Asianet Suvarna News Asianet Suvarna News

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!| ಮೈಸೂರಿನ ಸಿಎಫ್‌ಟಿಆರ್‌ಐನಿಂದ ಹೊಸ ಆವಿಷ್ಕಾರ| ಬೆಂಗಳೂರಿನ ‘ಸುಬ್ಬು ಕಾಫಿ’ಗೆ ತಂತ್ರಜ್ಞಾನ ಮಾರಾಟ| ರೋಗನಿರೋಧಕ ಶಕ್ತಿ ಹೆಚ್ಚಳ, ಮಧುಮೇಹದ ಸಮತೋಲನ, ಅಧಿಕ ರಕ್ತದೊತ್ತಡ ತಣಿಸಲು ಗ್ರೀನ್‌ ಕಾಫಿ ಸಹಕಾರಿ

 

Green coffee is replacing green tea for health enthusiasts
Author
Bangalore, First Published May 12, 2019, 7:56 AM IST

ಉತ್ತನಹಳ್ಳಿ ಮಹದೇವ, ಕನ್ನಡಪ್ರಭ 

ಮೈಸೂರು[ಮೇ.12]: ಬಿಸಿ ಬಿಸಿ ಕಾಫಿ ಕುಡಿದು ಕಾಲ ಕಳೆಯುವುದಕ್ಕಿಂತ ಹಸಿ ಹಸಿ ಗ್ರೀನ್‌ ಕಾಫಿ ಕುಡಿದು ಆರೋಗ್ಯ ವೃದ್ಧಿಸಿಕೊಳ್ಳುವುದೇ ಲೇಸು!

ಇಂತಹ ನಿರ್ಧಾರಕ್ಕೆ ಕಾಫಿ ಪ್ರಿಯರು ಬರುವಂತೆ ಮಾಡಲು ಮೈಸೂರಿನ ಸಿಎಫ್‌ಟಿಆರ್‌ಐ ಹೊಸ ಗ್ರೀನ್‌ ಕಾಫಿಯನ್ನು ಸಂಶೋಧಿಸಿದೆ. ಮನಸ್ಸಿಗೆ ಬೇಜಾರಾದಾಗ, ಕಾಲ ಕಳೆಯಲು, ರಿಫ್ರೆಶ್‌ಮೆಂಟ್‌ಗಾಗಿ ಕಾಫಿ ಹೀರುವುದನ್ನೇ ಚಟ ಮಾಡಿಕೊಂಡಿದ್ದವರಿಗೆ ಅದರಿಂದ ಖುಷಿ ಸಿಗುತ್ತಿತ್ತೆ ಹೊರತು, ಆರೋಗ್ಯ ವೃದ್ಧಿಗೆ ಯಾವುದೇ ಲಾಭವಿರುತ್ತಿರಲಿಲ್ಲ. ಆದರೀಗ ಮೈಸೂರಿನ ಸಿಎಫ್‌ಟಿಆರ್‌ಐ ಸಂಶೋಧಿಸಿರುವ ‘ಗ್ರೀನ್‌ ಕಾಫಿ’ ಖುಷಿಯ ಜತೆಗೆ ಆರೋಗ್ಯವನ್ನೂ ತಂದುಕೊಡಲಿದೆ.

ಇಷ್ಟುದಿನ ಹುರಿದ ಕಾಫಿ ಬೀಜವನ್ನು ಕುಟ್ಟಿಪುಡಿ ಮಾಡಿ ಕಾಫಿ ಡಿಕಾಕ್ಷನ್ನಾಗಿ ಪರಿವರ್ತಿಸಿ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿಯಬೇಕಿತ್ತು. ಕಾಫಿ ಬೀಜವನ್ನು ಹುರಿಯುವುದರಿಂದ ಅದರಲ್ಲಿದ್ದ ಕ್ಲೋರಿಜಿನಿಕ್‌ ಆ್ಯಸಿಡ್‌ ಶೇ. 60ರಷ್ಟುನಷ್ಟವಾಗುತ್ತಿತ್ತು. ಇದರಿಂದ ಕಾಫಿ ಪ್ರಿಯರಿಗೆ ಕೆಫಿನ್‌ ಸಿಗುತ್ತಿತ್ತೇ ವಿನಃ ಮತ್ಯಾವುದೇ ಆರೋಗ್ಯಕರ ಲಾಭ ಸಿಗುತ್ತಿರಲಿಲ್ಲ. ಈ ಗ್ರೀನ್‌ ಕಾಫಿಯು ಪಕ್ಕಾ ನೈಸರ್ಗಿಕವಾಗಿ ತಯಾರಾಗಿರುವುದರಿಂದ ಹಸಿ ಕಾಫಿ ಬೀಜವನ್ನೇ ಸಂಸ್ಕರಿಸಿ ಕ್ಲೋರಿನಿಕ್‌ ಆ್ಯಸಿಡ್‌ ಉಳಿಸಿಕೊಂಡು ಗುಣಮಟ್ಟದ ಕಾಫಿ ದ್ರಾವಣವನ್ನಾಗಿ ತಯಾರಿಸಲಾಗಿದೆ. ದಿನಕ್ಕೆ 1 ರಿಂದ 2 ಮಿಲಿ ಗ್ರಾಂ ಹನಿಯನ್ನು 100 ಮಿಲಿ ಗ್ರಾಂ ನೀರಿನೊಂದಿಗೆ ಬೆರಸಿ ಕುಡಿದಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ.

ದೇಹದ ತೂಕ ಇಳಿಕೆ:

ದಿನಕ್ಕೆ 1 ಅಥವಾ 2 ಮಿಲಿ ಗ್ರಾಂ ಗ್ರೀನ್‌ ಕಾಫಿ ಕುಡಿಯುವುದರಿಂದ ದೇಹಕ್ಕೆ ಬೇಕಾದ ರೋಗನಿರೋಧಕ ಶಕ್ತಿಯ ಹೆಚ್ಚಳ, ರಕ್ತದೊತ್ತಡ ಮತ್ತು ಮಧುಮೇಹದ ಸಮತೋಲನ, ಅಧಿಕ ರಕ್ತದೊತ್ತಡ ತಣಿಸುವುದು ಹಾಗೂ ದೇಹದ ಶಕ್ತಿ ವೃದ್ಧಿಸಿಕೊಳ್ಳಲು ಸಹಾಯವಾಗಲಿದೆ. ಈ ಕಾಫಿ ಕುಡಿಯುವುದರಿಂದ ಯಾವುದೇ ಪಥ್ಯಾಹಾರವಿಲ್ಲದೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಗ್ರೀನ್‌ ಕಾಫಿ ಸಂಶೋಧನೆ ತಂಡದ ಮುಖ್ಯಸ್ಥೆ, ವಿಜ್ಞಾನಿ ಡಾ.ಪುಷ್ಪ ಮೂರ್ತಿ.

ಸದ್ಯದಲ್ಲಿಯೇ ಮಾರುಕಟ್ಟೆಗೆ ಪರಿಚಯ:

ಬೆಂಗಳೂರು ಮೂಲದ ‘ಸುಬ್ಬು ಕಾಫಿ’ ಸಂಸ್ಥೆಯು (ಸುಬ್ಬುಸ್‌ ಬೇವರೇಜಸ್‌ ಅಂಡ್‌ ಫುಡ್‌ ಪ್ರೈ.ಲಿ.) ಸಿಎಫ್‌ಟಿಆರ್‌ಐ ಸಂಶೋಧಿಸಿರುವ ಗ್ರೀನ್‌ ಕಾಫಿ ಉತ್ಪನ್ನದ ಹಕ್ಕನ್ನು 5 ಲಕ್ಷಕ್ಕೆ ಪಡೆದುಕೊಂಡು ಸದ್ಯದಲ್ಲಿಯೇ ಗ್ರೀನ್‌ ಕಾಫಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇನ್ನು ಮುಂದೆ ಎಲ್ಲರೂ ಬಿಸಿಬಿಸಿ ಕಾಫಿ ಕುಡಿಯುವ ಬದಲು ಹಸಿ ಹಸಿ ಗ್ರೀನ್‌ ಕಾಫಿ ಕುಡಿದು ಆರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ.

ಕಾಫಿ ಉತ್ಪನ್ನ ತಯಾರಿಸಲು ಇನ್ನಷ್ಟುಮಾಹಿತಿ ಪಡೆಯಲು ನಾವು ಬೆಂಗಳೂರಿನ ಕಾಫಿ ಮಂಡಳಿಗೆ ಭೇಟಿ ಕೊಟ್ಟಾಗ ಅವರು ಸಿಎಫ್‌ಟಿಆರ್‌ಐ ಸಂಪರ್ಕಿಸಲು ಸೂಚಿಸಿದರು. ಇಲ್ಲಿಗೆ ಬಂದು ವಿಚಾರಿಸಿದಾಗ ಗ್ರೀನ್‌ ಕಾಫಿ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ಒಡಂಬಡಿಕೆ ಮಾಡಿಕೊಂಡೆವು.

-ಎನ್‌.ಸುಬ್ಬರಾಜು- ಪ್ರಶಾಂತ್‌, ಸುಬ್ಬು ಕಾಫಿ ಸಂಸ್ಥೆ

Follow Us:
Download App:
  • android
  • ios