Asianet Suvarna News Asianet Suvarna News

ಸುಖಾಸುಮ್ಮನೆ ಯಾಕೆ ಫೀಲ್ ಮಾಡ್ಕೋತೀರಾ ಗಿಲ್ಟ್ !

ತಪ್ಪಿತಸ್ಥ ಭಾವನೆಯನ್ನು ಗೆಲ್ಲುವ ಮೊಟ್ಟ ಮೊದಲ ಹಂತವೆಂದರೆ ಅದು ‘ತಪ್ಪಿತಸ್ಥ ಭಾವನೆ’ ಎಂದು ಗುರುತಿಸುವುದು. ಎಲ್ಲಾ ಭಾವನೆಗಳಂತೆಯೇ ಈ ಭಾವನೆಯೂ ಬಹು ಶಕ್ತಿಯುತವೇ. ಹಾಗಾಗಿ ಅವುಗಳನ್ನು ನಾವು ನಿಭಾಯಿಸದಿದ್ದರೆ, ಅವು ನಮ್ಮನ್ನು ನಿಯಂತ್ರಿಸತೊಡಗುತ್ತವೆ. ಗಿಲ್ಟ್ ಫೀಲಿಂಗ್‌ನಿಂದ ಹೊರ ಬರುವುದು  ಹೇಗೆ? ಇಲ್ಲಿದೆ ಸಲಹೆ. 

How to overcome from guilty feeling?
Author
Bengaluru, First Published Dec 19, 2018, 3:04 PM IST

ಮನುಷ್ಯರಾಗಿ ತಪ್ಪು ಮಾಡದೇ ಇರಲು ಸಾಧ್ಯವೇ, ತಪ್ಪು ಮಾಡುವುದು, ಪಶ್ಚಾತ್ತಾಪ ಪಟ್ಟು ತಪ್ಪಿನ ಸಂಕಟದಿಂದ ಮುಕ್ತವಾಗುವುದು ಎರಡೂ ದೈನಂದಿನ ಜೀವನದಲ್ಲಿ ನಿರಂತರವಾಗಿರುತ್ತವೆ. 

ಕೆಲವೊಮ್ಮೆ ತಪ್ಪುಗಳು ಅಲಕ್ಷ್ಯದಿಂದ, ಕಣ್ತಪ್ಪಿ ನಿಂದ ನಡೆದರೆ ಇನ್ನು ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ತಪ್ಪನ್ನೆಸಗುತ್ತೇವೆ. ಸ್ವಾರಸ್ಯಕರ ವಿಷಯವೆಂದರೆ ತಪ್ಪು ಮಾಡುವಾಗ ಹೆಚ್ಚಿನ ಜನರಲ್ಲಿ ‘ಇದು ತಪ್ಪು’ ಎಂಬ ಅರಿವು ಇದ್ದೇ ಇರುತ್ತದೆ ಎನ್ನುವುದು. ಮನಸ್ಸಿನ ಮೂಲೆಯೊಂದರಲ್ಲಿ ತಪ್ಪಿನ ಶಂಕೆ, ಸೂಚನೆಯ ದನಿ ನಮಗೆ ಕೇಳುತ್ತಿದ್ದರೂ, ಕೆಲವೊಮ್ಮೆ ಬದಲಿಯಾಗಿ ಏನು ಮಾಡಬಹುದೆಂಬ ಅರಿವಿರದೆ, ಮತ್ತೆ ಕೆಲವೊಮ್ಮೆ ಏನನ್ನೋ ಮುಚ್ಚಿಡಲು, ಮತ್ತೊಮ್ಮೆ ಯಾವುದೋ ಸಂದರ್ಭದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ತಪ್ಪು ಮಾಡಿಯೇ ಬಿಡುತ್ತೇವೆ.

ಮನೋವೈದ್ಯಕೀಯ ದೃಷ್ಟಿಯಿಂದ ನೋಡಿದರೆ ತಪ್ಪು ಮಾಡುವುದು ಮನುಷ್ಯ ಸಹಜವಾದ ನಡವಳಿಕೆ. ಅದೇನೂ ಕಾಯಿಲೆಯಲ್ಲ, ಕೆಟ್ಟ ನಡವಳಿಕೆಯೂ ಅಲ್ಲ. ಆರೋಗ್ಯಕ್ಕೂ ‘ತಪ್ಪು ಮಾಡಿದ ಭಾವನೆ’ಗೂ ಇರುವ ನಂಟು ಅಪಾರ. ಉದಾಹರಣೆಗೆ ಮಾನಸಿಕ ಸಮಸ್ಯೆಗಳಿಂದ ನರಳುವ ರೋಗಿಗಳಲ್ಲಿ ತನಗೆ ರೋಗ ಬಂದಿರುವುದು ಹಿಂದೇನೋ ಪಾಪ ಮಾಡಿದ್ದರಿಂದ ಎಂಬ ಭಾವನೆ ಸಾಮಾನ್ಯ.

ಭಾವನೆಗಳಿಗೆ ಒತ್ತು ನೀಡುವ ಮಹಿಳೆಯರಲ್ಲಿ ತಪ್ಪಿತಸ್ಥ ಭಾವನೆಯೂ ಹೆಚ್ಚು. ಮನೆಗೆ ನೆಂಟರು ಬಂದಾಗ ತಾವು ಸರಿಯಾಗಿ ಉಪಚಾರ ಮಾಡಲಿಲ್ಲವೆಂದು ಕೊರಗುವುದು, ಮಕ್ಕಳಿಗೆ ಉದ್ವೇಗದಲ್ಲಿ ಸರಿಯಾಗಿ ಓದಲಿಲ್ಲವೆಂದು ಹೊಡೆದು ಬೈದು ಪೇಚಾಡುವುದು, ಹೊರಗೆ ದುಡಿಯುತ್ತಿದ್ದಾಗ ಮನೆಯನ್ನು ಅಲಕ್ಷ್ಯ ಮಾಡುತ್ತಿದ್ದೇನೆ ಎಂದು ಅಲವತ್ತುಗೊಳ್ಳುವುದು..ಹೀಗೆ.

ನಮ್ಮ ದೈನಂದಿನ ಆಗುಹೋಗುಗಳಲ್ಲಿ ನಡೆಯುವ ತಪ್ಪುಗಳು ಅವರವರ ದೃಷ್ಟಿಯಿಂದ ಸರಿ/ ತಪ್ಪು ಯಾವುದೂ ಆಗಿರಬಹುದು. ಮಕ್ಕಳಿಗೆ ಹೊಡೆಯುವ ಒಬ್ಬ ತಾಯಿ ತನ್ನ ಜೀವನವಿಡೀ ಮಗುವಿಗೆ ಒಮ್ಮೆ ಹೊಡೆದಕ್ಕಾಗಿ ‘ತಪ್ಪಿತಸ್ಥ ಭಾವ’ವನ್ನು ಅನುಭವಿಸಿದರೆ, ಇನ್ನೊಬ್ಬ ತಾಯಿ ಮಕ್ಕಳನ್ನು ಬೆಳೆಸಬೇಕಾದರೆ ಹೊಡೆಯುವುದು ಅತ್ಯವಶ್ಯ ಎಂದು ಭಾವಿಸಿ ಹಾಗೆ ಹೊಡೆದದ್ದನ್ನು ಮರೆತು ನಿರಾಳವಾಗಿರಬಹುದು. ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯವುಂಟಾದಾಗಲಂತೂ, ಸ್ವತಃ ರೋಗಿಯಲ್ಲಿ ಕುಟುಂಬದ ಇತರ ಸದಸ್ಯರಲ್ಲಿ ‘ತಪ್ಪಿತಸ್ಥ ಭಾವನೆ’ ವಿವಿಧ ರೂಪ ತಾಳುತ್ತದೆ.

ಬೇರೆ ಬೇರೆ ರೀತಿಗಳಲ್ಲಿ ಕಾಣಿಸಿಕೊಳ್ಳುವ ಈ ಭಾವನೆ ಕಾಯಿಲೆಯನ್ನು ತೀವ್ರವಾಗಿಸಬಹುದು, ಕೌಟುಂಬಿಕ ವಾತಾವರಣವನ್ನು ಅಸಹನೀಯವಾಗಿಸಬಹುದು. ಹಾಗಾಗಿ ಅನಾರೋಗ್ಯದ ಸಮಯದಲ್ಲಿ ರೋಗಿ ಮತ್ತು ಆತನ ಕುಟುಂಬದ ಸದಸ್ಯರು ತಮ್ಮಲ್ಲಿರಬಹುದಾದ ‘ತಪ್ಪಿತಸ್ಥ ಭಾವನೆ’ಯನ್ನು ವಿಶ್ಲೇಷಿಸಿಕೊಳ್ಳಬೇಕು, ಇತರರೊಡನೆ ಹಂಚಿಕೊಳ್ಳಬೇಕು, ಎದುರಿಸಿ ನಿಭಾಯಿಸುವುದನ್ನು ಕಲಿಯಬೇಕು.

ನಮಗೆ ಅಥವಾ ಇತರರಿಗೆ ಉಂಟಾದ ಸಮಸ್ಯೆಗೆ ‘ನಾವು ಜವಾಬ್ದಾರಿ’ ಎಂದು ಎನಿಸುವುದೇ ತಪ್ಪಿತಸ್ಥ ಭಾವನೆ. ತಪ್ಪಿತಸ್ಥ ಭಾವನೆಯ ಜೊತೆಗೆ ತಪ್ಪು ಮಾಡಿದ ಜವಾಬ್ದಾರಿಯೊಂದಿಗೆ ಈ ಕೆಳಗಿನ ಭಾವನೆಗಳ ಅನುಭವವೂ ನಮಗಾಗುತ್ತದೆ.

- ಈ ನಡೆದಿರುವ ತಪ್ಪನ್ನಷ್ಟೇ ಅಲ್ಲದೆ, ನಾವು ಕಲ್ಪಿಸಿಕೊಳ್ಳುವ, ನಡೆದಿರಬಹುದಾದ ಇನ್ನೆಷ್ಟೋ ತಪ್ಪುಗಳ ನೆನಪು.
-ತಪ್ಪು ಮಾಡಿದ್ದೇನೆ’ ಎಂಬ ಆಲೋಚನೆಗಳೇ ತಲೆಯಲ್ಲಿ ಸುತ್ತುತ್ತಲೇ ಇರುವುದು. ಬೇರೆಯದರ ಬಗೆಗೆ ಗಮನ ಹರಿಸಲು ಸಾಧ್ಯವಾಗದಿರುವುದು.
-ಬೇರೆಯವರಿಗೆ ಸಹಾಯ ಮಾಡದ, ಇಷ್ಟವಾಗದಂತೆ ನಡೆದುಕೊಂಡ ಬಗೆಗೆ ಆತಂಕ.
-ಆಯಾ ಪರಿಸ್ಥಿತಿಗೆ ಎಂದಿನಂತೆ ಪ್ರತಿಕ್ರಿಯಿಸುವುದು ಸಾಧ್ಯವಾಗದಿದ್ದುದಕ್ಕೆ ಅಚ್ಚರಿ-ದಿಗ್ಭ್ರಮೆ. ಅಂದು ನನಗೇನಾಗಿತ್ತೋ, ಏಕೆ ಹಾಗೆಂದೆನೋ ಎಂಬ ಭಾವ.
- ಮತ್ತೊಬ್ಬರು ನರಳುವುದನ್ನು ನೋಡಲಾಗದೆ, ಅವರ ನೋವಿಗೆ
ತಾನೇ ಹೊಣೆ ಎಂದುಕೊಳ್ಳುವುದು. ಈ ತಪ್ಪಿತಸ್ಥ ಭಾವನೆಯಿಂದಾಗಿ ನಮ್ಮ ಜೀವನದ, ಇತರರ ಜೀವನದ ಎಲ್ಲಾ ಸಂಕಷ್ಟಗಳಿಗೂ ನಾವೇ ಜವಾಬ್ದಾರಿ ಎಂದು ನಾವು ಭಾವಿಸಬಹುದು. ಇತರರು ಸಂತೋಷವಾಗಿರುವಂತೆ ಮಾಡಲು ಏನನ್ನಾದರೂ ಮಾಡುವಂತೆ ನಮ್ಮನ್ನು ಪ್ರೇರೇಪಿಸಬಹುದು. ಅದರೊಂದಿಗೆ ನಮ್ಮ ಬೇಕು-ಬೇಡಗಳನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಬಹುದು.

ಬೇರೆಯವರ ಉದ್ದೇಶರಹಿತವಾದ ಸಾದಾ ನಡವಳಿಕೆ-ಮಾತುಗಳು, ಟೀಕೆ-ವ್ಯಂಗ್ಯ-ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ ಎಂಬ ಭಾವನೆ ಮೂಡಿಸಬಹುದು. ಏನು ಹೇಳಿದರೆ, ಮಾಡಿದರೆ ಎಲ್ಲಿ ಈಗಾಗಲೇ ಮಾಡಿರುವ ತಪ್ಪು ಮತ್ತಷ್ಟು ಹೆಚ್ಚುತ್ತದೆಯೋ ಎಂಬ ಅನುಮಾನ, ತಪ್ಪಿತಸ್ಥ ಭಾವನೆಯಿಂದ ನರಳುತ್ತಿರುವ ವ್ಯಕ್ತಿಯನ್ನು ಯಾರೊಡನೆಯೂ ಮಾತನಾಡದ, ಸಾಮಾಜಿಕವಾಗಿ ಬೆರೆಯದ, ಮೌನಕ್ಕೆ ಶರಣು ಹೋಗುವ ಅಂಜುಕುಳಿಯನ್ನಾಗಿಸಬಹುದು.

ಮಾನವನ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ತಪ್ಪಿತಸ್ಥ ಭಾವನೆಯಿಂದ ನರಳುವ ವ್ಯಕ್ತಿ ತನ್ನ ಹಿತ-ಇಷ್ಟಗಳಿಗಿಂತ ಬೇರೆಯವರ ಬಗೆಗೇ ಹೆಚ್ಚು ಗಮನ ಹರಿಸುತ್ತಾನೆ. ಇದರ ಹಿಂದೆ ಇರುವುದು ತಪ್ಪಿತಸ್ಥ ಭಾವನೆ ಎಂಬುದಾಗಿ ಗುರುತಿಸಿಕೊಳ್ಳಲು ಆತನಿಗೆ ಸಾಧ್ಯವಾಗದು. ಇತರರು ತನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬುದೇ ಅವನಿಗೆ ಬಹುಮುಖ್ಯವಾಗಿ ಬಿಡುತ್ತದೆ.

ತಪ್ಪಿತಸ್ಥ ಭಾವನೆ ಖಿನ್ನತೆಯಲ್ಲಿ, ಸಾಮಾಜಿಕ ಭಯ- ಸೋಷಲ್ ಫೋಬಿಯಾ ಎಂಬ ಆತಂಕದ ಕಾಯಿಲೆಯಲ್ಲಿ ಒಂದು ಲಕ್ಷಣವಾಗಿ ಮುಖ್ಯವಾಗುತ್ತದೆ. ಹಾಗೆಯೇ ಆತ್ಮೀಯರ ಮರಣದ ಸಮಯದಲ್ಲಿ ತಪ್ಪಿತಸ್ಥ ಭಾವನೆ ಸಾಮಾನ್ಯ. ಅವರು  ಇಂಥದೊಂದು ದಿನ ಸಾಯಬಹುದು ಎಂಬ ಸಂಗತಿ ಖಚಿತವಾಗಿ ನಮಗೆ ಗೊತ್ತಿರುವುದಿಲ್ಲವಷ್ಟೆ. ವ್ಯಕ್ತಿ ಸಾಯುವುದಕ್ಕೆ ಮುಂಚಿತವಾಗಿ ಅವರೊಡನೆ ನಮಗಾದ ಜಗಳಗಳು/ ಅವರಿಗೆ ಉಂಟಾಗಿರಬಹುದಾದ ನೋವು/ ಅಥವಾ ಇಂಥ ಕಡೆ ಚಿಕಿತ್ಸೆ ಮಾಡಿಸಿದ್ದರೆ ಬದುಕುತ್ತಿದ್ದರೋ ಏನೋ /ಅಂದು ಅವರು ಅಲ್ಲಿಗೆ ಹೋಗದಿದ್ದಂತೆ ತಡೆಯದಿದ್ದುದೇ ನನ್ನ ತಪ್ಪು ಹೀಗೆ ಈ ಯೋಚನಾ ಸರಣಿ ಮುಂದುವರಿಯಬಹುದು.

ತಪ್ಪಿತಸ್ಥ ಭಾವನೆಯನ್ನು ಗೆಲ್ಲುವ ಮೊಟ್ಟ ಮೊದಲ ಹಂತವೆಂದರೆ ಅದು ‘ತಪ್ಪಿತಸ್ಥ ಭಾವನೆ’ ಎಂದು ಗುರುತಿಸುವುದು. ಎಲ್ಲಾ ಭಾವನೆಗಳಂತೆಯೇ ಈ ಭಾವನೆಯೂ ಬಹು ಶಕ್ತಿಯುತವೇ. ಹಾಗಾಗಿ ಅವುಗಳನ್ನು ನಾವು ನಿಭಾಯಿಸದಿದ್ದರೆ, ಅವು ನಮ್ಮನ್ನು ನಿಯಂತ್ರಿಸತೊಡಗುತ್ತವೆ. ತಪ್ಪಿತಸ್ಥ ಭಾವನೆಯನ್ನು ನಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಬೇಕು. ಯಾರೂ ಪರಿಪೂರ್ಣರಲ್ಲ, ತಪ್ಪು ಮಾಡುವುದು ಸಹಜವೇ, ಬೇರೆಯವರ ಹಿತಕ್ಕಿಂತ ಮೊದಲು ನಾವು ನಮ್ಮ ಹಿತದ ಬಗ್ಗೆ ಯೋಚಿಸುವುದು ತಪ್ಪಲ್ಲ. ಆದ ತಪ್ಪಿಗೆ ಅಥವಾ ಕೆಲವೊಮ್ಮೆ ತಪ್ಪೇ ನಡೆಯದೆ ಅದರ ಬಗ್ಗೆ ಕೊರಗುವ ಬದಲು, ಆದದ್ದು ಮುಗಿದು ಹೋದ ಕಥೆ, ಈಗ ಏನು ಮಾಡಬೇಕು ಎಂದು ನೋಡುವುದು ಈ ಸಮಯದಲ್ಲಿ ಮುಖ್ಯ.

- ಡಾ. ಕೆ.ಎಸ್ ಪವಿತ್ರ 

 

Follow Us:
Download App:
  • android
  • ios