ ಅವರಿಗೇ ಗೊತ್ತು, ಆದರೆ ಗ್ರಾಹಕನಿಗೆ ಮಾತ್ರ ತಾನು ಫೋನು ಕೊಂಡುಕೊಂಡ ಒಂದೇ ತಿಂಗಳಿಗೆ, ತನ್ನದು ಹಳೆಯ ಮಾಡೆಲ್‌ ಅನ್ನಿಸುವುದಕ್ಕಂತೂ ಕಾರಣವಾಗಿದೆ. ಕೊಂಚ ದುಬಾರಿ ಬೆಲೆ ತೆತ್ತು ಒನ್‌ ಪ್ಲಸ್‌ 7 ಕೊಂಡುಕೊಂಡವರು, ಅದಕ್ಕಿಂತಲೂ ಕಡಿಮೆಗೆ ವನ್‌ ಪ್ಲಸ್‌ 7T ಸಿಗುತ್ತದೆ ಅಂತ ಗೊತ್ತಾದಾಗ ಕೈ ಕೈ ಹಿಸುಕಿಕೊಳ್ಳುವುದು ಬಿಟ್ಟು ಮತ್ತೇನು ಮಾಡಲು ಸಾಧ್ಯ? ಇಂಥ ತುಂಟಾಟಗಳನ್ನೆಲ್ಲ ಸಹಿಸಿಕೊಂಡೂ ಒನ್‌ಪ್ಲಸ್‌ಗೆ ನಿಷ್ಠರಾಗಿರುವವರು ಇದ್ದಾರೆ ಎನ್ನುವುದೇ ವಿಶೇಷ.

ಈ ಬಾರಿ ಒನ್‌ ಪ್ಲಸ್‌ 7 ಬಂದು, ನಾಲ್ಕೇ ತಿಂಗಳಿಗೆ ಮಾರುಕಟ್ಟೆಗೆ ಬಂದ 7T ಒಂದಷ್ಟು ಚೆನ್ನಾಗಿರುವ ಹೊಸ ಫೀಚರ್‌ಗಳನ್ನೂ ಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾದ ಬದಲಾವಣೆಯೆಂದರೆ ಮೂರನೇ ರೇರ್‌ ಕ್ಯಾಮರಾದ ಅಳವಡಿಕೆ. ಆದರೆ ಅದಕ್ಕೆ ತಕ್ಕ ಬೆಲೆಯನ್ನೂ ಗ್ರಾಹಕ ತೆರಬೇಕಾಗಿದೆ. ವನ್‌ ಪ್ಲಸ್‌ 7, 256 ಜಿಬಿ ಫೋನ್‌ ಬೆಲೆ 34,999 ರೂಪಾಯಿ ಇತ್ತು. ವನ್‌ ಪ್ಲಸ್‌ 7T 256 ಜಿಬಿಯ ಬೆಲೆ 39,999 ರೂಪಾಯಿ.

ಇದನ್ನೂ ಓದಿ | ಮೊಬೈಲ್ ಬಳಿಕ ಟಿವಿ ಕ್ಷೇತ್ರಕ್ಕೆ Oneplus, 55 ಇಂಚಿನ 4K QLED TV ಮಾರುಕಟ್ಟೆಗೆ...

ಸಾಮಾನ್ಯವಾಗಿ ಒನ್‌ಪ್ಲಸ್‌ನ ಒಂದು ಫೋನ್‌ ಮಾತ್ರ ಒಂದು ಕಾಲಾವಧಿಯಲ್ಲಿ ಮಾರುಕಟ್ಟೆಯಲ್ಲಿರುವಂತೆ ನೋಡಿಕೊಳ್ಳುತ್ತಿತ್ತು. ಹೊಸ ಬ್ರಾಂಡ್‌ ಬಂದಾಕ್ಷಣ ಹಳೆಯ ಬ್ರಾಂಡ್‌ ಸಿಗದಂತೆ ಎಚ್ಚರ ವಹಿಸುತ್ತಿತ್ತು. ಆನ್‌ಲೈನ್‌ ಮಾರುಕಟ್ಟೆಯಲ್ಲಷ್ಟೇ ಲಭ್ಯ ಅನ್ನುವುದು ಕೂಡ ಕಾರಣವಾಗಿ ಈ ಯೋಜನೆ ಯಶಸ್ವಿಯಾಗಿತ್ತು. ಒನ್‌ ಪ್ಲಸ್‌ 7ನಿಂದ ಇದನ್ನು ಬದಲಾಯಿಸಿರುವ ಒನ್‌ಪ್ಲಸ್‌ ಏಕಕಾಲಕ್ಕೆ ಮೂರು- 7, 7T ಮತ್ತು 7T ಪ್ರೋ ಮಾರುಕಟ್ಟೆಯಲ್ಲಿರುವಂತೆ ನೋಡಿಕೊಂಡಿದೆ. ಬಹುಶಃ ಅಯ್‌ಸೂಸ್‌ ಮತ್ತು ರೆಡ್‌ಮಿ ಫೋನುಗಳ ಸ್ಪರ್ಧೆಯಿಂದ ಪಾರಾಗಲು ಈ ಉಪಾಯ ಮಾಡಿದ್ದರೂ ಮಾಡಿರಬಹುದು.

ಅಷ್ಟಕ್ಕೂ ಒನ್‌ಪ್ಲಸ್‌ 7ಟಿಯಲ್ಲಿ ಅಂಥದ್ದೇನೈತಿ ಎಂದು ನೋಡುವವರಿಗೆ ಒಂದು ಬೇಸಿಕ್‌ ಮಾಹಿತಿಗಳು ಇಲ್ಲಿವೆ. ಒನ್‌ಪ್ಲಸ್‌ 7T 90 ಹರ್ಟ್ಸ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್‌ 855 ಹೊಂದಿದೆ. 90 ಹರ್ಟ್ಸ ಅಂದರೆ ಈ ಫೋನ್‌ ಒಂದು ಸೆಕೆಂಡಿಗೆ 90 ಫ್ರೇಮ್‌ಗಳನ್ನು ಡಿಸ್‌ಪ್ಲೇ ಮಾಡುತ್ತದೆ.

ಫೋನ್‌ ಪೂರ್ತಿ ಸ್ಕ್ರೀನೇ ಇರಬೇಕು ಅನ್ನುವುದು ಮತ್ತೊಂದು ಹೊಸ ಟ್ರೆಂಡು. ಅದಕ್ಕಾಗಿಯೇ ಅನೇಕ ಕಂಪೆನಿಗಳು ಪಾಪ್‌ ಅಪ್‌ ಫ್ರಂಟ್‌ ಕ್ಯಾಮೆರಾಗಳ ಪ್ರಯೋಗ ಕೂಡ ಮಾಡಿ ನೋಡಿದವು. ಇದೀಗ ಒನ್‌ ಪ್ಲಸ್‌ 7T, ಇಷ್ಟೇ ಅಗಲದ ವಾಟರ್‌ಡ್ರಾಪ್‌ ನಾಚ್‌ ಹೊಂದಿದೆ. ಮಿಕ್ಕ ಜಾಗದಲ್ಲಿ ನೀವು ಸಿನಿಮಾ ನೋಡಬಹುದು. ಕ್ರಿಕೆಟ್‌ ಆಡಬಹುದು!

ಮತ್ತೊಂದು ವಿಶೇಷ ಎಂದರೆ ವನ್‌ ಪ್ಲಸ್‌ 7Tಯ ನಾಲ್ಕು ಮೂಲೆಗಳ ತಿರುವು ಸುದೀರ್ಘವಾಗಿ ಸುತ್ತಿಕೊಂಡಿವೆ. 400 ಮೀಟರ್‌ ರೇಸಿನಲ್ಲಿ ಮೈದಾನ ಅಂಚಿನಲ್ಲಿರುವ ಟ್ರ್ಯಾಕ್‌ನಂತಿರುವ ಇದರಿಂದಾಗಿ ಹೆಚ್ಚು ಜಾಗ ಡಿಸ್‌ಪ್ಲೇಗೆ ಸಿಗುತ್ತದೆ. ಅದರಿಂದ ಲಾಭವೇನು ಅನ್ನುವುದನ್ನು ಇನ್ನೂ ಪತ್ತೆ ಮಾಡಬೇಕಿದೆ. ಆದರೆ ಇದೊಂದು ಹೊಸ ಸಂಶೋಧನೆ. ಆದರೂ ಅಂಚಿಲ್ಲದ ಪರದೆ ನೋಡುವುದಕ್ಕೆ ಚಂದ ಕಾಣುತ್ತದೆ.

ಫೋನಿನ ಹಿಂಭಾಗ ಪೂರ್ತಿ ಹೊಸದಾಗಿದೆ. ಅಲ್ಲಿ ಒಂದು ದೊಡ್ಡ ಸರ್ಕಲ್‌. ಅದರಲ್ಲಿ ಮೂರು ಕ್ಯಾಮೆರಾ. ಥಟ್ಟನೆ ಮೋಟೋ ಝೆಡ್‌ ಸರಣಿಯ ಪೋನಿನಂತೆ ಕಾಣುವ ಹಿಂರೂಪ. ಅಚ್ಚರಿಯೆಂಬಂತೆ ಮೂರು ಲೆನ್ಸುಗಳನ್ನು ಮೂರು ಬಿಂದುಗಳಂತೆ ಅಡ್ಡಡ್ಡವಾಗಿರಿಸಿದೆ. ಅದರ ಕೆಳಗೆ ಫ್ಲಾಷ್‌ ಇದೆ. ಈ ಮೂರು ಲೆನ್ಸುಗಳಿರುವ ಜಾಗ ಒಂಚೂರು ಉಬ್ಬಿನಂತಿದ್ದು, ಫೋನನ್ನು ನೆಲದ ಮೇಲಿಡುವ ಮುನ್ನ ಕೊಂಚ ಯೋಚಿಸುವಂತಾಗಿದೆ.

ಇದನ್ನೂ ಓದಿ | ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!...

ಮಿಕ್ಕಂತೆ ಸೆವೆನ್‌ಗೂ ಟಿಗೂ ಅಂಥ ವ್ಯತ್ಯಾಸ ಏನೂ ಇದ್ದಂತಿಲ್ಲ. ಇದು ಕೇವಲ ನೀಲಿ ಬಣ್ಣದಲ್ಲಿ ಮಾತ್ರ ಲಭ್ಯ. ನೋಡುವುದಕ್ಕೂ ಕೊಂಚ ದೊಡ್ಡದೆಂಬಂತೆ ಕಂಡರೂ ಕೂಡ, ಹ್ಯಾಂಡಲ್‌ ಮಾಡುವುದು ಕಷ್ಟವೇನಲ್ಲ. ಫೋನಿನ ಮೇಲ್ಬಾಗದಲ್ಲಿದ್ದಂಥ ವಾಲ್ಯೂಮ್‌ ಬಟನ್‌ ಮತ್ತು ಸ್ವಿಚಾನ್‌ ಬಟನ್‌ಗಳನ್ನು ಸುಲಭ ಬಳಕೆಗಾಗಿ ನಡುಭಾಗಕ್ಕೆ ತಂದಿರೋದರಿಂದ ಬಳಕೆ ಸುಲಭ. ಹೊಳೆಯುವ ತಿಳಿನೀಲಿ ಬಣ್ಣವೂ ಕಣ್ಣಿಗೆ ಚಂದ.

ಅಂದಹಾಗೆ ಇದಕ್ಕೆ 3.5ಎಂಎಂ ಹೆಡ್‌ಫೋನ್‌ ಸಾಕೆಟ್‌ ಇಲ್ಲ. ನೀವು ಬ್ಲೂಟೂಥ್‌ ಹೆಡ್‌ಫೋನ್‌ ಬಳಸಬೇಕು ಅಥವಾ ವನ್‌ಪ್ಲಸ್‌ ಹೆಡ್‌ಫೋನ್‌ ಕೊಳ್ಳಬೇಕು. ಅದು ನಿಮ್ಮ ಮೇಲೆ ಹೆಚ್ಚಿನ ಹೊರೆ.

ಕೊಂಚ ಉದ್ದದ ಚೆಂದದ ಬಾಕ್ಸಿನಲ್ಲಿ ಈ ಫೋನು ಬಂದಿದೆ. ಫೋನಿನ ಜೊತೆಗೇ ವ್ರ್ಯಾಪ್ ಚಾರ್ಜರ್‌ ಕೊಡುತ್ತಾರೆ. ಟ್ರಾನ್ಸ್‌ಪರೆಂಟ್‌ ಆದ ಪ್ಲಾಸ್ಟಿಕ್‌ ಫೋನ್‌ ಕೇಸ್‌ ಕೂಡ ಇದೆ. ಅದನ್ನು ಹಾಕಿದರೆ ಫೋನ್‌ ಥಟ್ಟನೆ ತಪ್ಪಿ ನೆಲಕ್ಕೆ ಬಿದ್ದರೂ ಗ್ಲಾಸು ಒಡೆಯದು. ಅಂದಹಾಗೆ ಇದಕ್ಕೆ ಗೊರಿಲ್ಲಾ ಗ್ಲಾಸ್‌ ಹಾಕಲಾಗಿದೆ.

Follow Us:
Download App:
  • android
  • ios