life
By Suvarna Web Desk | 11:07 AM March 17, 2017
ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಇಲ್ಲಿದೆ ಮಸ್ತ್ ಟಿಪ್ಸ್

Highlights

ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯ ಅಭ್ಯಾಸ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೆದುಳಿನಲ್ಲಿ ಮೆಲಟೋನಿನ್ ಉತ್ಪಾದನೆ ಹೆಚ್ಚಿಸುವ ಮೂಲಕ ಗಾಢನಿದ್ದೆಗೆ ಪ್ರೇರೇಪಿಸುತ್ತದೆ.

ಮಾ. 17, ಅಂತಾರಾಷ್ಟ್ರೀಯ ನಿದ್ರಾ ದಿನ. ಮನುಷ್ಯನಿಗಷ್ಟೇ ಅಲ್ಲ, ಬಹುತೇಕ ಜೀವಿಗಳಿಗೆ ನಿದ್ರೆ ಅತ್ಯವಶ್ಯ. ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ 6-9 ಗಂಟೆ ಕಾಲ ನಿದ್ರೆಯ ಅಗತ್ಯವಿರುತ್ತದೆ. ಆದರೆ, ಕೆಲಸದ ಒತ್ತಡ, ತಡರಾತ್ರಿಯ ಪಾರ್ಟಿ ಸೇರಿದಂತೆ ಆಧುನಿಕ ಜೀವನ ಶೈಲಿಯು ನಮ್ಮ ನಿದ್ರೆ ಮೇಲೆ ನೇರ ಪರಿಣಾಮ ಬೀರುತ್ತೆ. ನಿದ್ರಾಹೀನತೆ, ಫ್ಯಾಟ್, ಮಾನಸಿಕ ಒತ್ತಡ ಮುಂತಾದ ಸಮಸ್ಯೆ ಸೃಷ್ಟಿಯಾಗುತ್ತವೆ. ನಿದ್ದೆ ಸರಿಯಾಗಿ ಆಗದಿದ್ದಾಗ ದೇಹ ದಣಿದು ಹಲವು ಸಮಸ್ಯೆಗೆ ಆಹ್ವಾನ ನೀಡುತ್ತೆ. ಹೀಗಾಗಿ, ಸಂತಸದ ಜೀವನಕ್ಕಾಗಿ ಸುಖಕರ ನಿದ್ರೆ  ಮಾಡುವುದಕ್ಕೆ ಇಲ್ಲಿವೆ ನೋಡಿ ಪರಿಣಾಮಕಾರಿ ಟಿಪ್ಸ್..

1) ಜೈವಿಕ ಗಡಿಯಾರ ಫಾಲೋ ಮಾಡಿ: ಪ್ರತಿ ನಿತ್ಯ ಮಲಗುವ ಮತ್ತು ಏಳುವ ಸಮಯವನ್ನ ಶಿಸ್ತಿನಿಂದ ಫಾಲೋ ಮಾಡಿ. ಸರಿಯಾದ ಜೈವಿಕ ಗಡಿಯಾರವನ್ನ ಫಾಲೋ ಮಾಡಿ. ನಿದ್ದೆಗೆ ಹೋಗುವ.. ಬೆಳಗ್ಗೆ ಏಳುವ ದಿನಚರಿಯನ್ನ ಯಾವುದೇ ಕಾರಣಕ್ಕೂ ಬದಲಿಸಬೇಡಿ. ವೀಕೆಂಡ್‘ನಲ್ಲಿ ಆಲಸ್ಯ ಬೇಡ.

2) ಹಾಸಿಗೆಗೆ ಹೋಗುವ ಮುನ್ನ ಮನೋಲ್ಲಾಸದ ಚಟುವಟಿಕೆ ಮಾಡಿ: ಹಾಸಿಗೆಗೆ ಹೋಗುವ ಮುನ್ನ ಮನೋಲ್ಲಾಸದ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಧ್ಯಾನ, ಒಳ್ಳೆಯ ಪುಸ್ತಕಗಳನ್ನ ಓದುವ ಹವ್ಯಾಸ ಬೆಳೆಸಿಕೊಂಡರೆ ಮನಸ್ಸಿನ ಒತ್ತಡ ನಿವಾರಣೆಯಾಗಿ ಒಳ್ಳೆಯ ನಿದ್ದೆ ಬರುತ್ತದೆ.

3) ಚಟುವಟಿಕೆ ಇರಲಿ: ಬೆಳಗ್ಗೆ ಎದ್ದ ಕೂಡಲೇ ದೇಹಕ್ಕೆ ಚಟುವಟಿಕೆ ನೀಡಿ. ವಾಕಿಂಗ್ ಸೇರಿದಂತೆ ಚಟುವಟಿಕೆ ನೀಡುವ ಕೆಲಸದಲ್ಲಿ ಪಾಲ್ಗೊಳ್ಳಿ. ಇದರಿಂದ ದಿನಾಂತ್ಯದಲ್ಲಿ ಉಂಟಾಗುವ ಆಲಸ್ಯ ತಪ್ಪುತ್ತದೆ. ರಾತ್ರಿ ವೇಳೆ ವ್ಯಾಯಾಮದ ಅಭ್ಯಾಸ ಇರುವವರು ನಿದ್ದೆ ಕಡಿಮೆ ಮಾಡಿ ವ್ಯಾಯಾಮ ಮಾಡಬೇಡಿ.

4) ತೀಕ್ಷ್ಣವಾದ ಬೆಳಕು ಬೇಡ: ದೇಹದ ಜೈವಿಕ ಗಡಿಯಾರವು(Biological clock) ಬೆಳಗಿನ ಜಾವದ ಸೂರ್ಯನ ಬೆಳಕು ಮತ್ತು ರಾತ್ರಿಯ ಕತ್ತಲೆಗೆ ಹೊಂದಿಕೊಂಡಿರುತ್ತದೆ. ಹೀಗಾಗಿ, ಮಲಗುವ ಕೋಣೆಯಲ್ಲಿ ತೀಕ್ಷ್ಣ ಬೆಳಕಿರುವ ದೀಪಗಳನ್ನ ಹಾಕಿಕೊಳ್ಳಬೇಡಿ.

5) ನಿದ್ದೆ ಬರಲಿಲ್ಲವೆಂದು ಸ್ಲೀಪಿಂಗ್ ಪಿಲ್ಸ್ ತೆಗೆದುಕೊಳ್ಳಬೇಡಿ: ಅಧಿಕ ಒತ್ತಡದಲ್ಲಿ ದುಡಿಯುವವರು ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆಯ ಮೊರೆ ಹೋಗುವುದು ಹೆಚ್ಚು. ಆದರೆ, ಈ ಅಭ್ಯಾಸ ಅಪಾಯಕಾರಿ. ಇದು ನಿಮ್ಮ ಸ್ವಾಭಾವಿಕ ಶಕ್ತಿಯನ್ನ ಕುಗ್ಗಿಸುತ್ತದೆ. ಮಾತ್ರೆ ಬದಲು ಚಿಂತೆಯನ್ನ ಬಿಟ್ಟು ಕೆಲವು ಕ್ಷಣ ಮನಸ್ಸನ್ನ ಶಾಂತವಾಗಿಟ್ಟುಕೊಂಡರೆ ನಿದ್ದೆ ತಾನಾಗಿಯೇ ಬರುತ್ತದೆ. ಮಾತ್ರೆಗಳಿಂದ ನರಮಂಡಲಕ್ಕೆ ಹಾನಿಯಾಗುತ್ತದೆ ಎಚ್ಚರ.

6) ನಿಮ್ಮ ಹಾಸಿಗೆಯು ನಿದ್ದೆ ಮತ್ತು ಸೆಕ್ಸ್ ಎರಡಕ್ಕೇ ಸೀಮಿತವಾಗಿರಲಿ: ಅನೇಕರು ಹಾಸಿಗೆ ಮೇಲೆಯೇ ಕುಳಿತು ಲ್ಯಾಪ್ ಟಾಪ್‘ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲೇ ಕುಳಿತು ಊಟ ಮಾಡುವವರೂ ಇದ್ದಾರೆ. ಪ್ರತಿಯೊಂದು ಚಟುವಟಿಕೆಯನ್ನೂ ಅಲ್ಲೇ ಮಾಡುತ್ತಾರೆ. ಆದರೆ, ಈ ರೀತಿಯ ಅಭ್ಯಾಸ ನಿಮ್ಮ ನಿದ್ದೆ ಹಾಳುಗೆಡವುತ್ತೆ. ಎಲ್ಲ ಚಟುವಟಿಕೆ ಹಾಸಿಗೆ ಮೇಲೆ ನಡೆದರೆ ನಿದ್ದೆಗೆ ಹೋಗುವ ಹೊತ್ತಿಗೆ ನಿಮಗೆ ಬೇಸರ ತರಿಸಬಹುದು. ಹೀಗಾಗಿ, ನಿದ್ದೆ ಮತ್ತು ಲೈಂಗಿಕ ಜೀವನಕ್ಕೆ ಮಾತ್ರ ಹಾಸಿಗೆ ಸೀಮಿತವಾಗಿರಲಿ.

7) ಮಲಗುವ ಕೋಣೆ ತಂಪಾಗಿರಲಿ: ಮಲಗುವ ಕೋಣೆಯ ಉಷ್ಣಾಂಶ ತಂಪಾಗಿರಲಿ. ಎಸಿಯ ವ್ಯವಸ್ಥೆ ಇದ್ದರೆ ಸ್ವಿಚ್ ಆಫ್ ಮಾಡಿ, ಲೈಟ್ ಆಫ್ ಮಾಡಿ ಕಿಟಕಿಗಳನ್ನ ತೆರೆಯಿರಿ. ನಿದ್ದೆಗೆ ಮುನ್ನ ಬಿಸಿನೀರಿನ ಸ್ನಾನವೂ ಒಳ್ಳೆಯದು. ಇದರಿಂದ ನಿಮ್ಮ ಮೆದುಳು ಮೆಲಟೊನಿನ್ ರಿಲೀಸ್ ಮಾಡಿ ನಿದ್ದೆಗೆ ಉತ್ತೇಜಿಸುತ್ತದೆ.

8) ಮಲಗುವ ಮುನ್ನ ಧೂಮಪಾನ ಬೇಡ: ಮಲಗುವ ಮುನ್ನ ಧೂಮಪಾನ ಮಾಡಿದರೆ ಉಸಿರಾಟದಲ್ಲಿ ತೊಂದರೆ ಆಗುವುದರಿಂದ ನಿದ್ದೆ ಸರಿಯಾಗಿ ಬರದೇ ಇರಬಹುದು. ಇನ್ನೂ, ಉಸಿರಾಟದ ತೊಂದರೆ ಇರುವವರು ಸಂಪೂರ್ಣವಾಗಿ ಧೂಮಪಾನದಿಂದ ದೂರವಿದ್ದರೆ ಒಳಿತು. ಇಲ್ಲವಾದರೆ ರಾತ್ರಿ ಇಡೀ ಮಧ್ಯದಲ್ಲೇ ಎಚ್ಚರವಾಗುವ ಮೂಲಕ ಸುಖ ನಿದ್ರೆಗೆ ಭಂಗ ಬರುತ್ತದೆ.
 
9) ಮಲಗುವ ಮುನ್ನ ಹಾಲು ಕುಡಿಯಿರಿ: ನಮ್ಮ ಪೂರ್ವಜರು ಸೂಚಿಸುವಂತೆ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯ ಅಭ್ಯಾಸ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೆದುಳಿನಲ್ಲಿ ಮೆಲಟೋನಿನ್ ಉತ್ಪಾದನೆ ಹೆಚ್ಚಿಸುವ ಮೂಲಕ ಗಾಢನಿದ್ದೆಗೆ ಪ್ರೇರೇಪಿಸುತ್ತದೆ.

Show Full Article


Recommended


bottom right ad