ಲಾಕ್‌ಡೌನ್ ಮಧ್ಯೆ ಸಿಪಿಐ ಬರ್ತಡೇ ಸಂಭ್ರಮ: 'ಇದೆಲ್ಲಾ ಬೇಕಿತ್ತಾ ಈ ಟೈಮ್‌ನಲ್ಲಿ..?'
ಕೇಕ್ ಕತ್ತರಿಸಿ ಮೆಡ್ಲೇರಿ ಗ್ರಾಮದಲ್ಲಿ ರಾಣಿಬೆನ್ನೂರು ಸಿಪಿಐ ಜನ್ಮದಿನ| ಸಾಮಾಜಿಕ ಅಂತರ ಕಾಯ್ದುಕೊಳ್ಳದ ಆರೋಪ| ರೂಟ್ ಮಾರ್ಚ್ ಮಾಡಲೆಂದು ಮೆಡ್ಲೇರಿ ಗ್ರಾಮದಿಂದ ಹೋಗುತ್ತಿದ್ದಾಗ ಇನ್ಸ್‌ಪೆಕ್ಟರ್‌ಗೆ ಪರಿಚಯವಿರುವ ಗ್ರಾಮದ ಕೆಲವರು ಅನಿರೀಕ್ಷಿತವಾಗಿ ಜನ್ಮದಿನ ಆಚರಿಸಿದ್ದಾರೆ| ಈ ಕುರಿತು ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿನೆ ನೀಡಿದ್ದೇನೆ: ಎಸ್ಪಿ ಕೆ.ಜಿ. ದೇವರಾಜು|
ಹಾವೇರಿ(ಏ.29): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬರ್ತಡೇ ಆಚರಿಸಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೂರ್ವವಲಯ ಐಜಿಪಿ ಅವರಿಗೂ ದೂರು ಹೋಗಿದೆ.
ರಾಣಿಬೆನ್ನೂರು ಗ್ರಾಮೀಣ ಠಾಣೆ ಸಿಪಿಐ ಸುರೇಶ ಸಗರಿ ಈ ಆರೋಪಕ್ಕೆ ಗುರಿಯಾಗಿದ್ದಾರೆ. ಐದು ದಿನಗಳ ಹಿಂದೆಯೇ ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಕೇಕ್ ಕತ್ತರಿಸಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಗ್ರಾಮದ ಪ್ರಮುಖರು, ಸಾರ್ವಜನಿಕರೆಲ್ಲ ಸೇರಿ ಸಾಮಾಜಿಕ ಅಂತರದ ನಿಯಮ ಪಾಲಿಸದೇ ಇರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ಸ್‌ಪೆಕ್ಟರ್ ಸುರೇಶ ಅವರು ಬರ್ತಡೇ ಕೇಕ್ ಕತ್ತರಿಸುತ್ತಿರುವ ವೀಡಿಯೋ ಕೂಡ ಈಗ ವೈರಲ್ ಆಗಿದೆ.
'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'
ಸಾರ್ವಜನಿಕರಿಗೆ ಲಾಕ್‌ಡೌನ್ ಬಗ್ಗೆ ತಿಳಿ ಹೇಳುವ ಅಧಿಕಾರಿಯೇ ಹೀಗೆ ನಿಯಮ ಉಲ್ಲಂಘಿಸಿರುವುದಕ್ಕೆ ಆ ಗ್ರಾಮದ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಪೂರ್ವವಲಯ ಐಜಿಪಿ ಅವರಿಗೆ ದೂರು ನೀಡಿದ್ದಾರೆ.
ಈ ವಿಷಯ ಗಮನಕ್ಕೆ ಬಂದಿದೆ. ರೂಟ್ ಮಾರ್ಚ್ ಮಾಡಲೆಂದು ಮೆಡ್ಲೇರಿ ಗ್ರಾಮದಿಂದ ಹೋಗುತ್ತಿದ್ದಾಗ ಇನ್ಸ್‌ಪೆಕ್ಟರ್‌ಗೆ ಪರಿಚಯವಿರುವ ಗ್ರಾಮದ ಕೆಲವರು ಅನಿರೀಕ್ಷಿತವಾಗಿ ಜನ್ಮದಿನ ಆಚರಿಸಿದ್ದಾರೆ. ಇದು ಪೂರ್ವನಿಯೋಜಿತವಲ್ಲ. ಆದರೂ ಈ ಕುರಿತು ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿನೆ ನೀಡಿದ್ದೇನೆ ಎಂದು ಹಾವೇರಿ ಎಸ್ಪಿ ಕೆ.ಜಿ. ದೇವರಾಜು ಅವರು ಹೇಳಿದ್ದಾರೆ.