Asianet Suvarna News Asianet Suvarna News

120 ಬಸ್‌ಗಳಿಗೆ ಉಚಿತ ನೀರು ನೀಡುವ ಟೀಮ್‌ ಸನ್ಮಾರ್ಗ!

ಬೇಸಿಗೆಯಲ್ಲಿ ನೀರಿಗಾಗಿ ಪ್ರಯಾಣಿಕರ ಪರದಾಟ ಕಂಡು 2015ರಲ್ಲಿ ನೀರು ಪೂರೈಸುವ ಜನಮುಖಿ ಕಾರ್ಯ ಆರಂಭಿಸಿದ ಸನ್ಮಾರ್ಗ ತಂಡ ಇಂದು ಸುಮಾರು 120 ಬಸ್‌ಗಳಿಗೆ 20 ಲೀಟರ್‌ನ ಎರಡು ಕ್ಯಾನ್‌ ಅಳವಡಿಸಿ ಅದಕ್ಕೆ ಒದ್ದೆ ಬಟ್ಟೆಕಟ್ಟಿತಂಪು ನೀರನ್ನು ನೀಡುತ್ತಿದೆ. ಯಾರ ಸಹಾಯ ಇಲ್ಲದೆ ತಮ್ಮದೇ ಖರ್ಚಿನಲ್ಲಿ 5 ವರ್ಷದಿಂದ ಈ ಜನ ಸೇವಾ ಕೆಲಸ ನಡೆಸಿಕೊಂಡು ಬರುತ್ತಿದೆ.

Team Sanmarga distributes free drinking water to 120 buses
Author
Bangalore, First Published May 4, 2019, 11:42 AM IST

ಕೆ.ಎಂ. ಮಂಜುನಾಥ್‌, ಬಳ್ಳಾರಿ

ಬೇಸಿಗೆ ಶುರುವಾಯಿತು ಎಂದರೆ ಬಳ್ಳಾರಿ ಜನರ ಮುಖ ಕಪ್ಪಿಕ್ಕುತ್ತದೆ. ಎರಡುವರೆ ತಿಂಗಳು ಈ ಬಿಸಿಯ ಬೇಗೆ ಹೇಗೆ ಸಹಿಸೋದು ಎಂಬ ಆತಂಕ ಎದುರಾಗುತ್ತದೆ. ಅದರಲ್ಲೂ ನಿತ್ಯ ಬಸ್‌ಗಳಲ್ಲಿ ಪ್ರಯಾಣಿಸುವವರ ಪಾಡಂತೂ ಹೇಳತೀರದು. ಎಷ್ಟುನೀರು ಕುಡಿದರೂ ಬಾಯಾರಿಕೆ. ನೀಗದ ದಾಹ! ಇನ್ನು ಪ್ರಯಾಣದಲ್ಲಿರುವರ ಪಾಡಂತೂ ಇನ್ನಷ್ಟುಕಠೋರ. ಹೀಗೆ ಬೇಸಿಗೆಯಲ್ಲಿ ಕುಡಿವನೀರಿಗಾಗಿ ಒದ್ದಾಡುವ ಪ್ರಯಾಣಿಕರ ದಾಹ ತೀರಿಸಲೆಂದೇ ಬಳ್ಳಾರಿಯ ಸಮಾನ ಮನಸ್ಕರ ಗೆಳೆಯರ ಗುಂಪು ಸರ್ಕಾರಿ ಬಸ್‌ಗಳಲ್ಲಿ ಕಳೆದ ಐದು ವರ್ಷಗಳಿಂದ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನಮುಖಿ ಸೇವೆಯಲ್ಲಿ ನಿರತವಾಗಿದೆ. ಆರಂಭದಲ್ಲಿ ಬರೀ ನಾಲ್ಕೆ ೖದು ಬಸ್‌ಗಳಿಂದ ಶುರುವಾದ ನೀರು ಪೂರೈಕೆ ಕಾರ್ಯ ಇದೀಗ 120 ಬಸ್‌ಗಳವರೆಗೆ ತಲುಪಿದೆ.

ಸನ್ಮಾರ್ಗ ತಂಡದ ಹಿನ್ನೆಲೆ

ಸಮಾನ ಮನಸ್ಕರು ಸೇರಿಕೊಂಡು 2015ರ ಜುಲೈನಲ್ಲಿ ಸನ್ಮಾರ್ಗ ಹೆಸರಿನಲ್ಲಿ ಸೇವಾ ತಂಡ ರಚಿಸಲಾಯಿತು. ಇದರಲ್ಲಿ ಶಿಕ್ಷಕರು ಸೇರಿ ಸೇವಾ ಮನಸ್ಸಿನ ಅನೇಕರು ಇದ್ದಾರೆ. ಒಟ್ಟು 65 ಜನ ಸದಸ್ಯರ ಈ ತಂಡದಲ್ಲಿ 20 ಜನರು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಶಿಬಿರಗಳು, ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಬಡವರಿಗೆ ಕಣ್ಣಿನ ಉಚಿತ ತಪಾಸಣೆ, ಚಿಕಿತ್ಸೆ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳನ್ನು ಸಂಘಟಿಸುತ್ತಾರೆ. ಸನ್ಮಾರ್ಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್‌ ಕಪ್ಪಗಲ್‌ ಅವರು ಕುಡಿಯುವ ನೀರಿನ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದು, ನಿತ್ಯ ಇವರೇ ಖುದ್ದಾಗಿ ಆಗಮಿಸಿ ನೀರಿನ ಕ್ಯಾನ್‌ಗಳನ್ನು ಬಸ್‌ನಲ್ಲಿ ಅಳವಡಿಸುತ್ತಾರೆ.

ನೀರು ಪೂರೈಸುವ ಕಾರ್ಯ ಬೆಳೆದಿದ್ದು ಹೀಗೆ

ಸರ್ಕಾರಿ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರಿಗೆ ಬೇಸಿಗೆಯಲ್ಲಿ ತಂಪಾದ ನೀರು ಪೂರೈಕೆ ಮಾಡಬೇಕು ಎಂದು ಸನ್ಮಾರ್ಗ ತಂಡದ ಸದಸ್ಯರು ನಿರ್ಧರಿಸುತ್ತಾರೆ. ಮೊದಲಿಗೆ ಸ್ಥಳೀಯವಾಗಿ ಹಳ್ಳಿಗಳಿಗೆ ಓಡಾಡುವ ಐದು ಬಸ್‌ಗಳಿಗೆ ನೀರಿನ ಕ್ಯಾನ್‌ಗಳನ್ನು ಅಳವಡಿಸಿ ಬೇಸಿಗೆಯಲ್ಲಿ ಮೂರು ತಿಂಗಳು ನಿತ್ಯ ನೀರು ಪೂರೈಕೆ ಮಾಡುತ್ತಾರೆ. ಇದನ್ನು ಗಮನಿಸಿದ ಸರ್ಕಾರಿ ಬಸ್‌ಗಳ ಚಾಲಕ-ನಿರ್ವಾಹಕರು ತಮ್ಮ ಬಸ್‌ನಲ್ಲೂ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡುತ್ತಾರೆ. ಹೀಗಾಗಿ 2ನೇ ವರ್ಷ 20 ಬಸ್‌ಗಳಿಗೆ, 3ನೇ ವರ್ಷದಲ್ಲಿ 48 ಬಸ್‌ಗಳಿಗೆ, 4 ನೇ ವರ್ಷದಲ್ಲಿ 85 ಬಸ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಪ್ರತಿ ವರ್ಷ ಬೇಡಿಕೆ ಹೆಚ್ಚಾಗಿ ಈ ಬಾರಿ ಬರೋಬ್ಬರಿ 120 ಬಸ್‌ಗಳಿಗೆ ನೀರು ಪೂರೈಸಲಾಗುತ್ತಿದೆ.

ಯಾವ್ಯಾವ ಬಸ್‌ಗಳು ?

ಬಳ್ಳಾರಿಯಿಂದ ಹೊರಡುವ ಪೂನಾ, ಔರಂಗಬಾದ್‌, ಕೋಲಾರ, ಧರ್ಮಸ್ಥಳ, ಹೈದ್ರಾಬಾದ್‌, ಕರ್ನೂಲ್‌, ಬೆಂಗಳೂರು ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲೆಯ ನಾನಾ ಭಾಗಗಳಿಗೆ ಹೊರಡುವ ಬಸ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಂದು ಬಸ್‌ನಲ್ಲಿ 20 ಲೀಟರ್‌ನ ಎರಡು ಕ್ಯಾನ್‌ಗಳನ್ನು ಇರಿಸಲಾಗುವುದು. ಕ್ಯಾನ್‌ಗೆ ಸುತ್ತಬಟ್ಟೆಯನ್ನು ಕಟ್ಟಿನೀರು ತಂಪಾಗಿ ಇಡಲಾಗುವುದು. ಇದಕ್ಕಾಗಿಯೇ 290 ಕ್ಯಾನ್‌ಗಳನ್ನು ಖರೀದಿಸಲಾಗಿದ್ದು ನಿತ್ಯ ನೀರು ಪೂರೈಕೆ ಸೇವೆ ತಪ್ಪದಂತೆ ನಿಗಾ ವಹಿಸಲಾಗುವುದು. ಪ್ರತಿ ವರ್ಷ ಮಾಚ್‌ರ್‍ ತಿಂಗಳಲ್ಲಿ ಇದಕ್ಕೆ ಚಾಲನೆ ದೊರೆಯಲಿದ್ದು ಎರಡುವರೆ ತಿಂಗಳು ನಿರಂತರವಾಗಿ ನೀರು ವ್ಯವಸ್ಥೆ ಮಾಡಿ ಪ್ರಯಾಣಿಕರ ನೀರಿನ ದಾಹ ನೀಗಿಸಲಾಗುತ್ತದೆ.

ಸಿದ್ಧತೆ ಹೇಗೆ ?

ಸನ್ಮಾರ್ಗ ತಂಡದ ಮುಖ್ಯಸ್ಥ ಚಂದ್ರಶೇಖರ್‌ ಆಚಾರ್‌ ಅವರು ತಮ್ಮ ಊರಾದ ಬಳ್ಳಾರಿಯ ಬಳಿಯ ಕಪ್ಪಗಲ್‌ ಗ್ರಾಮದಲ್ಲಿ ತಮ್ಮ ಸ್ನೇಹಿತರ ಜೊತೆಗೂಡಿ ನಿತ್ಯ ಕ್ಯಾನ್‌ಗಳನ್ನು ಸ್ವಚ್ಛ ಮಾಡಿ ಪ್ರತಿ ಕ್ಯಾನ್‌ಗೆ 2 ರು.ಗಳಂತೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಭರ್ತಿ ಮಾಡುತ್ತಾರೆ. ಬೆಳಗ್ಗೆ ತಮ್ಮದೇ ವಾಹನದ ಮೂಲಕ ಬಳ್ಳಾರಿ ಬಸ್‌ ಡಿಪೋಗೆ ತಂದಿಡುತ್ತಾರೆ. ಅಷ್ಟೊತ್ತಿಗಾಗಲೇ ವಿವಿಧೆಡೆಗೆ ಹೊರಡುವ ಸಿದ್ಧತೆಯಲ್ಲಿರುವ ಬಸ್‌ಗಳಲ್ಲಿ 20 ಲೀಟರ್‌ನ ಎರಡು ಕ್ಯಾನ್‌ಗಳನ್ನು ಇಡುತ್ತಾರೆ. ಕ್ಯಾನ್‌ಗಳನ್ನು ಹೊತ್ತೊಯ್ಯುವ ಕಾರ್ಯದಲ್ಲಿ ಚಾಲಕ-ನಿವಾರ್ಹಕರು ಸಹ ನೆರವಾಗುತ್ತಾರೆ. ಮತ್ತೆ ರಾತ್ರಿ ಹೊತ್ತಿಗೆ ಸಂಗ್ರಹಗೊಳ್ಳುವ ಖಾಲಿ ಕ್ಯಾನ್‌ಗಳನ್ನು ಕಪ್ಪಗಲ್‌ ಗ್ರಾಮಕ್ಕೆ ಹೊತ್ತೊಯ್ದು ಭರ್ತಿ ಮಾಡುತ್ತಾರೆ.

ಖರ್ಚು-ವೆಚ್ಚ ಭರಿಸೋರು ಯಾರು ?

ಸರ್ಕಾರಿ ಬಸ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಬೇಕಾದ ಖರ್ಚು ವೆಚ್ಚಗಳನ್ನು ಸನ್ಮಾರ್ಗ ತಂಡದ ಸದಸ್ಯರು ಹಂಚಿಕೊಳ್ಳುತ್ತಾರೆ. ಕ್ಯಾನ್‌ಗಳ ಖರೀದಿ, ನಿತ್ಯ ಕಪ್ಪಗಲ್‌ ಗ್ರಾಮದಿಂದ ಬಳ್ಳಾರಿಗೆ ಹೋಗಿ ಬರುವ ವಾಹನದ ಡೀಸೆಲ್‌ ಹಾಗೂ ಇದೇ ಕಾರ್ಯಕ್ಕೆಂದೇ ಒಬ್ಬರನ್ನು ನೇಮಿಸಲಾಗಿದ್ದು ಅವರಿಗೂ ಗೌರವ ಸಂಭಾವನೆ ನೀಡಲಾಗುತ್ತದೆ. ಈ ಎಲ್ಲವೂ ಸದಸ್ಯರೇ ಖರ್ಚು ಮಾಡುತ್ತಾರೆ. ಊರಲ್ಲಿ ನೀರು ತುಂಬಿಸುವಲ್ಲಿ ಸಹಾಯ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅವರಿಗೆ ಬೇಕಾಗುವ ಸಮವಸ್ತ್ರ, ಪುಸ್ತಕಗಳು ಸೇರಿದಂತೆ ಇಡೀ ವರ್ಷ ಅಗತ್ಯದ ಎಲ್ಲ ಪಠ್ಯೋಪಕರಣಗಳನ್ನು ಉಚಿತವಾಗಿ ನೀಡುತ್ತಾರೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಿತು

ಬಸ್‌ಗಳಲ್ಲಿ ಕುಡಿವನೀರು ಇರಿಸುವುದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಚಾಲಕ-ನಿರ್ವಾಹಕರು ಹೇಳುತ್ತಾರೆ. ಬಸ್‌ನ ಮುಂಭಾಗದಲ್ಲಿ ‘ಈ ಬಸ್‌ನಲ್ಲಿ ಕುಡಿಯುವ ನೀರು ಸಿಗುತ್ತದೆ’ ಎಂಬ ಸ್ಟಿಕ್ಕರ್‌ ಅಂಟಿಸಲಾಗಿದೆ. ಇದನ್ನು ನೋಡಿಯೇ ಸಾಕಷ್ಟುಜನರು ಬಸ್‌ಗಳನ್ನು ಹತ್ತುತ್ತಾರೆ. ಮುಖ್ಯವಾಗಿ ಆಂಧ್ರಪ್ರದೇಶದ ಕಡೆಗೆ ತೆರಳುವ ನಮ್ಮ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನೀರಿದೆ ಎಂಬ ಕಾರಣಕ್ಕಾಗಿಯೇ ಆಂಧ್ರದವರು ಕೂಡ ನಮ್ಮ ಬಸ್ಸು ಹತ್ತುತ್ತಾರೆ ಎಂದು ಚಾಲಕರು ಹೇಳುತ್ತಾರೆ.

Follow Us:
Download App:
  • android
  • ios