Asianet Suvarna News Asianet Suvarna News

ತಾಲೂಕು ಕಚೇರಿಗೆ ಸಚಿವರ ದಿಢೀರ್‌ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಬುಧವಾರ ಮದ್ದೂರು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು ಕಚೇರಿಯ ಹಲವು ವಿಭಾಗದ ಬ್ಯಾಗ್‌, ಲಾಕರ್‌, ಟೇಬಲ್ ಡ್ರಾಗಳನ್ನು ತೆರೆದು ಪರಿಶೀಲನೆ ನಡೆಸಿದ್ದಾರೆ.

district in charge r ashok visits taluk office in Maddur
Author
Bangalore, First Published Oct 17, 2019, 2:00 PM IST

ಮಂಡ್ಯ(ಅ.17): ಕಂದಾಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಬುಧವಾರ ಮದ್ದೂರು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಚೇರಿಗೆ ಆಗಮಿಸಿದ ಸಚಿವ ಅಶೋಕ್‌, ಸಿಬ್ಬಂದಿ ಹಾಜರಾತಿ ಕುರಿತಂತೆ ಹಾಜರಾತಿ ಪುಸ್ತಕವನ್ನು ಗಮನಿಸಿದ್ದಾರೆ. ಇದಕ್ಕೂ ಮುನ್ನ ತಾಲೂಕು ಕಚೇರಿ ಪ್ರವೇಶ ದ್ವಾರದಲ್ಲೇ ಸಚಿವರನ್ನು ಸುತ್ತುವರಿದ ಸಾರ್ವಜನಿಕರು, ಕಂದಾಯ ಮತ್ತು ಸರ್ವೆ ವಿಭಾಗದ ಕೆಲಸ ಕಾರ್ಯಗಳ ವಿಳಂಬ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಲಂಚಗುಳಿತನ ಬಗ್ಗೆ ಸಚಿವರಿಗೆ ದೂರು ನೀಡಿದ್ದಾರೆ.

'ಸುಮಲತಾ ಹಳಿ ಕೆಲ್ಸ ಮುಗಿಸಿದ್ರೆ ಮೋದಿ ಜೊತೆ ಮಾತಾಡಿ ರೈಲಿಗೆ ಫೋಟೋ ಹಾಕಿಸ್ತೀನಿ

ಕೆಲಸ ಮಾಡಿಕೊಡಲು ಅಧಿಕಾರಿ, ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು ಕಚೇರಿಯ ಹಲವು ವಿಭಾಗದ ಬ್ಯಾಗ್‌, ಲಾಕರ್‌, ಟೇಬಲ್ ಡ್ರಾಗಳನ್ನು ತೆರೆದು ಪರಿಶೀಲನೆ ನಡೆಸಿದ್ದಾರೆ. ನಂತರ ರೆವೆನ್ಯೂ ಶಾಖೆ, ದರಕಾಸ್ತು, ಭೂಮಿ ವಿಭಾಗ, ಸಾಮಾಜಿಕ ಭದ್ರತಾ ಯೋಜನೆ, ಭೂ ದಾಖಲೆಗಳ ವಿಭಾಗ ಮತ್ತು ಆರ್‌ಟಿಸಿ ತಿದ್ದುಪಡಿ ಶಾಖೆಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌, ಅಪರ ಜಿಲ್ಲಾಾಧಿಕಾರಿ ಯೋಗೇಶ್‌, ಉಪ ವಿಭಾಗಾಧಿಕಾರಿ ಸೂರಜ್‌ ಅವರೊಂದಿಗೆ ತೆರಳಿ ಸಾಮಾಜಿಕ ಅರ್ಜಿ ವಿಲೇವಾರಿ ಕುರಿತಂತೆ ಸಂಬಂಧಪಟ್ಟಸಿಬ್ಬಂದಿಯೊಂದಿಗೆ ಮಾಹಿತಿ ಪಡೆದಿದ್ದಾರೆ.

ಅರ್ಜಿ ವಿಲೇವಾರಿ ಮಾಡದ್ದಕ್ಕೆ ತರಾಟೆ

ಪಿಂಚಣಿ ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಮಾಡುತ್ತಿರುವ ತಹಸೀಲ್ದಾರ್‌ ದಿಗ್ವಿಜಯ ಹಾಗೂ ಸಿಬ್ಬಂದಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಪಿಂಚಣಿ ಕೋರಿ 444 ಅರ್ಜಿಗಳು ಬಂದಿವೆ. ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ ಸಚಿವರು, ಶೀಘ್ರವಾಗಿ ವಿಲೇವಾರಿ ಮಾಡುವಂತೆ ತಾಕೀತು ಮಾಡಿದ್ದಾರೆ.

ಲಂಚ ಬೇಡಿಕೆಯ ದೂರು:

ಜಮೀನಿನ ಸರ್ವೇ ಕಾರ್ಯ ಕುರಿತು ತಿಂಗಳುಗಟ್ಟಲೆ ಕಳೆದರೂ ಸಹ ಅಧಿಕಾರಿಗಳು ಸರ್ವೇ ಕಾರ್ಯ ಪೂರ್ಣಗೊಳಿಸಲು ವಿಳಂಬ ಮಾಡುತ್ತಿದ್ದಾರೆ. ಸರ್ವೆ ಕಾರ್ಯಕ್ಕೆ ಇಂತಿಷ್ಟೇ ಹಣ ನೀಡಬೇಕು. ಇಲ್ಲವಾದಲ್ಲಿ ಕಾರ್ಯ ಮಾಡಿಕೊಡುವುದಿಲ್ಲ ಎಂದು ಸಿಬ್ಬಂದಿ ಸೂಚನೆ ಕೊಡುತ್ತಾರೆಂದು ಬಿಜೆಪಿ ಮುಖಂಡರಾದ ಪಣ್ಣೇದೊಡ್ಡಿ ರಘು ಹಾಗೂ ಕೆ. ಹೊನ್ನಲಗೆರೆ ಸ್ವಾಮಿ ಸೇರಿದಂತೆ ಹಲವರು ಸಚಿವರಿಗೆ ದೂರು ನೀಡಿದರು.

ಭೂಮಿ ವಿಭಾಗದಲ್ಲಿ ದಾಖಲಾತಿ ಕೋರಿ ಅರ್ಜಿ ಸಲ್ಲಿಸಿದ ರೈತರಿಗೆ ಸಿಬ್ಬಂದಿ ಸಕಾಲದಲ್ಲಿ ದಾಖಲಾತಿ ನೀಡುತ್ತಿಲ್ಲ. ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಕ್ಬರ್‌ ಹಾಗೂ ವೆಂಕಟೇಶ್‌ ದಾಖಲೆ ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ:

ನಂತರ ಸಚಿವ ಅಶೋಕ್‌ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸಾರ್ವಜನಿಕರು ನೇರವಾಗಿ ತಾಲೂಕು ಕಚೇರಿಗೆ ಬಂದು ತಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳಬೇಕು. ಅಧಿಕಾರಿಗಳು ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ದೂರು ನೀಡಬೇಕು. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

10 ವರ್ಷದ ಬಳಿಕ ಸತತ 50 ದಿನ ಕೆಆರ್ ಎಸ್ ಭರ್ತಿ

Follow Us:
Download App:
  • android
  • ios