life
By Suvarna Web desk | 10:55 PM November 20, 2017
ಕನ್ನಡೇತರ ಮಕ್ಕಳು ಕನ್ನಡ ಕಲಿತು ನಾಟಕ ಮಾಡಿದರು

Highlights

ಅಂತಿಮ ಹಂತದಲ್ಲಿ 20 ಮಕ್ಕಳು ಹಿಂದೆ ಸರಿದರೆ, 100 ಮಕ್ಕಳು ಉತ್ಸಾಹ ತೋರಿದ್ದಾರೆ. ವಿಶೇಷವೆಂದರೆ ಇದರಲ್ಲಿ 35 ಮಕ್ಕಳು ಕನ್ನಡಿಗರು. 65 ಮಕ್ಕಳು ಕನ್ನಡೇತರರು.

ರಾಷ್ಟ್ರ ರಾಜಧಾನಿ, ಹಿಂದಿ ನಾಡು ದೆಹಲಿಯಲ್ಲಿ ಹಿಂದಿ, ಪಂಜಾಬಿ, ಉರ್ದು ಸೇರಿದಂತೆ ಕನ್ನಡೇತರ ಮಕ್ಕಳು ಕನ್ನಡ ಕಲಿತು ಕನ್ನಡದಲ್ಲೇ ನಾಟಕ ಮಾಡಿದರೆ ಹೇಗಿರಬೇಡ? ಹಾಗೊಂದು ಪ್ರಯತ್ನ ನಡೆದಿದೆ ಎಂದರೆ ಕನ್ನಡಿಗರಾದ ನಮ್ಮ ಅಭಿಮಾನ ಪುಟಿದೇಳುವುದು ಗ್ಯಾರೆಂಟಿ ಅಲ್ಲವೇ?

ಹೌದು. ಖಂಡಿತವಾಗಿ. ದೆಹಲಿಯ ಇಂಥಹದೊಂದು ಉತ್ತಮ ಪ್ರಯತ್ನವಾಗಿದೆ. ಅಲ್ಲಿನ ಮಕ್ಕಳು ಸುಮಾರು ಒಂದೂವರೆ ಗಂಟೆಗಳ ಕಾಲ ಕನ್ನಡ ನಾಟಕ ಮಾಡಿ ನೆರೆದಿದ್ದವರನ್ನು ನಿಬ್ಬೆರಗಾಗಿಸಿದ್ದಾರೆ. ಎಲ್ಲಿ, ಯಾಕೆ?: ದೆಹಲಿಯ ಪ್ರತಿಷ್ಠಿತ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯೇ ಇಂತಹದ್ದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿ ಯಶಕಂಡಿರುವುದು. ಇದೇ ಶಾಲೆ ನಾಲ್ಕೈದು ವರ್ಷಗಳ ಹಿಂದೆ ಕುವೆಂಪು ವಿರಚಿತ ‘ಕಿಂದರಿ ಜೋಗಿ’ ನಾಟಕ ಪ್ರದರ್ಶಿಸಿದಾಗಲೂ ಒಳ್ಳೆಯ ಪ್ರದರ್ಶನ ಕಂಡಿತ್ತು. ಆದರೆ ಅಂದು ನಾಟಕವಾಡಿದ್ದು ಕೇವಲ ಕನ್ನಡದ ಮಕ್ಕಳು ಮಾತ್ರ.

ಹಿಂದಿನ ಯಶದ ಭರವಸೆಯಿಂದ ಉತ್ಸಾಹಿತವಾದ ಶಾಲಾ ಆಡಳಿತ ಮಂಡಳಿ ಇನ್ನೊಮ್ಮೆ ಮಕ್ಕಳಿಂದ ಏಕೆ ನಾಟಕ ಮಾಡಿಸಬಾರದು ಎಂಬ ನಿರ್ಧಾರಕ್ಕೆ ಬಂದಾಗ ಎಲ್ಲರೂ ಏಕ ಮನಸ್ಸಿನಿಂದ ಯಾಕಾಗಬಾರದು? ಈ ಬಾರಿಯೂ ನಾಟಕ ಮಾಡಿಸೋಣ, ಆದರೆ ಈ ಬಾರಿ ನಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳೋಣ. ಕೇವಲ ಕನ್ನಡ ಮಕ್ಕಳಿಗೆ ಮಾತ್ರ ನಾಟಕ ಸೀಮಿತವಾಗದೇ ಕನ್ನಡೇತರ ಮಕ್ಕಳನ್ನೂ ಬಳಸಿಕೊಂಡು ನಾಟಕ ಮಾಡೋಣ ಎಂಬ ನಿರ್ಧಾರಕ್ಕೆ ಬಂದು ಶಾಲಾ ಮುಖ್ಯಸ್ಥ ಸರವೂ ಕೃಷ್ಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಯಿತು. ಇಂತಹ ಸಾಹಸಕ್ಕೆ ಇದೇ ಶಾಲೆಯಲ್ಲಿ ಹಿಂದೆ ‘ಕಿಂದರಿ ಜೋಗಿ’ ನಾಟಕ ನಿರ್ದೇಶಿಸಿದ್ದ

ರಂಗಕರ್ಮಿ ರಾಮಕೃಷ್ಣ ಬೆಳ್ತೂರ್ ಒಪ್ಪಿ ಕೋಟಗಾನಹಳ್ಳಿ ರಾಮಯ್ಯ ರಚಿಸಿರುವ ನೃತ್ಯ ನಾಟಕ ‘ಒಗಟಿನ ರಾಣಿ’ಯನ್ನು ಆಡಿಸುವ ನಿರ್ಧಾರಕ್ಕೆ ಬಂದೇ ಬಿಟ್ಟರು ಬೆಳ್ತೂರ್.

ಕನ್ನಡೇತರ ಮಕ್ಕಳೇ ಹೆಚ್ಚು: ಕನ್ನಡ ನಾಟಕಕ್ಕೆ ಹೆಸರು ಕೊಡಿ ಎಂಬ ಸೂಚನೆ ಸಿಕ್ಕಿದ್ದೇ ತಡ ಬರೋಬ್ಬರಿ 120 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂತಿಮ ಹಂತದಲ್ಲಿ 20 ಮಕ್ಕಳು ಹಿಂದೆ ಸರಿದರೆ, 100 ಮಕ್ಕಳು ಉತ್ಸಾಹ ತೋರಿದ್ದಾರೆ. ವಿಶೇಷವೆಂದರೆ ಇದರಲ್ಲಿ 35 ಮಕ್ಕಳು ಕನ್ನಡಿಗರು. 65 ಮಕ್ಕಳು ಕನ್ನಡೇತರರು. ‘ಉತ್ಸಾಹ ತೋರಿದ ಎಲ್ಲ ಮಕ್ಕಳನ್ನು ಬಳಸಿಕೊಂಡಿದ್ದೇನೆ. ರಿದಂ ಜ್ಞಾನ ಇದೆಯೇ ಎಂದು ಪರೀಕ್ಷಿಸಿದ್ದು ಬಿಟ್ಟರೆ ಭಾಷೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕನ್ನಡ ಬಾರದ ಮಕ್ಕಳಿಗೆ ಕನ್ನಡದಲ್ಲೇ ಒಗಟನ್ನು ಅರ್ಥ ಮಾಡಿಸುವ ಪ್ರಯತ್ನ ನಡೆಸಿದೆ. ಹಿಂದಿ ಮಕ್ಕಳಿಗೆ ಕನ್ನಡದಲ್ಲಿ, ಕನ್ನಡ ಮಕ್ಕಳಿಗೆ ಹಿಂದಿಯಲ್ಲಿ ವಿವರಣೆ ನೀಡಿದೆ. ಇದರಿಂದ ಇಬ್ಬರಿಗೂ ಎರಡೂ ಭಾಷೆಯ ಪರಿಚಯವಾಗುತ್ತದೆ ಎನ್ನುವ ಉದ್ದೇಶ ನನ್ನದು. ನಾಟಕದಲ್ಲಿ ಅಂಗೀಕ ಅಭಿನಯಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಅದ್ಭುತದ ಪ್ರತಿಕ್ರಿಯೆ ದೊರೆಯಿತು. ಮಕ್ಕಳ ಸಮಯ ಪ್ರಜ್ಞೆ, ಸಂಭಾಷಣೆಯಲ್ಲಿನ ನಿಖರತೆ, ಸ್ಪಷ್ಟತೆಗೆ ನಾನು ಬೆರಗಾದೆ ಎನ್ನುತ್ತಾರೆ ರಾಮಕೃಷ್ಣ ಬೆಳ್ತೂರು. ಕನ್ನಡ ಕಲಿಕೆಯ ಪಾಠ: ‘ನಾಟಕದ ಮೂಲಕ ನಮ್ಮ ಭಾಷೆಯ ವಿಸ್ತರಣೆ ಮಾಡುವ ಪ್ರಯತ್ನ ನಮ್ಮದು. ಹಿಂದಿ ಮಕ್ಕಳು ಕನ್ನಡದ ಬಗ್ಗೆ ತೋರಿದ ಪ್ರೀತಿ ನಮಗೆ ಮಾದರಿ. ಅವರ ಉತ್ಸಾಹದಿಂದ ನಮ್ಮ ಪ್ರಯತ್ನಕ್ಕೆ ಹೊಸ ದಿಕ್ಕು ಸಿಕ್ಕಿದೆ ಎನ್ನುವ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸರವೂ ಕೃಷ್ಣ ಭಟ್ ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸುವ ಆಸಕ್ತಿ ಹೊಂದಿದ್ದಾರೆ. ಅದೂ ಅಲ್ಲದೇ ಇದೇ ಮಕ್ಕಳೊಂದಿಗೆ ರಾಜ್ಯದ ಕೋಲಾರ, ಹೊಸಕೋಟೆ, ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಟಕ ಪ್ರದರ್ಶಿಸಬೇಕು ಎನ್ನುವ ಬಯಕೆಯೂ ದೆಹಲಿ ಕನ್ನಡ ಶಾಲೆಯದ್ದು.

‘ಭಾಷೆ ಕಲಿಯುವಿಕೆಗೆ ನಾಟಕಗಳಲ್ಲಿ ಭಾಗಿಯಾಗುವುದು ಅತ್ಯುತ್ತಮ ದಾರಿ. ಏಕೆಂದರೆ ನಾಟಕಗಳಲ್ಲಿ ಪಂಚೇಂದ್ರಿಯ ಗಳಿಗೂ ಕೆಲಸವಿದೆ. ನಾಟಕದಲ್ಲಿ ಒಂದು ಸಂಭಾಷಣೆ ಇದ್ದರೆ ಅದನ್ನು ಅಭಿನಯಿಸಿಯೂ ತೋರಿಸಬೇಕಾಗುತ್ತದೆ. ಆಗ ಪಾತ್ರಧಾರಿಯ ಒಳಗೆ ಭಾಷೆ ಇಳಿಯುತ್ತದೆ. ನಾಟಕಗಳ ತಾಲೀಮು ಕನಿಷ್ಠ 20ರಿಂದ 30 ದಿನಗಳ ಕಾಲ ನಡೆಯುವುದರಿಂದಿ ಇಷ್ಟರಲ್ಲಿ ಭಾಷೆಯನ್ನು ಕಲಿಸುವುದು ಸಾಧ್ಯ ಎನ್ನುತ್ತಾರೆ’ ಕೇಂದ್ರ ಸರಕಾರದ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ, ಸ್ವತಃ ನಾಟಕ ನಿರ್ದೇಶಕರೂ ಆಗಿರುವ ಕನ್ನಡಿಗ ಬಾಲಕೃಷ್ಣ ನಾಯ್ಕ್.

ಉತ್ತರ ಭಾರತೀಯರಿಗೂ ನಮ್ಮ ಜಾನಪದ ಕಲೆ ತಲುಪಬೇಕು ಎನ್ನುವ ಹಂಬಲದಿಂದ ನಾಟಕಕ್ಕೆ ಸಂಗೀತ ನೀಡಿರುವ ರಾಜಪ್ಪ ಕೋಲಾರ ಅವರು ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ರಾಜ್ಯದ ಜಾನಪದ ಕಲೆಗಳನ್ನು ಅಳವಡಿಸಿಕೊಂಡಿದ್ದಾರೆ. ಸಂಗೀತ ಸಹಕಾರ ತುರಾಂಡಳ್ಳಿ ಶ್ರೀನಿವಾಸ, ರಂಗ ಸಜ್ಜಿಕೆ ಸುಧೀರ್ ಫಡ್ನೀಸ್, ಬೆಳಕು ಶಿವಾನಂದ ಇಂಗಳೇಶ್ವರ ಅವರದ್ದು. ಸಹ ನಿರ್ದೇಶನ ಮತ್ತು ಇನ್ನಿತರ ಅಗತ್ಯ ಸಹಕಾರವನ್ನು ಮೈಲಾರಪ್ಪ ತಾವರೆಕೆರೆ ನೋಡಿಕೊಂಡಿದ್ದರೆ, ಕೆ.ಆರ್. ರಾಮಮೂರ್ತಿ ಅವರು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದೆಹಲಿ ಕನ್ನಡ ಸೀನಿಯರ್ ಸೆಕೆಂಡರಿ ಶಾಲೆ ಪ್ರಾರಂಭ ವಾಗಿದ್ದು 1961ರಲ್ಲಿ. ಕೇವಲ 10 ವಿದ್ಯಾರ್ಥಿಗಳೊಂದಿಗೆ ತೆರೆದ ಈ ಶಾಲೆಯಲ್ಲಿ ಇದೀಗ ಇರುವುದು 1200 ಮಕ್ಕಳು.

ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯ. 1200 ಮಕ್ಕಳಲ್ಲಿ 120 ಕನ್ನಡಿಗರಾದರೆ ಮಿಕ್ಕವರು ಕನ್ನಡೇತರರು. ಶಾಲೆಯ ನಿರ್ವಹಣೆ ಹೊಣೆ ದೆಹಲಿ ಕನ್ನಡ ಶಿಕ್ಷಣ ಸೊಸೈಟಿಯದ್ದು. ಹೀಗೆ ಹೊರನಾಡಿನಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿರುವ ಕನ್ನಡ ಶಾಲೆ ಮತ್ತದರ ನಿರ್ವಾಹಕರಿಗೆ ಅಖಂಡ ಕನ್ನಡಿಗರ ಪರವಾಗಿ ಧನ್ಯವಾದ.

- ರಾಕೇಶ್ ಎನ್.ಎಸ್, ನವದೆಹಲಿ

Show Full Article


Recommended


bottom right ad