Asianet Suvarna News Asianet Suvarna News

ಹಳ್ಳ ಹಿಡಿದ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ: ನಾಗರಿಕರ ಖಂಡನೆ

ಸ್ಮಾರ್ಟ್‌ಸಿಟಿ ಯೋಜನೆ ಅವೈಜ್ಞಾನಿಕ ಕಾಮಗಾರಿ| ಪರಿಶೀಲಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು ಸ್ಥಳಕ್ಕೆ ಬಾರದೆ ದುರ್ವರ್ತನೆ| ನಾಗರಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು, ನಾಗರಿಕರ ಖಂಡನೆ| ಸ್ಥಳೀಯ ನಾಗರಿಕರ ಒತ್ತಾಯದ ಹಿನ್ನಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು| ಅಧಿಕಾರಿಗಳು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು| 

Unscientific Work in Shivamogga SmartCity project
Author
Bengaluru, First Published Sep 26, 2019, 12:29 PM IST

ಶಿವಮೊಗ್ಗ(ಸೆ.26): ಶರಾವತಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದ ಅಧಿಕಾರಿಗಳು ಸ್ಥಳಕ್ಕೆ ಬಾರದೆ ದುರ್ವರ್ತನೆ ತೋರಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದರು.

ಶರಾವತಿ ನಗರ ಬಡಾವಣೆಯಲ್ಲಿ ಬಾಕ್ಸ್‌ ಚರಂಡಿ ಕಾಮಗಾರಿ ನಿಗದಿತ ಗುಣಮಟ್ಟದಲಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಕಾಮಗಾರಿ ಮುಂದುವರೆಸಬಾರದೆಂದು ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ಸ್ಥಳೀಯ ನಾಗರಿಕರ ಒತ್ತಾಯದ ಹಿನ್ನಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬುಧವಾರ 11 ಗಂಟೆ ಸುಮಾರಿಗೆ ವೇದಿಕೆಯ ಪದಾಧಿಕಾರಿಗಳು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಪ್ರಯೋಜನವಾಗಲಿಲ್ಲ. ಮಧ್ಯಾಹ್ನ 1 ಗಂಟೆ ವರೆಗೆ ಕಾದರೂ ಸ್ಮಾರ್ಟ್‌ಸಿಟಿ ಯೋಜನೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಾದ್ಯಂತ ವಿವಿಧ ಕಾಮಗಾರಿ ನಡೆಯುತ್ತಿದೆ. ಬಾಕ್ಸ್‌ ಚರಂಡಿ ಅಗತ್ಯವಿಲ್ಲದ ಕಡೆಯೂ ಅನಗತ್ಯವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಹಾನಗರಪಾಲಿಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವಿಕ್ಷಣೆ ನಡೆಸಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ವಸಂತ್‌ಕುಮಾರ್‌, ಅಶೋಕ್‌ ಯಾದವ್‌, ಎಸ್‌.ಬಿ.ಅಶೋಕ್‌ ಕುಮಾರ್‌, ಸುಬ್ರಹ್ಮಣ್ಯ ಮತ್ತಿತರರಿದ್ದರು.
 

Follow Us:
Download App:
  • android
  • ios