Asianet Suvarna News Asianet Suvarna News

ಕುಡು​ಕರ ತಾಣ​ವಾದ ನ್ಯಾಯ ನೀಡುವ ದೇವಾಲಯ!

ಕುಡು​ಕರ ತಾಣ​ವಾದ ಗ್ರಾಮ ಚಾವಡಿ| ಶತಮಾನಗಳ ಹಿಂದೆ ತಲೆಯತ್ತಿದ್ದ ಗ್ರಾಮ ಚಾವಡಿ ಇಂದು ಶಿಥಿಲಗೊಂಡು ಕುಡುಕರ ತಾಣವಾಗಿ ಮಾರ್ಪಟ್ಟಿದೆ| ಗ್ರಾಮಸ್ಥರು ಹಲವಾರು ಬಾರಿ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಬಾರಿ ಮನವಿ ಸಲ್ಲಿಸಿದರೂ ಪುನರ್‌ ನಿರ್ಮಾಣವಾಗಿಲ್ಲ| ಗ್ರಾಮದಲ್ಲಿನ ಎರಡು ಕುಟುಂಬಗಳ ಕಲಹದಿಂದಾಗಿ ಈ ಚಾವಡಿಯನ್ನು 1932ರಲ್ಲಿ ಸೀಮೆಎಣ್ಣೆ ಬಳಸಿ ಸುಡಲಾಗಿತ್ತು| 

People Misused Gram Chavadi in Gadag District
Author
Bengaluru, First Published Sep 30, 2019, 10:18 AM IST

ನಿಂಗರಾಜ ಬೇವಿನಕಟ್ಟಿ

ನರೇಗಲ್ಲ(ಸೆ.30): ಗ್ರಾಮದ ತಂಟೆ ತಕರಾರುಗಳನ್ನು ಬಗೆಹರಿಸುವ ಮೂಲಕ ನ್ಯಾಯ ಒದಗಿಸಲೆಂದು ಶತಮಾನಗಳ ಹಿಂದೆ ತಲೆಯತ್ತಿದ್ದ ಗ್ರಾಮ ಚಾವಡಿ ಇಂದು ಶಿಥಿಲಗೊಂಡು ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಗ್ರಾಮಸ್ಥರು ಹಲವಾರು ಬಾರಿ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಷ್ಟೋ ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಪುನರ್‌ ನಿರ್ಮಾಣದ ಭಾಗ್ಯ ಕಂಡಿಲ್ಲ ಏಕೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಹೌದು, ಇಂತಹದ್ದೊಂದು ವ್ಯವಸ್ಥೆ ನಿರ್ಮಾಣವಾಗಿದ್ದು ಸಮೀಪದ ಹಾಲಕೆರೆ ಗ್ರಾಮದಲ್ಲಿ. ಈ ಗ್ರಾಮ ಚಾವಡಿ ಶತಮಾನದ ಇತಿಹಾಸ ಹೊಂದಿದ್ದು, ಗ್ರಾಮದಲ್ಲಿ ಉದ್ಭವಿಸುವ ಕಲಹಗಳನ್ನು ಗ್ರಾಮಸ್ಥರು ಒಂದೆಡೆ ಸೇರಿ ವ್ಯಾಜ್ಯ ಬಗೆಹರಿಸಲೆಂದು ಗ್ರಾಮ ಚಾವಡಿ ನಿರ್ಮಾಣಗೊಂಡಿದೆ. ಗ್ರಾಮದಲ್ಲಿನ ಎರಡು ಕುಟುಂಬಗಳ ಕಲಹದಿಂದಾಗಿ ಈ ಚಾವಡಿಯನ್ನು 1932ರಲ್ಲಿ ಸೀಮೆಎಣ್ಣೆ ಬಳಸಿ ಸುಡಲಾಗಿತ್ತು ಎಂದು ಹಿರಿಕರು ಹೇಳುತ್ತಾರೆ. ಅಂದಿನ ಅವಿ​ಭ​ಜಿತ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹಾಕಿದ್ದ ಜನ​ರು ಈ ಚಾವಡಿಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಜನತೆ ಆಗ್ರಹಿಸಿದ್ದರು ಎನ್ನುವ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ.

2800 ರೂ. ಮೊತ್ತ​ದ​ಲ್ಲಿ ಮರು ​ನಿ​ರ್ಮಾ​ಣ​ವಾ​ಗಿ​ತ್ತು:

ಹಾಲಕೆರೆ ಗ್ರಾಮಸ್ಥರು ನ್ಯಾಯಾಲಯದಲ್ಲಿ ದಾವೆ ಹಾಕಿ ಚಾವಡಿಯನ್ನು ಪುನರ್‌ ನಿರ್ಮಾಣ ಮಾಡಲು ಆಗ್ರಹಿಸಿದ್ದರಿಂದ ಅಂದಿನ ಧಾರವಾಡ ಕಲೆಕ್ಟರ್‌ಆಗಿದ್ದ ಎ.ಎಲ್‌. ಡಯಾಸ್‌ 2800 ರೂ. ಹಣ​ದಲ್ಲಿ ಚಾವಡಿ ನಿರ್ಮಾಣಗೊಳಿಸಲು ಆದೇಶಿಸಿದ್ದರು. ಅದರಂತೆ 1941ರ ಫೆಬ್ರವರಿ 21ರಂದು ನಿರ್ಮಾಣಗೊಂಡಿದ್ದ ಗ್ರಾಮ ಚಾವಡಿಯ ಉದ್ಘಾಟನೆಗೆ ಸ್ವತಃ ಎ.ಎಲ್‌. ಡಯಾಸ್‌ ಆಗಮಿಸಿದ್ದು, ಅಂದಿನ ದಿನಮಾನಗಳಲ್ಲಿ ಗ್ರಾಮದ ಅಗಸಿಯಿಂದ ಗ್ರಾಮ ಚಾವಡಿಯವರೆಗೂ ಕುತನಿ ಬಟ್ಟೆಹಾಕಿ ದಾರಿಯುದ್ದಕ್ಕೂ ಅವರಿಗೆ ಹೂವುಗಳನ್ನು ಹಾಕುವ ಮೂಲಕ ಅವರನ್ನು ಭವ್ಯ ಸ್ವಾಗತ ಗೈದಿದ್ದು ಒಂದು ಇತಿಹಾಸವೇ ಸರಿ ಎಂದು ಗ್ರಾಮದ ಹಿರಿಯ ನಾಗರಿಕರು ತಿಳಿಸುತ್ತಾರೆ.

ವ್ಯಾಜ್ಯ ಪರಿಹಾರಕ್ಕೆ ಗ್ರಾಮ ಚಾವಡಿ ಬಳಕೆ:

ಈ ಗ್ರಾಮ ಚಾವಡಿ ಹಾಲಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಕಲಹ, ವ್ಯಾಜ್ಯ ತೊಂದರೆಗಳನ್ನು ಪರಿಹರಿಸಲು ನೆರವಾಗಿತ್ತು. ಈ ಚಾವಡಿಯಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಹಾಗೂ ಬಂಧಿಸಲು ಜೈಲಿನ ಮಾದರಿಯಲ್ಲಿ ಒಂದು ಕೋಣೆ ಕೂಡ ನಿರ್ಮಿಸಲಾಗಿತ್ತು. ಗ್ರಾಮಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಂಗ್ರಹಿಸಿಡಲು ಈ ಚಾವಡಿಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಇದು ನ್ಯಾಯ ತೀರ್ಮಾನಿಸುವ ದೇವಾಲಯದಂತೆ ಜನರ ಮನೋಭಾವನೆಯಲ್ಲಿ ಅಚ್ಚೊತ್ತಿತ್ತು.

ಸ್ವತಂತ್ರಪೂರ್ವ ಗ್ರಾಮ ಚಾವಡಿ:

ಇಲ್ಲಿನ ಜನತೆಗೆ ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡ ಗ್ರಾಮ ಚಾವಡಿಗಳ ಬಗೆಗೆ ಅಪಾರ ಗೌರವವಿತ್ತು. ಗ್ರಾಮಗಳ ವ್ಯಾಜ್ಯ ತೀರ್ಮಾನ, ಆಂಗ್ಲ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮ ಚಾವಡಿಯೇ ಕಾರ್ಯಸ್ಥಾನವಾಗುತ್ತಿತ್ತು. ಗ್ರಾಮದಲ್ಲಿ ಸ್ವಾತಂತ್ರ್ಯಕ್ಕಾಗಿ ಜನತೆಯಲ್ಲಿ ಜಾಗೃತಿ ಮೂಡಿಸಲು ಜನತೆ ಗ್ರಾಮ ಚಾವಡಿಗೆ ಆಗಮಿಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದರು. 

ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗ್ರಾಮದ ಬಹುದೊಡ್ಡ ಚಾವಡಿ ಇಂದು ಅನಾಥವಾಗಿ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಇದರ ಕಾಯಕಲ್ಪಕ್ಕೆ ಸಂಬಂ​ಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಮುಂದಾಗದಿರುವುದು ಜನತೆಯಲ್ಲಿ ತಾತ್ಸಾರ ಭಾವನೆ ಉಂಟುಮಾಡಿದೆ. ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡ ಗ್ರಾಮಚಾವಡಿ ಇಂದು ಸಂಪೂರ್ಣ ಶಿಥಿಲಾವಸ್ಥೆಗೊಂಡಿದೆ. ಈ ಗ್ರಾಮಚಾವಡಿಯಲ್ಲಿ ಒಂದು ಕೋಣೆಯಲ್ಲಿ ಸಾರ್ವಜನಿಕ ಗ್ರಂಥಾಲಯವೂ ಇತ್ತೆಂಬುದು ಜನತೆಯ ಮಾತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ಅಣ್ಣಪ್ಪ ಹುಲ್ಲಣ್ಣವರ ಅವರು, ಈ ಹಿಂದೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಶತಮಾನದ ಇತಿಹಾಸ ಹೊಂದಿದ್ದ ಗ್ರಾಮ ಚಾವಡಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ ವಿಪರ್ಯಾಸವೋ ಏನೋ ಗೊತ್ತಿಲ್ಲ ಗ್ರಾಮ ಚಾವಡಿಯ ನಿರ್ಮಾಣದ ಕಾರ್ಯ ಮಾತ್ರ ಪ್ರಾರಂಭಗೊಂಡಿಲ್ಲ. ಈ ಚಾವಡಿಗೆ ತನ್ನದೇ ಆದ ಇತಿಹಾಸವಿದ್ದು, ಇದರ ಅಭಿವೃದ್ಧಿಗಾಗಿ ಅಧಿಕಾರಿಗಳು ಮುಂದಾಗುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios