Asianet Suvarna News Asianet Suvarna News

ಸಂದರ್ಶನ : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಮಾಡೆಲ್

ಮಾಡೆಲ್‌ಗಳಿಗೆ ಕೂದಲು ಆಸ್ತಿ. ಕೂದಲನ್ನು ನೋಡಿಕೊಳ್ಳುವುದಕ್ಕೇ ತುಂಬಾ ತಲೆಕೆಡಿಸಿಕೊಡಿಸಿಕೊಳ್ಳುವವರಿದ್ದಾರೆ. ಅಂಥದ್ದರಲ್ಲಿ ಮಂಗಳೂರಿನ ಮಾಡೆಲ್ ವಸುಧಾ ರಾವ್ ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನೇ ದಾನ ಮಾಡಿದ್ದಾರೆ. ಪ್ರೀತಿಯಿಂದ ತಲೆ ಬೋಳಿಸಿಕೊಂಡಿದ್ದಾರೆ. ಅವರ ಸ್ಫೂರ್ತಿ ಕತೆ ಇಲ್ಲಿದೆ

Mangalore model Vasudha Rao donates hair for cancer patients
Author
Bengaluru, First Published Oct 27, 2018, 11:51 AM IST

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕು ಎಂಬುದು ಚೆಲುವೆಯರ ಬಯಕೆ. ನಂತರ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸುವವರು ಬಹಳಷ್ಟು ಮಂದಿ. ಇಲ್ಲೊಬ್ಬ ಚೆಲುವೆ ಎಲ್ಲರಿಗಿಂತ ವಿಭಿನ್ನವಾಗಿ ಆಲೋಚಿಸಿ ಹೆಜ್ಜೆ ಇರಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರೆ. ಅಂತಹ ಅಪರೂಪದ ಚೆಂದುಳ್ಳಿ ಚೆಲುವೆ ವಸುಧಾ ರಾವ್.

2017ರಲ್ಲಿ ಬ್ಲಿಸ್ ಹೇರ್ ಸೆಲೂನ್ ಆಯೋಜಿಸಿದ್ದ ‘ಲಾಕ್ಸ್ ಆಫ್ ಲವ್’ ಅಭಿಯಾನದಲ್ಲಿ ಕೇಶಮುಂಡನೆ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಕೇಶಮುಂಡನೆ ಮಾಡಿಸಿಕೊಂಡದ್ದು ಗ್ಲಾಮರಸ್ ಅಥವಾ ಫ್ಯಾಶನ್ ಶೋಗೆ ಅಲ್ಲ. ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ವಸುಧಾ ರಾವ್ ದಾನ ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳಲ್ಲಿ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಪ್ರಯತ್ನ ಎನ್ನುವುದು ವಸುಧಾ ರಾವ್ ಅವರ ಕಳಕಳಿ. 

ತನ್ನ ಕೂದಲು ದಾನ ಮಾಡುವುದನ್ನು ವಸುಧಾ ರಾವ್ ಅಲ್ಲಿಗೇ ಕೈಬಿಟ್ಟಿಲ್ಲ. 2018ರಲ್ಲಿ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ‘ಮಿಸ್ ಫೋಟೋಜೆನಿಕ್’ ಮತ್ತು ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮುವ ಮೂಲಕ ವಸುಧಾ ರಾವ್ ಅವರು ಗ್ಲಾಮರ್ ಲೋಕಕ್ಕೆ ಕಾಲಿಟ್ಟರು. 2018 ಹೊಸ ವರ್ಷಾರಂಭ ದಿನ ಮತ್ತೆ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಅದರಂತೆ ತಮ್ಮ 15 ಇಂಚಿನ ಕೂದಲನ್ನು ‘ಬ್ಲಿಸ್ ಹೇರ್ ಸೆಲೂನ್’ಗೆ ದಾನ ಮಾಡಿದ್ದಾರೆ. ಈ ಮೂಲಕ ಇತರೆ ಚೆಲುವೆಯರಿಗೆ ಮಾದರಿ ಎನಿಸಿದ್ದಾರೆ. ಕ್ಯಾನ್ಸರ್ ರೋಗಿಗಳ ಮೇಲೆ ಗೌರವ ಹೊಂದಿರುವ ವಸುಧಾ ರಾವ್ ಅವರು ಸ್ವಯಂ ಪ್ರೇರಿತವಾಗಿ ಕೂದಲು ದಾನ ಮಾಡುತ್ತಿದ್ದೇನೆ ಎನ್ನುತ್ತಾರೆ. ಮಾಡೆಲಿಂಗ್ ಕ್ಷೇತ್ರದ ಮಿಂಚುಳ್ಳಿ ವಸುಧಾ ರಾವ್ ಈಗ ಇತರರಿಗೆ ಪ್ರೇರಣೆ, ಮಾದರಿಯಾಗಿದ್ದಾರೆ. 

ವಸುಧಾ ರಾವ್ ಪರಿಚಯ
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದವರು. ವಸುಧಾ ಅವರ ತಂದೆ ತಿಲಕ್ ರಾವ್ ಉದ್ಯಮಿಯಾಗಿದ್ದು, ತಾಯಿ ನಮ್ರತಾ ರಾವ್ ಭರತನಾಟ್ಯ ಟೀಚರ್. ವಸುಧಾ ಬೆಳೆದದ್ದು ಮಂಗಳೂರಿನಲ್ಲಿ. ಇದೀಗ ಅವರಿಗೆ 21 ವರ್ಷ. ವಸುಧಾ ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಭರತನಾಟ್ಯ ಕಲಾವಿರೂ ಆದ್ದು, ತಾಯಿಯೇ ಭರತನಾಟ್ಯ ಗುರುಗಳು. ಇದಲ್ಲದೆ ಕ್ರೀಡೆ, ಯೋಗ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಅವರು ಸ್ವಂತ ಎನ್‌ಜಿಒ ಸ್ಥಾಪಿಸಿ ಬಡವರ ಸೇವೆ ಮಾಡಬೇಕು ಎಂಬ ಕನಸು ಹೊತ್ತಿದ್ದಾರೆ. 

ಮಾಡೆಲಿಂಗ್ ಕ್ಷೇತ್ರ ಆಯ್ಕೆಗೆ ಕಾರಣ?
ಬಾಲ್ಯದಿಂದಲೂ ನಟನೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಇದಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಅನುಭವ ಹೊಂದಬೇಕು ಎಂಬ ಆಸೆಯೂ ಇತ್ತು. ಅದಕ್ಕಾಗಿಯೆ ಭರತನಾಟ್ಯ, ಕ್ರೀಡೆ, ಯೋಗ, ಹಾಗೆಯೇ ಮಾಡೆಲಿಂಗ್ ಕ್ಷೇತ್ರ ಹೀಗೆ ಒಂದೊಂದಾಗಿಯೇ ನನ್ನ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದೇನೆ.

ಕೇಶ ಮುಂಡನೆಯೇ ಏಕೆ?
ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಸಮಾಜದ ಎದುರು ಬರಲು ಹಿಂಜರಿಯುತ್ತಾರೆ. ಕ್ಯಾನ್ಸರ್ ಎಂಬ ಖಾಯಿಲೆಗೆ ತುತ್ತಾಗಿದ್ದೀವಿ, ಕೂದಲು ಕಳೆದುಕೊಂಡಿದ್ದೀವಿ ಎಂಬ ಹಿಂಜರಿಕೆ ಬಿಟ್ಟು ಯಾವುದೇ ಇರಿಸು ಮುರಿಸಿಲ್ಲದೆ ಸಮಾಜದಲ್ಲಿ ತಲೆ ಎತ್ತಿ ಓಡಾಡಬೇಕು. ಇದೆಲ್ಲ ತಮ್ಮಿಂದ ತಾವಾಗಿಯೇ ಮಾಡಿಕೊಂಡದ್ದಲ್ಲ. ಅದೆಲ್ಲ ಸರ್ವೇಸಾಮಾನ್ಯ, ಸಮಾಜದಲ್ಲಿ ಎಲ್ಲರೂ ಸಮಾನರು. ಕೂದಲಿಲ್ಲದಿದ್ದರೂ ಇರಬಹುದು. ಜತೆಗೆ ಕ್ಯಾನ್ಸರ್ ಪೀಡಿತರಿಗೆ ಸ್ಫೂರ್ತಿ ನೀಡಲು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹುರಿದುಂಬಿಸಲು ನನ್ನದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ವಸುಧಾ ರಾವ್.

ಕೇಶ ಮುಂಡನೆ ಮಾಡಿಸಿದಾಗ ಎದುರಾದ ಸಮಸ್ಯೆ?
ಮೊದಲು ತಲೆ ಕೂದಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೇಶ ಮುಂಡನೆ ಮಾಡಿಸಿಕೊಂಡರು. ಆಗ ಹಾಯ್ ಎನಿಸುತ್ತಿತ್ತು. ನಂತರ ಕ್ಯಾನ್ಸರ್ ಪೀಡಿತರನ್ನು ಕಂಡಾಗ ಅವರ ತೊಳಲಾಟ ಗಮನಿಸಿದೆ. ಹಾಗಾಗಿ ಅವರಿಗಾಗಿ ಮತ್ತೆ ಕೇಶ ಬೆಳೆಸಿ ಕ್ಯಾನ್ಸರ್ ಪೀಡಿತರಿಗೆ ಸ್ಫೂರ್ತಿ ತುಂಬಲು ‘ಲಾಕ್ಸ್ ಆಫ್ ಲವ್’ ಕ್ಯಾಂಪೇನ್ ಮೂಲಕ ಕೇಶ ಮುಂಡನೆ ಮಾಡಿಸಲು ಆರಂಭಿಸಿದರು. ಇದನ್ನು ಅನೇಕ ಜನರು ಪ್ರಶ್ನಿಸಿದ್ದು ಉಂಟು ಜತೆಗೆ ನೋಡಿ ಆಡಿಕೊಂಡು ನಕ್ಕಿದ್ದೂ ಇದೆ. ಆದರೆ ಸಾಮಾಜಿಕ ಕಳಕಳಿಯೊಂದಿಗೆ, ಏನಾದರೊಂದು ವಿಭಿನ್ನವಾಗಿ ಮಾಡಬೇಕೆಂದು ಈ ಹೊಸ ಪ್ರಯತ್ನ ಆರಂಭಿಸಿದರು.

ಮಾಡೆಲಿಂಗ್‌ನಲ್ಲೇ ಮುಂದುವರಿಯುವ ಆಸೆಯೇ?
ಭಾರತೀಯ ಸೇನಾ ಪಡೆಯಲ್ಲಿ ಲೀಗಲ್ ಆಫೀಸರ್ ಆಗುವಾಸೆ ಇದೆ. ಇದರೊಂದಿಗೆ ಒಂದು ಎನ್‌ಜಿಒ ಆರಂಭಿಸಿ, ಇದರ ಮೂಲಕ ಯುವ ಸಮುದಾಯಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವ ಆಸೆಯೂ ಇದೆ. ಮಾಡೆಲಿಂಗ್‌ನಲ್ಲೇ ಮುಂದುವರಿಯುವ ಬಗ್ಗೆ ಆಸಕ್ತಿ ಇದೆ. ಈ ಮೂಲಕ ಸಿನಿಮಾಗಳಲ್ಲಿ ಉತ್ತಮ ರೀತಿಯ ಆಫರ್‌ಗಳು ಬಂದರೆ ಕಂಡಿತವಾಗಿಯೂ ಪಾಲ್ಗೊಳ್ಳುವುದಾಗಿ ವಸುಧಾ ರಾವ್ ಹೇಳುತ್ತಾರೆ.

Mangalore model Vasudha Rao donates hair for cancer patients 

Follow Us:
Download App:
  • android
  • ios