Asianet Suvarna News Asianet Suvarna News

ಕಡೆವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ?

ಪ್ರೀತಿ ಇಲ್ಲದ ಮೇಲೆ ದಾಂಪತ್ಯ ಬೇಸರ ತರಿಸುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ದಂಪತಿಗಳಿಗೆ ಸವಾಲಿನ ಕೆಲಸ. ಪ್ರೀತಿಸಿ ಮದುವೆಯಾದವರಲ್ಲೂ ಕೂಡಾ ಭಿನ್ನಾಭಿಪ್ರಾಯ ಬರುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್. 

Tips for couple: how to be in love after marriage
Author
Bengaluru, First Published Jan 2, 2019, 4:55 PM IST

ನಲುವತ್ತೈದು ವರ್ಷದ ಆ್ಯನಿವರ್ಸರಿ ದಿನ ನನ್ನ ಹರೆಯದ ಮೊಮ್ಮಗಳು ಬಂದು ಈ ಪ್ರಶ್ನೆ ಕೇಳಿದಳು. ಅವಳಿಗೀಗ ಹದಿನೆಂಟರ ಹರೆಯ. ನಿನ್ನೆ ಮೊನ್ನೆ ಹೂವಿನ ಪಕಳೆಯ ಹಾಗಿದ್ದಳು. ಈಗ ಹೂವೇ ಆಗಿದ್ದಾಳೆ. ಅವಳ ಕಾಲ, ದೇಶ ಬದಲಾಗಿದೆ. ನನ್ನವರ ಸ್ಪರ್ಶವನ್ನು ಅನುಭವಿಸಿದಂಥ ಆಯ್ಕೆಗಳು ಅವಳಿಗಿಲ್ಲ. ಹುಡುಗರ ಹೆಗಲಿಗೆ ಕೈ ಹಾಕಿ ನಡೆಯುವ ಈ ಕಾಲದ ಹುಡುಗಿ ಅವಳು. ಆದರೆ ಸಂವೇದನೆ ಹೆಚ್ಚು ಕಮ್ಮಿ ಅದೇ ಅಲ್ವಾ. ಆ ಹಿನ್ನೆಲೆಯಲ್ಲಿ ಅವಳಿಗಾಗಿ ನನ್ನ ಅನುಭವದ ಮಾತು ಹೇಳಿದೆ.

ನಮ್ಮತನ ಉಳಿಸಿಕೊಳ್ಳುವುದು ಬಹಳ ಮುಖ್ಯ

ನಿಮಗೆ ಆಶ್ಚರ್ಯ ಅನಿಸಬಹುದು. ಗಂಡನನ್ನು ಅನುಸರಿಸಿಕೊಂಡು ಹೋಗಬೇಕು ಎನ್ನುವ ಕಿವಿಮಾತನ್ನೇ ಚಿಕ್ಕಂದಿನಿಂದ ಕೇಳಿಕೊಂಡು ಬೆಳೆದ ನಾನು ಈ ಮಾತು ಹೇಗೆ ಆಡಿದೆ ಅಂತ. ಯಾರೇನೇ ಅಂದರೂ ಅನುಭವ ಕಲಿಸುವ ಪಾಠ ದೊಡ್ಡದು. ಸಮರ್ಪಣೆಯ ಭಾವದಲ್ಲೇ ನಾವು ಸಂಗಾತಿಯ ಜೊತೆಯಾಗಬೇಕು. ಆದರೆ ಅತಿಯಾದ ಅವಲಂಬನೆ, ಅವರಿಂದಲೇ ಖುಷಿ ಕಂಡುಕೊಳ್ಳುವುದು ಎಂಬ ಭಾವ ಸುದೀರ್ಘ ದಾಂಪತ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಅದು ಅವರಿಗೂ ನಮಗೂ ಹೊರೆ. ನಮ್ಮತನ ಉಳಿಸಿಕೊಳ್ಳುವುದು, ನಮ್ಮ ಸ್ವಾತಂತ್ರ್ಯ, ಸ್ವಾಭಿಮಾನ, ಗೌರವಕ್ಕೆ ಧಕ್ಕೆಯಾಗದ ಹಾಗಿರುವುದು ಮುಖ್ಯ. ನಮ್ಮತನವೇ ಇಲ್ಲದ ಮೇಲೆ ನಮ್ಮೊಳಗೇ ಕೀಳರಿಮೆ ಆವರಿಸುತ್ತದೆ. ಅದರಿಂದ ನಾವು ಸಂಗಾತಿಯ ದೃಷ್ಟಿಯಲ್ಲೂ, ಮಕ್ಕಳ ದೃಷ್ಟಿಯಲ್ಲೂ ಕೀಳಾಗುತ್ತೇವೆ. ಇದರಿಂದ ಖುಷಿ, ನೆಮ್ಮದಿಯಾಗಿ ಜೀವಿಸುವುದು ಕಷ್ಟ.

ಇಬ್ಬರ ಒಪ್ಪಿಗೆಯ ಅಡಿಪಾಯ

ಇಬ್ಬರ ಮಾತಿಗೂ ಪ್ರಾಮುಖ್ಯತೆ ಸಿಕ್ಕಿದರಷ್ಟೇ ದಾಂಪತ್ಯ ಚೆನ್ನಾಗಿರುತ್ತದೆ. ಒಬ್ಬನದೇ ಸರ್ವಾಧಿಕಾರ ಅಂದರೆ ಇನ್ನೊಂದು ಜೀವ ನರಳುತ್ತದೆ. ಆಕೆಗಾಗಿ ಅಥವಾ ಆತನಿಗಾಗಿ ಏನೇ ಮಾಡಿದರೂ ಸಹ. ಸಹಮತದಲ್ಲಿ ಮಾಡಿದ ಕೆಲಸದಲ್ಲಿ ಸಾರ್ಥಕತೆ ಹೆಚ್ಚು. ನಮ್ಮಿಬ್ಬರಲ್ಲಿ ಇವರು ನನ್ನ ಮಾತು ಕೇಳದೇ ಸಣ್ಣ ಕೆಲಸವನ್ನೂ ಮಾಡುತ್ತಿರಲಿಲ್ಲ. ನನ್ನ ಮೊದಲ ಹೆರಿಗೆಯಾದಾಗ ಸೂಲಗಿತ್ತಿಯ ಕಾಡಿ ಬೇಡಿ ನನ್ನ ಜೊತೆಗೇ ಕತ್ತಲ ಕೋಣೆಯಲ್ಲುಳಿದರು. ನನ್ನ ನೋವಿನಲ್ಲಿ ಸಹಭಾಗಿಯಾದರು.

ಆ ಕಾಲದ ಯಾವ ಗಂಡಸೂ ಹೀಗಿದ್ದದ್ದು ಗೊತ್ತಿಲ್ಲ. ಆದರೆ ಇದರಿಂದ ಅವರ ಮೇಲಿನ ಅಭಿಮಾನ ದುಪ್ಪಟ್ಟಾಯ್ತು. ಮಕ್ಕಳನ್ನೂ ಇಬ್ಬರೂ ಸೇರಿಯೇ ಬೆಳೆಸಿದೆವು. ಅವರು ನಮ್ಮ ಮೇಲೆ ಪ್ರೀತಿ, ಗೌರವ ಇಟ್ಟುಕೊಳ್ಳಲು ಇದುವೇ ಮುಖ್ಯ ಕಾರಣ. ಏಕೆಂದರೆ ನಾವಿಬ್ಬರೂ ಸೇರಿ ಪೋಷಿಸಿದ ಕಾರಣ ಅವರಿಗೆ ಕೊರತೆಯಾಗಲಿಲ್ಲ.

ಮಾತುಕತೆ ನಿರಂತರವಾಗಿರಬೇಕು

ಜೊತೆಗೇ ಬಾಳುವವರು ಅಂದಾಗ ಜಗಳ, ಭಿನ್ನಾಭಿಪ್ರಾಯ ಸಾಮಾನ್ಯ. ಎಷ್ಟೋ ಜನ ಆ ಸಿಟ್ಟನ್ನು ನುಂಗಿಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ. ಸಿಟ್ಟು, ನೋವು, ಅಸಮಾಧಾನವನ್ನು ಹಂಚಿಕೊಳ್ಳಬೇಕು, ಆದರೆ ಇನ್ನೊಬ್ಬರಿಗೆ ಘಾಸಿಯಾಗದ ಹಾಗೆ. ಇದರಿಂದ ಒಬ್ಬರ ಬಗ್ಗೆ ಇನ್ನೊಬ್ಬರಲ್ಲಿ ದ್ವೇಷ, ಅಸಮಾಧಾನ ಬೆಳೆಯಲ್ಲ.

ಸಿಟ್ಟೆಲ್ಲ ಅಲ್ಲಲ್ಲೇ ಶಮನವಾಗುತ್ತವೆ. ನಮ್ಮ ಕಾಲದಲ್ಲಿ ಟಿ.ವಿ, ಫೋನ್ ಇಲ್ಲವಾಗಿದ್ದಕ್ಕೋ ಏನೋ ನಮ್ಮಿಬ್ಬರ ಮಾತುಕತೆಗೆ ಸಮಯ ಸಿಗುತ್ತಿತ್ತು. ನಮ್ಮ ಎಷ್ಟೋ ತಪ್ಪುಕಲ್ಪನೆಗಳು ಈ ಮಾತು ಕತೆಯಿಂದಲೇ ಹಾರಿ ಹೋಗಿವೆ. ಈಗ ಯಾರಿಗೂ ಸಮಯ ಇಲ್ಲ. ಗಂಡ ಹೆಂಡತಿ ಚೆನ್ನಾಗಿರಬೇಕು ಅಂದರೆ ದಿನದಲ್ಲಿ ಒಂದಿಷ್ಟು ಹೊತ್ತು ಮಾತಿಗೆ ಸಿಗಬೇಕು.

ಒಪ್ಪಿಗೆ ಇಲ್ಲದ್ದನ್ನು ಸ್ಪಷ್ಟವಾಗಿ ಹೇಳಬೇಕು

ಕೆಲವೊಂದು ವಿಚಾರಗಳಿಗೆ ನಮ್ಮ ಒಪ್ಪಿಗೆ ಇರುವುದಿಲ್ಲ. ಅದನ್ನು ಧನಾತ್ಮಕವಾಗಿ ತಿಳಿಸಬೇಕು. ವಿರೋಧವನ್ನು ಸ್ಪಷ್ಟವಾಗಿಯೇ ಹೇಳಬೇಕು. ಇಲ್ಲವಾದರೆ ಅದನ್ನು ನಮ್ಮ ಸಮ್ಮತಿಯೆಂದು ನಂಬುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ದಂಪತಿಗಳಲ್ಲಿ ಶೀತಲ ಸಮರ ಶುರುವಾಗುತ್ತದೆ. ನನಗೆ ವಿವಾಹದ ಆರಂಭದಲ್ಲಿ ಈ ಅನುಭವವಾಗಿತ್ತು. ನಂತರ ನಾನು ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವುದನ್ನು ಕಲಿತೆ. ನನ್ನೊಳಗಿನ ಕಿರಿಕಿರಿ, ಅಸಮಾಧಾನ, ಸಿಟ್ಟು ಇದರಿಂದ ಕಡಿಮೆಯಾಯ್ತು. ನಾನೂ ದಾಂಪತ್ಯ ಸವಿಯುವಂತಾಯ್ತು.

ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ನಿಲ್ಲಬೇಕು

ಯೌವನದ ದಿನಗಳಲ್ಲಿ ಇತರ ಕುಟುಂಬಗಳಲ್ಲಿ ನನ್ನನ್ನು ಬಹಳ ನೋಯಿಸಿದ್ದು ಗಂಡ, ಹೆಂಡತಿಯನ್ನು ನಿರ್ಲಕ್ಷ್ಯ, ಅಸಡ್ಡೆಯಿಂದ ನೋಡುತ್ತಿದ್ದದ್ದು, ಮಕ್ಕಳೆದುರಿಗೂ ಹೀಯಾಳಿಸುತ್ತಿದ್ದದ್ದು. ಮಕ್ಕಳಲ್ಲೂ ಅಮ್ಮನ ಬಗ್ಗೆ ಗೌರವ ಬೆಳೆಯದ ಹಾಗೆ ಮಾಡುತ್ತಿದ್ದದ್ದು. ಹೆಣ್ಣಿನ ಬದುಕನ್ನು ಹೀಗೆ ಮಾಡುವ ಅಧಿಕಾರ ನಿನಗ್ಯಾರು ಕೊಟ್ಟರು ಅಂತ ಎದುರಿಗೇ ಹೇಳಿ ಝಾಡಿಸಿದ್ದೆ.

ನಂತರವೂ ಅವರು ತಿದ್ದಿಕೊಳ್ಳಲಿಲ್ಲ. ಕೊನೆಗಾಲಕ್ಕೆ ಅವರಿಗೆ ನನ್ನ ಮಾತಿನ ಅರ್ಥ ತಿಳಿಯಿತು, ಅಷ್ಟೊತ್ತಿಗೆ ಹೆಂಡತಿಯೇ ತೀರಿಹೋಗಿದ್ದಳು. ನನ್ನ ಪ್ರಕಾರ ಮಕ್ಕಳೆದುರು ಅಥವಾ ಇತರರೆದುರು ಸಂಗಾತಿಗೆ ಬೆಂಬಲವಾಗಿ ನಿಲ್ಲಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಸಂಗಾತಿಯ ಬಗ್ಗೆ ಗೌರವ, ಅಭಿಮಾನ ಬೆಳೆಯುತ್ತದೆ.

- ರಾಜಲಕ್ಷ್ಮೀ ನೀರಮಾನ್ವಿ 

Follow Us:
Download App:
  • android
  • ios