Asianet Suvarna News Asianet Suvarna News

ಅತೀಂದ್ರಿಯ ಅಂತ ಒಂದಿದೆಯಾ? ಪಂಚೇಂದ್ರಿಯಗಳನ್ನು ಮೀರಿದ ಆರನೇ ಇಂದ್ರಿಯ ಹೇಳಿದ ಕತೆ

ಸ್ಪರ್ಶ, ಗಂಧ, ರುಚಿ, ಶಬ್ದ, ದೃಶ್ಯ ಪಂಚೇಂದ್ರಿಯಗಳಿಂದ ನಮಗೆ ದಕ್ಕುವುದಿಷ್ಟು. ಪ್ರತ್ಯಕ್ಷವಾಗಿ ಕಂಡದ್ದಷ್ಟೇ ಸತ್ಯ ಎಂದು ಭಾವಿಸುವ ಜಗತ್ತಿನಲ್ಲಿ ನಾವಿದ್ದೇವೆ. ಹಾಗಾಗಿ ಇನ್ನೊಂದು ಇಂದ್ರಿಯದ ಬಗ್ಗೆ ನಮಗೆ ಜ್ಞಾನವಿಲ್ಲ. ಆದರೆ ಆ ಗ್ರಹಿಕೆ ಇದ್ದರೆ ದಕ್ಕುವ ವಿಚಾರಗಳೇ ಬೇರೆ...

supernatural power of our mind

ಡಿಸೆಂಬರ್‌ 2004
ಬೆಳಗ್ಗೆ 7:45ರ ಆಸುಪಾಸು. ತಮಿಳ್ನಾಡು, ಆಂಧ್ರ ಕಡಲ ಕಿನಾರೆಯ ಜನ ತಮ್ಮ ಎಂದಿನ ದಿನಚರಿಯಲ್ಲಿ ಮುಳುಗಿದ್ದರು. ಮಕ್ಕಳು ಬೆಳ್ಳಂಬೆಳಗ್ಗೆ ಎದ್ದು ಕ್ರಿಕೆಟ್‌ ಆಡುತ್ತಿದ್ದರು, ಹೆಣ್ಮಕ್ಕಳು ಬೆಳಗಿನ ತಿಂಡಿ ತಯಾರಿಯಲ್ಲಿದ್ದರು. ಪ್ರವಾಸಿಗರು ಕಡಲ ಕಿನಾರೆಯಲ್ಲಿ ಬೆಳಗಿನ ತಣ್ಣನೆಯ ಗಾಳಿಗೆ ಮೈಯ್ಯೊಡ್ಡಿ ಅಲೆಗಳ ಚಿನ್ನಾಟ ಸವಿಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ವಾತಾವರಣ ತುಸುವೇ ಬದಲಾಯ್ತು, ಬೆಳ್ಳಂಬೆಳಗ್ಗೆ ದಟ್ಟಮೋಡ ಕವಿದು ಎಲ್ಲೆಲ್ಲೂ ಕತ್ತಲೆ. ಪ್ರವಾಸಿಗರು ನೋಡುತ್ತಿರುವಂತೇ ಸಮುದ್ರ ಹಿಂದೆ ಹಿಂದೆ ಹೋಗುತ್ತಿದೆ! ಇದೇನಿದು, ಎಂದೂ ಕಾಣದ ಪ್ರಕೃತಿ ವಿಸ್ಮಯ ಎಂದು ಕಣ್ಣರಳಿಸಿ ನೋಡುವಾಗಲೇ ಅದೋ, ಸಮುದ್ರ ಮಧ್ಯದಿಂದ ಆಕಾಶದೆತ್ತರದ ನೂರು ಅಡಿಗಳಷ್ಟು ಬೃಹತ್‌ ದೈತ ಅಲೆ! ಏನಾಗುತ್ತಿದೆ ಎವೆ ಮುಚ್ಚುವುದರೊಳಗೇ ಅವರೆಲ್ಲ ಜಲಸಮಾಧಿಯಾಗಿದ್ದರು! ಆಡುತ್ತಿದ್ದ ಮಕ್ಕಳು, ನಿತ್ಯ ದಿನಚರಿಯಲ್ಲಿ ಮಗ್ನರಾದ ಜನ, ಪ್ರವಾಸಿಗರು ಎಲ್ಲರೂ ಜಲಸಮಾಧಿ! ಈ ಸುನಾಮಿ ವಿಶ್ವಾದ್ಯಂತ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತು. ಲಕ್ಷಾಂತರ ಜನ ನಿರ್ಗತಿಕರಾದರು.

ಈ ಘಟನೆ ನಡೆದ ಕೆಲವು ದಿನಗಳಲ್ಲಿ ಒಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂತು. ಈ ಸುನಾಮಿ ಸಂಭವಿಸುವುದಕ್ಕೂ ಕೆಲವಾರು ಗಂಟೆಗಳ ಮೊದಲೇ ಕಡಲ ಜೀವಿಗಳೆಲ್ಲ ಸುರಕ್ಷಿತ ಜಾಗಕ್ಕೆ ವಲಸೆ ಹೋಗಿದ್ದವು! ಕಡಲ ಜೀವಿಗಳು ಮಾತ್ರವಲ್ಲ. ಮೃಗಾಲಯದಲ್ಲಿದ್ದ ಪ್ರಾಣಿಗಳು, ಸಾಕು ಪ್ರಾಣಿಗಳ ವರ್ತನೆಯೂ ವಿಚಿತ್ರವಾಗಿತ್ತು. ಸುನಾಮಿಗೂ ಕೆಲವು ಗಂಟೆಗಳ ಮೊದಲು ಅವು ಹೊರಗಿನಿಂದ ಒಳಬಂದು ಮೂಲೆಯಲ್ಲಿ ಕೂತವು. ಕುಳಿತಲ್ಲಿಂದ ಅಲ್ಲಾಡುತ್ತಿರಲಿಲ್ಲ. ಹಕ್ಕಿಗಳೂ ಬೆಳ್ಳಂಬೆಳಗ್ಗೆ ಗೂಡಿಗೆ ಹಿಂತಿರುಗುತ್ತಿದ್ದವು. 

ಅಂದರೆ ಪ್ರಾಣಿಗಳಿಗೆ ಅವಘಡದ ಪೂರ್ವ ಸೂಚನೆ ಸಿಕ್ಕಿತ್ತೇ? ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೆ ಬರಬಹುದು. ನಿಮ್ಮ ಊಹೆ ನಿಜ. ಪ್ರಾಣಿಗಳ ಇಂದ್ರಿಯಗಳು ನಮಗಿಂತ ಸೂಕ್ಷ್ಮ. ಅವು ಪ್ರಕೃತಿಯ ಜೊತೆಗೆ ಹೆಚ್ಚು ಒಡನಾಡುವುದರಿಂದ ಪ್ರಾಕೃತಿಕ ಮುನ್ಸೂಚನೆ ಅವರಿಗೆ ನಮಗಿಂತ ಮೊದಲೇ ಸಿಗುತ್ತದೆ. 

ನಮಗೂ ಇಂಥ ಅನುಭವಗಳಾಗುತ್ತವೆ. ಹೆಚ್ಚಿನ ಸಲ ನಾವದನ್ನು ಸರಿಯಾಗಿ ಗ್ರಹಿಸುವುದಿಲ್ಲ. ಕೆಲವೊಮ್ಮೆ ಬೆಳಗ್ಗೆ ಎದ್ದಾಗಲೇ ಮನಸ್ಸಿಗೇನೋ ಬೇಸರ, ಕಳವಳವಾಗುತ್ತದೆ, ಅವತ್ತೇ ಏನಾದರೂ ಅಶುಭವಾರ್ತೆ ಬಂದಿರುತ್ತದೆ. ಆಪ್ತರ ಅಗಲಿಕೆ ಸಂದರ್ಭದಲ್ಲಿ ‘ನಂಗೆ ಬೆಳಗ್ಗೆಯೇ ಸೂಚನೆ ಸಿಕ್ಕಿತು, ಹೀಗಾಗುತ್ತೆ ಅಂತ ..' ಹೀಗೆಂದು ಹಿರಿಯರು ಹೇಳಿದ್ದು ನಿಮ್ಮ ಕಿವಿಗೆ ಬಿದ್ದಿರಬಹುದು. ಕೆಲವೊಮ್ಮೆ ಹತ್ತಿರದ ವ್ಯಕ್ತಿಗೆ ಫೋನ್‌ ಮಾಡಬೇಕೆಂದುಕೊಂಡರೂ ಒಂದಲ್ಲೊಂದು ಅಡೆತಡೆಗಳು ಬಂದು ಫೋನ್‌ ಮಾಡಲಿಕ್ಕಾಗಿರಲ್ಲ. ಹಾಗೆ ತಪ್ಪಿದ್ದಕ್ಕೇ ಏನೋ ಅವಘಡದಿಂದ ಪಾರಾಗಿರುತ್ತೇವೆ. ಒಬ್ಬ ವ್ಯಕ್ತಿಯ ಎದುರು ನಿಂತಾಗಲೇ ಅವನು ಮೋಸ ಮಾಡಬಹುದೆಂಬ ಸುಳಿವು ಸಿಗುತ್ತದೆ. ಈ ಎಲ್ಲ ಘಟನೆಯ ಹಿಂದಿರುವುದು ಅತೀಂದ್ರಿಯ ಶಕ್ತಿ! 

ಮಂಟೇಸ್ವಾಮಿ ಕಂಡ ಮುನ್ಸೂಚನೆ:
ಜನಪದ ಸಂತ ಮಂಟೇಸ್ವಾಮಿ. ‘ಮಂಟೇಸ್ವಾಮಿ ಪುರಾಣ'ದ ಪ್ರಕಾರ ಈತನಿಗೆ ಮಾರಿಯರು ಬರುವ ಮುನ್ಸೂಚನೆ ಸಿಕ್ಕಿರುತ್ತದೆ. ಇಲ್ಲಿ ಮಾರಿಯರು ಎಂದರೆ ರೋಗಗಳು, ಪ್ರಕೃತಿ ವೈಪರೀತ್ಯ. ಇಡೀ ಊರಿನ ಅಮಾಯಕರನ್ನು ಬಲಿತೆಗೆದುಕೊಳ್ಳುವ ಮಾರಿಯರು ಗ್ರಾಮ ಪ್ರವೇಶಿಸದಂತೆ ಮಾಡಿ ಜನರನ್ನು ಕಾಯುತ್ತಾನೆ ಮಂಟೇ ಸ್ವಾಮಿ. ಆತನಿಗೆ ಕಲಿಯ ಪ್ರವೇಶ, ನಂತರದ ಪರಿಣಾಮಗಳ ಬಗ್ಗೆಯೂ ಗೊತ್ತಿತ್ತು. ಆತ ಕಲಿಯಿಂದಾಗುವ ತೊಂದರೆಗಳನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿ, ಕಲಿ ಬರುವ ಮೊದಲೇ ತಾನೇ ಕೊರೆದ ಬಾವಿಯಲ್ಲಿ ಪಾತಾಳ ಸೇರುತ್ತಾನೆ ಎಂದು ಹೇಳುತ್ತದೆ ಮಂಟೇಸ್ವಾಮಿ ಪುರಾಣ. 

ಹಿಮಾಲಯದ ತಪಸ್ವಿಗಳು:
ಹಿಮಾಲಯದ ತಪಸ್ವಿಗಳ ಬಗ್ಗೆ ಸಾಕಷ್ಟುಕೃತಿಗಳು ಬಂದಿವೆ. ತಮ್ಮ ಜನ್ಮಾಂತರದ ಶಿಷ್ಯಂದಿರನ್ನು ಗುರುತಿಸುವುದು, ಯಾರ ಗಮನಕ್ಕೂ ಬರದಂತೆ ಅವರಿಗೆ ಆಧ್ಯಾತ್ಮಿಕವಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಿಸುವುದು, ವಿವಿಧ ವ್ಯಕ್ತಿಗಳ ಮೂಲಕ ಕಾಲ ಕಾಲಕ್ಕೆ ಸಂದೇಶ ನೀಡುವುದು, ಕೊನೆಗೆ ಶಿಷ್ಯರನ್ನು ಮುಖಾಮುಖಿಯಾಗಿ ತಮ್ಮ ಜ್ಞಾನವನ್ನು ಅವರಿಗೆ ಧಾರೆ ಎರೆಯುವುದು .. ಇವಿಷ್ಟೂನಡೆಯುವುದು ಅತೀಂದ್ರಿಯದ ಮೂಲಕವೇ. 

ಸ್ವಾಮಿ ಯೋಗಾನಂದರ ಅನುಭವ:
ಸ್ವಾಮಿ ಯೋಗಾನಂದರ ಆತ್ಮಕತೆಯಲ್ಲಿ ಒಂದು ಸನ್ನಿವೇಶ ಬರುತ್ತದೆ. ಒಬ್ಬ ಸಂತನ ಮೂಲಕ ಇನ್ನೊಬ್ಬ ಸಾಧುವನ್ನು ಮುಕುಂದ (ಸ್ವಾಮಿ ಯೋಗಾನಂದರ ಪೂರ್ವಾಶ್ರಮದ ಹೆಸರು) ಭೇಟಿಯಾಗಲು ಹೋದ ಸಂದರ್ಭವಿದು. ಇವರನ್ನು ಕರೆದೊಯ್ಯುವ ಸಾಧು ಅಲ್ಲಿರುವ ಇನ್ನೊಬ್ಬ ಸಂತನಿಗೆ ಅತೀಂದ್ರಿಯದ ಮೂಲಕವೇ ತಮ್ಮ ಆಗಮನದ ಸೂಚನೆ ನೀಡಿರುತ್ತಾನೆ. ಈತ ಹೋಗಲು ಅರ್ಧ ಗಂಟೆ ಮೊದಲೇ ಆ ಸಂತ ತನ್ನ ಶಿಷ್ಯಂದಿರಿಗೆ ಇವರಿಬ್ಬರು ಬರುವ ವಿಷಯ ತಿಳಿಸಿರುತ್ತಾರೆ. ಒಮ್ಮೆಯೂ ನೋಡದೇ, ಒಂದಕ್ಷರವೂ ಮಾತನಾಡದೇ ಇವರ ಸಂಪೂರ್ಣ ವಿವರ ಅವರ ಬಳಿ ಇರುತ್ತದೆ. 

ಅಚ್ಚರಿ ಮೂಡಿಸಿದ ಲಾಮಾ:
ಹಿಮಾಲಯದ ಸಾಧುಗಳ ಇನ್ನೊಂದು ಕತೆಯಲ್ಲಿ ಗುರುಗಳು ಶಿಷ್ಯನನ್ನು ಹೆಚ್ಚಿನ ಜ್ಞಾನಾರ್ಜನೆಗೆ ಟಿಬೆಟಿಯನ್‌ ಲಾಮಾನ ಬಳಿ ಕಳಿಸುತ್ತಾರೆ. ಉಸಿರಾಟದಲ್ಲಿ ನಿಯಂತ್ರಣ ಸಾಧಿಸಿ ದೇಹವನ್ನು ಹಕ್ಕಿಯಂತೆ ಹಗುರಾಗಿಸಿ ಧ್ಯಾನಸ್ಥನಾಗಿ ತೇಲುವ ಮಹಾನುಭಾವ ಆತ. ಗುರುಗಳು ಹೇಳಿದ ದಾರಿಯಲ್ಲೇ ಆ ಲಾಮಾನನ್ನು ಹುಡುಕುತ್ತ ಈ ಶಿಷ್ಯ ಹೋದಾಗ ಅಲ್ಲಿ ಲಾಮಾ ಈತನ ದಾರಿ ಕಾಯುತ್ತ ಕುಳಿತಿದ್ದ, ಈತನ ಊಟ, ವಸತಿಗೆ ವ್ಯವಸ್ಥೆಯನ್ನೂ ಮಾಡಿದ್ದ. ಇದನ್ನೆಲ್ಲ ಕಂಡು ಶಿಷ್ಯನಿಗೆ ಅಚ್ಚರಿ. ಆ ಲಾಮಾ ಶಿಷ್ಯನಿಗೆ ಪಾಠ ಕಲಿಸುವಾಗಲೂ, ‘ನಿನ್ನ ಗುರು ಮೊನ್ನೆ ಅದನ್ನು ಕಲಿಸುವಾಗ ಹೀಗೆ ಹೇಳಿದ್ದಾರಲ್ಲ' ಎಂದು ಅಷ್ಟು ಖಚಿತವಾಗಿ ಉಲ್ಲೇಖಿಸುತ್ತಿದ್ದ. ಶಿಷ್ಯನಿಗೆ ಅತೀಂದ್ರಿಯ ಜ್ಞಾನದ ಸಾಧ್ಯತೆಗಳ ಸಾಕಾರವಾದದ್ದು ಹೀಗೆ.

ಹೀಗೆ ಅತೀಂದ್ರಿಯ ವಿಷಯವನ್ನು ಗ್ರಹಿಸುವ ತಾಕತ್ತು ಇರುವವರಿಗೆ ದಕ್ಕುವ ವಿಚಾರಗಳು ಹಲವು. ಅವುಗಳದ್ದೇ ಒಂದು ಲೋಕ. ನಮಗೆ ಈ ವಿಚಾರ ಗೊತ್ತಿಲ್ಲದ ಕಾರಣ ಅವು ಅಚ್ಚರಿ ಮೂಡಿಸುತ್ತವೆ. ಆದರೆ ಸಾಧಕರಿಗೆ ಅತೀಂದ್ರಿಯ ಗ್ರಹಿಕೆ ಕಲಿಕೆಯ ಒಂದು ಹಂತವಷ್ಟೇ. ಈ ಹಂತವನ್ನು ದಾಟಿ ಅವರು ಮುಂದುವರಿಯುತ್ತಾರೆ. ಈ ಜ್ಞಾನವನ್ನು ಬಳಸಿಕೊಂಡು ಅತ್ಯುನ್ನತ ಹಂತವಾದ ಭಗವಂತನ ಸಾಯುಜ್ಯವೇ ಅವರಿಗೆ ಅಂತಿಮ.
-----------

ನಮಗೂ ಅತೀಂದ್ರಿಯ ಅನುಭವವಾಗಬಹುದೇ?

ಈ ಪ್ರಶ್ನೆ ಕೇಳುವವರಲ್ಲಿ ಅತೀಂದ್ರಿಯದ ಬಗ್ಗೆ ಬೆರಗು, ಕುತೂಹಲ, ಈ ಕೂಡಲೇ ಅದನ್ನು ಕಲಿಯಬೇಕೆಂಬ ಹಪಾಹಪಿ ಕಾಣುತ್ತದೆ. ಆದರೆ ಅಷ್ಟುಸುಲಭವಾಗಿ ಅತೀಂದ್ರಿಯ ಗ್ರಹಿಕೆ ಸಿಗಬಹುದೆಂಬ ನಿರೀಕ್ಷೆ ಬೇಡ. ಯಾಕೆಂದರೆ ಇವತ್ತು ನಾಳೆಯಲ್ಲಿ ಕಲಿತುಬಿಡಲು ಅದೊಂದು ‘ಟೆಕ್ನಿಕ್‌' ಅಲ್ಲ. ಸತತ ಸಾಧನೆಯಿಂದಷ್ಟೇ ಸಿದ್ಧಿಸಿಕೊಳ್ಳಲು ಸಾಧ್ಯವಾಗುವ ಶಕ್ತಿ. ನಾವಿರುವ ಸ್ಥಿತಿಯಲ್ಲಿ ಅತೀಂದ್ರಿಯ ಜಗತ್ತಿನ ಸಮೀಪಕ್ಕಷ್ಟೇ ಹೋಗಲು ಸಾಧ್ಯ. ಅದಕ್ಕೆ ಸಹಾಯಕವಾಗುವ ಅಂಶಗಳು ಇಲ್ಲಿವೆ.

1) ಏಕಾಗ್ರತೆ:
ಪ್ರಾಣಾಯಾಮ, ಧ್ಯಾನ, ಯೋಗಗಳು ನಿಮಗೆ ಈ ಏಕಾಗ್ರತೆಯನ್ನು ತಂದುಕೊಡಬಲ್ಲವು. ದಿನ ದಿನವೂ ಧ್ಯಾನವನ್ನ ಒಂದು ಮಿತಿಯವರೆಗೆ ಹೆಚ್ಚಿಸುತ್ತ ಹೋಗಿ. ಧ್ಯಾನ ಮಾಡುವಾಗಲೂ ಕೆಲವು ವಿಶಿಷ್ಟಅನುಭವಗಳಾಗಬಹುದು. ಅವನ್ನು ಅನುಭವಿಸಿ. 

2) ಪೂರ್ವಾಗ್ರಹವನ್ನು ಕಿತ್ತೊಗೆಯಿರಿ:
ಹೆಚ್ಚಿನ ವಿಚಾರಗಳನ್ನು ನಾವು ನಮ್ಮ ಅನುಭವದ ಆಧಾರದಲ್ಲಿ ಊಹಿಸುತ್ತ ಹೋಗುತ್ತೇವೆ. ಆ ಪ್ರಕಾರ ಘಟನೆಯನ್ನು ನೋಡುತ್ತೇವೆ. ಈ ಮನಸ್ಥಿತಿ ನಿಮ್ಮನ್ನು ವಸ್ತುಸ್ಥಿತಿಯಿಂದ ದೂರವಿಡುತ್ತದೆ. ಗಾಳಿಯಷ್ಟುಹಗುರಾದರೆ ಮಾತ್ರ ಆಕಾಶದಲ್ಲಿ ಹಾರಾಡಲು ಸಾಧ್ಯ ಎಂಬುದು ನೆನಪಿರಲಿ. ಹಾಗೆ ಹಗುರಾಗಬೇಕಾದರೆ ಊಹೆಯ ಭಾರವನ್ನು ಹೇರಬಾರದು. ಆ ಕ್ಷಣದ ಅನುಭವದ ಮೂಲಕವೇ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. 

3) ಅತೀಂದ್ರಿಯದ ಅಲೆಗಳನ್ನು ನಿರಾಕರಿಸಬೇಡಿ:
ಕೆಲವೊಮ್ಮೆ ಮನಸ್ಸು ಅಪಾಯದ ಮುನ್ಸೂಚನೆ ನೀಡುತ್ತಿರುತ್ತದೆ. ಅದನ್ನು ನಿರ್ಲಕ್ಷಿಸಬೇಡಿ. ಅದರತ್ತಲೇ ಗಮನ ಕೇಂದ್ರೀಕರಿಸಿ. ಸ್ವಲ್ಪಮಟ್ಟಿಗೆ ಅಪಾಯದ ಚಿತ್ರ ನಿಮಗೆ ದಕ್ಕುತ್ತದೆ. ಫಾಸ್ಟಾಗಿ ಗಾಡಿಯಲ್ಲಿ ಹೋಗುತ್ತಿರುತ್ತೀರಿ, ಒಂದು ಹೊತ್ತಿನಲ್ಲಿ ಮನಸಿನ ಅಲಾರಾಂ ಹೊಡೆದುಕೊಳ್ಳುತ್ತೆ. ಕೂಡಲೇ ವೇಗ ತಗ್ಗಿಸಿ. ಇಲ್ಲವಾದರೆ ಅವಘಡವಾಗುವ ಸಾಧ್ಯತೆ ಇರುತ್ತೆ. ಈ ಬಗೆಯ ವೇವ್‌'ಗಳು ಸುಳ್ಳಾಗೋದು ಕಡಿಮೆ, ಅಪಾಯ ದೂರ ಸರಿದಂತೆ ಇವು ಮಾಯವಾಗುತ್ತವೆ.

4) ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿ:
ಹೊಸ ಜಾಗಕ್ಕೆ ಹೋಗಿರುತ್ತೀರಿ. ಅಲ್ಲಿ ನಿಮಗೊಂದಿಷ್ಟುಅನುಭವಗಳಾಗುತ್ತವೆ. ಪೂರ್ವಾಗ್ರಹಗಳಿಲ್ಲದೇ ನೋಡಿದಾಗ ಕೆಲವೊಮ್ಮೆ ಮನಸ್ಸಿಗೆ ಹಿತವಾಗುತ್ತದೆ, ಕೆಲವೊಮ್ಮೆ ಕಸಿವಿಸಿಯಾಗುತ್ತದೆ, ಭಯ, ಆತಂಕದ ಭಾವನೆ ಬರುತ್ತದೆ. ಅವುಗಳ ಆಧಾರದಲ್ಲಿ ನೀವು ಆ ಜಾಗವನ್ನು ವಿಶ್ಲೇಷಿಸಬಹುದು. 

5) ಪ್ರಕೃತಿಯ ಜೊತೆಗೆ ಹೆಚ್ಚು ಕಾಲ ಕಳೆಯಿರಿ:
ಎಲ್ಲ ಜ್ಞಾನವನ್ನೂ ತನ್ನೊಳಗೆ ಹುದುಗಿಸಿಕೊಂಡಿರುವವಳು ಪ್ರಕೃತಿ. ಆಕೆಗೆ ಶರಣಾಗಿ ಹೆಚ್ಚೆಚ್ಚು ಸಮಯ ನಿಸರ್ಗದೊಂದಿಗೆ ಕಳೆಯಿರಿ. ಪ್ರಕೃತಿಯ ಸೂಕ್ಷ್ಮ ಅತಿಸೂಕ್ಷ್ಮ ಶಬ್ದಗಳು, ನಿಶ್ಶಬ್ದ, ಹಗಲು, ಇರುಳು- ಎಲ್ಲವನ್ನೂ ಅನುಭವಿಸಿ. ದೊಡ್ಡ ಅತೀಂದ್ರಿಯ ಜಗತ್ತಿನ ಪಾಠ ಇಲ್ಲೇ ಲಭಿಸುತ್ತದೆ.

- ಪ್ರಿಯಾ ಕೆರ್ವಾಶೆ, ಕನ್ನಡಪ್ರಭ
epaper.kannadaprabha.in