Asianet Suvarna News Asianet Suvarna News

ಅಮ್ಮ -ಮಗಳು ತಾನನನ ತೋಂತನನ!

You will be her first Role Model, her Best Friend, her First Love,You are her MoM and she is your Little Girl. Happy Mother's Day 

My mother is my Guru Mothers Day 2019
Author
Bangalore, First Published May 12, 2019, 10:38 AM IST

ಡಾ ಕೆ.ಎಸ್‌. ಪವಿತ್ರ

ಭಾರತೀಯ ಶಾಸ್ತ್ರೀಯ ನೃತ್ಯ ಪದ್ಧತಿಯಲ್ಲಿ ಜಗತ್ತಿನ ಬೇರೆ ನೃತ್ಯ ಪದ್ಧತಿಗಳಲ್ಲಿ ಕಾಣದ ಹಲವು ವಿಶೇಷ ಸಂಗತಿಗಳಿವೆಯಷ್ಟೆ. ಅವುಗಳಲ್ಲಿ ಥಟ್ಟನೆ ನಾವು ಗಮನಿಸುವಂಥದ್ದು ಗುರು -ಶಿಷ್ಯ ಸಂಬಂಧ. ನಾವು ಅಷ್ಟಾಗಿ ಲಕ್ಷ್ಯ ಕೊಡದೇ ಇರುವಂಥದ್ದು ‘ಅಮ್ಮ -ಮಗಳು’ ಇಬ್ಬರೂ ನೃತ್ಯ ಕಲಾವಿದರಾಗಿರುವ ಉದಾಹರಣೆಗಳು. ಮಗಳನ್ನು ಶಿಷ್ಯೆಯಾಗಿ ನೋಡುವ ಅಮ್ಮನ ‘ಅಮ್ಮ -ಗುರು’ ಅನುಭವಕ್ಕೂ, ಅಮ್ಮನನ್ನು ಗುರುವಾಗಿ ನೋಡಬೇಕಾದ ಅನಿವಾರ್ಯತೆ /ಸ್ವ ಇಚ್ಛೆಗಳಿರುವ ‘ಶಿಷ್ಯೆ-ಮಗಳ’ ಅನುಭವಕ್ಕೂ ಹಲವು ಆಯಾಮಗಳಿವೆ, ಲಾಭಗಳೂ ಇವೆ, ಅಪಾಯಗಳೂ ಇವೆ!

ಭಾರತದ ಶಾಸ್ತ್ರೀಯ ನೃತ್ಯ ಕ್ಷೇತ್ರದ ಚರಿತ್ರೆಯ ಪುಟಗಳನ್ನು ತಿರುಗಿಸಿದರೆ ಅಮ್ಮ-ಮಗಳ ಜೋಡಿಗಳು ಸಾಕಷ್ಟುಸಿಕ್ಕುತ್ತವೆ. ಮೂರು ತಲೆಮಾರುಗಳಿಗೆ ವಿಸ್ತರಿಸುವ ಅಜ್ಜಿ-ಮಗಳು-ಮೊಮ್ಮಗಳ ಉದಾಹರಣೆಗಳೂ ಇವೆ! ರಾಗಿಣಿದೇವಿ-ಇಂದ್ರಾಣಿ ರೆಹಮಾನ್‌-ಸುಕನ್ಯಾ, ಅತ್ತೆ-ಸೊಸೆ-ಮಗಳ ಉದಾಹರಣೆಯಾಗಿ ಸರೋಜಾ-ರಮಾ-ದಕ್ಷಿಣಾ ವೈದ್ಯನಾಥನ್‌ ಇವರನ್ನು ಹೆಸರಿಸಬಹುದು. ಕೊಲ್ಕೊತ್ತಾದ ಮಂಜುಶ್ರೀ ರಂಜಬತಿ ಚಾಕಿಸರ್ಕಾರ್‌, ಕಥಕ್‌ ಜಗತ್ತಿನ ಮಾಯಾರಾವ್‌ ಮಧು, ಕೊಲ್ಕೊತ್ತಾದ ಕೂಚಿಪುಡಿಯ ರಾಧಾ ರೆಡ್ಡಿ-ಯಾಮಿನಿ-ಭಾವನಾ, ಮೋಹಿನಿಯಾಟ್ಟಂ ಭಾರತಿ ಶಿವಾಜಿ, ವಿಜಯಲಕ್ಷ್ಮೇ, ಒಡಿಸ್ಸಿಯಲ್ಲಿ ಕಿರಣ್‌ ಸೆಗಲ್‌- ಸುಜಾತಾ ಹೀಗೆ ವಿವಿಧ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ತಾಯಿ-ಮಗಳ ಜೋಡಿಗಳು ಕಂಡುಬರುತ್ತವೆ.

ಅಮ್ಮನೇ ಒಲ್ಲದ ಅಮ್ಮನ ಗುಣ!

ಭರತನಾಟ್ಯದತ್ತ ಕಣ್ಣು ಹಾಯಿಸಿದರೆ ಗೀತಾ-ಶರಣ್ಯ ಚಂದ್ರನ್‌, ಗಾಯತ್ರಿ ಮಹತೀಕಣ್ಣನ್‌, ವಿಜಿ-ಮೈಥಿಲೀ ಪ್ರಕಾಶ್‌, ಸೀತಾ ಗುರುಪ್ರಸಾದ್‌-ಭುವನಾ, ರಂಜಿತಾ ನಾಗೇಶ್‌ ಮತ್ತು ಅವರ ಪುತ್ರಿ, ರಾಜೇಶ್ವರಿ-ವೈಷ್ಣವಿ ಸಾಯಿನಾಥ್‌, ದಿ. ಜಯಲಕ್ಷ್ಮೇ ಆಳ್ವ ಮತ್ತು ಡಾ. ಆರತಿ ಶೆಟ್ಟಿ, ಶುಭಾ ಧನಂಜಯ - ಮಾಯಾ, ಮುದ್ರಾ, ಜ್ಯೋತಿ ಪಟ್ಟಾಭಿರಾಂ- ಡಾ

ಸಾಧನಾ, ¸ೃಂದಾ-ಅನನ್ಯ, ಹೀಗೆ ಹಲವು ಹೊಸ-ಹಳೇ ಜೋಡಿಗಳು ಕಾಣಸಿಗುತ್ತವೆ.

ಹಾಗಿದ್ದರೆ ಈ ನೃತ್ಯ ಕಲಾವಿದರಲ್ಲಿ ನಾವು ನೋಡುವ ವಿಶೇಷತೆಗಳೇನು? ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ತರಗತಿಗಳಲ್ಲಿ ನಿಯಂತ್ರಿಸುವುದಕ್ಕೂ, ತಮ್ಮ ಮನೆಯಲ್ಲಿ ಅವರದೇ ಮಕ್ಕಳನ್ನು ಕಲಿಕೆಯ ಶಿಸ್ತಿಗೆ ಒಳಪಡಿಸುವುದಕ್ಕೂ ವ್ಯತ್ಯಾಸಗಳಿರುತ್ತವೆ ತಾನೆ? ! .

ಅಂತಹದ್ದೇ ವ್ಯತ್ಯಾಸಗಳು ಇಲ್ಲಿಯೂ ತಲೆದೋರುತ್ತವೆ. ಬಹುಜನ ನೃತ್ಯ ಕಲಾವಿದರ ಮಕ್ಕಳು ನರ್ತಿಸಿದಾಗ ಎದುರಾಗುವ ಹೇಳಿಕೆ ‘ಅಮ್ಮನೇ ಗುರುವಾದ ಮೇಲೆ ನರ್ತಿಸದೆ?’ ಈ ಹೇಳಿಕೆ ಅರ್ಧ ಮೆಚ್ಚುಗೆ ಇನ್ನರ್ಧ ಅಸೂಯೆಯಿಂದ ಕೂಡಿರುತ್ತದೆ. ನಿಜವಾಗಿ ನೋಡಿದರೆ ಮನೆಯಲ್ಲಿರುವ ನೃತ್ಯದ ವಾತಾವರಣ ನೃತ್ಯಕ್ಷೇತ್ರದ ಸಂಕಷ್ಟಗಳನ್ನು ಮನದಟ್ಟು ಮಾಡಿಸುವುದೇ ಹೆಚ್ಚು. ನೃತ್ಯ ತರಬೇತಿಯ ಅವಕಾಶಗಳನ್ನಾಗಲೀ, ನೃತ್ಯದ ಗುಣಮಟ್ಟವನ್ನಾಗಲೀ ಹೆಚ್ಚಿಸಲು ಈ ವಾತಾವರಣ ಸಹಾಯಕವಾಗಬೇಕಿಲ್ಲ. ಅದರ ಬದಲು ಸದಾ ನೃತ್ಯಕ್ಕಾಗಿ ತುಡಿಯುವ, ಇತರ ಶಿಷ್ಯರಿಗಾಗಿ ದುಡಿಯುವ ‘ಅಮ್ಮ ಗುರು’ವಿನ ಬಗ್ಗೆ ‘ಶಿಷ್ಯೆ-ಮಗಳಿ’ಗೆ ಕಿಂಚಿತ್‌ ಅಸಮಾಧಾನವೇ ಇರುವುದು ಅಪರೂಪಕ್ಕಿಂತ ಸಾಮಾನ್ಯ! ತನ್ನ ಇತರ ಶಿಷ್ಯೆಯರಿಗೆ ಹೋಲಿಸಿದರೆ ಮಗಳು ಕಷ್ಟಪಡುವುದು ಕಡಿಮೆ, ಮನೆಯಲ್ಲಿ ತಾನು ಹೇಳಿಕೊಡುವವಳಿರುವುದರಿಂದಲೇ ಮಗಳಿಗೆ ಆಸಕ್ತಿ ಕಡಿಮೆ ಎಂಬ ಭಾವನೆ ‘ಅಮ್ಮ ಗುರು’ವಿನಲ್ಲಿಯೂ ಸಾಮಾನ್ಯವೇ!

ಇಷ್ಟಾದರೂ, ಕ್ರಮೇಣ ಮನೆಯಲ್ಲಿರುವ ಕಲೆಯ ವಾತಾವರಣ, ಆನುವಂಶಿಕತೆಗಿಂತ ಮಗಳ ಮನಸ್ಸನ್ನು ನೃತ್ಯದೆಡೆಗೆ ತಿರುಗಿಸುವುದು, ತಾಯಿಗಿಂತ ಚಿಕ್ಕ ವಯಸ್ಸಿನಲ್ಲಿ ಮಗಳು ನೃತ್ಯ ಕ್ಷೇತ್ರಕ್ಕೆ ಪ್ರವೇಶಿಸುವುದು, ತಾಯಿಯ ನೃತ್ಯ ತರಗತಿ-ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಲ್ಲುವುದು ಕಂಡುಬರುತ್ತದೆ. ತಾಯಿ-ಮಗಳು ಇಬ್ಬರೂ ನೃತ್ಯ ಕಾರ್ಯಕ್ರಮಗಳನ್ನು ನೀಡುವ ಜೋಡಿಗಳಲ್ಲಿ ಪ್ರೇಕ್ಷಕರು ಹೋಲಿಸಿ ನೋಡುವ ಮತ್ತೊಂದು ಮುಖ್ಯ ಅಂಶವೂ ಇದೆ. ನೃತ್ಯ ಪ್ರದರ್ಶನ ಕಲೆ ವೇದಿಕೆಯ ಮೇಲೆ ಹೇಗೆ ಕಾಣುತ್ತೇವೆ ಎನ್ನುವುದು ನೃತ್ಯಕ್ಕೆ ಬಹು ಮುಖ್ಯ. ಆದರೆ ರೂಪವೊಂದೇ, ಅಂಗಸೌಷ್ಟವವೊಂದೇ ಎಲ್ಲವೂ ಅಲ್ಲ! ಗುರುವಾದ ಅಮ್ಮನಿಗೆ ಅನುಭವ-ಪರಿಣತಿಯ ಬಲವಿದ್ದರೆ, ಶಿಷ್ಯೆಯಾದ ಮಗಳಿಗೆ ಯೌವ್ವನ-ಎಳೆತನ ರೂಪದ ಬಲವಿರುತ್ತದಷ್ಟೆ. ತಾಯಿಯ ಪರಿಣತಿಯ ಮಟ್ಟದಿಂದ ಮಗಳನ್ನೂ, ಮಗಳ ಯೌವ್ವನದ ಮಟ್ಟದಿಂದ ತಾಯಿಯನ್ನೂ ಅಳೆಯುವುದು ಇಬ್ಬರಿಗೂ ಮಾಡುವ ಅನ್ಯಾಯವೇ ಆದೀತು!

ಬಹಳಷ್ಟುನೃತ್ಯ ಕಲಾವಿದೆಯರ ಮಕ್ಕಳು ನೃತ್ಯ ತರಗತಿಗೆ ಬರಲಾರಂಭಿಸುವುದು ಅಮ್ಮನ ಜೊತೆಯಲ್ಲಿ ಶಿಶುಗಳಾಗಿ, ನೃತ್ಯ ತರಗತಿಗಳು ಮನೆಯಲ್ಲಿಯೇ ನಡೆಯುವಾಗಲಂತೂ ಇದು ಸಹಜ. ಹೆಚ್ಚಿನ ಕಲಾವಿದೆಯರು ಮಗುವಾದ ಕೆಲವೇ ತಿಂಗಳುಗಳಲ್ಲಿ ನೃತ್ಯಾಭ್ಯಾಸಕ್ಕೆ ಹಿಂದಿರುಗಿಬಿಡುತ್ತಾರೆ. ವೃತ್ತಿಪರ ಕಲಾವಿದೆಯರು ಕಾರ್ಯಕ್ರಮಗಳನ್ನೂ ನೀಡಲಾರಂಭಿಸುತ್ತಾರೆ. ಹಾಗಾಗಿ ಮಕ್ಕಳಿಗೆ ತಮ್ಮ ಶಿಶುತನದ ದಿನಗಳಿಂದಲೇ ನೃತ್ಯದ ಹಾಡುಗಳು -ಸಾಹಿತ್ಯ ವಿವಿಧ ನಿರ್ಮಾಣಗಳು, ಹಿನ್ನೆಲೆ ಸಂಗೀತ ಇವೆಲ್ಲದರ ಪರಿಚಯವೂ ಸಹಜ. ಆದರೆ ನೃತ್ಯ ಕಲಾವಿದರಾಗಲು ಇವು ಸಹಾಯಕ ಅಷ್ಟೇ. ‘ನೃತ್ಯ ತರಬೇತಿ’, ‘ನೃತ್ಯ ಸಾಧನೆ’ ಎಂಬ ಮುಖ್ಯ ಅಂಶಗಳಿಗೂ ಈ ಹಿನ್ನೆಲೆಗೂ ಯಾವ ಸಂಬಂಧವೂ ಇಲ್ಲ!.

ಆದರೆ ಗುರುವಿನ ಮಗಳು ನೃತ್ಯ ತರಗತಿಗೆ ಬರಲಾರಂಭಿಸಿದಾಗ ಇತರ ಶಿಷ್ಯರಿಗೆ ಒಂದು ರೀತಿಯ ಅನುಮಾನ-ಶಂಕೆ -ಭಯಗಳು ಕಾಡಲಾರಂಭಿಸುತ್ತವೆ. ತಾವು ಗುರುವಿನ ಬಗೆಗೆ ಮಾತನಾಡುವ ಯಾವುದೇ ಮಾತು ಅವರಿಗೆ ನೇರವಾಗಿ ತಲುಪುತ್ತದೆ ಎನ್ನುವ ಭಯ, ಗುರುವಿನ ಮಗಳಿಗೆ ಕಾರ್ಯಕ್ರಮ-ತರಬೇತಿ ಎಲ್ಲದರಲ್ಲೂ ಮೊದಲ ಆದ್ಯತೆ ಎಂಬ ಶಂಕೆ, ಸ್ಪರ್ಧೆ- ಸಂದರ್ಶನಗಳಲ್ಲಿ, ಪರೀಕ್ಷೆಗಳಲ್ಲಿ ಪ್ರಭಾವದಿಂದ -ಹೆಸರಿನಿಂದ ಆಕೆಗೆ ಅವಕಾಶ-ಹೆಚ್ಚು ಅಂಕ-ಬಹುಮಾನ ಸಿಕ್ಕುತ್ತದೆ ಎಂಬ ಭಾವನೆ ಇವು ಸಹಜ. ಇದು ಭಾಗಶಃ ನಿಜವೂ ಇರಬಹುದು. ಆದರೆ ಈ ಸಾಧ್ಯತೆಗಳ ಜೊತೆಗೇ ಅಸೂಯೆ-ದ್ವೇಷಗಳು ವ್ಯಾಪಕವಾಗಿರುವ ನೃತ್ಯ ಕ್ಷೇತ್ರದಲ್ಲಿ, ‘ಇಂಥವರ ಮಗಳು’ ಎಂಬುದು ಋುಣಾತ್ಮಕವಾಗಿಯೂ ತಿರುಗಲು ಸಾಧ್ಯವಿದೆ. ಹಾಗೆಯೇ ತರಗತಿಯಲ್ಲಿ ಇತರರನ್ನು ಶಿಸ್ತಿನಿಂದ-ಸಿಟ್ಟು ಮಾಡದೇ ಮತ್ತೆ ಮತ್ತೆ ತಿದ್ದಿ ಕಲಿಸುವ ‘ಗುರು’, ಮಗಳಿಗೆ ಹಾಗೆ ಕಲಿಸದೇ ಇರಲೂ ಸಾಧ್ಯವಿದೆ. ಅಷ್ಟೇ ಅಲ್ಲ, ‘ನನ್ನ ಮಗಳು’ ಎಂಬ ವೈಯಕ್ತಿಕ ಭಾವದ ಮಹಾಪೂರದಲ್ಲಿ ಸಾಮಾನ್ಯವಾಗಿ ಕಲಿಯುವ ಶಿಷ್ಯರು ಮಾಡುವ ತಪ್ಪುಗಳನ್ನು ಮಗಳೂ ಮಾಡಿದಾಗ, ಅತಿಯಾಗಿ ದಂಡಿಸಿ, ತನ್ನ ಇತರ ಶಿಷ್ಯರೊಡನೆ ಹೋಲಿಸಿ ಹೀಗಳೆಯಲು ಸಾಧ್ಯವಿದೆ. ಇದು ಕ್ರಮೇಣ ಮಕ್ಕಳನ್ನು ನೃತ್ಯದಿಂದಲೇ ವಿಮುಖರನ್ನಾಗಿ ಮಾಡಿರುವ ಸಂದರ್ಭಗಳೂ ಇವೆ. ‘‘ಪರೀಕ್ಷೆಯಿದೆ, ಹಾಗಾಗಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದಿಲ್ಲ’’ ಎಂಬ ಕಾರಣಕ್ಕೆ ತಲೆಯಾಡಿಸಿ ಬಿಡುವ ‘ಅಮ್ಮ -ಗುರು’ಗಳು ತಮ್ಮ ಮಕ್ಕಳಿಗೆ ‘ಪರೀಕ್ಷೆಯಿದ್ದರೂ ಪರವಾಗಿಲ್ಲ, ಇದೊಂದು ಕಾರ್ಯಕ್ರಮದಲ್ಲಿ ನೀನು ಮಾಡು’ ಎಂದು ಹೇಳುವುದು ಸಾಧ್ಯವಿದೆ! ಅಥವಾ ‘ನಮ್ಮ ತಂಡದಲ್ಲಿ ಒಬ್ಬರು ಕಡಿಮೆಯಿದ್ದಾರೆ, ಹಾಗಾಗಿ ನೀನು ಮಾಡಲೇಬೇಕು’ ಎಂಬ ಒತ್ತಡ ಹೇರುವುದು ಸಾಮಾನ್ಯ. ಇವೆಲ್ಲ ಯಾರೂ ಮುಕ್ತವಾಗಿ ಹೇಳದ, ‘ಅಮ್ಮ-ಮಗಳಿ’ಗಷ್ಟೇ ಗೊತ್ತಿರಬಹುದಾದ ಸಾಮಾನ್ಯ ಸಂಗತಿಗಳು!

ಹೀಗಿದ್ದೂ, ಹೊಸ ತಲೆಮಾರಿನ ಮಗಳು, ಅನುಭವದ ‘ಅಮ್ಮ’ನ ಕೈ ಬಲಪಡಿಸುತ್ತಾಳೆ ಎಂಬುದು ನಿಜ. ಇಂದಿನ ಡಿಜಿಟಲ್‌ ಯುಗದಲ್ಲಿ ಸಂಗೀತದ ವ್ಯವಸ್ಥೆ ನೋಡಿಕೊಳ್ಳುವುದು, ತಾಯಿಯ ಶಿಷ್ಯೆಯರನ್ನು ನಿರ್ವಹಿಸುವುದು, ತಾಯಿಯ -ತನ್ನ ವೇಷಭೂಷಣ ಹೊಂದುವಂತೆ ಯೋಜಿಸುವುದು, ತಾಯಿಯ ನೃತ್ಯಕ್ಕೆ ತಾನು ಹಾಡುವುದು/ತಾಳ ತಟ್ಟುವುದು, ಧನಸಹಾಯದ ಅರ್ಜಿಗಳನ್ನು ಆನ್‌ಲೈನ್‌ ತುಂಬುವುದು ಇತ್ಯಾದಿ ಇತ್ಯಾದಿ. ಮಗಳು ಚಿಕ್ಕ ವಯಸ್ಸಿನಲ್ಲಿ ಕಲಿಯುವಂತೆಯೇ ದುಡಿಯಲಾರಂಭಿಸುವ, ಹಣ ಗಳಿಸಲಾರಂಭಿಸುವ ಸಾಧ್ಯತೆಗಳೂ ಹೆಚ್ಚು. ಆ ಅರ್ಥದಲ್ಲಿ ನೃತ್ಯ ಕಲಾವಿದೆಯಾದ ತಾಯಿ, ಮಗಳನ್ನು ಬಹುಬೇಗ ಸ್ವಾವಲಂಬಿಯಾಗಿಯೂ ಮಾಡಿಬಿಡುತ್ತಾಳೆ!

ಮಕ್ಕಳು ನೃತ್ಯ ಕಲಿಯಲಾರಂಭಿಸಿದ ಮೇಲೆ, ತರಗತಿಯ ಹೊರಗೆ ಕುಳಿತು ಹರಟೆ ಹೊಡೆಯುತ್ತಿದ್ದ ತಾಯಂದಿರು, ಈಗ ತಾವೂ ನೃತ್ಯ ಕಲಿಯಲು ಪ್ರಾರಂಭಿಸುವ ಪ್ರವೃತ್ತಿಯೂ ಈಗ ಹೆಚ್ಚುತ್ತಿದೆ. ತಾಯಿ-ಮಕ್ಕಳ ‘ರಂಗಪ್ರವೇಶ’ ಗಳೂ ಅಲ್ಲಲ್ಲಿ ನಡೆಯುತ್ತಿದೆ.

ನೃತ್ಯ ಪರಂಪರೆಯನ್ನು ಉಳಿಸುವ-ಬೆಳೆಸುವ ದಿಕ್ಕಿನಲ್ಲಿ, ‘ಅಮ್ಮ-ಗುರು-ಮಗಳು ಶಿಷ್ಯೆ’ಯರ ಜೋಡಿಗಳ ಪಾತ್ರ ವಿಶಿಷ್ಪ. ವಿದ್ಯೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಈ ಅಮ್ಮ-ಮಗಳ ಜೋಡಿಗಳನ್ನು ನೆನೆಯುವುದೂ, ಅವರಿಂದ ಬದುಕಿನ ಪಾಠಗಳನ್ನು ಕಲಿಯುವುದೂ, ‘ಅಮ್ಮಂದಿರ ದಿನ’ದ ಅರ್ಥಪೂರ್ಣ ಆಚರಣೆಗೆ ಸಂಬಂಧಿಸಿದೆ ಅಲ್ಲವೇ?

Follow Us:
Download App:
  • android
  • ios