Asianet Suvarna News Asianet Suvarna News

ಈ ಶಾಲೆಗೆ ಶಿಕ್ಷಕರಿದ್ದರೂ ಬರೋದಿಲ್ಲ, ವಿದ್ಯಾರ್ಥಿಗಳ ಗೋಳು ಕೇಳೋರು ಯಾರು..?

ಕುಂದಾಪುರ ತಾಲೂಕಿನ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಾರದ ಶಿಕ್ಷಕರು| ದಿನವಿಡೀ ಆಟದ ಮೈದಾನದಲ್ಲಿ ಕಾಲ ಕಳೆಯುತ್ತಿರುವ ಮಕ್ಕಳು|  ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ| 

Teachers did not came to school for last three days, Students faces problmes
Author
Bengaluru, First Published Sep 19, 2019, 1:09 PM IST

ಕುಂದಾಪುರ:(ಸೆ.19) ಪಶ್ಚಿಮಘಟ್ಟದ ಬುಡ ಎಂದು ಕರೆಯಲ್ಪಡುವ ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಗೋಳು ಕೇಳೋರೆ ಯಾರು ಇಲ್ಲದಂತಾಗಿದೆ. 

ಎಲ್ಲಿಗೆ ಹೋದರು ಶಿಕ್ಷಕರು? 

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡಮೊಗೆ ಗ್ರಾಮದ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರು ಗೈರಾಗಿದ್ದಾರೆ. ಇದರಿಂದ ಮಕ್ಕಳು ಆತಂಕದಲ್ಲಿ ಶಾಲೆಗೆ ಬರಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದೆಡೆ ಪಶ್ಚಿಮಘಟ್ಟದ ತಪ್ಪಲು, ಸುತ್ತಲೂ ಕಾಡು ಪ್ರದೇಶದ ನಡುವೆಯಿರುವ ಈ ಶಾಲೆಗೆ ಗೋಳಿಬೇರು, ಹೊಸಬಾಳು, ಉಪ್ಪಿನಮಕ್ಕಿ, ವಡ್ನಾಳಿ, ಕೊಳಾಳಿ ಮೊದಲಾದ ಭಾಗಗಳಿಂದ 44 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಒಬ್ಬರು ಮುಖ್ಯಶಿಕ್ಷಕ ಹಾಗೂ ಓರ್ವ ಶಿಕ್ಷಕಿ ಶಾಲೆಯಲ್ಲಿ ಖಾಯಂ ಶಿಕ್ಷಕರಾಗಿದ್ದಾರೆ.

ಇದೀಗ ಮುಖ್ಯಶಿಕ್ಷಕ ಚಂದ್ರಶೇಖರ್‌ ಮೈಸೂರಿನಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್‌ಗೆ ತೆರಳಿದ್ದಾರೆ. ಇರುವ ಓರ್ವ ಶಿಕ್ಷಕಿ ಲೀಲಾ ಅವರು ತಾಯಿ ನಿಧನದ ಹಿನ್ನೆಲೆ ರಜೆ ಹಾಕಿದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪಶ್ಚಿಮಘಟ್ಟದ ಸೆರಗಿಗೆ ಹೊಂದಿಕೊಂಡಿರುವ ಈ ಶಾಲೆಗೆ ಸೂಕ್ತ ತಡೆಬೇಲಿ ಇಲ್ಲದೇ ಇರುವುದರಿಂದ ಯಾವ ಕ್ಷಣದಲ್ಲಾದರೂ ಕಾಡು ಪ್ರಾಣಿಗಳು ದಾಳಿ ನಡೆಸಿ ಅಪಾಯಗಳು ಸಂಭವಿಸಬಹುದೆಂದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಪೋಷಕರು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಇಲಾಖೆಯ ಕಡೆಗಣನೆಗೆ ಆಕ್ರೋಶ:

ಹಲವರಿಮಠ ಶಾಲೆಗೆ ಕೆಲ ದಿನಗಳಿಂದ ಸಮೀಪದ ಶಾಲೆಯಾದ ಯಡಮೊಗೆ ಅಜ್ಜಿಕಾನ್‌ ಶಾಲೆಯ ಶಿಕ್ಷಕರನ್ನು ನಿಯೋಜಿಸುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಯಾವುದೇ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ. ಮಧ್ಯಾಹ್ನದವರೆಗೆ ಅಕ್ಷರ ದಾಸೋಹ ಸಿಬ್ಬಂದಿಯೇ ಮಕ್ಕಳನ್ನು ನೋಡಿಕೊಂಡಿದ್ದು, ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರು ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಯಡಮೊಗೆ ಅಜ್ಜಿಕಾನ್‌ ಶಾಲೆಯ ಶಿಕ್ಷಕಿ ಪ್ರತಿಮಾರಾಣಿ ಅವರನ್ನು ಶಾಲೆಗೆ ಕಳುಹಿಸಿದ್ದಾರೆ.

ಶಿಕ್ಷಕರು ರಜೆಯಲ್ಲಿದ್ದರೆ ವಿದ್ಯಾರ್ಥಿಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟದ ಮೈದಾನದಲ್ಲಿ ದಿನವಿಡೀ ಮಕ್ಕಳ ಆಟ 

ಪ್ರತಿ ಬೆಳಗ್ಗೆ ತರಗತಿಯೊಳಗೆ ಕುಳಿತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಇದೀಗ ಶಿಕ್ಷಕರಿಲ್ಲದೇ ಮೈದಾನದಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುತ್ತಿದ್ದರೆ, ಇನ್ನೂ ಕೆಲ ವಿದ್ಯಾರ್ಥಿಗಳು ಶಾಲೆಯ ಹೊರ ಜಗುಲಿಯಲ್ಲಿ ಕುಳಿತು ಆಟವಾಡುತ್ತಿರುವ ದೃಶ್ಯಗಳು ಬುಧವಾರ ಶಾಲೆಯಲ್ಲಿ ಕಂಡುಬಂದಿವೆ.

ಮಧ್ಯಾವಧಿ ಪರೀಕ್ಷೆ ಸಮೀಪಿಸುತ್ತಿದ್ದು, ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಬೇಕಾದ ಶಿಕ್ಷಕರು ಶಾಲೆಗೆ ಬಾರದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಶಿಕ್ಷಣ ಇಲಾಖೆ ಈ ಕೂಡಲೇ ಗಮನಹರಿಸಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಂಡ್ಸೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಿರುವುದರಿಂದ ನನ್ನನ್ನು ಸೇರಿದಂತೆ ಸಿಆರ್‌ಪಿ, ಬಿಆರ್‌ಪಿಗಳೆಲ್ಲಾ ಪ್ರತಿಭಾಕಾರಂಜಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಹಲವರಿಮಠ ಶಾಲೆಯ ಶಿಕ್ಷಕರ ರಜೆಯ ಕುರಿತು ನನಗೆ ಸರಿಯಾಗಿ ನನಗೆ ಮಾಹಿತಿ ಇಲ್ಲ. ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನನಗೇನು ತಿಳಿದಿಲ್ಲ. ಇನ್ನೊಂದು ಶಾಲೆಯಿಂದ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಿಸಿದ್ದಾರಾ, ಆ ಶಾಲೆಯ ಶಿಕ್ಷಕರು ಎಲ್ಲಿ ಹೋಗಿದ್ದಾರೆ ಎಂಬುವುದರ ಕುರಿತು ಸೂಕ್ತ ಮಾಹಿತಿ ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ಜ್ಯೋತಿ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ, ಬೈಂದೂರು ವಲಯ

ಕಳೆದ ಒಂದು ವರ್ಷದಿಂದ ನಿರಂತವಾಗಿ ಸಮಸ್ಯೆ ಉದ್ಭವಗಳಾಗುತ್ತಿದೆ. ಮುಖ್ಯಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಕಳೆದ ಮೂರು ದಿನಗಳಿಂದ ಶಿಕ್ಷಕರಿಲ್ಲದೆ ಮಕ್ಕಳು ಅಭದ್ರತೆಯಲ್ಲಿದ್ದಾರೆ. ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಿದ್ದೇವೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಘವೇಂದ್ರ ನಾಯಕ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
 

Follow Us:
Download App:
  • android
  • ios