life
By Suvarna Web Desk | 03:19 PM March 26, 2017
ಬುದ್ಧಿವಂತ ಮಗು ಹುಟ್ಟಬೇಕೆ? ಇಲ್ಲಿದೆ ಗರ್ಭಿಣಿಯರು ಮಾಡಬೇಕಾದ 8 ಕೆಲಸಗಳು

Highlights

ಗರ್ಭದಲ್ಲಿರುವ ಶಿಶುವಿಗೆ ಹೊರಗಿನ ಸ್ಪರ್ಶದ ಅನುಭವವೂ ಆಗುತ್ತದೆ. ಹೊಟ್ಟೆಯನ್ನು ಮುಟ್ಟಿದರೆ ಅದಕ್ಕೆ ಮಗು ರಿಯಾಕ್ಟ್ ಮಾಡುತ್ತದೆ. ತಾಯಿಯ ಸ್ಪರ್ಶ, ತಂದೆಯ ಸ್ಪರ್ಶದ ವ್ಯತ್ಯಾಸವನ್ನೂ ಅದು ಗ್ರಹಿಸಬಲ್ಲುದು.

ಜನ್ಮತಃ ಎಲ್ಲವೂ ನಮಗೆ ಸಿದ್ಧಿಸಿರುವುದಿಲ್ಲ. ವಂಶಪಾರಂಪರ್ಯವಾಗಿ ಕೆಲ ಗುಣಗಳು ಮುಂದಿನ ಸಂತಾನಗಳಿಗೆ ವರ್ಗಾವಣೆಯಾಗುತ್ತವಾದರೂ, ಮಗುವಿನ ಗುಣಗಳ ಮೇಲೆ ಪರಿಸರದ ಪ್ರಭಾವವೂ ಇರುತ್ತದೆ. ಹೊಟ್ಟೆಯಲ್ಲಿರುವಾಗಲೇ ಮಗು ಕಲಿಕೆ ಆರಂಭಿಸುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮನು ಗರ್ಭಿಣಿ ಸುಭದ್ರೆಯ ಬಳಿ ಚಕ್ರವ್ಯೂಹ ಭೇದಿಸುವ ಕುರಿತು ಮಾತುಗಳನ್ನಾಡಿರುತ್ತಾನೆ. ಹೊಟ್ಟೆಯಲ್ಲಿದ್ದ ಭ್ರೂಣ(ಅಭಿಮನ್ಯು) ಇದನ್ನು ಗ್ರಹಿಸುತ್ತದೆ ಎಂದು ಹೇಳಲಾಗಿದೆ. ಪುರಾಣಗಳ ಮಾತಿರಲಿ, ನಮ್ಮ ಆಧುನಿಕ ಸಂಶೋಧನೆಯಲ್ಲೂ ಗರ್ಭದೊಳಗಿನ ಶಿಶುವಿಗೆ ಹೊರಗಿನ ಪರಿಸರದ ಪ್ರಭಾವ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಹೊಟ್ಟೆಯಲ್ಲಿದ್ದಾಗಲೇ ಮಗುವಿಗೆ ಸಕರಾತ್ಮಕವಾಗಿ ಹೇಗೆ ಪ್ರಭಾವ ಬೀರಬಹುದು ಎಂಬ ಟಿಪ್ಸ್ ಇಲ್ಲಿದೆ. ಎಲ್ಲಾ ಗರ್ಭಿಣಿಯರು ಇದನ್ನು ಪ್ರಯತ್ನಿಸುವುದರಲ್ಲಿ ಯಾವ ನಷ್ಟವೂ ಇಲ್ಲ.

1) ಕಥೆ ಹೇಳಿರಿ:
6-9 ತಿಂಗಳ ಗರ್ಭಾವಸ್ಥೆಯಲ್ಲಿರುವಾಗ ಮಗು ಭಾಷೆಯನ್ನು ಗ್ರಹಿಸುವ ಶಕ್ತಿ ಹೊಂದಿರುತ್ತದಂತೆ. ಇದನ್ನು ಸಂಶೋಧಕರು ತಮ್ಮ ಅಧ್ಯಯನದಿಂದ ನಿರೂಪಿಸಿದ್ದಾರೆ. 6-9 ತಿಂಗಳ ಗರ್ಭಿಣಿಯರಿಂದ ಸತತವಾಗಿ ಕಥೆಯ ಕೆಲ ಸಾಲುಗಳನ್ನು ಹೇಳಿಸಲಾಗುತ್ತದೆ. ಪ್ರಸವದ ಬಳಿಕ ಮಕ್ಕಳಲ್ಲಿ ಆ ಕಥೆ ಸಾಲುಗಳನ್ನು ಉಚ್ಚರಿಸಿದಾಗ ಅವು ಗುರುತಿಸುತ್ತವೆ.

ಈ ಹಿನ್ನೆಲೆಯಲ್ಲಿ, ಮಹಿಳೆಯರೇ ನೀವು ತುಂಬು ಗರ್ಭಿಣಿಯಾದಾಗ ಒಳ್ಳೆಯ ಪುಸ್ತಕಗಳಲ್ಲಿನ ಸಾಲುಗಳನ್ನು ಬಾಯಿಬಿಟ್ಟು ಓದಿರಿ. ಅವು ನಿಮ್ಮ ಮಗುವಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಭಾಷೆಯ ಕಲಿಕೆಗೆ ಸಹಾಯವಾಗುತ್ತದೆ.

2) ಆರೋಗ್ಯಯುತ ಆಹಾರ:
ಮಗುವಿನ ಮಿದುಳ ಬೆಳವಣಿಗೆಗೆ ಒಮೇಗಾ 3 ಫ್ಯಾಟಿ ಆ್ಯಸಿಡ್'ಗಳು ಬಹಳ ಮುಖ್ಯ. ಮೀನು, ಸೋಯಾಬೀನ್ಸ್, ಪಾಲಾಕ್ ಸೊಪ್ಪು, ಬಾದಾಮಿ, ವಾಲ್'ನಟ್'ಗಳಲ್ಲಿ ಈ ಪೋಷಕಾಂಶ ಯಥೇಚ್ಛವಾಗಿರುತ್ತವೆ. ಗರ್ಭಿಣಿಯರು ಇಂಥವನ್ನು ಸೇವನೆ ಮಾಡಬೇಕು. ವೈದ್ಯರು ನೀಡುವ ಮಾತ್ರೆಗಿಂತ ನೈಸರ್ಗಿಕವಾಗಿ ದೊರಕುವ ಈ ಆಹಾರಗಳು ಉತ್ತಮವಲ್ಲವೇ?

3) ಕ್ರಿಯಾಶೀಲರಾಗಿ:
ಗರ್ಭಿಣಿಯಾದಾಕ್ಷಣ ಕುಳಿತಲ್ಲೇ ಕೂರಬೇಕು, ಮಲಗಬೇಕು ಎಂಬ ಸಲಹೆಗಳನ್ನು ಕೇಳುತ್ತೇವೆ. ಆದರೆ, ಇದು ಶುದ್ಧ ತಪ್ಪು. ಗರ್ಭಿಣಿಯರು ಸೋಂಬೇರಿಗಳಾದಷ್ಟೂ ಅದು ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಯಾಮ, ಕೆಲಸ ಇತ್ಯಾದಿಗಳಿಂದ ಕ್ರಿಯಾಶೀಲರಾದಾಗ ಮೈತುಂಬಾ ರಕ್ತದ ಚಲನೆಯ ಪ್ರಮಾಣ ಹೆಚ್ಚಾಗುತ್ತದೆ. ಇದು ಗರ್ಭಕ್ಕೂ ಅನ್ವಯಿಸುತ್ತದೆ. ಇದರಿಂದ ಗರ್ಭದಲ್ಲಿನ ಶಿಶುವಿನ ಬೆಳವಣಿಗೆಗೆ ಅನುಕೂಲವಾಗುತ್ತದೆ. ಸಂಶೋಧನೆ ಪ್ರಕಾರ, ಕ್ರಿಯಾಶೀಲರಾಗಿರುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳು ಬುದ್ಧಿವಂತಿಕೆ ಹೊಂದಿರುತ್ತವಂತೆ.

4) ಮಾತು, ಸಂಗೀತ:
ಗರ್ಭದಲ್ಲಿರುವ ಶಿಶುಗಳಿಗೆ ತಮ್ಮ ತಾಯಿಯ ಧ್ವನಿಯ ಅನುಭವಾಗುತ್ತದೆ. ನೀವು ಮಾತನಾಡುತ್ತಿರುವುದು ಏನು ಎಂಬುದು ಅದಕ್ಕೆ ಗೊತ್ತಾಗದೇ ಹೋದರೂ, ನಿಮ್ಮ ಮಾತಿನಿಂದ ಅದು ಪ್ರಭಾವಿತಗೊಳ್ಳುತ್ತದೆ. ನೀವು ಹಾಡು ಹಾಡಿದಾಗಲೂ ಅದರ ಪ್ರಭಾವವು ಶಿಶುವಿನ ಮೇಲಾಗುತ್ತದೆ. ಶಿಶುಗಳಿಗೆ ಹಾಡು ಬಹಳ ಇಷ್ಟವಂತೆ. ಜೊತೆಗೆ, ಅದು ಶಿಶುವಿನ ಏಕಾಗ್ರತೆಗೆ ಸಹಾಯವಾಗುತ್ತದೆ. ಹೀಗಾಗಿ, ನೀವು ಒಳ್ಳೆಯ ಮಾತುಗಳನ್ನಾಡುತ್ತಿರಬೇಕು; ಹಾಡು ಹಾಡುತ್ತಿರಬೇಕು. ಹಾಡಲು ಬರದಿದ್ದರೂ ಒಳ್ಳೆಯ ಸಂಗೀತವನ್ನು ಕೇಳುತ್ತಿರಬೇಕು.

5) ಥೈರಾಯ್ಡ್ ಬಗ್ಗೆ ಹುಷಾರ್..!
ಮನುಷ್ಯನ ದೇಹಕ್ಕೆ ಥೈರಾಯ್ಡ್ ಬಹಳ ಮುಖ್ಯ. ಗರ್ಭಿಣಿಯರಲ್ಲಿ ಥೈರಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಥೈರಾಯ್ಡ್ ಪರೀಕ್ಷೆ ನಡೆಸಿ, ಅದರ ಪ್ರಮಾಣ ಸಹವಾಗಿದೆಯೇ ಎಂದು ತಿಳಿದುಕೊಳ್ಳಿ. ಥೈರಾಯ್ಡ್ ಕಡಿಮೆಯಾದರೆ ಸೋಡಿಯಂ ಅಂಶವಿರುವ ಆಹಾರಗಳನ್ನು ಸೇವಿಸಿ. ಅಯೋಡಿನ್'ಯುಕ್ತ ಉಪ್ಪು, ಯೋಗರ್ಟ್ (ಒಂದು ರೀತಿಯ ಮೊಸರು) ಸೇವಿಸಿ.

6) ವೈದ್ಯರ ಔಷಧವೂ ಮುಖ್ಯ:
ಗರ್ಭಿಣಿಯರಿಗೆ ಹಲವು ಪೌಷ್ಟಿಕಾಂಶಗಳು ಬೇಕಾಗುತ್ತವೆ. ಇವುಗಳ ಸೇವನೆಯಲ್ಲೂ ಸಮತೋಲನ ಇರಬೇಕಾಗುತ್ತದೆ. ಎಲ್ಲವನ್ನೂ ನೈಸರ್ಗಿಕ ಆಹಾರದಿಂದಲೇ ನಿಭಾಯಿಸುವುದು ಕಷ್ಟ. ಹೀಗಾಗಿ, ವೈದ್ಯರು ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶಗಳ ಮಾತ್ರೆಗಳನ್ನು ನೀಡಿರುತ್ತಾರೆ. ಅನೇಕರು ಇದನ್ನು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷಿಸುತ್ತಾರೆ. ಆದರೆ, ಇದು ಸರಿಯಲ್ಲ. ವೈದ್ಯರು ನೀಡುವ ಪೌಷ್ಟಿಕಾಂಶದ ಟ್ಯಾಬ್ಲೆಟ್'ಗಳನ್ನು ತಪ್ಪದೇ ಸೇವಿಸಿ. ಇವು ಶಿಶು ಬೆಳವಣಿಗೆಗೆ ಸಹಕಾರಿಯಾಗುತ್ತವೆ.

7) ಬಿಸಿಲಿಗೆ ಮೈಯೊಡ್ಡಿ:
ದೇಹಕ್ಕೆ ವಿಟಮಿನ್ ಡಿ ಅತ್ಯವಶ್ಯ. ಸೂರ್ಯನ ರಶ್ಮಿಯಲ್ಲಿ ವಿಟಮಿನ್ ಡಿ ಪೋಷಕಾಂಶವಿರುತ್ತದೆ. ಗರ್ಭಿಣಿಯರು ದಿನಕ್ಕೆ ಕನಿಷ್ಠ 20 ನಿಮಿಷವಾದರೂ ಬಿಸಿಲಿಗೆ ಮೈಯೊಡ್ಡಬೇಕು ಎನ್ನುತ್ತಾರೆ ವೈದ್ಯರು.

8) ಹೊಟ್ಟೆಗೆ ಮಸಾಜ್:
ಗರ್ಭದಲ್ಲಿರುವ ಶಿಶುವಿಗೆ ಹೊರಗಿನ ಸ್ಪರ್ಶದ ಅನುಭವವೂ ಆಗುತ್ತದೆ. ಹೊಟ್ಟೆಯನ್ನು ಮುಟ್ಟಿದರೆ ಅದಕ್ಕೆ ಮಗು ರಿಯಾಕ್ಟ್ ಮಾಡುತ್ತದೆ. ತಾಯಿಯ ಸ್ಪರ್ಶ, ತಂದೆಯ ಸ್ಪರ್ಶದ ವ್ಯತ್ಯಾಸವನ್ನೂ ಅದು ಗ್ರಹಿಸಬಲ್ಲುದು. ಈ ಹಿನ್ನೆಲೆಯಲ್ಲಿ ಗರ್ಭಿಣಿಯ ಹೊಟ್ಟೆಯನ್ನು ಹಗುರವಾಗಿ ಮಸಾಜ್ ಮಾಡಿದಾಗ ಮಗುವಿಗೆ ಒಂದು ರೀತಿಯಲ್ಲಿ ಉತ್ತೇಜನ ಸಿಕ್ಕಂತಾಗುತ್ತದೆ. ಮಸಾಜ್'ಗೆ ಬಾದಾಮಿ ಎಣ್ಣೆ ಬಳಸಿದರೆ ಇನ್ನೂ ಒಳ್ಳೆಯದಂತೆ.

ಕೃಪೆ: ಸಾನ್ಯಾ ಪನ್ವರ್, ಹಿಂದೂಸ್ತಾನ್ ಟೈಮ್ಸ್

Show Full Article


Recommended


bottom right ad